ಕನ್ನಡ ಪತ್ರಿಕಾ ಲೋಕ (೪) - ಅಪಂಗಾ

ಕನ್ನಡ ಪತ್ರಿಕಾ ಲೋಕ (೪) - ಅಪಂಗಾ

ಕೊಲ್ಲೂರು ಯುಗಾನಂದ ಶೆಟ್ಟಿ ಅವರ "ಅಪಂಗಾ"

 " ಅಪಂಗಾ" , ಕೊಲ್ಲೂರು ಯುಗಾನಂದ ಶೆಟ್ಟಿಯವರು ಹೊರತರುತ್ತಿದ್ದ ಮಾಸಪತ್ರಿಕೆ. ೪೨ ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು.  1979ರ ಸೆಪ್ಟೆಂಬರ್ ತಿಂಗಳ ಸಂಚಿಕೆಯೊಂದಿಗೆ ಆರಂಭಗೊಂಡ "ಅಪಂಗಾ" , ಕೆಲವು ವರ್ಷಗಳ ಕಾಲ ಪ್ರಕಟವಾಗುತ್ತಿದ್ದು, ಬಳಿಕ ಸ್ಥಗಿತಗೊಂಡಿತು.

ವಿಕಲ ಚೇತನ ವ್ಯಕ್ತಿಗಳ ಶ್ರೇಯೋಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ವಿಕಲ ಚೇತನರೇ ಆದ ಕೊಲ್ಲೂರು ಯುಗಾನಂದ ಶೆಟ್ಟಿಯವರು ಆರಂಭಿಸಿದ ಪತ್ರಿಕೆಯಿದು. ಹಾಗೆಂದು "ಅಪಂಗಾ" ವಿಕಲ ಚೇತನರಿಗಷ್ಟೇ ಸೀಮಿತವಾಗಿರಲಿಲ್ಲ. ನಾಡಿನ ಹಿರಿಯ ಬರಹಗಾರರನೇಕರು ಪತ್ರಿಕೆಗೆ ಬರೆಯುತ್ತಿದ್ದರು ಮತ್ತು ಸಾಹಿತ್ಯ, ಕಲೆ, ಸಂಸ್ಕೃತಿ, ಸಮಾಜ ಸಹಿತ ವೈವಿಧ್ಯಮಯವಾದ ಅನೇಕ ಅಮೂಲ್ಯ ಬರಹಗಳು ಪ್ರಕಟವಾಗುತ್ತಿತ್ತು.

ಕೊಡತ್ತೂರು ಸಚ್ಚಿದಾನಂದ ಉಡುಪರು ಗೌರವ ಸಂಪಾದಕರಾಗಿದ್ದ "ಅಪಂಗಾ", ಕಿನ್ನಿಗೋಳಿಯ ಯುಗಪುರುಷ ಮುದ್ರಣಾಲಯದಲ್ಲಿ ಮುದ್ರಣವಾಗುತ್ತಿತ್ತು.

ಸಂಚಿಕೆಯೊಂದರ 1.50  ಬೆಲೆಯಿದ್ದ "ಅಪಂಗಾ"ವನ್ನು ಸ್ವಾತಂತ್ರೋತ್ಸವ ಸಂದರ್ಭದಲ್ಲಿ (೧೯೭೯, ಆಗಸ್ಟ್ ೧೫) ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕವಿ ಕಯ್ಯಾರ ಕುಞ್ಞಣ್ಣ ರೈಗಳ ಅಧ್ಯಕ್ಷತೆಯಲ್ಲಿ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನ ಪ್ರಾಧ್ಯಾಪಕರಾದ ಎಂ. ವಿಶ್ವನಾಥ ಅವರು  ಬಿಡುಗಡೆಗೊಳಿಸಿದ್ದರು. ಗೋಪಾಲಕೃಷ್ಣ ಆಸ್ರಣ್ಣ, ಸಂಪಾದಕರಾದ ಕೊಲ್ಲೂರು ಯುಗಾನಂದ ಶೆಟ್ಟಿಯವರ ವಿದ್ಯಾಗುರುಗಳಾದ ಕೊಡತ್ತೂರು ಅನಂತಪದ್ಮನಾಭ ಉಡುಪ, ಕೆ. ಸಚ್ಚಿದಾನಂದ ಉಡುಪ, ಬಿ. ಎಸ್. ಸುಬ್ರಹ್ಮಣ್ಯ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

~ *ಶ್ರೀರಾಮ ದಿವಾಣ*