ಕನ್ನಡ ಪತ್ರಿಕಾ ಲೋಕ (೪೦) - ಚಂದ್ರಕಾಂತಿ

ಕನ್ನಡ ಪತ್ರಿಕಾ ಲೋಕ (೪೦) - ಚಂದ್ರಕಾಂತಿ

ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸಿಕ "ಚಂದ್ರಕಾಂತಿ" 

"ಚಂದ್ರಕಾಂತಿ", ಉಡುಪಿಯಿಂದ ಪ್ರಕಟವಾಗುತ್ತಿದ್ದ ಸಾಹಿತ್ಯ, ಕಲೆ, ಸಂಸ್ಕೃತಿಗೆ ಮೀಸಲಾಗಿದ್ದ ಮಾಸಿಕ. ೧೯೮೬-೮೭ರಲ್ಲಿ ಪ್ರಕಟವಾಗುತ್ತಿದ್ದ "ಚಂದ್ರಕಾಂತಿ"ಯಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ, ಆಹಾರ, ಆರೋಗ್ಯವೇ ಮುಂತಾದ ಅನೇಕ ವಿಷಯಗಳಿಗೆ ಸಂಬಂಧಿಸಿದ ಬರಹಗಳು ಪ್ರಕಟವಾಗುತ್ತಿದ್ದುವು.

ಬಾರಕೂರು ನೇಶನಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕರಾಗಿದ್ದ, ಚುಟುಕು ಕವಿಗಳೂ, ಲೇಖಕರೂ, ಕಥೆಗಾರರೂ ಆದ ವೈ. ಎಂ. ರಾವ್ (ಎರ್ಮಾಳ್ ಮೋಹನ್ ರಾವ್) ಸಂಪಾದಕರಾಗಿದ್ದರು. ವೈ. ಎ. ಆಚಾರ್ ಅವರು ಸಹ ಸಂಪಾದಕರು ಹಾಗೂ ಮುದ್ರಕರಾಗಿದ್ದರು. ಎಸ್. ಡಿ. ಶೆಟ್ಟಿಗಾರ್ (ಎಸ್. ದಿಗಂಬರ ಶೆಟ್ಟಿಗಾರ್) ಕಲೆ ಮತ್ತು ವಿನ್ಯಾಸಕಾರರಾಗಿದ್ದರು.

 ಬನ್ನಂಜೆಯ ಮಿತ್ರಾ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು. ಬನ್ನಂಜೆಯ ಪ್ರತಿಭಾ ಪ್ರಕಾಶನ ಸಂಸ್ಥೆಯು "ಚಂದ್ರಕಾಂತಿ" ಯ ಪ್ರಕಾಶನದ ಜವಾಬ್ದಾರಿಯನ್ನು ವಹಿಸಿತ್ತು.

ಕೋಟಗನಹಳ್ಳಿ ಚಂದ್ರು, ಡಾ. ಕೆ. ಬಾಲಕೃಷ್ಣ ಭಟ್ ಉಡುಪಿ, ಬೇಕಲ ರಾಮರಾಜ, ಆರ್. ಎಸ್. ಬಂಡಿ, ಸುಶೀಲ ಗರ್ಡೆ, ಕೆ. ಎ. ಕುಬಣೂರಾಯ, ಎಮ್. ಆರ್. ಬಡಾನಿಡಿಯೂರು, ಸುಜಾತಾ ಬಡಾನಿಡಿಯೂರು, ಜಯರಾಮ ಕಾರಂತ, ಎಚ್. ದುಂಡಿರಾಜ್, ಎ. ರವಿಶಂಕರ್ ಮಧೂರ್, ಕೆ. ಸಂಜೀವ ಶೆಟ್ಟಿ ಉಡುಪಿ, ಡಾ. ಸಿ. ಆನಂದರಾಮ ಉಪಾಧ್ಯ, ಲಕ್ಷ್ಮಣ್ ನಾಯಕ್, ಶಾಂತೂ ಮಲ್ಪೆ, ಶ್ರೀನಿಟಿಲ, ವಸಂತಕುಮಾರ್ ಪೆರ್ಲ, ಜಿ. ಈಶ್ವರ ಭಟ್, ಬಿ. ಶ್ರೀಧರ ಆಚಾರ್ಯ, ಸಿ. ಪ್ರದೀಪ್ ಕುಮಾರ್ ಬೆಳ್ವಾಯಿ, ಬಿ. ರಾಜಾರಾವ್, ಕುಶಲ, ಜಯರಾಘವ, ಎಸ್. ಎನ್. ಪಡ್ರೆ, ಬಿ. ಜನಾರ್ದನ ಭಟ್, ವಿಜಯಶ್ರೀ, 'ಭಟ್' ಸಜಂಗದ್ದೆ, ಹರಿಕೃಷ್ಣ ರಾವ್ ಎ., ಅಶೋಕ್ ಕೆಎಸ್ಕೆ ಮುಂತಾದ ಅನೇಕರ ವೈವಿಧ್ಯಮಯ ಬರೆಹಗಳು "ಚಂದ್ರಕಾಂತಿ" ಯಲ್ಲಿ ಪ್ರಕಟವಾಗಿದೆ.

ಐವತ್ತೆರಡು ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ "ಚಂದ್ರಕಾಂತಿ" ಆರಂಭದಲ್ಲಿ ತಿಂಗಳಿಗೊಂದರಂತೆ ಬಂದರೂ ಬಳಿಕ ಎರಡು ತಿಂಗಳಿಗೊಂದರಂತೆ ಬಂದು ಕೊನೆಗೆ ಸ್ಥಗಿತಗೊಂಡಿತು. ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಎರಡು ರೂಪಾಯಿ ಆಗಿತ್ತು.

~ ಶ್ರೀರಾಮ ದಿವಾಣ, ಉಡುಪಿ