ಕನ್ನಡ ಪತ್ರಿಕಾ ಲೋಕ (೩೧) - ಪ್ರೇಕ್ಷಕ

ಕನ್ನಡ ಪತ್ರಿಕಾ ಲೋಕ (೩೧) - ಪ್ರೇಕ್ಷಕ

ಮುಂಬಯಿಯಿಂದ ಪ್ರಕಟಗೊಳ್ಳುತ್ತಿದ್ದ ಎ. ಸಿ. ಕುಂದರ್ ಅವರ ಮಾಸಿಕ ‘ಪ್ರೇಕ್ಷಕ’

೧೯೬೬ರಲ್ಲಿ ಮುಂಬಯಿ ಕನ್ನಡಿಗರು ಆರಂಭಿಸಿದ ಮಾಸಿಕ "ಪ್ರೇಕ್ಷಕ". ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು 'ವಿದ್ಯಾ ವಿಶಾರದ' ಎ. ಸಿ. ಕುಂದರ್. ಇವರು ತಮ್ಮ ಪ್ರೇಕ್ಷಕ ಪಬ್ಲಿಕೇಶನ್ಸ್ ಮೂಲಕ ಪ್ರೇಕ್ಷಕ ಮಾಸಿಕವನ್ನು ಪ್ರಕಟಿಸುತ್ತಿದ್ದರು.

ಮುಂಬಯಿಯ ಹೋಮ್ಜಿ ಸ್ಟ್ರೀಟ್ ನ ಮಹಾವೀರ ಬಿಲ್ಡಿಂಗ್ ನ ಎರಡನೇ ಮಹಡಿಯ ೩೧ನೇ ಕೊಠಡಿಯಲ್ಲಿ ಪತ್ರಿಕಾ ಕಾರ್ಯಾಲಯವಿತ್ತು. ಮುಂಬಯಿಯ ಬೋರ ಬಝಾರ್ ಸ್ಟ್ರೀಟ್ ನ ಮೊದಲ ಮಹಡಿಯಲ್ಲಿದ್ದ ಉದಯ ಪ್ರಿಂಟರ್ಸ್ ನಲ್ಲಿ "ಪ್ರೇಕ್ಷಕ" ಮುದ್ರಣವಾಗುತ್ತಿತ್ತು.

ಸುನೀತಾ ಶೆಟ್ಟಿಯವರು ಮಹಿಳಾ ವಿಭಾಗದ ಹಾಗೂ ಗೋಪಾಲ ಶೆಟ್ಟಿಯವರು ವಿದ್ಯಾರ್ಥಿ ವಿಭಾಗದ ಸಂಪಾದಕರಾಗಿದ್ದರು. ಫಿಲಿಪ್ ಮೆಬೂ, ಪ್ರೊ. ಬಿ. ಎಂ. ಕೋಡಿಕಲ್ ವಿದ್ವಾನ್, ಡಾ. ವಾಸು ಬಿ. ಪುತ್ರನ್ ಸಾಹಿತ್ಯ ರತ್ನ, ಭಾಸ್ಕರ ಪಡುಬಿದ್ರಿ, ಪ್ರೊ. ಕೆ. ವಿ. ಕಾರ್ನಾಡ ಭಾಷಾ ರತ್ನ, ನರಸಿಂಹ ಅಮೀನ್, ಪಿ. ಕೆ. ಸಾಲಿಯಾನ್, ಬಿ. ರವೀಂದ್ರನಾಥ, ರತ್ನಾಕರ ಆರ್. ಶೆಟ್ಟಿ ಹಾಗೂ ಭಾಸ್ಕರ ಜಿ. ಶೆಟ್ಟಿ ಇವರು ಸಲಹಾ ಸಮಿತಿ ಸದಸ್ಯರಾಗಿದ್ದರು.

ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ "ಪ್ರೇಕ್ಷಕ" ದ ಬಿಡಿ ಸಂಚಿಕೆಯ ಬೆಲೆ ೩೫ ಪೈಸೆಯಾಗಿತ್ತು. ವಾರ್ಷಿಕ ಚಂದಾ ೪ ರೂಪಾಯಿಗಳಾಗಿತ್ತು. ವರ್ಷಕ್ಕೊಂದು ಬಾರಿ ದೀಪಾವಳಿ ವಿಶೇಷಾಂಕವನ್ನು ಪ್ರಕಟಿಸಲಾಗುತ್ತಿತ್ತು. ಕತೆ, ಕವನ, ವೈವಿಧ್ಯಮಯ ಲೇಖನಗಳು "ಪ್ರೇಕ್ಷಕ"ದಲ್ಲಿ ಪ್ರಕಟವಾಗುತ್ತಿತ್ತು. 

~ ಶ್ರೀರಾಮ ದಿವಾಣ