ಕನ್ನಡ ಭಾಷೆಯೆಂದರೆ ಅದು ಬದುಕಿನ ಸಂಸ್ಕೃತಿ
ನೀವು ಯಾವುದೋ ಕೆಲಸದ ಮೇಲೆ ವಿದೇಶಕ್ಕೆ ಹೋಗಿರುತ್ತೀರಿ. ಅಲ್ಲಿ ಎಲ್ಲಿ ನೋಡಿದರೂ ಹೊಸ ಮುಖ. ಹೊಸ ಜನ. ಹೊಸ ಭಾಷೆ, ಆಚಾರ ವಿಚಾರ. ಅಲ್ಲಿನ ಹೋಟೇಲ್ ಹೊಕ್ಕು ನೀವು ಕಾಫಿ ಹೀರುತ್ತಾ ಕುಳಿತಿರುವಾಗ ನಿಮ್ಮ ಹಿಂದಿನಿಂದ ‘ಕನ್ನಡ’ ಭಾಷೆಯ ಮಾತು ನಿಮಗೆ ಕಿವಿಗೆ ಬೀಳುತ್ತದೆ. ಕೂಡಲೇ ನೀವು ಹಿಂದಕ್ಕೆ ತಿರುಗಿ ನೋಡುತ್ತೀರಿ. ಅಲ್ಲೊಂದು ಕುಟುಂಬ ಇದೆ. ಅಪ್ಪ, ಅಮ್ಮ ಹಾಗೂ ಮಕ್ಕಳು. ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ನಿಮಗೆ ಆಗ ಬೆಂಗಳೂರಿನ ಮೆಜೆಸ್ಟಿಕ್ ನ ಹೋಟೇಲ್ ನಲ್ಲಿ ಕಾಫಿ ಕುಡಿಯುವ ಅನುಭವವಾಗುತ್ತದೆ. ಅಲ್ಲವೇ? ನೀವೇ ಅವರ ಬಳಿ ಹೋಗಿ ನೀವು ಕರ್ನಾಟಕದವರಾ? ಎಂದು ಕನ್ನಡದಲ್ಲೇ ಪರಿಚಯ ಮಾಡಿಕೊಳ್ಳುತ್ತೀರಿ. ಅವರೂ ಕನ್ನಡದಲ್ಲೇ ‘ಹೌದು' ಎಂದು ಉತ್ತರ ಕೊಡುತ್ತಾರೆ. ಮತ್ತೆ ಕೇಳಬೇಕಾ, ಕನ್ನಡ ಕಸ್ತೂರಿ ಮೊಳಗುತ್ತದೆ. ಹಲವಾರು ವರ್ಷಗಳಿಂದ ಪರಿಚಿತರೇನೋ ಎಂಬಂತೆ ಹರಟೆ ಹೊಡೆಯುತ್ತೇವೆ. ಇದು ಕನ್ನಡ ಭಾಷೆ ನಮ್ಮಲ್ಲಿ ಮೂಡಿಸುವ ಅಭಿಮಾನದ ಕೆಚ್ಚು. ಅಪರಿಚಿತರು ತಕ್ಷಣ ಪರಿಚಿತರಾಗುತ್ತಾರೆ, ಆತ್ಮೀಯರಾಗುತ್ತಾರೆ. ಈ ಕಾರಣದಿಂದಲೇ ವಿದೇಶಗಳಲ್ಲಿ ಕನ್ನಡ ಕೂಟ, ಸಂಘಗಳು ಅಧಿಕ. ಅವರೆಲ್ಲಾ ಅಲ್ಲಿ ವ್ಯವಸ್ಥಿತವಾಗಿ ಸೇರುತ್ತಾರೆ. ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾರೆ.
ಇದೇ ನಮ್ಮ ಊರಿನಲ್ಲಿ ತದ್ವಿರುದ್ಧವಾದ ವಾತಾವರಣ ಇರುತ್ತದೆ. ಹೊಟ್ಟೆ ಪಾಡಿಗಾಗಿ ಕನ್ನಡ ಎಂದು ಬೊಬ್ಬೆ ಹಾಕುವವರು ನವೆಂಬರ್ ತಿಂಗಳು ಬಂದೊಡನೆ ಚಿಗುರಿಕೊಳ್ಳುತ್ತಾರೆ. ಕಾರ್ಯಕ್ರಮ ಮಾಡುವ ನೆಪದಲ್ಲಿ ಚಂದಾ ವಸೂಲಿ ಮಾಡುತ್ತಾರೆ. ಅತ್ಯಂತ ಕೆಟ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇವುಗಳ ನಡುವೆಯೇ ಕನ್ನಡಕ್ಕಾಗಿ ಶೃದ್ಧೆಯಿಂದ ಕೆಲಸ ಮಾಡು ಎಲೆ ಮರೆಯ ಕಾಯಿಯಂತಹ ಕನ್ನಡ ಕಟ್ಟಾಳುಗಳೂ ಇದ್ದಾರೆ. ಭಾಷೆ ನಮ್ಮ ಸಂವಹನ ಮಾಧ್ಯಮ. ಅದರ ಸೊಗಡನ್ನು ನಾವು ಸದಾ ಒಳ್ಳೆಯ ಕಾರ್ಯಗಳ ಮೂಲಕ ಹಂಚುತ್ತಾ ಬರಬೇಕಿದೆ.
ಕನ್ನಡ ಎಂದರೆ ಒಂದು ಭಾಷೆಯಲ್ಲ. ಕೆಲವರಿಗೆ ಅದು ಬದುಕು, ಹಲವರಿಗೆ ಸಂಸ್ಕೃತಿ ಮತ್ತು ಬಹಳಷ್ಟು ಮಂದಿಗೆ ಪರಂಪರೆ. ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಭಾಷೆ ನಮ್ಮದು. ಹಲವಾರು ಮಂದಿ ಕನ್ನಡ ಇತಿಹಾಸದ ಕುರಿತು ಸಾಕಷ್ಟು ಸಂಶೋಧನೆಯನ್ನೂ ಮಾಡಿದ್ದಾರೆ. ಅತ್ಯಂತ ಪ್ರಾಚೀನ ಗ್ರೀಕ್ ಭಾಷೆಯಲ್ಲೂ ಕನ್ನಡದ ಪದಗಳನ್ನು ಶೋಧಿಸಿದ್ದಾರೆ. ನಮ್ಮ ರಾಜ್ಯದಲ್ಲಿ ನಡೆದ ವ್ಯಾಪಾರ ವಹಿವಾಟುಗಳಿಂದ ನಮ್ಮ ಭಾಷೆ ಹಲವಾರು ದೇಶಗಳಿಗೆ ಹಬ್ಬಿದೆ. ವ್ಯಾಪಾರಕ್ಕಾಗಿ ನಮ್ಮ ರಾಜ್ಯಕ್ಕೆ ಬಂದ ವರ್ತಕರು ಇಲ್ಲಿಯ ಭಾಷೆಯನ್ನು ಅಲ್ಪ ಮಟ್ಟಿಗಾದರೂ ಕಲಿತು ತಮ್ಮ ದೇಶಕ್ಕೆ ಹೋಗಿ ಹರಡಿದ ಪ್ರಸಂಗವೂ ಸಾಕಷ್ಟಿದೆ.
ಕನ್ನಡದ ಮೊದಲ ಉಪಲಬ್ಧ ಕೃತಿ ‘ಕವಿರಾಜ ಮಾರ್ಗ' ಇದರ ಪ್ರಕಾರ ನಮ್ಮ ರಾಜ್ಯವು ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತಾರವಾಗಿತ್ತು. ಆ ಪ್ರಕಾರದಲ್ಲಿ ನಮ್ಮ ಭಾಷಾ ವಿಸ್ತಾರವು ಆಂಧ್ರ ಪ್ರದೇಶದವರೆಗೂ ಹಬ್ಬಿತ್ತು ಎಂದು ತಿಳಿದು ಬರುತ್ತದೆ. ಪ್ರಪಂಚದ ಎಷ್ಟೋ ಭಾಷೆಗಳು ಬೆಳಕಿಗೆ ಬರುವ ಮೊದಲೇ ಕನ್ನಡದಲ್ಲಿ ಮಹಾಕಾವ್ಯಗಳ ರಚನೆಯಾಗಿದ್ದವು. ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸ ನಮ್ಮ ಭಾಷೆಗಿದೆ ಎಂದು ಸಂಶೋಧನಾಕಾರರ ಅಭಿಮತ. ಕೇವಲ ೫೦೦-೬೦೦ ವರ್ಷ ಇತಿಹಾಸವಿರುವ ಇಂಗ್ಲಿಷ್ ಭಾಷೆ ಈಗ ನಮ್ಮಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಸವಿ ಕನ್ನಡ ನುಡಿ ಆ ಭಾಷೆಯ ನಡುವೆ ಮಂಕಾಗಿದೆ. ಹಾಗೆ ಆಗಬಾರದು. ನಮ್ಮ ಮಾತೃ ಅಥವಾ ರಾಜ್ಯ ಭಾಷೆ ಮೊದಲು. ನಂತರ ಉಳಿದ ಭಾಷೆಗಳು. ಹೊಸ ಭಾಷೆ ಕಲಿತರೆ ತಪ್ಪೇನೂ ಇಲ್ಲ. ಆದರೆ ಅದಕ್ಕಾಗಿ ನಮ್ಮ ಭಾಷೆಯನ್ನು ಅವಹೇಳನ ಮಾಡೋದು ತಪ್ಪು.
ಇಬ್ಬರು ಕನ್ನಡಿಗರು ಹೊರ ನಾಡಿನಲ್ಲಿ ಪರಸ್ಪರ ಭೇಟಿಯಾದಾಗ ಕನ್ನಡ ಮಾತನಾಡುವುದು ಬಿಟ್ಟು ಇಂಗ್ಲಿಷ್ ಅಥವಾ ಬೇರೆ ಭಾಷೆಯಲ್ಲಿ ಮಾತನಾಡುವುದನ್ನು ಮೊದಲು ಬಿಟ್ಟು ಬಿಡಬೇಕು. ಕನ್ನಡದ ಕೊಲೆಗೆ ನಾವು ಕನ್ನಡಿಗರೇ ಕಾರಣವಾಗುತ್ತೇವೆ. ಕನ್ನಡ ಭಾಷೆ, ನುಡಿಗಾಗಿ ನಡೆದಷ್ಟು ಭಾಷಾ ಚಳುವಳಿಗಳು ಬೇರೆಲ್ಲೂ ನಡೆದಿರಲಿಕ್ಕಿಲ್ಲ ಎಂದು ನನ್ನ ಅಂದಾಜು. ನಿಜಕ್ಕೂ ಕನ್ನಡ ನಾಡಿನಲ್ಲೇ ನಾವು ಕನ್ನಡವನ್ನು ಪರಭಾಷೆಯಾಗಿ ಮಾಡಿದ್ದೇವೇನೋ ಅನಿಸುತ್ತದೆ. ಆದರಿದು ಕಠೋರ ಸತ್ಯ ಮತ್ತು ವಾಸ್ತವ. ಆದರೂ ಕನ್ನಡಿಗರ ಕ್ರಿಯಾಶೀಲ ಮನಸ್ಸುಗಳು ಯಾವತ್ತೂ ಕನ್ನಡವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದೆ.
ಇಂದು (೧೬-೧೧-೨೦೨೦) 'ವಿಶ್ವವಾಣಿ' ದಿನ ಪತ್ರಿಕೆಯಲ್ಲಿ ಶ್ರೀ ಕಿರಣ್ ಉಪಾಧ್ಯಾಯರ ಅಂಕಣ ಬರಹವೊಂದನ್ನು ಓದುತ್ತಿದ್ದೆ. ಅದರಲ್ಲಿ ಅವರು ಕನ್ನಡದ ನೈಜ ಕಟ್ಟಾಳುಗಳಲ್ಲಿ ಓರ್ವರಾದ ಕೆ.ರಾಜಕುಮಾರ್ ಬಗ್ಗೆ ಬರೆದಿದ್ದಾರೆ. ಯಾರಿದು ರಾಜಕುಮಾರ್? ಎಂದು ನಿಮಗೆ ಅನಿಸಬಹುದು. ನನಗೂ ಮೊದಲಿಗೆ ಹಾಗೇ ಅನಿಸಿತು. ಆದರೆ ಅಂಕಣ ಓದಿ ಮುಗಿಸುವ ಸಮಯಕ್ಕೆ ನನಗೆ ರಾಜಕುಮಾರ್ ಎಂಬ ವ್ಯಕ್ತಿ ಕನ್ನಡದ ನಿಜವಾದ ಪರಿಚಾರಕ ಎಂದು ಅನಿಸಿತು. (ಅವರ ಬಗ್ಗೆ ಅಧಿಕ ಮಾಹಿತಿಗಾಗಿ ಇಂದಿನ ವಿಶ್ವವಾಣಿ ಪತ್ರಿಕೆ ಓದಬಹುದು. ಇ-ಪತ್ರಿಕೆಯು ಅಂತರ್ಜಾಲದಲ್ಲಿ ಲಭ್ಯವಿದೆ) ಆದರೆ ರಾಜ್ ಕುಮಾರ್ ಅವರ ಒಂದು ವಿಷಯವನ್ನು ನಾನಿಂದು ಹೇಳಲೇ ಬೇಕು. ಗೋಕಾಕ್ ಚಳುವಳಿಯ ಸಮಯದಲ್ಲಿ ಇವರು ಚಿದಾನಂದ ಮೂರ್ತಿಯವರ ‘ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ' ಎಂಬ ೩೨ ಪುಟಗಳ ರೂ.೩ ಬೆಲೆಯ ಪುಟ್ಟ ಪುಸ್ತಕವನ್ನು ರೂ.೨ರಂತೆ ರಿಯಾಯತಿ ದರದಲ್ಲಿ ಫಲಾಪೇಕ್ಷೆಯಿಲ್ಲದೇ ಕರ್ನಾಟಕದಾದ್ಯಂತ ತಿರುಗಾಟ ಮಾಡಿ ಮಾರಿದರು. ಮದುವೆ ಮನೆಯಲ್ಲಿ, ಗೃಹ ಪ್ರವೇಶದಲ್ಲಿ, ಶುಭ ಸಮಾರಂಭಗಳಲ್ಲಿ, ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಎಲ್ಲೆಡೆ ಇವರು ಗಾಡಿಯಲ್ಲಿ ತರಕಾರಿ ತುಂಬಿಸುವಂತೆ ಪುಸ್ತಕ ತುಂಬಿಸಿ ಮಾರಿದರು. ಇವರು ಮಾರಿದ ಈ ಪುಸ್ತಕದ ಸಂಖ್ಯೆ ಎಷ್ಟು ಗೊತ್ತಾ? ಬರೋಬರಿ ೫೨,೦೦೦. ಇದೊಂದು ದಾಖಲೆಯೇ ಅಲ್ಲವೇ? ಕನ್ನಡದ ಮೇಲಿನ ಪ್ರೀತಿಗಾಗಿ ಅವರು ಮಾಡಿದ ಕೆಲಸ ನಮಗೆ ಖಂಡಿತವಾಗಿಯೂ ಮಾರ್ಗದರ್ಶನವಾಗಲೇ ಬೇಕು. ರಾಜ್ ಕುಮಾರ್ ನಂತಹ ಕನ್ನಡದ ನೈಜ ಪರಿಚಾರಕರ ಸಂಖ್ಯೆ ಸಾವಿರವಾಗಬೇಕು. ಅಲ್ಲವೇ? ಲೇಖನ ಬರೆದ ಕಿರಣ್ ಉಪಾಧ್ಯಾಯರು ಬಹ್ರೈನ್ ನಿಂದ ಈ ಲೇಖನ ಬರೆದಿರುವುದರಿಂದ ಅವರೂ ವಿದೇಶದಲ್ಲಿದ್ದರೂ ಕನ್ನಡವನ್ನು ಉಳಿಸಿ ಬೆಳೆಸುವವರೇ ಆಗಿದ್ದಾರೆ. ಅವರಿಗೂ ಅಭಿನಂದನೆಗಳು.
ಪ್ರಸ್ತುತ ಇಂಗ್ಲೀಷ್ ಭಾಷೆ ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಒಂದು ಆದದ್ದು ಹೇಗೆ ಗೊತ್ತಾ? ಜನರೇ ಅದನ್ನು ಬೆಳೆಸಿದರು. ನಾವು ಇಂದು ಕನ್ನಡವನ್ನೂ ಅದೇ ರೀತಿಯಾಗಿ ಬೆಳೆಸಬೇಕಾಗಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನಾವು ಕನ್ನಡ ಮಾತನಾಡೋಣ. ಕನ್ನಡ ಪುಸ್ತಕಗಳನ್ನು ಓದೋಣ. ಯಾವ ಜನಕ್ಕೆ ಇಚ್ಛಾಶಕ್ತಿ ಇರುತ್ತದೆಯೋ ಆ ರಾಜ್ಯದ ಅಥವಾ ದೇಶದ ಭಾಷೆ ಬೆಳೆಯುತ್ತದೆ. ಬೇರೆ ಭಾಷೆ ಮಾತನಾಡಿದರೆ ನಾವು ದೊಡ್ಡವರಾಗುತ್ತೇವೆ. ಕನ್ನಡ ಮಾತನಾಡಿದರೆ ಸಣ್ಣವರಾಗುತ್ತೇವೆ ಎಂಬ ಕೀಳಿರಿಮೆ ಖಂಡಿತಾ ಬೇಡ. ನಾವು ಕನ್ನಡ ಭಾಷೆಯ ಜೊತೆ ಮಡಿವಂತಿಕೆ ಮಾಡೋದು ಬೇಡ. ಉಳಿದ ಭಾಷೆಗಳನ್ನೂ ಬಳಸೋಣ, ಆದರೆ ಯಾರ ಜೊತೆ, ಎಲ್ಲಿ ಎಂಬುದು ಪ್ರಮುಖವಾಗುತ್ತದೆ. ಕೊಲ್ಕತ್ತಾಗೆ ಹೋಗಿ ಕನ್ನಡದಲ್ಲೇ ಮಾತನಾಡುತ್ತೇನೆ ಎಂಬ ಹಠ ಬೇಡ, ಆದರೆ ಕೊಲ್ಕತ್ತಾದವನೊಬ್ಬ ಇಲ್ಲಿಗೆ ಬಂದಾಗ ಅವನಿಗೆ ಅವಶ್ಯವಾಗಿ ಕನ್ನಡ ಕಲಿಯಲು ಪ್ರೇರೇಪಿಸಿ. ಅವನು ಕಲಿತ ನುಡಿಗಳು ನಾಲ್ಕೇ ಆದರೂ ಅವನು ಸಾಯುವ ವರೆಗೆ ಅದನ್ನು ಮರೆಯೋಲ್ಲ.
ಕನ್ನಡ ಭಾಷೆ ಒಂದು ಜೀವಂತ, ಶ್ರೀಮಂತ ಭಾಷೆ. ಅದೊಂದು ಹರಿಯುವ ನದಿಯ ಹಾಗೆ. ನದಿ ಹೇಗೆ ಹರಿಯುವಾಗ ಇಕ್ಕೆಲಗಳಲ್ಲಿ ಏನು ಸಿಗುವುದೋ ಅದನ್ನೆಲ್ಲಾ ತನ್ನ ಒಡಲಿನಲ್ಲಿ ಸೇರಿಸಿಕೊಂಡು ಗಮ್ಯದತ್ತ ಚಲಿಸುತ್ತದೆ. ಹಾಗೆಯೇ ಕನ್ನಡ ಭಾಷೆ. ಕಾಲ ಕ್ರಮೇಣ ಬದಲಾವಣೆಗಳು ಆಗಿವೆ. ಮೊದಲು ಹಳೆ ಕನ್ನಡ. ಈಗ ಹಳೆ ಕನ್ನಡದಲ್ಲಿ ಮಾತನಾಡಿದರೆ ಯಾರಿಗೂ ಅರ್ಥವಾಗುವುದಿಲ್ಲ. ಪುಸ್ತಕಗಳಲ್ಲಿ ಬಳಸಿದರೆ ಓದುವವರ ಸಂಖ್ಯೆ ಬೆರಳೆಣಿಕೆ ಮಾತ್ರ. ಕರ್ನಾಟಕ ರಾಜ್ಯದಲ್ಲೂ ಹಲವಾರು ಬಗೆಯ ಕನ್ನಡವನ್ನು ಮಾತನಾಡುತ್ತೇವೆ. ಕುಂದ ಕನ್ನಡ (ಕುಂದಾಪುರ), ಮಂಗಳೂರು ಕನ್ನಡ, ಧಾರವಾಡ ಕನ್ನಡ, ಬೆಂಗಳೂರು ಕನ್ನಡ , ಗ್ರಾಮೀಣ ಕನ್ನಡ ಹೀಗೆ ಕನ್ನಡಮ್ಮನಿಗೆ ಹಲವಾರು ಶಿಶುಗಳು. ಎಲ್ಲಾ ಭಾಷೆಯ ಸೊಗಡು ಸುಂದರವೇ. ಕೆಲವೊಮ್ಮೆ ಕೆಲವು ಪದಗಳ ಅರ್ಥ ಗೊತ್ತಾಗದೇ ಹೋದರೂ ಅವುಗಳ ಅರ್ಥ ತಿಳಿದ ಬಳಿಕ ತುಂಬಾನೇ ಸವಿಯಾದ ಭಾಷೆ ಅನಿಸುತ್ತೆ.
ಕನ್ನಡ ಭಾಷೆಗೆ ದೊಡ್ಡ ಶತ್ರು ಎಂದರೆ ಕನ್ನಡಿಗನೇ. ನಾವು ಅಂದು ಆಂಗ್ಲರ ದಾಸ್ಯಕ್ಕೆ ಒಳಗಾಗಿದ್ದೆವು. ಆದರೆ ಇಂದು ಅವರ ಭಾಷೆಗೆ ಗುಲಾಮರಾಗಿದ್ದೇವೆ. ಇದರಿಂದ ನಾವು ಹೊರ ಬರಬೇಕಾಗಿದೆ. ಈ ರಾಜ್ಯೋತ್ಸವದ ತಿಂಗಳಿನಲ್ಲಾದರೂ ಕನಿಷ್ಟ ಒಂದು ಕನ್ನಡ ಪುಸ್ತಕ ಕೊಂಡು ಕೊಳ್ಳಿರಿ. ಒಂದು ಕನ್ನಡ ನಾಟಕ ಅಥವಾ ಚಲನ ಚಿತ್ರ ನೋಡಿ. ಕನ್ನಡ ಪುಸ್ತಕವನ್ನೇ ಕೊಳ್ಳಬೇಕಿಲ್ಲ, ಇ-ಪುಸ್ತಕಗಳೂ ಹಾಗೂ ಆಡಿಯೋ ಪುಸ್ತಕಗಳೂ ಲಭ್ಯ ಇರುವ ಜಾಲತಾಣಗಳು ನಮ್ಮಲ್ಲಿ ಇವೆ. ಉದಾಹರಣೆಗೆ ಮೈಲ್ಯಾಂಗ್ ಬುಕ್ಸ್ ಆಪ್. ಈ ಆಪ್ ನಲ್ಲಿ ನೂರಾರು ಪುಸ್ತಕಗಳು ರಿಯಾಯತಿ ದರದಲ್ಲಿ ದೊರೆಯುತ್ತವೆ. ನಿಮಗೆ ಬೇಕೆನಿಸಿದಾಗ ಪುಸ್ತಕವನ್ನು ಖರೀದಿಸಿ ಓದಬಹುದು ಅಥವಾ ಕೇಳಲೂ ಬಹುದು. ಇಂತಹ ಇತರ ಜಾಲತಾಣಗಳೂ ಇವೆ. ಕನ್ನಡ ಭಾಷೆಯ ಹಲವಾರು ಜಾಲತಾಣಗಳು ಇವೆ. ಇ-ಪತ್ರಿಕೆಗಳೂ ಇವೆ. ಇವುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಬೇಕೆಂದಿಲ್ಲ. ಅಂತರ್ಜಾಲದ ಸಂಪರ್ಕ ಇದ್ದರೆ ಸಾಕು. ಎಲ್ಲಾ ಪತ್ರಿಕೆಗಳು ನಿಮ್ಮ ಕೈಯಲ್ಲೇ ಅರಳುತ್ತವೆ. ದಿನಕ್ಕೊಂದಾದರೂ ಕನ್ನಡ ಪತ್ರಿಕೆ ಓದಿ. ಹಾಗೆಯೇ ನಿಮ್ಮೊಡನೆ ಇರುವ ಅನ್ಯಭಾಷಿಕನಿಗೆ ಕನ್ನಡದ ಒಂದೆರಡು ಸವಿನುಡಿಗಳನ್ನಾದರೂ ಕಲಿಸಿ. ಕನ್ನಡ ನಮ್ಮ ಜೊತೆಯೇ ಬೆಳೆಯಬೇಕಾಗಿದೆ. ಬನ್ನಿ ಕನ್ನಡಕ್ಕಾಗಿ ಕೈಜೋಡಿಸೋಣ.