ಕನ್ನಡ ಪತ್ರಿಕಾ ಲೋಕ (೪೮) - ಕೃಷಿಕರ ಸಂಘಟನೆ

ಕನ್ನಡ ಪತ್ರಿಕಾ ಲೋಕ (೪೮) - ಕೃಷಿಕರ ಸಂಘಟನೆ

ವಕೀಲ, ಶಾಸಕರಾಗಿದ್ದ ಬೋಳ ರಘುರಾಮ ಶೆಟ್ಟಿಯವರ "ಕೃಷಿಕರ ಸಂಘಟನೆ"

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕೇಂದ್ರದಿಂದ್ರ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ಕೃಷಿಕರ ಸಂಘಟನೆ". ೧೯೭೦ರಲ್ಲಿ ಆರಂಭವಾದ " ಕೃಷಿಕರ ಸಂಘಟನೆ"ಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಬೋಳ ರಘುರಾಮ ಶೆಟ್ಟಿಯವರು. ಇವರು ಕಾರ್ಕಳದ ಪ್ರಸಿದ್ಧ ವಕೀಲರಾಗಿದ್ದರು. ಒಂದು ಅವಧಿಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾಗಿದ್ದರು.

ಬಿ. ಗಣೇಶ್ ಶೆಟ್ಟಿ ಅವರು ಮುದ್ರಕರಾಗಿದ್ದರು. ಕಾರ್ಕಳ ಪವರ್ ಪ್ರೆಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು. ೧೨ ಪುಟಗಳ , ಟ್ಯಾಬ್ಲಾಯ್ಡ್ ಮಾದರಿಯ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೨೫ ಪೈಸೆ ಆಗಿತ್ತು.

"ಕೃಷಿಕರ ಸಂಘಟನೆ" ವಾರಪತ್ರಿಕೆ ಕೃಷಿ ವಿಚಾರಗಳಿಗಷ್ಟೇ ಸೀಮಿತವಾಗಿದ್ದ ಪತ್ರಿಕೆಯಾಗಿರಲಿಲ್ಲ. ಕೃಷಿ ವಿಚಾರಗಳ ಜೊತೆಗೆ ರಾಜಕೀಯ, ಸಾಮಾಜಿಕ, ಕಲೆ, ಸಾಂಸ್ಕೃತಿಕ ಸಾಹಿತ್ಯಿಕ ಬರಹ, ವಿಷಯಗಳಿಗೂ ಪತ್ರಿಕೆಯಲ್ಲಿ ಸ್ಥಾನವಿತ್ತು. ಸಾಧಕರ ಪರಿಚಯ, ಓದುಗರ ಪತ್ರಗಳ ವಿಭಾಗ, ಕಥೆ, ಕವನ, ಧಾರಾವಾಹಿ, ವಾರಭವಿಷ್ಯ, ಕ್ಷೇತ್ರ ಪರಿಚಯ, ಸರಕಾರೀ ನೀತಿಗಳ ವಿಶ್ಲೇಷಣೆ, ಕಾನೂನು ಮಾಹಿತಿ ಇತ್ಯಾದಿ ವೈವಿಧ್ಯಮಯ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.  ಕೆಲವು ವರ್ಷಗಳ ಕಾಲ ನಿರಂತರವಾಗಿ ಪ್ರಕಟವಾದ "ಕೃಷಿಕರ ಸಂಘಟನೆ" ಬಳಿಕ ಸ್ಥಗಿತಗೊಂಡಿತು.

~ ಶ್ರೀರಾಮ ದಿವಾಣ, ಉಡುಪಿ