ಕನ್ನಡ ರಾಜ್ಯೋತ್ಸವದ ಕವನಗಳು

ಕನ್ನಡ ರಾಜ್ಯೋತ್ಸವದ ಕವನಗಳು

ಕವನ

*ರನ್ನ ಚಿನ್ನದ ನಾಡು*

ಕನ್ನಡ ನಾಡಿದು ಚಿನ್ನದ ಬೀಡಿದು

ರನ್ನನು ಜನಿಸಿದ ಪುಣ್ಯನೆಲ|

ಪೊನ್ನನು ಪಾಡಿದ ಜನ್ನನು ಪೊಗಳಿದ

ಕನ್ನಡ ನಾಡಿನ ಪುಣ್ಯಜಲ||೧||

 

ತೆಂಗನು ಬೆಳೆಯುವ ಕಂಗನು ತೆಗೆಯುವ

ರಂಗಲಿ ನಾಡಿದು ರಮಣಿಯವು|

ಗಂಗೆಯ ರೂಪದಿ ತುಂಗೆಯು ಹರಿಯುವ

ಸಂಗನ ಬಸವನ ತಾಣವಿದು ||೨||

 

ಕಲಿಯಲು ಸರಳವು ಸುಲಿದಾ ಹಣ್ಣಿದು

ಕಲಿಗಳ ತವರಿದು ಕಲಿನಾಡು

ನಲಿವಿನ ನಂದನ ಗೆಲುವಿನ ಚೆಂದನ

ಲಲಿತೆಯ ಸೊಬಗಿನ ಕರುನಾಡು||೩||

 

ಕಂದನ ತೊದಲಿದು ಚೆಂದನ ಕಂಪಿದು

ಗಂಧದ ಗುಡಿಯಿದು ವನಸಮವು

ಅಂದದ ಬೆಳೆಯನು ಚೆಂದದಿ ನೀಡುವ

ಸುಂದರ ಧರೆಯಿದು ಕಲ್ಪತರು||೪||

 

ಬಣ್ಣದ ಹೂಗಳ ಬೆಣ್ಣೆಯ ಹೂಬನ

ಕಣ್ಣನು ಸೆಳೆವುದು ಪಯಣಿಗರ

ಮಣ್ಣಲಿ ಹುದುಗಿದೆ ಹೆಣ್ಣಿನ ಗುಣಗಳ

ಬಣ್ಣಿಸೊ ಪುಟಗಳ ಹೊತ್ತಿಗೆಯು||೫||

 

ಅಜ್ಜನು ಹೇಳಿದ ಸಜ್ಜನ ಭಾಷೆಯು

ಮಜ್ಜಿಗೆಯೊಳಗಿನ ಬೆಣ್ಣೆಯಿದು.

ಸಜ್ಜೆಯ ತೆನೆಗಳು ಸಜ್ಜನ ಭಾಷೆಗೆ

ಲಜ್ಜೆಯ ತೋರುತ ಬಾಗಿದವು||೬||

 

ಸಜ್ಜೆಯ ಹೊಲದಲಿ ಗೆಜ್ಜೆಯು ಕಟ್ಟಿದ

ಹೆಜ್ಜೆಯ ಸದ್ದದು ಮೊಳಗಿರಲು

ಅಜ್ಜಿಯ ಹಾಡಿಗೆ ಹೆಜ್ಜೆಯ ಹಾಕುತ

ಗೆಜ್ಜೆಯ ನಾರಿಯು ಕುಣಿದಿರಲು||೭||

 

ಹಟ್ಟಿಯ ಕರುವದು ಚಿಟ್ಟನೆ ಕೂಗಲು

ತಟ್ಟನೆ ಧಾವಿಸೊ ಗೋವಂತೆ

ಹೊಟ್ಟೆಯ ಕಟ್ಟುತ ಪುಟ್ಟನಿ ಗುಣಿಸುವ

ಬೆಟ್ಟವೆ ನಮ್ಮಯ ಹೊತ್ತವಳು||೮||

 

ಚಿನ್ನದ ಗಣಿಯಿದು ರನ್ನದ ಮಣಿಯಿದು

ಕನ್ನಡ ನಾಡನು ಮರೆಯದಿರಿ

ಚೆನ್ನುಡಿಯಾಡುವ ಮುನ್ನುಡಿ ಬರೆಯುವ

ಕನ್ನಡ ಮಣ್ಣನು ತೊರೆಯದಿರಿ||೯||

 

ಬಾರಿಸು ಡಿಂಡಿಮ ತೋರಿಸು ಸಂಗಮ

ಚಾರಣ ದಾಚೆಯ ನಾಡೊರೆಗೆ

ತೋರಣ ಕಟ್ಟಿರಿ ಕೋರಿಕೆ ಸಲ್ಲಿಸಿ

ಸಾರುವ ಮಹಿಮೆಯ ಕೊನೆವರೆಗೆ ||೧೦||

 

-ಶ್ರೀ ಈರಪ್ಪ ಬಿಜಲಿ 

*****

*ಕನ್ನಡದ ಕುಸುಮ ( ಕುಸುಮ ಷಟ್ಪದಿ)*

ಕಂದನಲಿ ಕನ್ನಡವು

ಚಂದದಲಿ ಬೆಳೆದಿಪುದು

ನಂದನದಿ ಹೊಳೆಯುವಾ ಕುಸುಮದಂತೆ|

ಚಂದನದ ಪರಿಮಳದಿ

ವಂದಿಸುತ ಪೇಳ್ವೆನು

ದುಂದುಭಿಯ ನಾದವನು ಕೇಳುತ್ತಲಿ||

 

ತಂಪಿನಲಿ ಹಾಡುವೆನು

ಪಂಪನಂತಿಹ ಕಾವ್ಯ

ಕಂಪು ಬೀರುತ ಕನ್ನಡದಿ ಸಾಗುತ|

ಚಂಪುವಿನ ಸೊಗದಲ್ಲಿ

ಸೊಂಪಾಗಿ ಹರಡುತ ಕು

ವೆಂಪು ಬರೆದಿರುವ ಸೊಗಸಿನ ಕಾವ್ಯ||

 

ರನ್ನನಲಿ ಪಾತ್ರವದು

ಜನ್ನನಲಿ ಮೋಹವದು

ಕನ್ನಡದ ಚರಿತೆಯದು ಹೇಳುತಿರಲು|

ಮನ್ನಣೆಯ ಪಡೆದಿರಲು

ತನ್ನತನ ಬೆಳೆಸುತ್ತ

ಬಣ್ಣಿಸುತ ಸಾಗುತಿದೆ ಭಾಷೆಯನ್ನು||

 

ದಾಸಿಮಯ್ಯ ವಚನದಿ

ದಾಸ ಕೀರ್ತನೆಯಲ್ಲಿ

ಹಾಸದಲಿ ನಗುತಿಹನು ಕೇಶವನಲಿ|

ಭಾಸನಿಂ ರಚಿಸಿರಲು

ಸಾಸಿರಪುರಾಣಗಳ

ಕೋಶವದು ಕನ್ನಡದಿ ನೋಳ್ಪಲಲಿ||

 

ಛಂದದಲಿ ಶಾಸ್ತ್ರಗಳು

ಬಂಧವದು ಬಿಗಿಯಲ್ಲಿ

ಕಂದರಗಳೆಯು ವೃತ್ತ  ಷಟ್ಪದಿಯದು|

ವಂದಿಸುವೆ ಚರಣಕ್ಕೆ

ನಂದನದ ಸುಮವಾಗಿ

ಗಂಧರ್ವ ನಂತೆಯೇ ಪಾಡುವೆನಲಿ||

 

ಅಕ್ಷರದ ಮಾಲೆಯದು

ಚಕ್ಷುವಂತೆಯೆ ವರ್ಣ

ಯಕ್ಷಗಾನದಿ ಭಾಗವತಗೆ 

ಕೇಳಿ|

ಕುಕ್ಷಿಗದು ಜೋತಿಷ್ಯ

ರಕ್ಷೆಯನು ಮಾಡಿಪುದು

ವಕ್ಷದಲಿ ಕನ್ನಡದ ಮಾತೆಯಿರ್ಪ||

 

ಕಲೆಯಿಂದು ಶಿಲ್ಪದಲಿ

ಬಲೆಯಾದ ಬೇಲೂರು

ನೆಲೆಯೂರಿ ನಿಂತಿಹನು ಜಕ್ಕಣ್ಣನು|

ಕಲೆಯಲ್ಲಿ ಬಾದಾಮಿ

ಸಲಗದಂತೆಯೆ ನಿಂತು

ತಲೆಯೆತ್ತಿ ಹೇಳುತಿದೆ ವೈಭವವನು||

 

ಚರಿತೆಗಳು ಹದಿನೆಂಟು

ಬರೆದಿಹರು ಕಬ್ಬಿಗರು

ಬೆರೆಸುತ್ತ ಸಂಸ್ಕೃತದಿ ಕನ್ನಡವನು|

ಹರಿಸುತ್ತ ಭಾವಗಳ

ಬರೆಯುತ್ತ ಗರಿಯಲ್ಲಿ 

ಗರಿಮೆಯನು ಕನ್ನಡಕೆ ತಂದಿಹರಲಿ||

 

ಪಂಜಿನಂತೆಯೆ ಹೊಳೆದು

ಮಂಜಿನಂತೆಯೆ ಮಿಂಚಿ

ಕುಂಜರದ ತೆರದಲ್ಲಿ ಗಾತ್ರವಿಂದು|

ಸಂಜೆಗೆಂಪಲಿ ರವಿಯು

ಸಂಜನಿತ ನಾನಾಗಿ

ಪಂಜದಿಂ ಹೊಳೆದಿಹುದು ಕನ್ನಡವಿದು||

 

-ಶಂಕರಾನಂದ ಹೆಬ್ಬಾಳ

 

ಚಿತ್ರ್