ಕನ್ನಡ ಪತ್ರಿಕಾ ಲೋಕ (2) - ವೀರಭೂಮಿ

ಕನ್ನಡ ಪತ್ರಿಕಾ ಲೋಕ (2) - ವೀರಭೂಮಿ

ಸಾಂತ್ಯಾರು ವೆಂಕಟರಾಜ ಅವರ "ವೀರಭೂಮಿ"

"ವೀರಭೂಮಿ" , ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸ ಪತ್ರಿಕೆ.  1/8 ಆಕಾರದಲ್ಲಿ, ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ "ವೀರಭೂಮಿ"ಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಉಡುಪಿ ಬಳಿಯ ಸಾಂತ್ಯಾರುವಿನ ಎಸ್. ವೆಂಕಟರಾಜ ಅವರು.

1963ರ ಆಗಸ್ಟ್ ತಿಂಗಳಿನಿಂದ 1970ರ ಜುಲೈ ತಿಂಗಳ ವರೆಗೆ, ಏಳು ವರ್ಷ ಕಾಲ "ವೀರಭೂಮಿ" ಪ್ರಕಟವಾಗಿ, ಬಳಿಕ ಸ್ಥಗಿತಗೊಂಡಿತು. 1970ರ ಆಗಸ್ಟ್ 14ರಂದು ಕೆ. ಸೂರ್ಯನಾರಾಯಣ ಅಡಿಗ ಅವರು ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದರು. ಆ ಕಾಲದ ಪ್ರಸಿದ್ಧ ದಿನ ಪತ್ರಿಕೆ "ನವ ಭಾರತ"ದ ಸಂಪಾದಕರಾಗಿದ್ದ ವಿ. ಎಸ್. ಕುಡ್ವ ಅವರು ಅಧ್ಯಕ್ಷತೆ ವಹಿಸಿದ್ದರು. ಕೌಜಲಗಿ ಶೇಷಾಚಾರ್ಯರು ಹಾಗೂ ಬೈಕಾಡಿ ವೆಂಕಟಕೃಷ್ಣ ರಾಯರು ಅತಿಥಿಗಳಾಗಿದ್ದರು. ಪತ್ರಿಕೆಯ ವ್ಯವಸ್ಥಾಪಕರಾಗಿದ್ದ ಎಸ್. ಪಿ. ನಾಯಕ್ ಅವರು ಮುದ್ರಣ, ಪ್ರಸರಣ ಮತ್ತು ಜಾಹೀರಾತು ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. (ಮಾಹಿತಿ ಕೃಪೆ: "ನವೋದಯದ ರಾಜಹಂಸ ಸಾಂತ್ಯಾರು ವೆಂಕಟರಾಜ" / ಡಾ. ಬಿ. ಜನಾರ್ದನ ಭಟ್ / ಕನ್ನಡ ಸಂಘ ಕಾಂತಾವರ / 2011).

ಉಡುಪಿ ತೆಂಕಪೇಟೆಯ ಕೆ. ರಾಘವೇಂದ್ರ ರಾವ್ ರವರ ಮೆಜೆಸ್ಟಿಕ್ ಪ್ರೆಸ್ ನಲ್ಲಿ ಮುದ್ರಣವಾಗುತ್ತಿದ್ದ " ವೀರಭೂಮಿ" ಗೆ ತೆಂಕಪೇಟೆಯಲ್ಲಿಯೇ ಕಚೇರಿಯೂ ಇತ್ತು. 30 ಪೈಸೆ ಬೆಲೆಯ "ವೀರಭೂಮಿ"ಯ ವಾರ್ಷಿಕ ಚಂದಾ ಮೊತ್ತ 4 ರೂಪಾಯಿ ಆಗಿತ್ತು.

"ಸತ್ಯ - ಸದ್ವಿಚಾರಗಳ ಪ್ರತಿಪಾದನೆಯೇ ನಮ್ಮ ಮುಖ್ಯ ಧ್ಯೇಯ" ಎಂಬ ಘೋಷಣೆಯೊಂದಿಗೆ ಪ್ರತೀ ತಿಂಗಳ 15 ರಂದು ಪ್ರಕಟವಾಗುತ್ತಿದ್ದ "ವೀರಭೂಮಿ"ಯಲ್ಲಿ ಕಥೆ, ಕವನ, ಧಾರವಾಹಿ, ಕಲಾ ವಿಮರ್ಶೆ, ಹಾಸ್ಯ ಬರಹ, ಮಾಸ ಭವಿಷ್ಯ, ವೈಜ್ಞಾನಿಕ, ಸಾಮಯಿಕ, ರಾಜಕೀಯ ವಿಶ್ಲೇಷಣೆ, ಜ್ಞಾನ ಸಂಬಂಧಿ ಇತ್ಯಾದಿ ವೈವಿಧ್ಯಮಯ ಬರಹಗಳು ಪ್ರಕಟವಾಗುತ್ತಿದ್ದುವು. ವಿವಿಧ ಜಿಲ್ಲೆಗಳ ಲೇಖಕರ ಬರಹಗಳು ಪ್ರಕಟವಾಗುತ್ತಿದ್ದುವು. ಮಾಸಿಕದ ಮುಖಪುಟ ಮತ್ತು ಹಿಂಬದಿ ರಕ್ಷಾಪುಟ ವರ್ಣಮಯವಾಗಿರುತ್ತಿತ್ತು.

"ವೀರಭೂಮಿ"ಯ ಸಂಪಾದಕರಾದ ಎಸ್. ವೆಂಕಟರಾಜರು ಕವಿಯಾಗಿ, ಕಾದಂಬರಿಕಾರರಾಗಿ, ನಾಟಕ ರಚನಾಕಾರರಾಗಿ ಪ್ರಸಿದ್ಧರಾಗಿದ್ದರು. ಸಂಸ್ಕೃತ ವಿದ್ವಾಂಸರೂ ಆಗಿದ್ದ ಇವರ ಅನೇಕ ಕೃತಿಗಳು ಪ್ರಕಟವಾಗಿವೆ.

~ *ಶ್ರೀರಾಮ ದಿವಾಣ*