ಕನ್ನಡ ಪತ್ರಿಕಾ ಲೋಕ (೮) - ಮಧುಕರ

ಕನ್ನಡ ಪತ್ರಿಕಾ ಲೋಕ (೮) - ಮಧುಕರ

*ಕಟೀಲ್ ಗಣಪತಿ ಶರ್ಮಾ ಬಳಗದ "ಮಧುಕರ" ಕನ್ನಡ ಡೈಜೆಸ್ಟ್*

ಬೆಂಗಳೂರಿನ "ಶ್ರೀ ಪ್ರಕಾಶನ ಪ್ರೈವೆಟ್ ಲಿಮಿಟೆಡ್" (ಸಂಖ್ಯೆ ೫೫೦, ೨೦ನೇ ಮುಖ್ಯ ರಸ್ತೆ, ೪ನೇ 'ಟಿ' ಬ್ಲಾಕ್, ಜಯನಗರ) ಪ್ರಕಟಿಸುತ್ತಿದ್ದ ಕನ್ನಡ ಡೈಜೆಸ್ಟ್ "ಮಧುಕರ".

ಕಟೀಲ್ ಗಣಪತಿ ಶರ್ಮಾ (ಎಂ. ಎ., ಎಲ್. ಟಿ.) ಪ್ರಧಾನ ಸಂಪಾದಕರಾಗಿದ್ದ " ಮಧುಕರ" ಮಾಸಿಕದಲ್ಲಿ ಎನ್. ಡಿ. ಕೃಷ್ಣಮೂರ್ತಿ (ಎಂ. ಎ., ಬಿ. ಎಡ್.), ಕೆ. ಎನ್. ಲಕ್ಷ್ಮೀನರಸಿಂಹ (ಎಂ. ಎ., ಎಂ. ಎಡ್.) ಹಾಗೂ ಶ್ರೀಮತಿ ಕಟೀಲ್ ಜಾನಕಿ ದೇವಿ ಶರ್ಮಾ (ರಾ. ಭಾ. ವಿಶಾರದ.) ಇವರು ಸಹ ಸಂಪಾದಕರಾಗಿದ್ದರು. "ಶ್ರೀ ಪ್ರಕಾಶನ ಪ್ರೈವೆಟ್ ಲಿಮಿಟೆಡ್" ಇವರದೇ ಪ್ರಕಾಶನ ಸಂಸ್ಥೆಯಾಗಿದೆ. ಇದರಲ್ಲಿ ಈ ಮೇಲಿನ ನಾಲ್ವರಲ್ಲದೆ ಡಾ. ಸುಶೀಲಾ ಪಿ. ಉಪಾಧ್ಯಾಯ ಹಾಗೂ ಶ್ರೀಮತಿ ಪಿ. ಎಂ. ವೇದಾವತಿ ಇವರೂ ಕೂಡಾ ನಿರ್ದೇಶಕರಾಗಿದ್ದರು.

೧೯೭೮ರ ನವೆಂಬರ್ ತಿಂಗಳ ಸಂಚಿಕೆ, "ಮಧುಕರ" ದ ಮೊದಲ ಸಂಚಿಕೆ. ೧೦೮ ಪುಟಗಳ ಬಿಡಿ ಸಂಚಿಕೆಯ ಬೆಲೆ ಆಗ ೧.೫೦. ಒಂದು ವರ್ಷದ ಚಂದಾ (ಅಂಚೆ ವೆಚ್ಚ ಸೇರಿ) ೧೮.೦೦. ಅರ್ಧ ವಾರ್ಷಿಕ ಚಂದಾ ೯.೫೦.

ನೂತನ - ಪುರಾತನ ಜ್ಞಾನ - ವಿಜ್ಞಾನ ಮತ್ತು ಮನರಂಜನ ಎಂಬ ವಿಷಯಗಳ ಮೇಲೆ ಪ್ರಕಟವಾಗುತ್ತಿದ್ದ "ಮಧುಕರ"ದಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ಶಿಕ್ಷಣ, ರಾಜನೀತಿ, ಅರ್ಥಶಾಸ್ತ್ರ, ಧರ್ಮ, ಇತಿಹಾಸ, ದರ್ಶನ ಇತ್ಯಾದಿ ವಿಷಯಗಳ ಪ್ರೌಢ ಮತ್ತು ವಿಚಾರ ಪ್ರಚೋದಕ ಬರಹಗಳು ಪ್ರಕಟವಾಗುತ್ತಿದ್ದುವು.

"ಮಧುಕರ"ದ ಪ್ರಧಾನ ಸಂಪಾದಕರಾದ ಕಟೀಲ್ ಗಣಪತಿ ಶರ್ಮಾರವರು ತಮ್ಮ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಬರಹಗಾರರ ಹತ್ತು ಹಲವು ಕೃತಿಗಳನ್ನೂ ಪ್ರಕಟಿಸಿದ್ದರು.

~ *ಶ್ರೀರಾಮ ದಿವಾಣ*