ಕನ್ನಡ ಪತ್ರಿಕಾ ಲೋಕ (೨೭) - ಕಾಸರಗೋಡು ಸಮಾಚಾರ

ಕನ್ನಡ ಪತ್ರಿಕಾ ಲೋಕ (೨೭) - ಕಾಸರಗೋಡು ಸಮಾಚಾರ

ಕೆ.ವೆಂಕಟಕೃಷ್ಣಯ್ಯ, ವೈ.ಮಹಾಲಿಂಗ ಭಟ್ಟರ "ಕಾಸರಗೋಡು ಸಮಾಚಾರ"

ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡನ್ನು ಭಾಷಾವಾರು ಪ್ರಾಂತ್ಯಗಳ ವಿಂಗಡನೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳ ರಾಜ್ಯಕ್ಕೆ ಸೇರಿಸಿದಾಗ ಕಾಸರಗೋಡು ಕನ್ನಡಿಗರ ಹೋರಾಟವನ್ನು ಬೆಂಬಲಿಸುವ ಏಕೈಕ ಉದ್ಧೇಶದೊಂದಿಗೆ ಆರಂಭಗೊಂಡು, "ಕಾಸರಗೋಡು ತಾಲೂಕು ಸಂಯುಕ್ತ ಕರ್ನಾಟಕ ಪ್ರಾಂತೀಕರಣ ಸಮಿತಿ"ಯ ಮುಖವಾಣಿಯಾಗಿ ಪ್ರಕಟವಾಗುತ್ತಿದ್ದ ಪತ್ರಿಕೆಯಾಗಿತ್ತು " ಕಾಸರಗೋಡು ಸಮಾಚಾರ".

ಕಾಸರಗೋಡಿನ ಸಿರಿಗನ್ನಡ ಮುದ್ರಣಾಲಯದ ಕೆ. ವೆಂಕಟಕೃಷ್ಣಯ್ಯ ಹಾಗೂ ಲೇಖಕರಾದ ವೈ. ಮಹಾಲಿಂಗ ಭಟ್ ಅವರು "ಕಾಸರಗೋಡು ಸಮಾಚಾರ"ವನ್ನು ಮುನ್ನಡೆಸಿದವರು. "ಕಾಸರಗೋಡು ಸಮಾಚಾರ" ಪತ್ರಿಕೆ ಪ್ರಕಟವಾಗಲು "ಕಾಸರಗೋಡು ಕನ್ನಡಿಗರ ಕಣ್ಮಣಿ", ಕಾಸರಗೋಡಿನ ಶ್ರೀಗಂಧ" ಕಳ್ಳಿಗೆ ಮಹಾಬಲ ಭಂಡಾರಿಯವರೇ ಮೂಲ ಕಾರಣಕರ್ತರಾಗಿದ್ದರು.

೧೯೫೫ರ ನವೆಂಬರ್ ನಾಲ್ಕರಂದು ಆರಂಭವಾದ "ಕಾಸರಗೋಡು ಸಮಾಚಾರ" ಒಂಭತ್ತು ತಿಂಗಳ ಕಾಲ ಮಾತ್ರವೇ ನಡೆದು, ಬಳಿಕ ೧೯೫೬ರಲ್ಲಿ ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು. ಕಾಸರಗೋಡು ಪ್ರದೇಶವನ್ನು ಕೇರಳಕ್ಕೆ ಸೇರ್ಪಡೆಗೊಳಿಸಿದ ವಿಷಯವನ್ನು ಸರಕಾರ ಘೋಷಣೆ ಮಾಡುವ ತಿಂಗಳ ಮೊದಲೇ, ತನಗಾಗಲಿರುವ ಅನ್ಯಾಯದ ವಿರುದ್ದ ಕಾಸರಗೋಡಿನ ಕನ್ನಡಿಗರು ಹೋರಾಟ ಆರಂಭಿಸಿದ್ದರು. ಹೀಗೆ ಆರಂಭಗೊಂಡ ಹೋರಾಟದಿಂದ ತೊಡಗಿ ಮುಂದಿನ ಒಂಭತ್ತು ತಿಂಗಳ ಕಾಲ ಕಾಸರಗೋಡು ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಬೇಡಿಕೆ ಮುಂದಿಟ್ಟು ಎಲ್ಲೆಲ್ಲಾ ಹೋರಾಟ ನಡೆಯಿತೋ ಆ ಎಲ್ಲಾ ಹೋರಾಟಗಳ ವಿವರಗಳನ್ನೂ " ಕಾಸರಗೋಡು ಸಮಾಚಾರ" ನೀಡಿದೆ ಮತ್ತು ಈ ಮೂಲಕ ಹೋರಾಟಕ್ಕೆ ಬಲವನ್ನು ನೀಡಿತ್ತು. ಕಾಸರಗೋಡಿನ ಕನ್ನಡಿಗರು ಮರೆಯಲೇಬಾರದ ಪತ್ರಿಕೆಯಾಗಿದೆ, "ಕಾಸರಗೋಡು ಸಮಾಚಾರ".

~ ಶ್ರೀರಾಮ ದಿವಾಣ