ಕನ್ನಡ ಪತ್ರಿಕಾ ಲೋಕ (೧) - ಸಂಗಾತಿ

ಕನ್ನಡ ಪತ್ರಿಕಾ ಲೋಕ (೧) - ಸಂಗಾತಿ

*ಮ. ನವೀನಚಂದ್ರ ಪಾಲ್ ಅವರ "ಸಂಗಾತಿ"*

" ಸಂಗಾತಿ" , ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಪತ್ರಿಕೆ. 1948, ನವೆಂಬರ್ ಒಂದರಂದು ಪಾಕ್ಷಿಕ ಪತ್ರಿಕೆಯಾಗಿ ಆರಂಭವಾದ "ಸಂಗಾತಿ" ಯನ್ನು ಬಹುಜನ ಓದುಗರ ಒತ್ತಾಯದ ಮೇರೆಗೆ ಪತ್ರಿಕೆಯ ಸಂಪಾದಕರೂ, ಪ್ರಕಾಶಕರೂ ಆದ ಮ. ನವೀನಚಂದ್ರ ಪಾಲ್  1950, ಜನವರಿ ಒಂದರ ಸಂಚಿಕೆಯಿಂದ ವಾರ ಪತ್ರಿಕೆಯನ್ನಾಗಿ ಪರಿವರ್ತಿಸಿದರು.

ಆರಂಭಿಸುವಾಗ ಪತ್ರಿಕೆಗಿದ್ದ ಬೆಲೆ "ಒಂದಾಣೆ". ಬಳಿಕ "ಒಂದೂವರೆ" ಆಣೆ ಮಾಡಲಾಗಿತ್ತು. 1982ರ ಅವಧಿಯಲ್ಲಿ ಮತ್ತೆ ಪತ್ರಿಕೆ ಆರಂಭಿಸಿದಾಗ ಬೆಲೆಯನ್ನು 60 ಪೈಸೆಗೆ ನಿಗದಿಪಡಿಸಲಾಗಿತ್ತು.

ಪ್ರತೀ ಮಂಗಳವಾರ ಪ್ರಕಟವಾಗುತ್ತಿದ್ದ "ಸಂಗಾತಿ" ಪತ್ರಿಕೆಗೆ ಮೊದಲು ಮಂಗಳೂರು ನಗರದ ಕಂಕನಾಡಿಯಲ್ಲಿ ("ಕಲ್ಪನಾ") ಕಾರ್ಯಾಲಯವಿತ್ತು. ಬಳಿಕ ಹಂಪನಕಟ್ಟೆ ಬಳಿಯ ಗಣಪತಿ ದೇವಸ್ಥಾನ ರಸ್ತೆಯಲ್ಲಿರುವ ಸಿದ್ಧಾರ್ಥ ಬಿಲ್ಡಿಂಗ್ ಗೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಕೆ. ಎಸ್. ಉಪಾಧ್ಯಾಯ ಅವರ ಸಿದ್ಧಾರ್ಥ ಪ್ರಿಂಟಿಂಗ್ ಪ್ರೆಸ್ ನಲ್ಲಿ ಪತ್ರಿಕೆಯನ್ನು ಮುದ್ರಿಸಲಾಗುತ್ತಿತ್ತು.

"ಸಂಗಾತಿ" ಆರಂಭವಾಗಿ ಹದಿನಾರು ವರ್ಷಗಳ ಕಾಲ ನಿರಂತರವಾಗಿ ಪ್ರಕಟವಾಯಿತು. 1964ರಲ್ಲಿ ಪತ್ರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನವೀನಚಂದ್ರ ಪಾಲ್ ಅವರು, ಮುಂಬೈಗೆ ತೆರಳಿ ಅಲ್ಲಿ ವಿವಿಧ ಇಂಗ್ಲೀಷ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಅನುಭವ ಹೆಚ್ಚಿಸಿಕೊಂಡರು.

1980ರಲ್ಲಿ ಮುಂಬೈನಿಂದ ಹುಟ್ಟೂರು ಮಂಗಳೂರಿಗೆ ಮರಳಿದ ನವೀನಚಂದ್ರ ಪಾಲ್ ಅವರು, ಮತ್ತೆ "ಸಂಗಾತಿ" ಆರಂಭಿಸಿದರು. ಹೀಗೆ ಆರಂಭಿಸಿದ ಪತ್ರಿಕೆಯನ್ನು ಮತ್ತೆ ಆರು ವರ್ಷಗಳ ಕಾಲ ನಡೆಸಿ ಸ್ಥಗಿತಗೊಳಿಸಿದರು. 1986, ಜೂನ್ 15 - ಜುಲೈ 12 ರ ನಡುವಿನ ಸಂಚಿಕೆಯೇ "ಸಂಗಾತಿ"ಯ ಕೊನೆಯ ಸಂಚಿಕೆಯಾಯಿತು.

ಕಳ್ಳಿಗೆ ಮಹಾಬಲ ಭಂಡಾರಿ, ಜಗನ್ನಾಥ ಮೂಡ್ಲಕಟ್ಟೆ, (ಎಂ. ಜೆ. ಹೆಗ್ಡೆ, ಮುಂಬೈ) ಕೆ. ಬಾಲಕೃಷ್ಣ, ಕಾಸರಗೋಡು ಶಿವರಾಮ ಶೆಟ್ಟಿ, ಮ. ರಾಜೀವ, ಎಂ. ಮೋಹನ, ಇಚ್ಲಂಪಾಡಿ ತ್ಯಾಂಪಣ್ಣ ರೈ (ಐ. ಟಿ. ರೈ), ರಘು ಕುಡಲ, ವಾಮನ ಕರ್ಕೇರ, ಕೆ. ಎಸ್. ಉಪಾಧ್ಯಾಯ, ವೈ. ಮಹಾಲಿಂಗ ಭಟ್, ಗಣಪತಿ ದಿವಾಣ ಮುಂತಾದ ಹಲವರು ಪತ್ರಿಕೆಯ ಖಾಯಂ ಬರಹಗಾರರಾಗಿದ್ದರು. ತುಳು ಕಾಲಂ ಸಹ ಸಂಗಾತಿಯಲ್ಲಿತ್ತು.

ಕರಾವಳಿ ಕರ್ನಾಟಕದಲ್ಲಿ ತನಿಖಾ ವರದಿಗಾರಿಕೆಯನ್ನು, ವಿಶೇಷ ವರದಿಗಳನ್ನು, ರಾಜಕೀಯ ವಿಶ್ಲೇಷಣೆ, ರಾಜಕೀಯ ವರದಿ ಇತ್ಯಾದಿಗಳನ್ನು ಪತ್ರಿಕೆಯಲ್ಲಿ ಆರಂಭಿಸಿದ ಹೆಗ್ಗಳಿಕೆಯ ಸಹಿತ ಹತ್ತು ಹಲವು ಮೊದಲುಗಳನ್ನು ಸಾಧಿಸಿ ಯಶಸ್ವಿಯಾದ ಹೆಗ್ಗಳಿಕೆಗಳು " ಸಂಗಾತಿ" ಗಿದೆ. ಇಂಥ "ಸಂಗಾತಿ" ಪತ್ರಿಕೆ ಮತ್ತು ಪತ್ರಿಕಾ ಸಂಪಾದಕರ ಬದುಕು - ಬರಹ - ಸಾಧನೆಗಳ ಬಗ್ಗೆ ನಾನು ಬರೆದ "ಸಮಾಜವಾದಿ ಪತ್ರಕರ್ತ, 'ಸಂಗಾತಿ' ಯ ಮ. ನವೀನಚಂದ್ರ ಪಾಲ್" ಎಂಬ ಕೃತಿಯನ್ನು 2018ರಲ್ಲಿ ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 248ನೆಯ ಕುಸುಮವಾಗಿ ಪ್ರಕಟಿಸಿದೆ.

~ *ಶ್ರೀರಾಮ ದಿವಾಣ*