ಕನ್ನಡ ಪ್ರೀತಿಯ ಕವನಗಳು
*ಪ್ರಕೃತಿಯೊಳು ಕನ್ನಡಾಕ್ಷರ*
ಸುತ್ತಲೂ ಮುತ್ತಲೂ ಎತ್ತೆತ್ತಲೂ
ಪ್ರಕೃತಿ ಮಾತೆಯು
ಅಕ್ಕರೆಯಿಂದಲಿ ಕನ್ನಡ
ಅಕ್ಷರ ಅಪ್ಪಿಹಳು
ಬೀಜದ ಮೊದಲ ಚಿಗುರಿನ
ಆಕೃತಿ ಕನ್ನಡ ಅಕ್ಷರ *ಒ*
*ಒ* ಟ್ಟಿಗೆ ಬಾಳುವ ಸಂದೇಶ
ಹೊತ್ತು ನಿಂದಿದೆ
ಚಿಗುರೆಲೆ ಹವಣಿಕೆ
ಅಕ್ಷರ ರೂಪವು *ಶ*
*ಶಂ* ಖನಾದದಲಿ
ನುಡಿ ನಾದವ ಮೊಳಗಿಸಿದೆ
ಒಂದೇ ಪಕಳೆಯ
ಇಣುಕಿಸಿ ನೋಡುವ
ಮೊಗ್ಗಿನ ರೂಪವು *ಈ*
*ಈ* ಶ್ವರ ಅಲ್ಲಾ ಭಾವವು ಇಲ್ಲ
ಮಾನವ ಧರ್ಮವೇ ನಮಗೆಲ್ಲ
ಅರಳಿದ ಹೂವು ಘಮವನು ಚೆಲ್ಲಿ
ನಿಂದಿದೆ *ಪ* ಅಕ್ಷರ ರೂಪದಲಿ
*ಪ* ರಸ್ಪರ ಪ್ರೀತಿ ಗೌರವ ಮಾತ್ರ
ಕನ್ನಡ ತಾಯಿಯ ಮಂತ್ರ
ಇಂತಹ ಕನ್ನಡ ನಾಡು
ನಾ ನೆಲೆಸಿದ ಬೀಡು
ಸಾಹಿತ್ಯ ಸಂಸ್ಕೃತಿಯ ನೆಲೆವೀಡು
ನನ್ನಭಿಮಾನದ ಗೂಡು
*ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.*
-ಜಯಶ್ರೀ ರಾಜು, ಬೆಂಗಳೂರು
*****
*ಕನ್ನಡದ ಕಂಪು*
(ಕುಸುಮಷಟ್ಪದಿ)
ಕನ್ನಡದ ಕಂಪಿನಲಿ
ಹೊನ್ನುಡಿಯು ಹರಡುತಿದೆ
ಮುನ್ನುಡಿಯ ಬರೆಯುತ್ತ ಸಾಗುತಿಹೆವು||
ಎನ್ನೆದೆಯ ಬಾಂದಳದಿ
ಚಿನ್ನುಡಿಯ ಹಾಡುತ್ತ
ಬೆನ್ನತ್ತಿ ಕರುನಾಡ ಮಡಿಲಲಿಹೆವು||
ಚಂದನದ ಬೊಂಬೆಯ
ಗಂಧದಲಿ ಮೇಳೈಸಿ
ಬಂಧವನು ಬೆಸೆಯುತ್ತ ಕಾವ್ಯದುಸಿರು
ಅಂದದಲಿ ಚಿಗುರುತ್ತ
ತಂದಿಹೆವು ನವಬರಹ
ಕಂದನಲಿ ಕನ್ನಡದ ಝೇಂಕಾರವ||
ಪಂಪರನ್ನರು ಬರೆದ
ಚಂಪುಕಾವ್ಯ ಗ್ರಂಥ
ಸೊಂಪಲ್ಲಿ ಪಸರಿಸಿ ಪ್ರಜ್ವಲಿಸಿದೆ
ಕಂಪನ್ನು ಹರುಡುತ ಕು
ವೆಂಪು ಕಾವ್ಯ ರಚನೆಯು
ತಂಪನ್ನು ಸೂಸುತಿದೆ ಸುತ್ತೆಲ್ಲವು||
ಮಲ್ಲಿಗೆಯ ಪರಿಮಳವು
ಮೆಲ್ಲನೆ ಹರಡುತಲಿ
ಪಲ್ಲಕ್ಕಿ ಮೆರವಣಿಗೆ ಕನ್ನಡತಿಗೆ
ವಲ್ಲಿಸೀರೆಯು ಚಂದ
ಗಲ್ಲಿಗಲ್ಲಿಯ ಬಂಧ
ಚಲ್ಲಿಹುದು ದುಂದುಬಿಯ ನಾದದೊಳಗೆ||
ಇತಿಹಾಸ ಪುಟದೊಳಗೆ
ಕಥೆಯನ್ನು ಹೇಳುವುದು
ಗತಕಾಲ ಚರಿತೆಯಲು ಲಾಲೈಸಿದೆ
ಜತನದಲಿ ಸಾಗುತ್ತ
ಶತಕದಲು ಮಿಂಚುತಿದೆ
ಪಥದಲಿ ಧೃಢತೆಯನು ಕಾಯ್ದಿರಿಸುತ||
ದಾಸ ಸಾಹಿತ್ಯದಲಿ
ಹಾಸವನು ಮೂಡಿಸುತ
ಬೀಸುತಿದೆ ತಂಗಾಳಿ ಹೊಂಬೆಳಕಲಿ
ಸಾಸಿರಕಥೆಗಳಲ್ಲಿ
ಕಾಶವದು ಕರುನಾಡು
ಕೋಶದಲಿ ಪರಿಪುಷ್ಠಿ ಹೊಂದುತಲಿದೆ||
ಛಂದಸು ಸಾಲಿನಲಿ
ನಂದನದ ವನವಾಗಿ
ಗಂಧವನು ಪಸರಿಸುತ ಬೀಗುತಿರಲು
ವಂದನೆಯ ಮಾಡುತ್ತ
ಬಂದಿಹೆವು ಕರಮುಗಿದು
ಹಂದರದಿ ಕನ್ನಡತಿ ಮೆರೆಯುತಿರಲು||
ಅರಿಶಿನದ ಸಿಂಚನದಿ
ಧರೆಯಲ್ಲಿ ಹೊಳೆದಿಹಳು
ತರುತಿಹಳು ನವಕಾವ್ಯ ಹೊತ್ತಿಗೆಯನು
ಚರಣಗಳಿಗೆರುಗುತಲಿ
ಪರಿಪರಿಯ ವೈಭವವು
ಹರಿದಾಡಿ ಸುರಿಸುತಿದೆ ಹಾಸ್ಯದೊನಲ||
ಕುಂಕುಮದ ಕಾರಂಜಿ
ಕಿಂಕಿಣಿಯ ನಾದದಲಿ
ಪಂಕಜದ ಹಾಸವದು ಬೀಗುತಿಹುದು
ಅಂಕೆಯಲಿ ನಿಲ್ಲುತ್ತ
ಶಂಕೆಯನು ಮಾಡದಯೆ
ಟಂಕಿಸುವ ನೃತ್ಯದಲಿ ಜೊತೆಯಾಗುತ||
ಅಕ್ಷರದ ಮುತ್ತುಗಳು
ಕಕ್ಷೆಯಲಿ ಚಲಿಸುತ್ತ
ತಕ್ಷಶಿಲೆ ರೂಪದಲಿ ರಾರಾಜಿಸಿ
ದಕ್ಷತೆಯ ಮೆರೆಯುತಲಿ
ರಕ್ಷಣೆಯ ಮಾಡುತ್ತ
ಭಕ್ಷಿಗಳ ಶಿಕ್ಷಿಸುತ ಮುನ್ನೆಡೆಯುತ||
-ಅಭಿಜ್ಞಾ ಪಿ ಎಮ್ ಗೌಡ
