ಕನ್ನಡ ಪತ್ರಿಕಾ ಲೋಕ (೯) - ಭಾವನಾ

ಕನ್ನಡ ಪತ್ರಿಕಾ ಲೋಕ (೯) - ಭಾವನಾ

ಉದ್ಯಮಿ ವಿಜಯ ಸಂಕೇಶ್ವರ ಇವರು ‘ವಿಜಯ ಕರ್ನಾಟಕ' ದಿನ ಪತ್ರಿಕೆಯನ್ನು ಪ್ರಾರಂಭಿಸಿದಾಗ ಅದರ ಜೊತೆಗೆ ಇನ್ನೆರಡು ಪತ್ರಿಕೆಗಳನ್ನು ಪ್ರಾರಂಭಿಸಿದ್ದರು. ಅದರಲ್ಲಿ ಒಂದು ‘ನೂತನ' ಎಂಬ ವಾರ ಪತ್ರಿಕೆ, ಮತ್ತೊಂದು ‘ಭಾವನಾ’ ಎಂಬ ಮಾಸಪತ್ರಿಕೆ. ಈ ಎರಡೂ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿದ್ದವರು ಸಂತೋಷ ಕುಮಾರ್ ಗುಲ್ವಾಡಿ. ‘ಭಾವನಾ’ ಮಾಸಿಕದ ಸಂಪಾದಕರಾಗಿದ್ದವರು ಖ್ಯಾತ ಕವಿ, ಸಾಹಿತಿ ಜಯಂತ ಕಾಯ್ಕಿಣಿಯವರು. 

ಎಪ್ರಿಲ್ ೨೦೦೦ದಂದು ಭಾವನಾ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಯಾಯಿತು. ಅಂದಿನ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಚೊಚ್ಚಲ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಪ್ರಕಾಶಕ, ಮಾಲಕ ವಿಜಯ ಸಂಕೇಶ್ವರ, ರಾಮಕೃಷ್ಣಾಶ್ರಮದ ಸ್ವಾಮೀ ಪುರುಷೋತ್ತಮಾನಂದಜೀ ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ, ಕಲೆ, ಸಂಗೀತ, ಚಲನಚಿತ್ರ, ರಂಗಭೂಮಿಯ ಗಣ್ಯರು ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. 

ಖ್ಯಾತ ಹಾಗೂ ಉದಯೋನ್ಮುಖ ಸಾಹಿತಿಗಳ ಬರಹವನ್ನು ಒಳಗೊಂಡ ಭಾವನಾ ಮಾಸ ಪತ್ರಿಕೆ ಕೆಲವೇ ಸಮಯದಲ್ಲಿ ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿತ್ತು. ಶತಮಾನದ ಮೆಲುಕು, ವಿಶ್ವ ಭಾರತಿ, ಜಯಂತ್ ಕಾಯ್ಕಿಣಿಯ ಶಬ್ದತೀರ ಅಂಕಣ, ಕ್ಯಾನ್ ವಾಸ್, ಗುಲ್ವಾಡಿಯವರ ಮಾನಸೋಲ್ಲಾಸ ಅಂಕಣ, ಕಾಗದದ ದೋಣಿ, ಗರಿ ಮೊದಲಾದ ಅಂಕಣಗಳು ಬಹಳ ಸೊಗಸಾಗಿದ್ದುವು. ಕೊನೆಯ ಪುಟದ ‘ಕೊನೇ-ಸಿಪ್' ಅನ್ನಂತೂ  ಹಲವಾರು ಮಂದಿ ಸದಾಕಾಲ ನೆನಪಿಸಿಕೊಳ್ಳುತ್ತಿರುವ ಅಂಕಣವಾಗಿತ್ತು. 

ಭಾವನಾ ಪತ್ರಿಕೆಯು ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ರಸ್ತೆಯ ಗಿರಿರಾಜ್ ಅನೆಕ್ಸ್ ನಲ್ಲಿ ಕಾರ್ಯಾಲಯ ಹೊಂದಿತ್ತು. ಮುಖಪುಟದಲ್ಲಿ ಸೊಗಸಾದ ತೈಲಚಿತ್ರಗಳನ್ನು ಮುದ್ರಿಸುತ್ತಿದ್ದರು. ಪ್ರಾರಂಭದಲ್ಲಿ ಇದರ ಮುಖ ಬೆಲೆ ರೂ. ೬.೦೦. ಪತ್ರಿಕೆಯನ್ನು ಅಂಚೆಯ ಮೂಲಕ ಕಳಿಸುವ ಬಗ್ಗೆ ಯಾವುದೇ ಮಾಹಿತಿ ಪತ್ರಿಕೆಯಲ್ಲಿ (ಚಂದಾ ವಿವರ ಇತ್ಯಾದಿ) ನೀಡಲಾಗಿಲ್ಲ. ಸುಮಾರು ಒಂದು ವರ್ಷ ನಡೆದ ಪತ್ರಿಕೆಯನ್ನು ನಷ್ಟದ ಕಾರಣ ನೀಡಿ ಸ್ಥಗಿತಗೊಳಿಸಲಾಯಿತು. ನಿಜವಾಗಿಯೂ ಭಾವನಾ ಪತ್ರಿಕೆ ಸುಮಧುರ ಹಾಗೂ ಸದಭಿರುಚಿಯ ಮಾಸಿಕವಾಗಿತ್ತು.