ಕನ್ನಡ ಪತ್ರಿಕಾ ಲೋಕ (೪೩) - ನವಭಾರತ

ಕನ್ನಡ ಪತ್ರಿಕಾ ಲೋಕ (೪೩) - ನವಭಾರತ

ವಿ. ಎಸ್. ಕುಡ್ವ ಅವರ "ನವ ಭಾರತ"

ಮಂಗಳೂರಿನಲ್ಲಿ ಉದ್ಯಮ ರಂಗದಲ್ಲಿ ಪ್ರಸಿದ್ಧರಾಗಿದ್ದ ವಿ. ಎಸ್. ಕುಡ್ವ (ವಾಮನ ಎಸ್. ಕುಡ್ವ) ಅವರು ಆರಂಭಿಸಿದ ದಿನ ಪತ್ರಿಕೆ " ನವ ಭಾರತ". ಪ್ರಸ್ತುತ ಕರಾವಳಿ ಕರ್ನಾಟಕದಲ್ಲಿ ಉದಯವಾಣಿ ದಿನ ಪತ್ರಿಕೆ ಯಾವ ಸ್ಥಾನವನ್ನು ಪಡೆದಿದೆಯೋ, ಇದೇ ರೀತಿಯ ಸ್ಥಾನವನ್ನು ಹಿಂದೆ "ನವ ಭಾರತ" ಪಡೆದಿತ್ತು.

೧೯೪೦ರ ದಶಕದಲ್ಲಿ ಕುಡ್ವರು ನವ ಭಾರತವನ್ನು ಆರಂಭಿಸಿದ್ದರು. ಮಂಗಳೂರು ನಗರದ ಪಿ ವಿ ಎಸ್ ಸರ್ಕಲ್ ನಿಂದ ಲಾಲ್ ಭಾಗ್ ಕಡೆಗೆ ಹಾದು ಹೋಗುವ ರಸ್ತೆಯ ಎಡ ಬದಿಯಲ್ಲಿ ಪತ್ರಿಕೆ ಸ್ವಂತ ಕಚೇರಿ, ಮುದ್ರಣಾಲಯ ಇತ್ಯಾದಿಗಳನ್ನು ಹೊಂದಿತ್ತು. ಈಗ ಈ ಸ್ಥಳದಲ್ಲಿ ಹೊಸದಾದ ವಾಣಿಜ್ಯ ಕಟ್ಟಡಗಳಿವೆ. ಪತ್ರಿಕಾ ಕಚೇರಿ ಇದ್ದ ಸ್ಥಳವನ್ನು ಈಗಲೂ ‘ನವಭಾರತ ವೃತ್ತ’ ಎಂದೇ ಕರೆಯುತ್ತಾರೆ.

ಮಣಿಪಾಲದ ಪೈಗಳು ಹೊಸ ಅತ್ಯಾಧುನಿಕ ಮುದ್ರಣ ಯಂತ್ರಗಳೊಂದಿಗೆ ಆಧುನಿಕ ಶೈಲಿಯೊಂದಿಗೆ ೧೯೭೦ರಲ್ಲಿ ಉದಯವಾಣಿ ಆರಂಭಿಸಿದ ಬಳಿಕ, "ನವ ಭಾರತ" ತನ್ನ ಹಳೆಯ ಅದೇ ಶೈಲಿಯನ್ನು  ಬದಲಾಯಿಸದೆ ಮುಂದುವರಿದ ಹಿನ್ನೆಲೆಯಲ್ಲಿ ಪತ್ರಿಕೆಯ ಪ್ರಸಾರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಕುಸಿಯತೊಡಗಿತು. ಕೊನೆಗೆ ಸ್ಥಗಿತಗೊಂಡಿತು.

ಕೆಲವು ದಶಕಗಳ ಕಾಲ ಕರಾವಳಿ ಕರ್ನಾಟಕದ ಮನೆ ಮಾತಾಗಿದ್ದ ನವ ಭಾರತ, ಸ್ವಾತಂತ್ರ್ಯ ಹೋರಾಟದಲ್ಲೂ ತನ್ನ ಕೊಡುಗೆಯನ್ನು ಸಲ್ಲಿಸಿತ್ತು. ಉದಯವಾಣಿಯಲ್ಲಿ ಆರಂಭ ಕಾಲದಲ್ಲಿ ಇದ್ದ ಪ್ರಮುಖ ಪತ್ರಕರ್ತರಲ್ಲಿ ಹೆಚ್ಚಿನವರು, ನವ ಭಾರತದಿಂದ ವಲಸೆ ಹೋದವರೇ ಆಗಿದ್ದರು. ನವ ಭಾರತದ ಬಿಡಿ ಸಂಚಿಕೆಯ ಬೆಲೆ ೧೯೬೬ರ ದಶಕದಲ್ಲಿ ಎಂಟು ಪೈಸೆ ಇತ್ತು.

~ ಶ್ರೀರಾಮ ದಿವಾಣ, ಉಡುಪಿ