ಕನ್ನಡ ಪತ್ರಿಕಾ ಲೋಕ (೬) - ಕೈಲಾಸ
*ಎನ್. ಎಸ್. ಸೀತಾರಾಮ ಶಾಸ್ತ್ರಿಗಳ "ಕೈಲಾಸ"*
ಮಾಸ ಪತ್ರಿಕೆಯೊಂದರ ಮೊದಲ ಸಂಚಿಕೆಗೆ " ಪ್ರಾಯೋಗಿಕ ಸಂಚಿಕೆ" ಎಂದು ಹೆಸರಿಟ್ಟು, ಈ ಪ್ರಾಯೋಗಿಕ ಸಂಚಿಕೆಯನ್ನು ರಾಜ್ಯಾದ್ಯಂತ ಉಚಿತವಾಗಿ ಹಂಚುವ ಪ್ರಯೋಗವೊಂದು ಕನ್ನಡ ಪತ್ರಿಕಾ ಲೋಕದಲ್ಲಿ ಮೊತ್ತಮೊದಲು ಪ್ರಯೋಗ ಆದದ್ದಿದ್ದರೆ (ಲಭ್ಯ ಮಾಹಿತಿಯಂತೆ), ಅದು "ಕೈಲಾಸ" ಸಚಿತ್ರ ಮಾಸಪತ್ರಿಕೆಯದ್ದು. "ಕೈಲಾಸ"ದ ಮೂಲಕ ಹೀಗೆ ನೂತನವಾದೊಂದು ಪ್ರಯೋಗ ಮಾಡಿದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಎನ್. ಎಸ್. ಸೀತಾರಾಮ ಶಾಸ್ತ್ರಿಗಳು ಹಾಗೂ ಎಸ್. ವೆಂಕಟ ರಾವ್. ಇವರಿಬ್ಬರು " ಕೈಲಾಸ"ದ ಸಂಯುಕ್ತ ಸಂಪಾದಕರಾಗಿದ್ದವರು.
1963ರ ಆಗಸ್ಟ್ ತಿಂಗಳಲ್ಲಿ ಆರಂಭವಾದ " ಕೈಲಾಸ" , ಐದು ವರ್ಷಗಳ ಕಾಲ ಪ್ರಕಟಗೊಂಡು ಕೊನೆಗೆ 1967 ರಲ್ಲಿ ನಿಂತುಹೋಯಿತು.
148 ಪುಟಗಳ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ "ಕೈಲಾಸ" ದ ಬಿಡಿ ಸಂಚಿಕೆಯ ಬೆಲೆ 75 ಪೈಸೆಯಾಗಿತ್ತು.
ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿ ಪತ್ರಿಕೆಯು ಕಾರ್ಯಾಲಯವನ್ನು ಹೊಂದಿತ್ತು.
ಕಿರಿಯ ಬರಹಗಾರರ ವೈವಿಧ್ಯಮಯ ಬರಹಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಕಟಿಸಿ ಪ್ರೋತ್ಸಾಹಿಸುತ್ತಿದ್ದ "ಕೈಲಾಸ" ಬರಹಗಾರರಲ್ಲದವರ ಬರಹಗಳನ್ನೂ ಆಹ್ವಾನಿಸಿ ಪ್ರಕಟಿಸಿ ಬೆನ್ನು ತಟ್ಟುವ ಶ್ರಮ ತೆಗೆದುಕೊಳ್ಳುತ್ತಿತ್ತು. ಇಂದು ಖ್ಯಾತನಾಮರೆಂದು ಗುರುತಿಸಲ್ಪಡುವ ಅನೇಕ ಮಂದಿ ಬರಹಗಾರರ ಆರಂಭಿಕ ಬರಹಗಳನ್ನು ಪ್ರಕಟಿಸಿದ ಮಾಸಪತ್ರಿಕೆ ಎಂಬ ಹೆಗ್ಗಳಿಕೆ "ಕೈಲಾಸ" ದ್ದಾಗಿದೆ.
~ *ಶ್ರೀರಾಮ ದಿವಾಣ*