ಕನ್ನಡ ಪತ್ರಿಕಾ ಲೋಕ (೫) - ಅಜಂತ

ಕನ್ನಡ ಪತ್ರಿಕಾ ಲೋಕ (೫) - ಅಜಂತ

*ಎಂ. ವ್ಯಾಸ ಅವರ "ಅಜಂತ"*

ಖ್ಯಾತ ಕತೆಗಾರರಾದ ಕಾಸರಗೋಡಿನ ಎಂ. ವ್ಯಾಸ (" ಶಶಿರಾಜ") ಅವರು ಪ್ರಕಟಿಸುತ್ತಿದ್ದ ಮಾಸಿಕ, "ಅಜಂತ".

1966ರ ಫೆಬ್ರವರಿಯಲ್ಲಿ ಗೆಳೆಯರ ಸಹಕಾರದೊಂದಿಗೆ " ಅಜಂತ"ವನ್ನು ಆರಂಭಿಸಿದ ಎಂ. ವ್ಯಾಸ ಅವರು, ಒಂದು ವರ್ಷ ಕಾಲ ನಡೆಸಿ ಕೊನೆಗೆ ಪ್ರಕಟಣೆಯನ್ನು ಸ್ಥಗಿತಗೊಳಿಸಿದರು. 1967ರ ಫೆಬ್ರವರಿ ತಿಂಗಳ ಸಂಚಿಕೆಯೇ "ಅಜಂತ" ದ ಕೊನೆಯ ಸಂಚಿಕೆ.

"ಅಜಂತ" ದ ಒಟ್ಟು 13 ಸಂಚಿಕೆಗಳು ಬಂದಿವೆ. ಇವುಗಳಲ್ಲಿ "ಕಾ. ನಾ. ಭ.' , ಕೆ. ಟಿ. ಶ್ರೀಧರ್ , ಹಂ. ಪ. ನಾ. , ನಾ. ಡಿಸೋಜಾ , ಸುಬ್ರಾಯ ಚೊಕ್ಕಾಡಿ , ಕೆ. ವಿ. ತಿರುಮಲೇಶ್, ನಿಂಜೂರ್ ವ್ಯಾಸ ರಾವ್ , ಕೆ. ಟಿ. ಗಟ್ಟಿ , ಗೋಪಾಲಕೃಷ್ಣ ಪೈ, ಈಶ್ವರ ಚಂದ್ರ, ಡಾ. ವಿಜಯಾ, ಈಶ್ವರಯ್ಯ, ಉದ್ಯಾವರ ಮಾಧವಾಚಾರ್ಯ, ನಾಗಭೂಷಣ ರಾವ್ ಸಿಂಧೆ, " ಶ್ರೀ" ಕಾಸರಗೋಡು, ಶಶಾಂಕ, ಗಂಗಾಧರ್, ಕೆ. ಎನ್. ಭಟ್, ಪ್ರಧಾನ್ ಕೃಷ್ಣಮೂರ್ತಿ, ಬಸವರಾಜ ಐವಳ್ಳಿ, ಗೋಪಾಲಕೃಷ್ಣ ಮಧ್ಯಸ್ಥ, ಬುದ್ದಣ್ಣ ಹಿಂಗಮಿರೆ, ಬಿ.ನರಸಿಂಗ ರಾವ್ ಮೊದಲಾದವರ ಬರಹಗಳು ಪ್ರಕಟವಾಗುತ್ತಿದ್ದುವು. ಸಂಪಾದಕರಾದ ಎಂ. ವ್ಯಾಸರ ಕತೆಗಳು, "ನಕ್ಷತ್ರಗಾನ . . ." ಅಂಕಣ ಬರಹ ಹಾಗೂ ಇತರ ಬರಹಗಳೂ ಇರುತ್ತಿದ್ದುವು.

ಕವಿ ಎಂ. ಗಂಗಾಧರ ಭಟ್ ಅವರು "ಅಜಂತ" ದ ಉಪ ಸಂಪಾದಕರಾಗಿದ್ದರು. ಎಂ. ಶುಭಕರ ಶ್ಯಾನುಭೋಗ್ ಅವರು ಪ್ರಕಾಶಕರಾಗಿದ್ದರು. ಕೆ. ಎಸ್. ಈಶ್ವರನ್ ಅವರು ಸಂಚಾಲಕರಾಗಿದ್ದರು. ಕಾಸರಗೋಡಿನ ಕೆ. ಜಿ. ಶೆಣೈ ಅವರ ಶ್ರೀನಿವಾಸ್ ಪ್ರಿಂಟಿಂಗ್ ವರ್ಕ್ಸ್ ನಲ್ಲಿ ಅಜಂತ ಮುದ್ರಣವಾಗುತ್ತಿತ್ತು.

"ಅಜಂತ" ದ ಬಿಡಿ ಸಂಚಿಕೆಯ ಬೆಲೆ ಐವತ್ತು ಪೈಸೆ ಆಗಿತ್ತು. ಅರ್ಧ ವಾರ್ಷಿಕ ಚಂದಾ ರೂಪಾಯಿ 2. 50 ಮತ್ತು ವಾರ್ಷಿಕ ಚಂದಾ ಐದು ರೂಪಾಯಿ ಆಗಿತ್ತು. ಚಿತ್ರ ಕಲಾವಿದ ಬಿ. ಪುರುಷೋತ್ತಮ ಅವರು ರಚಿಸಿದ ಮುಖಪುಟ ಚಿತ್ರವಿರುವ ಮೇ, 1966ರ "ಅಜಂತ"  ಸಂಚಿಕೆಯನ್ನು ಚಿತ್ರದಲ್ಲಿ ನೋಡಬಹುದು.

~ *ಶ್ರೀರಾಮ ದಿವಾಣ*