ಕನ್ನಡ ಭಾಷೆಯ ಚರಿತ್ರೆ

ಕನ್ನಡ ಭಾಷೆಯ ಚರಿತ್ರೆ

{ಈ ವರ್ಷದ ಮೊದಲ ಭಾಗದಲ್ಲಿ ಬರೆದ ಲೇಖನ ಇದು. ಸಿಂಗಪುರದ ಕನ್ನಡ ಸಂಘದ ದ್ವೈವಾರ್ಷಿಕ ಪತ್ರಿಕೆ "ಸಿಂಗಾರ"ಕ್ಕಾಗಿ ಬರೆದಿದ್ದೆ. ಎಲ್ಲ ಸಂಪದಿಗರೊಂದಿಗೆ ಹಂಚಿಕೊಳ್ಳುವದಕ್ಕಾಗಿ ಇಲ್ಲಿ ಸೇರ್ಪಡಿಸಿದ್ದೇನೆ. ಈ ಲೇಖನದಲ್ಲಿ ನಾನು ಸಂಗ್ರಹಿಸಿರುವ ವಿಷಯಗಳು ಎಲ್ಲರಿಗೂ ಗೊತ್ತಿರುವ ವಿಷಯಗಳೇ ಆದರೂ, ರಾಜ್ಯೋತ್ಸವದ ತಿಂಗಳಾದ ನವೆಂಬರ್‌ನಲ್ಲಿ ಈ ವಿಷಯಗಳನ್ನು ಮತ್ತೊಮ್ಮೆ ಮೆಲುಕು ಹಾಕುವದು ಒಳ್ಳೆಯದೇ ಎಂಬುದು ನನ್ನ ಅನಿಸಿಕೆ. ನೀವೂ ಒಪ್ಪುತ್ತೀರಿ ಎಂಬ ನಂಬಿಕೆ}

ನಮಗೆಲ್ಲರಿಗೂ ಗೊತ್ತಿರುವಂತೆ ಕನ್ನಡ ಭಾಷೆಯಲ್ಲಿ  ಇಂದು ಅನೇಕ ಪ್ರಬೇಧಗಳಿವೆ. ಎಲ್ಲ ಭಾಷೆಗಳಲ್ಲಿ ಇರುವಂತೆ ನಮ್ಮಲ್ಲಿ ಕೂಡ ಮೂಲ ವ್ಯಾಕರಣಬದ್ಧ ಭಾಷೆಯನ್ನು ಹಾಗೆಯೇ ಮಾತನಾಡುವವರು ಕಡಿಮೆಯೇ. ಹೀಗಾಗಿ ಮೌಖಿಕ ಭಾಷೆ, ಸಾಹಿತ್ಯಿಕ ಭಾಷೆಗಿಂತ ಭಿನ್ನವಾಗಿದೆ ಮತ್ತು ದೇಶ ಕಾಲಗಳ ಅಂತರದಿಂದ ಅನೇಕ ಕಡೆಗೆ ಅನೇಕ ಪ್ರಬೇಧಗಳನ್ನು ಸೃಷ್ಟಿಸಿದೆ. ಉತ್ತರ ಕರ್ನಾಟಕದ ಭಾಷೆ, ಹಳೆ ಮೈಸೂರು ಪ್ರಾಂತ್ಯದ ಭಾಷೆ, ಮಂಗಳೂರಿನ ಭಾಷೆ ಮುಂತಾದ ಪ್ರಬೇಧಗಳಲ್ಲಿ ಅನೇಕ ಉಪಪ್ರಬೇಧಗಳು ಕೂಡ. ಉತ್ತರ ಕರ್ನಾಟಕದ ಭಾಷೆ ದಕ್ಷಿಣದಲ್ಲಿ ಅನೇಕರಿಗೆ ಒಂದೇ ತರಹದ್ದು ಎನ್ನಿಸಬಹುದು. ಆದರೆ ಕಲ್ಯಾಣ ಕರ್ನಾಟಕ (ಬೀದರ್, ಗುಲಬರ್ಗಾ, ರಾಯಚೂರು ಮತ್ತು ಬಳ್ಳಾರಿ)ದ ಭಾಷೆ, ಧಾರವಾಡ, ಬೆಳಗಾವಿ ಮತ್ತು ಬಿಜಾಪುರದ ಭಾಷೆಗಿಂತ ಸ್ವಲ್ಪ ಭಿನ್ನವಾದುದು ಎಂಬುದು ಎಲ್ಲರಿಗೂ ಗ್ರಾಹ್ಯ ಸಂಗತಿ. ಇದರಂತೆಯೆ, ಹಳೇ ಮೈಸೂರು ಭಾಷೆಗಳಲ್ಲಿ ಉಪಪ್ರಬೇಧಗಳಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಮುಖ್ಯ ಸಂಗತಿ ಏನೆಂದರೆ, ನಮ್ಮ ಕನ್ನಡದಲ್ಲಿ ಇಂದು ಅನೇಕ ಪ್ರಭೇದಗಳಿದ್ದರೂ, ಪ್ರಪಂಚದಲ್ಲಿ ಎರಡು ಸಾವಿರ ವರ್ಷಗಳಿಗಿಂತ ಹೆಚ್ಚಿನ ಸಮಯದಿಂದ ಬದುಕಿರುವ ಕೆಲವೇ ಭಾಷೆಗಳಲ್ಲಿ ಇದೂ ಒಂದು. ಇದೊಂದು ಹೆಮ್ಮೆಯ ವಿಷಯವಲ್ಲವೆ?

ಜುಲೈ ೨೦೧೧ರಲ್ಲಿ ನಮ್ಮ ಕನ್ನಡಕ್ಕೆ ಒಂದು ಅಭೂತಪೂರ್ವವಾದ ಮಾನ್ಯತೆ ದೊರಕಿತು. ಭಾರತದ ಕೇಂದ್ರ ಸರಕಾರ ಕನ್ನಡಕ್ಕೆ "ಶಾಸ್ತ್ರೀಯ" ಸ್ಥಾನಮಾನವನ್ನು ನೀಡಿತು. ಕನ್ನಡಿಗರಿಗೆಲ್ಲ ಈ ವಿಷಯ ಸಂತೋಷ ತಂದರೆ, ಅನೇಕ ಇತರ ಭಾಷಿಕರ ಹುಬ್ಬೇರುವಂತೆ ಮಾಡಿತು. ಇದು ಅನೇಕ  "ಶಾಸ್ತ್ರೀಯ" ಸ್ಥಾನಮಾನ ಎಂದರೆ ಏನು? ಯಾವದೇ ಪ್ರಾಚೀನ ಭಾಷೆ, ಸ್ವತಂತ್ರವಾದ ಪರಂಪರೆಯನ್ನು ಮತ್ತು ಉನ್ನತ ಮಟ್ಟದ ಪ್ರಾಚೀನ ಸಾಹಿತ್ಯವನ್ನು ಹೊಂದಿದ್ದು, ಸ್ವತಂತ್ರವಾಗಿಯೇ ಉಳಿದು ಬೆಳೆದಿದ್ದರೆ ಅಂತಹ ಭಾಷೆ "ಶಾಸ್ತ್ರೀಯ" ಭಾಷೆ. ನಮ್ಮ ಕನ್ನಡ ಪುರಾತನ ಭಾಷೆಯಾಗಿರುವದರಲ್ಲಿ ಮತ್ತು ಉಚ್ಚ ಮಟ್ಟದ ಸಾಹಿತ್ಯಿಕ ಪರಂಪರೆಯನ್ನು ಹೊಂದಿರುವದರಲ್ಲಿ ಸಂಶಯವಿಲ್ಲ. ಆದರೆ ಅದೆಷ್ಟು ಪುರಾತನ ಭಾಷೆಯಿರಬಹುದು ಎಂಬುದರ ಬಗ್ಗೆ ನನಗೆ ಜಿಜ್ಞಾಸು ಮೂಡಿತು.

ನಮ್ಮ ರಾಜ್ಯ ಕರ್ನಾಟಕದ ಹೆಸರು ಅತಿ ಪುರಾತನವಾದುದು, ಅದರಲ್ಲಿ ಸಂದೇಹವೇನಿಲ್ಲ. ಪೌರಾಣಿಕ ಕೃತಿಗಳಲ್ಲಿ ಕರ್ನಾಟಕ ಶಬ್ದದ ಬಳಕೆ ಅನೇಕ ಕಡೆಯಲ್ಲಿ ನೋಡಬಹುದು. ಮಹಾಭಾರತದ ಸಭಾ ಪರ್ವ ಮತ್ತು ಭೀಷ್ಮ ಪರ್ವಗಳಲ್ಲಿ "ಕರ್ನಾಟ" ಶಬ್ದವನ್ನು ಪ್ರದೇಶವೊಂದನ್ನು ಗುರುತಿಸಲು ಬಳಸಲಾಗಿದೆ. ಅಲ್ಲದೇ ಮತ್ಸ್ಯಪುರಾಣ, ಸ್ಕಂದ ಪುರಾಣ, ಮಾರ್ಕಂಡೇಯ ಪುರಾಣ ಮತ್ತು ಭಾಗವತ ಪುರಾಣಗಳಲ್ಲಿ ಕೂಡ "ಕರ್ನಾಟ" ಶಬ್ದದ ಪ್ರಸ್ತಾಪವಿದೆ. ಹತ್ತನೇ ಶತಮಾನದ ನಾಗವರ್ಮ ಬಾಣನ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿ, ಕರ್ನಾಟಕ ಕಾದಂಬರಿ ಎಂದು ಹಸರಿಟ್ಟ. ಅಂದರೆ ನಮ್ಮ ನಾಡಿನ ಹೆಸರು ಕರ್ನಾಟಕ ಎಂದು ಪುರಾತನಕಾಲದಿಂದಲೂ ರೂಢಿಯಲ್ಲಿತ್ತು ಎಂದು ತಿಳಿದು ಬರುತ್ತದೆ. ಆದರೆ ನಮ್ಮ ಭಾಷೆ ಕನ್ನಡ ಎಷ್ಟು ಪ್ರಾಚೀನವಾದುದು? ನಮ್ಮ ಭಾಷೆ ಕನ್ನಡದ ಬಳಕೆ ಮಹಾಭಾರತ ಕಾಲಕ್ಕಿಂತ ಮುಂಚಿನಿಂದೆಯೂ ಇದೆಯೆ ಎಂಬ ಪ್ರಶ್ನೆ ಏಳುವದು ಸಹಜ. ನಿಖರವಾದಿ ಇದನ್ನು ಹೇಳಲು ಸಾಧ್ಯವಿಲ್ಲ. ಇದನ್ನು ಅರಿಯಲು, ಕನ್ನಡದ ಲಿಪಿ ಮತ್ತು ಶಬ್ದಗಳ ಬಳಕೆ ಎಷ್ಟು ಪುರಾತನವಾದುದು ಎಂಬುದನ್ನು ಪರಿಶೀಲಿಸಬೇಕು. ಕನ್ನಡದ ಪ್ರಾಚೀನತೆಯನ್ನು ಇಲ್ಲಿಯವರೆಗೂ ದೊರೆತಿರುವ ಪುರಾತನ ಶಾಸನಗಳಿಂದಲೂ ಮತ್ತು ಪುರಾತನ ಸಾಹಿತ್ಯ ಕೃತಿಗಳಿಂದಲೂ ಅಳೆಯಬಹುದು. ರೆವರೆಂಡ್ ಫಾದರ್ ಹೆರಾಸ್ ಅವರ ಪ್ರಕಾರ ಕನ್ನಡ ಲಿಪಿಯ ಕೆಲವು ಅಕ್ಷರಗಳನ್ನು ಮನುಷ್ಯರ ನಾಗರೀಕತೆಯ ತೊಟ್ಟಿಲು ಎನಿಸಿದ ಮೊಹೆಂಜೋದಾರೋ ಮತ್ತು ಹರಪ್ಪಾ(ಕ್ರಿ.ಪೂ. ೨೬೦೦)ಗಳಿಂದ ದೊರೆತ ಬರಹಗಳಲ್ಲಿ ಕಾಣಬಹುದಾಗಿದೆ. ಪ್ರೊ.ಹುಲ್ಷ್ (೧೯೦೪) ಅವರು ಗ್ರೀಕ್ ಭಾಷೆಯ ನಾಟಕ "Charitine Mime"(Papyrus from Oxythynchus, ಕ್ರಿ.ಪೂ.೨೫೦)ದಲ್ಲಿ ಕನ್ನಡದ ಅನೇಕ ಪದಗಳಿರುವುದನ್ನು ಗುರುತಿಸಿದ್ದಾರೆ. ಈ ವಿಷಯವನ್ನು ಮತ್ತೆ ದೃಢೀಕರಿಸಿದವರು ಕನ್ನಡದ ಮೊದಲ ರಾಷ್ಟ್ರಕವಿ ದಿ. ಎಮ್. ಗೋವಿಂದ ಪೈಗಳು. ಅಲ್ಲದೇ ಕ್ರಿ. ಪೂ. ೧೫೦ರಲ್ಲಿ ಹಾಲರಾಜ ಎಂಬ ಬರಹಗಾರನಿಂದ ರಚಿತವಾದ ಪ್ರಾಕೃತ ಭಾಷೆಯ ಕೃತಿ ಗಾಥಾ ಸಪ್ತಶತಿಯಲ್ಲಿ ಶುದ್ಧ ಕನ್ನಡ ಶಬ್ದಗಳಾದ "ತುಪ್ಪ", "ಪೆಟ್ಟು" ಇತ್ಯಾದಿಗಳು ಕಂಡುಬರುತ್ತವೆ. ಸಾಮ್ರಾಟ್ ಅಶೋಕನ ಬ್ರಹ್ಮಗಿರಿ ಶಾಸನ (ಕ್ರಿ.ಪೂ. ೨೩೦) ತುಂಬಾ ಮಹತ್ವದ್ದು. ಇದರಲ್ಲಿ ಕನ್ನಡದ ಶಬ್ದಗಳನ್ನು ಕಾಣಬಹುದು. ಮುಖ್ಯವಾದ ಸಂಗತಿಯೆಂದರೆ ಪ್ರಾಕೃತ, ಆರಾಮಿಕ್ ಮತ್ತು ಗ್ರೀಕ್ ಭಾಷೆಯನ್ನು ಬಿಟ್ಟರೆ ಬೇರೇ ಯಾವುದೇ ಭಾಷೆಯಲ್ಲಿ ಸಿಗುವ ಮೊತ್ತ ಮೊದಲ ಶಿಲಾ ಶಾಸನ ಇದು. ಇಂತಹ ಕುರುಹುಗಳಿಂದ ಕನ್ನಡಭಾಷೆಯ ಅಸ್ತಿತ್ವ ಕ್ರಿ.ಪೂ.ಕ್ಕೆ ಹೋಗುತ್ತದೆ ಎಂಬುದು ನಿಶ್ಚಯವಾಗುತ್ತದೆ.

ಕದಂಬರ ಅನೇಕ ಶಾಸನಗಳು ಕನ್ನಡದಲ್ಲಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ತಾಳಗುಂದ, ಗುಂಡಾನೂರ, ಚಂದ್ರವಲ್ಲಿ, ಹಲಸಿ ಮತ್ತು ಹಲ್ಮಿಡಿ. ಅಂದರೆ ಶಾಸನದಲ್ಲಿ ಕನ್ನಡದ ಬಳಕೆ ಆಗುತ್ತಿತ್ತು ಮತ್ತು ಕನ್ನಡ ಅಷ್ಟರಮಟ್ಟಿಗೆ ಅಭಿವೃದ್ದಿ ಹೊಂದಿದ ಭಾಷೆಯಾಗಿತ್ತು ಎಂದು ತಿಳಿದು ಬರುತ್ತದೆ. ಕನ್ನಡದಲ್ಲಿ ಸಂಪೂರ್ಣವಾಗಿ ರಚಿತಗೊಂಡ ಮೊದಲ ಶಾಸನ ಎಂದು ಪ್ರಸಿದ್ಧಿಗೊಂಡಿರುವ ಹಲ್ಮಿಡಿ ಶಾಸನದ ಕಾಲ ಕ್ರಿ.ಶ.೪೫೦ ಎಂದು ಹೇಳಲಾಗಿದ್ದು, ಈ ಹಲ್ಮಿಡಿ ಶಾಸನದಿಂದ ಕೆಲವು ಶತಮಾನಗಳಷ್ಟು ಮುಂಚಿನಿಂದಾದರೂ ಕನ್ನಡ ಗ್ರಾಂಥಿಕ ಭಾಷೆಯಾಗಿರಬೇಕು ಎಂದು ಅಂದಾಜು ಮಾಡಲಾಗಿದೆ. ಬಾದಾಮಿಯಲ್ಲಿ ದೊರಕಿದ ಕಪ್ಪೆ ಆರಭಟ್ಟನ ಶಿಲಾಶಾಸನ ಸುಮಾರು ಕ್ರಿ.ಶ. ೭೦೦ರದು. ಈ ಶಿಲಾ ಶಾಸನ ಕನ್ನಡ ಮತ್ತು ಸಂಸ್ಕೃತಗಳ ಮಿಶ್ರಣವಾಗಿದೆ. ತ್ರಿಪದಿಯಲ್ಲಿ ಕನ್ನಡದ ಕಾವ್ಯವನ್ನು ಈ ಶಿಲಾಶಾಸನದಲ್ಲಿ ನಾವು ಕಾಣಬಹುದು. ಕನ್ನಡದ ಮೇರುಕೃತಿ ಕವಿರಾಜಮಾರ್ಗ ನಮಗೆ ದೊರಕಿದ ಅತ್ಯಂತ ಹಳೆಯ ಕೃತಿ. ಈ ಕೃತಿಯನ್ನು ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗ ರಚಿಸಿದನೋ ಅಥವಾ ಅವನ ಆಸ್ಥಾನಕವಿ ಶ್ರೀವಿಜಯ ರಚಿಸಿದನೋ ಎಂಬ ಚರ್ಚೆ ವಿದ್ವಾಂಸರಲ್ಲಿದ್ದು, ಇತ್ತೀಚೆಗೆ ಅದನ್ನು ಶ್ರೀವಿಜಯ ರಚಿಸಿರಬಹುದು ಎಂಬ ವಾದ ಹೆಚ್ಚು ಮನ್ನಣೆ ಪಡೆಯುತ್ತಲಿದೆ. ಕವಿರಾಜಮಾರ್ಗ ಕ್ರಿ.ಶ. ೮೫೦ರ ಸುಮಾರಿನದು. ಕವಿರಾಜಮಾರ್ಗ ತನಗಿಂತ ಹಳೆಯ ಎಂಟು-ಹತ್ತು ಕವಿಗಳು ಮತ್ತು ಬರಹಗಾರರನ್ನು ಹೆಸರಿಸುತ್ತದೆ. ಅವರಲ್ಲಿ ಮುಖ್ಯರಾದವರು ಶ್ರೀವರದದೇವ, ವಿಮಲ, ಉದಯ, ನಾಗಾರ್ಜುನ, ಜಯಬಂಧು ಮತ್ತು ದುರ್ವಿನಿತ. ಈ ಬರಹಗಾರರ ಕಾಲ ಮತ್ತು ಊರುಗಳ ಬಗ್ಗೆ ಹೆಚ್ಚು ತಿಳಿದು ಬಂದಿಲ್ಲ. ಮತ್ತು ಅವರ ಬರಹಗಳು ಈಗ ಲಭ್ಯವಿಲ್ಲ. ದುರ್ವಿನಿತನ ಬಗ್ಗೆ ಸ್ವಲ್ಪ ಮಾಹಿತಿ ದೊರೆತಿದೆ. ಈತ ಕ್ರಿ.ಶ. ೪೫೦ರ ಆಸುಪಾಸಿನಲ್ಲಿದ್ದ ಕವಿ ಎಂದು ತಿಳಿದುಬಂದಿದೆ. ಅಂದರೆ ಕನ್ನಡ ಸಾಹಿತ್ಯ ಈ ಸಮಯದಲ್ಲೂ ವರ್ಧಿಸುತ್ತಿತ್ತು ಎಂದು ತಿಳಿದು ಬರುತ್ತದೆ. ಕ್ರಿ.ಶ.800ರ ಸೈಗೊಟ್ಟ ಶಿವಮಾರನ ಶಾಸನದಲ್ಲಿ ಮೂಡಿ ಬಂದ 'ಗಜಾಷ್ಟಕ', ಒನಕೆವಾಡು ಎಂಬ ಜಾನಪದ ಗೀತವಾಗಿ ಜನಪ್ರಿಯವಾಯಿತಂತೆ. ಅಂದರೆ ಆ ಕಾಲಕ್ಕಾಗಲೇ ಜಾನಪದ ಕಾವ್ಯ ಪ್ರಕಾರಗಳು ಕನ್ನಡದಲ್ಲಿದ್ದುವೆಂದು ಹೇಳಬಹುದು.

ಕದಂಬರ ನಂತರ ಬಂದ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು ಎಲ್ಲರೂ ಕನ್ನಡ ಭಾಷೆಗೆ ನೀಡಿದ ಪ್ರಾಮುಖ್ಯತೆ, ಆ ಕಾಲದಲ್ಲಿ ತೀವ್ರಗೊಂಡ ಭಾಷೆಯ ಬೆಳವಣಿಗೆ ಮತ್ತು ಕನ್ನಡ ಸಾಹಿತ್ಯಲೋಕಕ್ಕೆ ದೊರೆತ ಅನರ್ಘ್ಯ ರತ್ನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ರಾಷ್ಟ್ರಕೂಟರ ಕಾಲದಲ್ಲಿ ರಚಿತಗೊಂಡ ನೃಪತುಂಗನ ಕವಿರಾಜಮಾರ್ಗ, ಶಿವಕೋಟ್ಯಾಚಾರ್ಯನ ವಡ್ಡಾರಾಧನೆ, ಶ್ರೀವಿಜಯನ "ಚಂದ್ರಪ್ರಭಾ ಪುರಾಣ" ಇತ್ಯಾದಿಗಳು. ಕನ್ನಡದ ಆದಿಕವಿ ಪಂಪ ಬಾಳಿ ಬದುಕಿ ಕನ್ನಡದಲ್ಲಿ ಆದಿಪುರಾಣ, ವಿಕ್ರಮಾರ್ಜುನ ವಿಜಯದಂತಹ ಘನವಾದ ಕೃತಿಗಳನ್ನು ರಚಿಸಿದ್ದು ಕೂಡ ರಾಷ್ಟ್ರಕೂಟರ ಕಾಲದಲ್ಲಿ. ಸ್ವಲ್ಪ ನಂತರದಲ್ಲಿ, ಕವಿ ಚಕ್ರವರ್ತಿಗಳೆನಿಸಿದ ಕಲ್ಲ್ಯಾಣೀ ಚಾಲುಕ್ಯರ ಆಶ್ರಯದಲ್ಲಿದ್ದ ರನ್ನ ಮತ್ತು ರಾಷ್ಟ್ರಕೂಟರ ಆಶ್ರಯದಲ್ಲಿದ್ದ ಪೊನ್ನ ಕೂಡ ಘನವಾದ ಕನ್ನಡ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಲೋಕದ ಮೇರು ಕವಿಗಳೆಂದು ಅಮರರಾದರು. ಮುಂದೆ ಬಂದ ಹರಿಹರ, ರಾಘವಾಂಕ, ಜನ್ನ, ಕುಮಾರವ್ಯಾಸ ಮುಂತಾದ ಮಹನೀಯರು ಕನ್ನಡದ ಭಾಷಾ ಶ್ರೀಮಂತಿಕೆಯನ್ನು ಬೆಳಗಿದ ಮೇರುಕವಿಗಳು. ೧೨ನೇಯ ಶತಮಾನದ ನಂತರದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳ ಕಾಲ ಕನ್ನಡ ಭಾಷೆಯ ಸುವರ್ಣ ಯುಗ. ಸುಂದರ ಸರಳ ಕನ್ನಡದಲ್ಲಿ ಶರಣರು ಮತ್ತು ದಾಸರು ರಚಿಸಿದ ಕೃತಿಗಳು ಕನ್ನಡ ನಾಡು ಮತ್ತು ನುಡಿಯ ಪರಂಪರೆಯ ದಿವ್ಯ ಪ್ರತೀಕವಾಗಿವೆ.

ಇಪ್ಪತ್ತನೆಯ ಶತಮಾನದಲ್ಲಿ ಐರೋಪ್ಯ ಸಂಸ್ಕೃತಿಯ ಪ್ರಭಾವದಿಂದ ಕನ್ನಡದ ಬೆಳವಣಿಗೆಯಲ್ಲಿ ಮಹತ್ತರ ಬದಲಾವಣೆಗಳಾದವು. ಕುವೆಂಪು, ಬೇಂದ್ರೆ, ಮಾಸ್ತಿ, ಗೋಕಾಕ್, ಮತ್ತು ಕಾರಂತರಂತಹ ನವೋದಯ ಕಾಲದ ದಿಗ್ಗಜರಿಂದ ನವ್ಯ ಪರಂಪರೆಯ ಅಡಿಗ, ಕಂಬಾರ, ಭೈರಪ್ಪ ಅವರಂತಹ  ಮಹಾನ್ ಸಾಹಿತಿಗಳು ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಯನ್ನು ಬೆಳೆಸಿ ಆಧುನಿಕ ಯುಗದಲ್ಲಿ ಅದಕ್ಕೊಂದು ಹೊಸ ಆಯಾಮವನ್ನು ಕಟ್ಟಿಕೊಟ್ಟರು.

ಹೀಗೆ ಹಲ್ಮಿಡಿ ಶಾಸನಕ್ಕಿಂತಲೂ ಮುಂಚಿನಿಂದ ಕನ್ನಡ ಭಾಷೆಯನ್ನು ಬಳಸಿ ಸಾಹಿತ್ಯ ರಚನೆಯಾದ ಬಗ್ಗೆ ಸ್ಪಷ್ಟ ಪುರಾವೆಗಳಿವೆಯಾದರೂ, ಮೂಲ ದ್ರಾವಿಡ ಭಾಷೆಯಿಂದ ಕನ್ನಡ ಎಂದು ಕವಲೊಡೆಯಿತು, ಆಗ ಅದಕ್ಕಿದ್ದ ಸ್ವರೂಪವೇನು, ಎಂದು ಅದು ತನ್ನದೇ ಆದ ಸ್ವತಂತ್ರ ಅಸ್ತಿತ್ವ ಪಡೆಯಿತು ಎಂಬುದರ ಬಗ್ಗೆ ದಾಖಲೆಗಳ ಆಧಾರವಿಲ್ಲ. ಈಗ ಪ್ರಚಲಿತವಿರುವ ಜನಪ್ರಿಯ ಸಿದ್ಧಾಂತವೆಂದರೆ ಕನ್ನಡ ಮತ್ತು ತಮಿಳುಗಳೆರಡೂ ತಮ್ಮ ಮೂಲ ದ್ರಾವಿಡ ಭಾಷೆಯಿಂದ ಹೆಚ್ಚು ಕಡಿಮೆ ಏಕಕಾಲಕ್ಕೆ ಕವಲೊಡೆದವು. ಕನ್ನಡ ಶಾತವಾಹನರು ಮತ್ತು ನಂತರ ಬಂದ ಕದಂಬರ ರಾಜ್ಯದಲ್ಲಿ ಮನ್ನಣೆ ಪಡೆದು, ಸಂಸ್ಕೃತದಿಂದ ಪ್ರಭಾವಗೊಂಡು ಬೆಳೆಯಿತು. ದುರದೃಷ್ಟಾವಶಾತ್ ಕನ್ನಡದ ಪುರಾತನ ಸಾಹಿತ್ಯ ಕೃತಿಗಳು ಅಷ್ಟೊಂದು ದೊರಕಿಲ್ಲ. ಈ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆ ನಡೆಯಬೇಕಿದೆ.

ಇಂದಿನ ಆಧುನಿಕ ಯುಗದಲ್ಲಿ, ಇಂಗ್ಲೀಷು ಭಾಷೆಯ ವ್ಯಾಮೋಹ ಅತಿ ಹೆಚ್ಚಾಗಿ ಕನ್ನಡ ಭಾಷೆ ಬೆಳವಣಿಗೆ ಕುಂಠಿತಗೊಳ್ಳತೊಡಗಿದೆ. ಇದಲ್ಲದೇ ಜಾಗತೀಕರಣದಿಂದ ಇಂಗ್ಲೀಷ ಭಾಷೆಯ ಬಳಕೆ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಲ್ಲಿ ಹೆಚ್ಚಾಗಿ ಕನ್ನಡದ ಸ್ಥಾನ ಕುಸಿಯತೊಡಗಿದೆ. ಕನ್ನಡ ಕೇವಲ ಒಂದು ಭಾಷೆಯಲ್ಲ. ಐತಿಹಾಸಿಕ ಕಾಲದಿಂದ ವೈಭವಪೂರ್ಣವಾಗಿ ಬೆಳೆದು ಬಂದ ಉಚ್ಛತಮ ಸಂಸ್ಕೃತಿಯೊಂದರ ಪ್ರತೀಕ ಎಂದರೆ ಅತಿಶಯೋಕ್ತಿ ಏನಲ್ಲ. ಆದುದರಿಂದ ಕನ್ನಡದ ಉಳಿವಿನ ಮೇಲೆ ನಮ್ಮ ಶ್ರೀಮಂತ ಸಂಸ್ಕೃತಿಯ ಉಳಿವು ಅವಲಂಬಿಸಿದೆ. ಭವ್ಯ ಇತಿಹಾಸವಿರುವ ನಮ್ಮ ಭಾಷೆ ಮತ್ತು ನಮ್ಮ ಸಂಸ್ಕೃತಿ ಕುಂದಿಹೋಗಬಾರದು ಎಂಬ ಕಳಕಳಿಯಿರುವ ಜಗತ್ತಿನ ಕನ್ನಡ ಜನರೆಲ್ಲ ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಕನ್ನಡವನ್ನು ಉಳಿಸಿ ಬೆಳೆಸಲು ಏನು ಮಾಡಬೇಕು ಎಂಬುದರ ಬಗ್ಗೆ ಗಟ್ಟಿಯಾದ ನಿರ್ಣಯಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇಂದು ಅತೀ ಹೆಚ್ಚಾಗಿದೆ. ಈ ದಿಶೆಯಲ್ಲಿ ಖ್ಯಾತ ಸಾಹಿತಿ ಡಾ. ಯು ಅರ್. ಅನಂತಮೂರ್ತಿ ಅವರ ಈ ಮಾತುಗಳು ಇಲ್ಲಿ ಸ್ಮರಣೀಯ; “ನಮಗೆ ಜಗತ್ತಿನ ಜೊತೆ ಸಂಭಾಷಿಸಲು ಮತ್ತು ವಾಣಿಜ್ಯ ನಡೆಸಲು ಇಂಗ್ಲೀಷಿನ ಅವಶ್ಯಕತೆ ಇದೆ. ಆದರೆ ಈ ಕಾರಣಕ್ಕಾಗಿ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಗಳ ಬಲಿ ಕೊಡುವದು ಸಲ್ಲ”.

ಏನು ಮಾಡಬೇಕೆಂದು ಬಹಳ ಯೋಚಿಸಬೇಕಿಲ್ಲ. ನಮ್ಮ ನೆರೆ ಹೊರೆಯವರಾದ ತಮಿಳು ಮತ್ತು ಮರಾಠಿಗರಿಂದ ಸ್ವಲ್ಪ ಕಲಿತರೆ ಸಾಕು.

 

ಆಕರಗಳು:

1. Rice, E.P., (1982), "A History of Kannada Literature", New Delhi, Asian Educational Services.

2. Wikipedia, "Kappe Arabhatta", http://en.wikipedia.org/wiki/Kappe_Arabhatta

3. Classical Kannada, http://www.classicalkannada.org/indexKan.html

Comments

Submitted by lpitnal Mon, 11/25/2013 - 07:45

ವಸಂತ ಕುಲಕರ್ಣಿರವರಿಗೆ, ವಂದನೆಗಳು. ಕನ್ನಡ ಇತಿಹಾಸದ ಇಷ್ಟೊಂದು ತಿಳುವಳಿಕೆ ನನ್ನದಾಗಿರಲಿಲ್ಲ. ತುಂಬ ಸ್ಟಡಿ ಮಾಡಿದ್ದೀರಿ. ಉತ್ತಮ ಲೇಖನ. ಧನ್ಯವಾದಗಳು.

Submitted by nageshamysore Tue, 11/26/2013 - 04:02

ನಮಸ್ಕಾರ ವಸಂತ್, ಕನ್ನಡದ ಇತಿಹಾಸದ ಕುರಿತು ಸೊಗಸಾದ ಸಮಗ್ರ ಲೇಖನ. ಅಂದ ಹಾಗೆ ಇತ್ತೀಚೆಗೆ ಎಲ್ಲೊ ಓದಿದ ತುಣುಕೊಂದರ ನೆನಪು - ಮಾನ್ಯ ಶ್ರೀ ದೊಡ್ಡರಂಗೇಗೌಡರ ಸಂಶೋಧನೆಯೊಂದು ಕನ್ನಡದ ಹಲ್ಮಿಡೀ ಶಾಸನಕ್ಕೂ ಮುಂಚಿನ ಕೆಲ ಸಾಕ್ಷಾಧಾರಗಳನ್ನು ಸಂಗ್ರಹಿಸಿದೆ ಎಂದು (ನಿಖರ ಮಾಹಿತಿ ಗೊತ್ತಿಲ್ಲ - ಇದು ಅವರ ಇತ್ತೀಚಿನ ಪುಸ್ತಕದ ಪರಿಚಯ ಮಾಡಿಸುವ ಪುಟ್ಟ ಬರಹದಲ್ಲಿ ಇಣುಕಿದ ವಿಷಯ). ಪ್ರಾಯಶಃ ಆ ಪುಸ್ತಕ / ವಿಷಯದತ್ತ ಒಮ್ಮೆ ಕಣ್ಣು ಹಾಯಿಸಿದರೆ ಈ ಸುಂದರ ಲೇಖನಕ್ಕೆ ಮತ್ತಷ್ಟು ನಿಖರ ಮಾಹಿತಿ ಸೇರ್ಪಡೆಯಾಗಬಹುದು.
.
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

Submitted by kaushik Wed, 12/04/2013 - 22:04

ನಿಜವಾಗಿಯೂ ಉತ್ತಮವಾದ ಲೇಖನ. ಓದಿ ತುಂಬಾ ಸಂತೋಷವಾಯಿತು. ಎಷ್ಟೊಂದು ವಿಷಯಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು
ಶಿವರಾಂ ಕಲ್ಮಾಡಿ, ಉಡುಪಿ