ಕನ್ನಡ ಭಾಷೆಗೊಂದು ಸಂಗೀತ

ಕನ್ನಡ ಭಾಷೆಗೊಂದು ಸಂಗೀತ

ಬರಹ

 

ತೇಜಸ್ವಿ ಬರೆದ ಅಣ್ಣನ ನೆನಪುಗಳು ಪುಸ್ತಕದಲ್ಲಿ ಅವರು ತಮ್ಮ ತಂದೆ ಕುವೆಂಪು ತಮಗೆ "ಆಡಿಟರಿ ಇಮ್ಯಾಜಿನೇಷನ್" ಬಗ್ಯೆ ವಿವರಿಸಿದ್ದನ್ನು ಬರೆದಿದ್ದಾರೆ. ಸಂಪದದಲ್ಲಿ ಕನ್ನಡ – ಸಂಸ್ಕೃತದ ಬಗ್ಯೆ ಚರ್ಚೆಗಳಾಗುತ್ತಿರುವ ಹಿನ್ನೆಲೆಯಲ್ಲಿ, ಕುವೆಂಪು ಹೇಳಿದ್ದನ್ನು ( ತೇಜಸ್ವಿ ಮಾತಿನಲ್ಲಿ) ಕೆಳಗೆ ಉದ್ಧರಿಸಿದ್ದೇನೆ.

 

Quote

ಆಡಿಟರಿ ಇಮ್ಯಾಜಿನೇಷನ್ ಎಂದರೆ ಶ್ರವಣ ಪ್ರತಿಭೆ ಎಂದು ಕರೆಯಬಹುದು. ಪ್ರತಿಯೊಂದು ಭಾಷೆಯೂ ಒಂದು ಆರ್ಕೆಸ್ಟ್ರಾ ಇದ್ದ ಹಾಗೆ. ಅವಕ್ಕೆ ಅದರದೇ ಆದ ಸಂಗೀತ ಇರುತ್ತದೆ. ಸಂಗೀತ ಎಂದಕೂಡಲೇ ನಾವು ರಾಗತಾಳಗಳ ಸರಿಗಮಪದನಿಸ ಸಂಗೀತವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇವೆ. ಅದು ಖಂಡಿತಾ ಅಲ್ಲ. ಭಾಷೆ ಮೂಲತಃ ಸ್ವರ ವ್ಯಂಜನ ಒತ್ತಕ್ಷರ ದೀರ್ಘಗಳ ವಿಚಿತ್ರ ಉಚ್ಚಾರಣೆಯ ಶಬ್ದಗಳು. ಒಂದೊಂದು ಭಾಷೆಯಲ್ಲೂ ಇವು ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಸಂಯೋಜನೆಗೊಂಡಿರುತ್ತವೆ. ಆ ಭಾಷೆ, ಆ ಭಾಷೆಯನ್ನಾಡುವ ಜನರ ವ್ಯಕ್ತಿತ್ವ, ಅವರ ಮಾತಿನ ಧಾಟಿ, ಇವೆಲ್ಲದರ ಸಮ್ಮಿಳನ ಆ ಭಾಷೆಯ ಸಂಗೀತ ಅಥವಾ ಛಂದಸ್ಸಂಗೀತ. ಭಾಷೆಯಲ್ಲಿ ಮೇಲು ನೋಟಕ್ಕೆ ಯಾವನು ಯಾವ ಶಬ್ದವನ್ನು ಹೇಗೆ ಬೇಕಾದರೂ ಉಚ್ಚರಿಸಬಹುದಾದ ಸ್ವಾತಂರ್ತ್ಯ ವಿರುವಂತೆ ಕಾಣುತ್ತದೆ. ಆದರೆ ಭಾಷೆಯಲ್ಲಿನ ಪ್ರತಿಯೊಂದು ಶಬ್ದವೂ ಒಂದು ಅರ್ಥಪೂರ್ಣ ವಾಕ್ಯದಲ್ಲಿ ತನ್ ಅಕ್ಕಪಕ್ಕದ ಶಬ್ದಗಳ ಸರಣಿಯಲ್ಲಿ ಸಂಯೋಜನೆಗೊಂಡ ನಾದ. ವ್ಯಾಕರಣದ , ಅರ್ಥದ ತರ್ಕಗಳಿಂದ ನಾವಿ ವಾಕ್ಯಗಳನ್ನು ಸೃಷ್ಟಿಸುತ್ತೇವಾದರೂ ಇವೆಲ್ಲವನ್ನೂ ಅಪ್ರಜ್ಞಾಪೂರ್ವಕವಾಗಿ ಒಂದು ಭಾಷೆಯ ಛಂದಸ್ಸಂಗೀತ ನಿರ್ದೇಶಿಸುತ್ತದೆ. ಇದು ಆಯಾ ಭಾಷೆಯ ಕಾವ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಗದ್ಯ ಪದ್ಯಗಳೆರಡರಲ್ಲಿಯೂ ಇದು ಬೇರೆಬೇರೆ ತೀವ್ರತೆಯೊಂದಿಗೆ ಕಾರ್ಯಪ್ರವೃತ್ತವಾಗಿರುತ್ತದೆ.

 

ಯಾರಿಗೆ ಭಾಷೆಯ ಈ ಆಯಾಮಗಳು ಗೊತ್ತಿರುತ್ತದೆಯೋ, ಯಾರು ಭಾಷೆಯ ಈ ಛಂದಸ್ಸಂಗೀತಕ್ಕೆ ಸ್ಪಂದಿಸಬಲ್ಲರೋ ಅವರು ಮಾತ್ರ ಉತ್ತಮ ಸಾಹಿತ್ಯ ರಚಿಸಬಲ್ಲರು. ಕೆಲವರು ಈ ಬಗ್ಯೆ ಅಪ್ರಜ್ಞಾಪೂರ್ವಕವಾಗಿರಬಹುದು.ಆದ್ದರಿಂದಲೇ ಕಾವ್ಯದಲ್ಲಿ ಅಚ್ಚಕನ್ನಡ ಶಬ್ದಗಳನ್ನು ಉಪಯೋಗಿಸಬೇಕು ಎನ್ನುವುದಾಗಲೀ ಅಥವಾ ಒಬ್ಬನ ಕಾವ್ಯ ಸಂಸ್ಕೃತ ಭೂಯಿಷ್ಠವಾಗಿದೆ ಎಂದು ತೆಗಳುವುದಾಗಲೀ ಅರ್ಥವಿಲ್ಲದ್ದು. ಒಂದು ಭಾಷೆಯ ಛಂದಸ್ಸಂಗೀತವನ್ನು ಬಲ್ಲವನು ಯಾವ ಪದವನ್ನು ಹೇಗೆ ಬೇಕಾದರೂ ಬಳಸಿ ಕಾವ್ಯ ಬರೆಯಬಹುದು. ವ್ಯಾಕರಣ ನಿಬಂಧನೆಗಳಿಗೆ ಮಹಾಕವಿ ಪ್ರಯೋಗಗಳು ಒಳಪಡುವುದಿಲ್ಲ ಎಂದು ಕೇಶಿರಾಜ ಹೇಳಿದ್ದು ಈ ಅರ್ಥದಲ್ಲೇ ಇರಬಹುದು. ಸಹೃದಯ ನೋಡಬೇಕಾದದ್ದು ಅದು ರಸಾನುಭವದ ಅತಿ ಕ್ಷಿಪ್ರ ಮಾರ್ಗವೇ ? ಅಲ್ಲವೇ? ಎಂಬುದನ್ನು ಮಾತ್ರ. ಎಲಿಯಟ್ "ಕಾವ್ಯ ಅರ್ಥವಾಗುವುದಕ್ಕೆ ಮೊದಲೇ ರಸಾನುಗಮ್ಯವಾಗುತ್ತದೆ " ಎಂದು ಹೇಳಿರುವುದು ಈ ದೃಷ್ಟಿಯಿಂದ ಸತ್ಯ

 

Unquote

 

ಕನ್ನಡ ಭಾಷಿಕರಲ್ಲದವರು ಕನ್ನಡ ಮಾತನಾಡಿದಾಗ , ಅದು ವ್ಯಾಕರಣ ಶುದ್ಧವಾಗಿದ್ದರೂ , ನಮಗೆ ಅವರು ಕನ್ನಡದವರಲ್ಲ ಎಂದು ತಕ್ಷಣ ಗೊತ್ತಾಗುವುದಕ್ಕೆ ಬಹು಼ಷಃ ಇದೇ ಕಾರಣವಿರಬಹುದು. ಅವರಿಗೆ ಭಾಷೆಯ ವ್ಯಾಕರಣ ಗೊತ್ತಿದ್ದರೂ ಕನ್ನಡದ ಛಂದಸ್ಸಂಗೀತ ಗೊತ್ತಿರುವುದಿಲ್ಲ. ಇದೇ ಮಾತು ಯಾವುದೇ ಭಾಷಿಕರು ಇನ್ಯಾವುದೋ ಭಾಷೆಯನ್ನಾಡುವಾಗಲೂ ಗಮನಿಸಬಹುದು.