ಕನ್ನಡ ಪತ್ರಿಕಾ ಲೋಕ (೪೯) - ನವಿಲುಗರಿ

ಕನ್ನಡ ಪತ್ರಿಕಾ ಲೋಕ (೪೯) - ನವಿಲುಗರಿ

ಪ್ರಕಾಶ್ ಕಾಬೆಟ್ಟು ಅವರ "ನವಿಲುಗರಿ"

" ನವಿಲುಗರಿ", ಪ್ರಕಾಶ್ ಕಾಬೆಟ್ಟು ಅವರು ಪ್ರಕಟಿಸುತ್ತಿದ್ದ ಮಾಸಿಕ. ಒಂದು ವರ್ಷ ಕಾಲ ಒಟ್ಟು ಹನ್ನೆರಡು ಸಂಚಿಕೆಗಳನ್ನು ಪ್ರಕಟಿಸಿದ ಬಳಿಕ "ನವಿಲುಗರಿ" ಪ್ರಕಟಣೆಯನ್ನು ಸ್ಥಗಿತಗೊಳಿಸಿದರು. 'ಮಂಗಳ' ವಾರ ಪತ್ರಿಕೆಯ ರೂಪದಲ್ಲಿ ಬರುತ್ತಿದ್ದ "ನವಿಲುಗರಿ" ಕಾರ್ಕಳದಿಂದ ಪ್ರಕಟವಾಗುತ್ತಿತ್ತು. ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿ ಆಗಿತ್ತು. ಒಪೆರ ಡ್ರೀಮ್ ಮೂವೀಸ್ ಮೂಲಕ ಪ್ರಕಟವಾಗುತ್ತಿದ್ದ ಪತ್ರಿಕೆಯ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿದ್ದವರು ಪ್ರಕಾಶ್ ಕಾಬೆಟ್ಟು.

ವಿನುತ ಶರ್ಮ, ಎಂ. ಎಂ. ಎಸ್ ಹಾಗೂ ರತ್ನ ಪ್ರಕಾಶ್ ಸಂಪಾದಕೀಯ ಬಳಗದ ಸದಸ್ಯರಾಗಿದ್ದರು. ರೆನಿಟ ಡಿ 'ಸೋಜಾ ಜಾಹೀರಾತು ನಿರ್ವಹಣೆ ಮಾಡುತ್ತಿದ್ದರೆ, ಸುಶ್ಮಿತಾ ಹಾಗೂ ವೀಡಾ ಮೆಂಡೋನ್ಸಾ ಅವರು ಟೈಪಿಂಗ್ / ಡಿ.ಟಿ.ಪಿ ಹೊಣೆ ಹೊತ್ತಿದ್ದರು. ಡಾ. ಕೆ. ಶಿವಣ್ಣ ಅಂಕಣಕಾರರಾಗಿದ್ದರು.

ವೈವಿಧ್ಯಮಯ ಲೇಖನಗಳು, ದೇಶ - ವಿದೇಶಗಳ ಘಟನಾವಳಿಗಳ ವಿಶ್ಲೇಷಣೆಗಳು, ಧಾರಾವಾಹಿ, ಆರೋಗ್ಯ, ಸಿನಿಮಾ, ವ್ಯಕ್ತಿತ್ವ ವಿಕಸನ ಸಂಬಂಧಿ ಬರಹಗಳು, ಮಕ್ಕಳಿಗಾಗಿ ಕಥೆಗಳು ಇತ್ಯಾದಿ ಬರಹಗಳ ೪೪ ಪುಟಗಳ "ನವಿಲುಗರಿ" ಉಪಯುಕ್ತವಾಗಿ ಬರುತ್ತಿತ್ತು.

~ ಶ್ರೀರಾಮ ದಿವಾಣ, ಉಡುಪಿ