ಕನ್ನಡ ಪತ್ರಿಕಾ ಲೋಕ (೪೨) - ಉಡುಪಿ ನ್ಯೂಸ್

ಕನ್ನಡ ಪತ್ರಿಕಾ ಲೋಕ (೪೨) - ಉಡುಪಿ ನ್ಯೂಸ್

ಜಗದೀಶ್ ಆರ್.ಬಿ. ನಡೆಸಿದ "ಉಡುಪಿ ನ್ಯೂಸ್"

ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾರ್ಯನಿರತ ಪತ್ರಕರ್ತರಾಗಿರುವ ಮಂಗಳೂರಿನ ಜಗದೀಶ್ ಆರ್. ಬಿ ಅವರು ಎರಡು ವರ್ಷಗಳ ಕಾಲ ಉಡುಪಿಯಲ್ಲಿ ನಡೆಸಿದ ವಾರ ಪತ್ರಿಕೆ "ಉಡುಪಿ ನ್ಯೂಸ್".

೨೦೦೪ರ ಜನವರಿಯಲ್ಲಿ ಆರಂಭವಾದ "ಉಡುಪಿ ನ್ಯೂಸ್" ೨೦೦೬ರ ಆರಂಭದಲ್ಲಿ ಸ್ಥಗಿತಗೊಂಡಿತು. ವಸಂತ ವಿ. ಸಾಲ್ಯಾನ್ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದರು. ಡಾ. ವಿ. ಎಸ್. ಆಚಾರ್ಯ, ಕೆ. ರಘುಪತಿ ಭಟ್, ಜಯಕರ ಬಿ. ಶೆಟ್ಟಿ ಇಂದ್ರಾಳಿ, ರೊನಾಲ್ಡ್ ಪ್ರವೀಣ್ ಕುಮಾರ್, ಜಯನ್ ಮಲ್ಪೆ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.  ಎರಡು ವರ್ಷ ಕಾಲ ಒಂದೇ ಒಂದು ವಾರವೂ ಬಿಡದೆ ಪತ್ರಿಕೆ ಪ್ರಕಟವಾಗಿತ್ತು. ಮೊದಲ ವರ್ಷ ವಾರ್ಷಿಕ ವಿಶೇಷಾಂಕವನ್ನೂ ಪ್ರಕಟಿಸಲಾಗಿತ್ತು.

ಎಂಟು ಪುಟಗಳ "ಉಡುಪಿ ನ್ಯೂಸ್" ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಪ್ರಕಟವಾಗುತ್ತಿತ್ತು. ಸ್ಥಳೀಯ, ತಾಲೂಕು, ಜಿಲ್ಲಾ ಮಟ್ಟದ ರಾಜಕೀಯ, ನಾಗರೀಕ ಸಮಸ್ಯೆಗಳ ಕುರಿತಾದ ಸುದ್ಧಿಗಳು, ವಿಶ್ಲೇಷಣೆಗಳು, ಸಾಮಾಜಿಕ ಲೇಖನಗಳು, ಕತೆ, ಕವನ, ಧಾರಾವಾಹಿ, ಚುಟುಕು, ಹನಿಗವನ, ಕಾರ್ಟೂನ್, ವ್ಯಕ್ತಿ ಪರಿಚಯ, ಪುಸ್ತಕ ಪರಿಚಯ ಇತ್ಯಾದಿ ವೈವಿಧ್ಯಮ ಬರಹಗಳು ಪ್ರಕಟವಾಗುತ್ತಿದ್ದುವು.

ಅಧಿಕೃತವಾಗಿ ಪತ್ರಿಕೆಯ ಸಂಪಾದಕರು, ಪ್ರಕಾಶಕರು, ಮುದ್ರಕರು ಮಂಗಳೂರಿನ ಆಂಡೋಪೌಲ್ ಪುತ್ತೂರು (ಪಟ್ಟಾಂಗ) ಅವರಾಗಿದ್ದರೂ, ಪತ್ರಿಕೆಯ ವ್ಯವಸ್ಥಾಪಕರಾಗಿ ಸಂಪೂರ್ಣ ಜವಾಬ್ದಾರಿ ಹೊತ್ತು  ಪತ್ರಿಕೆಯನ್ನು ಹೊರತಂದವರು ಜಗದೀಶ್ ಆರ್. ಬಿ. ಅವರೇ. ಶ್ರೀರಾಮ ದಿವಾಣ ಉಪಸಂಪಾದಕರು, ಪ್ರಧಾನ ವರದಿಗಾರರು ಆಗಿದ್ದರು. ಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಸದಾನಂದ ಟವರ್ಸ್ ನ ಮೂರನೇ ಮಹಡಿಯಲ್ಲಿ ಪತ್ರಿಕೆಯ ಕಚೇರಿ ಇತ್ತು.

~ ಶ್ರೀರಾಮ ದಿವಾಣ, ಉಡುಪಿ