ಕನ್ನಡ ಭಾಷೆ - ಬದುಕು

ಕನ್ನಡ ಭಾಷೆ - ಬದುಕು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಜಿ.ಸಿದ್ದರಾಮಯ್ಯ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೧೯

ಪ್ರೊ. ಎಸ್. ಜಿ.ಸಿದ್ಧರಾಮಯ್ಯ ಅವರು ಕನ್ನಡ ಕಾವ್ಯಲೋಕದ ನೆಲದನಿಯ ಸಂವೇದನೆ. ಅವರ ಕಾವ್ಯಕಾರಣದ ದೇಸಿ ನುಡಿಗಟ್ಟುಗಳು ಕನ್ನಡ ಸಾಹಿತ್ಯದ ಕಾವ್ಯ ತೆನೆಯನ್ನು ಸದಾ ಹಸಿರಾಗಿಡುವುದರಲ್ಲಿ ಸಾವಯವ ಸಂಬಂಧವನ್ನು ಹೊಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದು ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಸಿದ್ಧರಾಮಯ್ಯನವರು ರಾಜ್ಯದ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕವನ, ನಾಟಕ, ವಿಮರ್ಶೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿರುವ ಸಿದ್ಧರಾಮಯ್ಯ ಅವರು ಕ್ರಿಯಾಶೀಲ ಹಾಗೂ ಸೃಜನಾತ್ಮಕ ಬರವಣಿಗೆಯ ಕಣಜ. ಅವರ ಬರವಣಿಗೆಗಾಗಿ ಪು.ತಿ.ನ. ಕಾವ್ಯ ಪ್ರಶಸ್ತಿ, ಮಾಸ್ತಿ ಕಾವ್ಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿವೆ.

ಸಿದ್ಧರಾಮಯ್ಯ ಅವರ ಸಾಹಿತ್ಯ ಮತ್ತು ಕನ್ನಡಪರ ಕಾಳಜಿ ಅಪಾರವಾದುದು. ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಹಮ್ಮಿಕೊಂಡಿದ್ದ ಕಾರ್ಯ ಚಟುವಟಿಕೆಗಳು ಪ್ರಾಧಿಕಾರಗಳಿಗೆ ಮಾದರಿಯಾಗಬಲ್ಲುವು. 

ಕನ್ನಡ ಬಾಷೆ -ಬದುಕು ಈ ಪುಸ್ತಕದ ಬೆನ್ನುಡಿ ಬರೆದ ಪುರುಷೋತ್ತಮ ಬೆಳಿಮಲೆಯವರು ತಮ್ಮ ಬೆನ್ನುಡಿಯಲ್ಲಿ ಬರೆಯುತ್ತಾರೆ ‘ ಈ ಪುಸ್ತಕವು ಕನ್ನಡವನ್ನು ಕೇಂದ್ರದಲ್ಲಿರಿಸಿಕೊಂಡು ರಾಜ್ಯಭಾಷೆಗಳ ಸಬಲೀಕರಣಕ್ಕೆ ಇರುವ ಅಡ್ಡಿ ಆತಂಕಗಳನ್ನು ನಮ್ಮ ಮುಂದಿಡುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಮಾಧ್ಯಮಗಳ ಸಮಸ್ಯೆ, ಇಂಗ್ಲೀಷ್ ಭಾಷೆಯ ಪ್ರಭುತ್ವದ ಸಮಸ್ಯೆ, ಆಡಳಿತದಲ್ಲಿ ಕನ್ನಡ ಬಳಕೆಯಾಗಬೇಕಾದ ಅಗತ್ಯ, ಹಿಂದೀ ಹೇರಿಕೆಯ ಪ್ರಯತ್ನಗಳು, ತ್ರಿಭಾಷಾ ಸೂತ್ರದ ಸಾಧಕ ಬಾಧಕಗಳು, ಸರಕಾರೀ ಶಾಲೆಗಳ ಸಬಲೀಕರಣ, ಗಡಿಭಾಗದ ಭಾಷಾ ಸಮಸ್ಯೆಗಳು, ಜಾನಪದ ಪದಕೋಶದ ಅಗತ್ಯ, ಕನ್ನಡ ಅಸ್ಮಿತೆಯ ನೆಲೆಗಳು, ಕನ್ನಡದ ಭವಿಷ್ಯ- ಹೀಗೆ ಅನೇಕ ವಿಷಯಗಳ ಕುರಿತು ಈ ಪುಟ್ಟ ಪುಸ್ತಕ ಬೆಳಕು ಚೆಲ್ಲುತ್ತದೆ. ಕನ್ನಡ ಪ್ರಶ್ನೆ ಕೇವಲ ಕನ್ನಡದ ಪ್ರಶ್ನೆಯಲ್ಲ. ಎಲ್ಲ ಪ್ರಾದೇಶಿಕ ಭಾಷೆಗಳ ಪ್ರಶ್ನೆಯೂ ಹೌದೆಂಬುದನ್ನು ಗಟ್ಟಿಯಾಗಿ ಸಾರುತ್ತದೆ. ಈ ಅರ್ಥದಲ್ಲಿ ಮುಂದೆ ನಡೆಯಬೇಕಾದ ದೊಡ್ಡ ಹೋರಾಟವೊಂದಕ್ಕೆ ಬರೆದ ಮುನ್ನುಡಿಯಂತಿದೆ ಈ ಪುಟ್ಟ ಪುಸ್ತಕ'

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ.ಮುರಳೀಧರ ಇವರು ‘ಎಲ್ಲರನ್ನೊಳಗೊಂಡು ಮುನ್ನಡೆಯುವ ಸಹಜ ಮನೋಧರ್ಮ' ಎಂಬ ಶೀರ್ಷಿಕೆಯಲ್ಲಿ ಸಿದ್ಧರಾಮಯ್ಯ ಅವರ ಬಗ್ಗೆ, ಪುಸ್ತಕದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಎಸ್. ಜಿ. ಸಿದ್ಧರಾಮಯ್ಯ ಅವರು ತಮ್ಮ ಮುನ್ನುಡಿ ‘ಭಾವಭಾರದ ಮಾತು' ಇದರಲ್ಲಿ ತಾವು ಬರೆದ ಲೇಖನಗಳ ಬಗ್ಗೆ, ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ೧೭ ಲೇಖನಗಳು ಹಾಗೂ ೬ ಕನ್ನಡ ಪರ ಕವಿತೆಗಳು ಒಳಗೊಂಡಿವೆ. ಪ್ರತೀ ಬರಹವು ಕನ್ನಡ ಭಾಷೆ, ರಾಜ್ಯ, ಜನರ ಸುತ್ತಲೇ ಸುತ್ತುತ್ತಿದೆ. ಸಿದ್ಧರಾಮಯ್ಯರ ತೂಕ ಭರಿತ ಮಾತುಗಳುಳ್ಳ ಲೇಖನಗಳು ಬಹಳಷ್ಟು ಮಾಹಿತಿ ಪೂರ್ಣವಾಗಿವೆ.

ಸುಮಾರು ೧೩೦ ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ಬೆಂಗಳೂರಿನ ನವಕರ್ನಾಟಕ ಪ್ರಕಾಶನದವರು ಹೊರತಂದಿದ್ದಾರೆ. ಪುಸ್ತಕವನ್ನು ಸಿದ್ಧರಾಮಯ್ಯನವರು ‘ಮುಚ್ಚಿ ಹೋಗುತ್ತಿರುವ ಕನ್ನಡ ಶಾಲೆಗಳಿಗೆ ಹಾಗೂ ಇದರ ಕಾರಣದಿಂದಾಗಿ ಶಿಕ್ಷಣ ವಂಚಿತರಾಗುತ್ತಿರುವ ನತದೃಷ್ಟ ಕನ್ನಡ ಮಕ್ಕಳಿಗೆ' ಅರ್ಪಿಸಿದ್ದು ವಿಶೇಷವಾಗಿದೆ.