ಕನ್ನಡ ಪತ್ರಿಕಾ ಲೋಕ (3) - ನವಯುಗ
ಮಂಗಳೂರು ಮತ್ತು ಉಡುಪಿಯ "ನವಯುಗ"
"ನವಯುಗ" ಸಾಪ್ತಾಹಿಕ ಆರಂಭವಾದದ್ದು ಮಂಗಳೂರಿನಲ್ಲಿ. ಸುಧೀರ್ಘ ಕಾಲ ಪ್ರಕಟವಾದದ್ದು ಉಡುಪಿಯಲ್ಲಿ. 55 ವರ್ಷಗಳ ಕಾಲ ಪ್ರಕಟವಾದ ಹೆಗ್ಗಳಿಕೆ ಈ ಪತ್ರಿಕೆಯದ್ದು.
"ನವಯುಗ" ಆರಂಭವಾದುದು 1921ರಲ್ಲಿ. ಸಂಪಾದಕರಾಗಿ, ಪ್ರಕಾಶಕರಾಗಿ ಆರಂಭ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರೀಯ ಕಾಂಗ್ರೆಸ್ ಚಳುವಳಿಯ ಮುಂದಾಳು ಎ. ಬಿ. ಶೆಟ್ಟಿಯವರು.
ಸ್ವಾತಂತ್ರ್ಯ ಹೋರಾಟ ಮತ್ತು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಾರಣ, ಇವುಗಳ ಜೊತೆಜೊತೆಗೆ ಎ. ಬಿ. ಶೆಟ್ಟಿಯವರಿಗೆ "ನವಯುಗ"ದ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಮುಂದುವರಿಯುವುದು ಕಷ್ಟವಾಯಿತು. ಪರಿಣಾಮ, ಒಂದೂವರೆ ದಶಕದ ಬಳಿಕ "ನವಯುಗ"ದ ಜವಾಬ್ದಾರಿ ಕೆಮ್ತೂರು ಹೊನ್ನಯ್ಯ ಶೆಟ್ಟಿಯವರ ಹೆಗಲಿಗೆ ಹಸ್ತಾಂತರಗೊಂಡಿತು. ಪತ್ರಿಕೆಯ ಕಚೇರಿ ಮತ್ತು ಮುದ್ರಣ 1936ರಲ್ಲಿ ಮಂಗಳೂರಿನಿಂದ ಉಡುಪಿಗೆ ವರ್ಗಾವಣೆಗೊಂಡಿತು. ಈ ಅವಧಿಯಲ್ಲಿ ಕೆಲ ಕಾಲ ಕೆಮ್ತೂರು ಕಾಂತಪ್ಪ ಶೆಟ್ಟಿ (ಕೆ. ಕೆ. ಶೆಟ್ಟಿ)ಯವರು ಸಂಪಾದಕರಾಗಿದ್ದರು.
ಪ್ರತೀ ಗುರುವಾರ ಅಂಗಡಿಗಳ ಮೂಲಕ ಓದುಗರ ಕೈ ಸೇರುತ್ತಿದ್ದ " ನವಯುಗ", ಕೆ. ಹೊನ್ನಯ್ಯ ಶೆಟ್ಟಿಯವರು ನಿಧನರಾಗುವವರೆಗೂ (01.06/1974) ನಡೆಯಿತು. ಹೊನ್ನಯ್ಯ ಶೆಟ್ಟಿಯವರ ನಿಧನದ ನಂತರವೂ ಕೆಲವು ಸಂಚಿಕೆಗಳು ಪ್ರಕಟವಾಯಿತಾದರೂ ಹೆಚ್ಚು ಸಮಯ ಮುಂದುವರಿಯಲಿಲ್ಲ.
ಹೊನ್ನಯ್ಯ ಶೆಟ್ಟಿಯವರು ಉಡುಪಿಯಲ್ಲಿ "ನವಯುಗ ಮುದ್ರಣಾಲಯ" ಸ್ಥಾಪಿಸಿದ ಬಳಿಕ, ಪತ್ರಿಕೆಯನ್ನು ಇಲ್ಲಿಯೇ ಮುದ್ರಿಸಲಾಗುತ್ತಿತ್ತು. 1965ರ ಅವಧಿಯಲ್ಲಿ "ನವಯುಗ" ದ ಬಿಡಿ ಪ್ರತಿಯ ಬೆಲೆ 20 ಪೈಸೆ ಇತ್ತು. ಮೂರು ವಿಶೇಷ ಸಂಚಿಕೆಗಳೂ ಸೇರಿದಂತೆ ವಾರ್ಷಿಕ ಚಂದಾ (ಅಂಚೆ ವೆಚ್ಚ ಸಹಿತ) ಸ್ವದೇಶದಲ್ಲಿ 10 ರೂಪಾಯಿ ಮತ್ತು ವಿದೇಶಗಳಲ್ಲಿ 18 ರೂಪಾಯಿ.
ಶಿಕ್ಷಕರಾಗಿದ್ದ ಕೆ. ಹೊನ್ನಯ್ಯ ಶೆಟ್ಟಿಯವರು ಕವಿಗಳೂ, ನಾಟಕ ರಚನಾಕಾರರೂ, ಲೇಖಕರೂ ಆಗಿದ್ದರು. ನವಯುಗ ಮುದ್ರಣಾಲಯದ ಜೊತೆಗೆ ಇವರು ಆರಂಭಿಸಿದ "ನವಭಾರತ ಪುಸ್ತಕ ಭಂಡಾರ" ಪ್ರಸಿದ್ಧ ಪುಸ್ತಕದಂಗಡಿಯಾಗಿ ಹೆಸರುಗಳಿಸಿತ್ತು. ಇವರು ಕೆಲಕಾಲ "ಬಾಲಚಂದ್ರ" ಮತ್ತು "ಅಂತರಂಗ" ಎಂಬ ಇನ್ನೂ ಎರಡು ಪತ್ರಿಕೆಗಳನ್ನು ನಡೆಸಿದ್ದರು.
~ *ಶ್ರೀರಾಮ ದಿವಾಣ*