ಕನ್ನಡ ರಾಜ್ಯೋತ್ಸವ ಸಂದಾಗೈತೆ
ಬೆಳಗ್ಗೆನೇ ನಮ್ಮ ಗೌಡಪ್ಪ ವಿಭೂತಿ ಬದಲು ಹಣೆಗೆ ಹಳದಿ ಬಣ್ಣ ಅಂಗೇ ಕೆಂಪು ಬಣ್ಣ ಬಳೆದುಕೊಂಡು ನಿಂಗನ ಚಾ ಅಂಗಡಿ ತಾವ ಗೊಣಗುತ್ತಾ ಬಂದ. ಕನ್ನಡಕ್ಕೆ ಸಿದ್ದ, ಕನ್ನಡಕ್ಕಾಗಿ ಮಡಿವೆ, ಕನ್ನಡಕ್ಕಾಗಿ ದುಡಿವೆ, ನಾನಿರುವುದೇ ನಿಮಗಾಗಿ ಅಂದ ಗೌಡಪ್ಪ. ಲೇ ಎಲ್ಲಲಾ ಮಚ್ಚು ಅಂದ ಸುಬ್ಬ. ಯಾಕಲಾ, ಕನ್ನಡಕ್ಕಾಗಿ ಮಡಿವೆ ಅಂದ್ರಲಾ ಅದಕ್ಕೆ ಅಂದ ಸುಬ್ಬ. ಏ ಥೂ. ಲೇ ನಿಂಗ, ಗೌಡಪ್ಪನ ಲೆಕ್ಕದಲ್ಲಿ ಒಂದು 4ರಾಗೆ 8 ಕೆ ಟೀ ಬರಕಳಲಾ ಅಂದ ಸುಬ್ಬ. ಯಾಕಲಾ ನನ್ನ ಲೆಕ್ಕದಾಗೆ, ಈಗತಾನೆ ನೀವೇ ಹೇಳಿದರಲ್ಲಾ ನಾನಿರುವುದೇ ನಿಮಗಾಗಿ ಅಂತ ಅಂದ ಸುಬ್ಬ. ಲೇ ನಾನು ಹೇಳಿದ್ದು ಕನ್ನಡಾಂಬೆಗೆ ಕಲಾ ಅಂದ. ಸರಿ ಏನ್ ಹೇಳಿ. ನೋಡ್ರಲಾ ಒಂದು 100ಮೀ ಹಳದಿ ಅಂಗೇ 100ಮೀ ಕೆಂಪು ಬಟ್ಟೆ ತಂದಿದೀನಿ ಕನ್ರಲಾ ಅಂದ ಗೌಡಪ್ಪ. ನೋಡಿದ್ರೆ ನಮಗೆ ಅದ್ರಲ್ಲೇ ಪ್ಯಾಂಟು ಸಲ್ಟು ಹೊಲಿಸಿದ್ದ. ಮಗಂದು ಟ್ರಾನ್ಸ್್ಪೆರೆಂಟ್, ಚೆಡ್ಡಿ ಹಾಕ್ರಲಾ ಅನ್ನೋನು. ಯಾಕೆ, ಜನರು ಮೂರ್ಛೆ ಹೋಯ್ತಾರಲಾ ಅನ್ನೋನು ಗೌಡಪ್ಪ. ತಂತಿ ಪಕಡು ಸೀತುಗೆ ಅವರಪ್ಪನ ಸೈಜಿನಾಗೆ ಹೊಲಿಸಿದ್ದ. ಗಂಜಿ ಹೋದ್ರೆ ಸರಿ ಆಯ್ತದೆ ಅನ್ನೋನು. ಅಂಗೇ ಊರು ತುಂಬಾ ಕನ್ನಡದ ಬಾವುಟ ಕಟ್ಟಿಸಿದ್ದ.
ನೋಡ್ರಲಾ ರಾಜ್ಯೋಸ್ತವಕ್ಕೆ ಇರೋದೆ ಒಂದು ದಿನಾ, ಹೋಗಿ ಜನರು ತಾವ ವಸೂಲಿ ಮಾಡುವಾ ಅಂದ. ತಹಸೀಲ್ದಾರ್ ತಾವ ಹೋದ್ರೆ, ರಾಜಕೀಯ, ಗಣಪತಿ, ವಿಜಯದಸಮಿ ಕಾರ್ಯಕ್ರಮಕ್ಕೆ ಕೊಟ್ಟು ಸಾಕಾಗಿದೀವಿ. ನನ್ನ ಹೆಂಡರು ಮಕ್ಕಳಿಗೆ ಮಣ್ಣು ತಿನ್ನಿಸಲಾ , ನನ್ನ ಹತ್ತಿರ ಬಂದ್ರೆ ಜೈಲಿಗೆ ಹಾಕ್ತೀವಿ ಅಂದ್ರು. ನಡೆಯಲಾ ಮತ್ತೆ ರಾಜ್ಯೋಸ್ತವ ಜೈಲಿನಾಗೆ ಮುದ್ದೆ, ಬಸ್ ಸಾರು ಜೊತೆ ಮಾಡ್ ಬೇಕಾಯ್ತದೆ ಅಂದ ಗೌಡಪ್ಪ. ಸರ್ ಮತ್ತೆ ನಿಮ್ಮಿಂದ ಏನು ಕೊಡುಗೆ ಅಂದ್ರೆ, ಬರೀ ಪೆಪ್ಪರ್ ಮೆಂಟ್, ಅದೂ ಐದು ಪೈಸಗೆ ಒಂದು, ಅಂಗೇ ಬಾವುಟದ ಕೋಲು ಅಂದ್ರು. ಮಾರ್ವಾಡಿ ಕುಸಾಲ ಅಂಗಡಿಗೆ ಹೋಗಿ ಕನ್ನಡ ರಾಜ್ಯೋಸ್ತವಕ್ಕೆ ದೇಣಿಗೆ ಕೊಡಲಾ ಅಂದ ಗೌಡ. ಲೇ ಮೊದಲು ರಾಜ್ಯೋತ್ಸವ ಅಂತ ಹೇಳಲಾ ಅಂದ ಕುಶಾಲ್ ಮಾರ್ವಾಡಿ. ನೋಡ್ರಲಾ ನಮಗಿಂತ ಚೆನ್ನಾಗಿ ಇವನೇ ಮಾತಾಡ್ತಾನೆ. ಅದಕ್ಕೆ ಕಲಾ ನಮ್ಮ ರಾಜ್ಯ ಎಕ್ಕುಟ್ಟಿ ಹೋಗೈತೆ. ಈ ನನ್ಮಕ್ಕಳು ಎಲ್ಲಾ ಕನ್ನಡ ಹೇಳ್ಕಡಂಗೆ ಆಗವ್ರೆ ಅಂತಾ ಬಯ್ಕಂತಿದ್ದ ಗೌಡಪ್ಪ. ನೀವು ಯಾಕರಣ ಮಿಸ್ಟೇಕ್ ಮಾಡಿದ್ರಿ ಅಂದ ದೊನ್ನೆ ಸೀನ. ಪಳನಿ ಹತ್ತಿರ ಹೋದ್ರೆ, ನ್ಯಾನು ಮೊನ್ನೆ ತಾನೆ ತಮಿಳು ಸಂಗೈ ಕಾರ್ಯಕ್ರಮಕ್ಕೆ ಕೊಟ್ಟು ಬಂದಿದೀನಿ ಅಂದ ಪಳನಿ. ಸುಬ್ಬ ಒಂದು ನಾಕು ಬಿಟ್ಟ. ಯಾಕಲಾ. ಮಗಾ ಕೆರೆತಾವ ಹೋಗೋದು ಕನ್ನಡದ್ದು ನೀರು ಕಲಾ ಅಂದ ಸುಬ್ಬ.
ಸರಿ ಬೆಳಗ್ಗೆ ರಾಜ್ಯೋತ್ಸವ ಕಾರ್ಯಕ್ರಮ. ಮೆರವಣಿಗೆ ಸರುವಾತು, ಕಿಸ್ನ ದೊಡ್ಡ ಕೋಲಿಗೆ ಒಂದು 5ಮೀ ಬಾವುಟು ಕಟ್ಟಿದ್ದ. ರಸ್ತೇಲಿ ತಿರುಗಿಸ್ತಾ ಇದ್ದ. ಗೌಡಪ್ಪನ ಮುಖಕ್ಕೆ ಎರಡು ಕಿತ ಬಡಿದಿತ್ತು. ಬಾವುಟ ಮುಖಕ್ಕೆ ಅಡ್ಡ ಬರ್ತಿತ್ತು. ಎರಡು ಕಿತಾ ಚೆರಂಡೀಲಿ ಕಾಲಿಟ್ಟಿದ್ದ, ಏ ಥೂ, ಸಾನೇ ಸಾಲೆ ಐಕ್ಳು. ಮೇಸ್ಟ್ರು ಲೈನ್ನಾಗೆ ಇರಿ ಅಂತ ಗೌಡಪ್ಪ ಹೊಡೆಯೋನು. ಗೌಡಪ್ಪ ಮೇಟರಿಗೆ ಎರಡು ಬಿಟ್ಟ. ಯಾಕ್ರೀ. ಮೊದಲು ನೀನು ಪ್ಯಾಂಟಿನ ಜಿಪ್ ಹಾಕಲಾ ಅಂದ ಗೌಡಪ್ಪ. ಏ ಥೂ, ಮೇಡಂ ಮಾತ್ರ ಸೈಲೆಂಟಾಗಿ ಬನ್ನಿ ಅಂತಿದ್ಲು, ಮಗಾ ಸೀತು ಆ ವಮ್ಮನ ಪಕ್ಕದಾಗೆ ಇದ್ದ. ಕಿಸ್ನ ಊರು ತುಂಬಾ ಬಾಳೆ ಎಲೆ, ತರಗಿನ ಎಲೆ ತೋರಣ ಕಟ್ಟಿದ್ದ,. ಯಾಕಲಾ, ಮಾವಿನ ಸೊಪ್ಪು ಖಾಲಿ ಆಗೈತೆ ಅಂದ. ಬಡ್ಡೇ ಹತ್ತಾವು ಅದ್ರಾಗೆ ಚಿತ್ರಾನ್ನ ಹಾಕಿಸ್ಕಂತಾ ಇದ್ವು. ಲೇ ಎಲ್ಲಲಾ ಕನ್ನಡಾಂಬೆ 7ನೇ ಕಿಲಾಸು ಸುಜಾತ. ಬೆಳಗ್ಗೆಯಿಂದ ಸಾನೇತಾವ ಕೆರೆತಾವ ಹೋಗವ್ಳಂತೆ, ತಲೆ ಸುತ್ತುತಾ ಇದೆಯಂತೆ ಅದಕ್ಕೆ ಬರಕ್ಕಿಲ್ಲಾ ಅಂದ ಕಿಸ್ನ. ಮತ್ತೆ ಯಾರನ್ನ ಕನ್ನಡಾಂಬೆ ಮಾಡೋದು ಅಂತಿದ್ದ ಕಿಸ್ನ. ಸರಿ ಗೌಡಪ್ಪನ ಹೆಂಡರು ಬಸಮ್ಮನ್ನ ಕನ್ನಡಾಂಬೆ ಮಾಡಬೇಕು ಅಂತಾ ತೀರ್ಮಾನ ಆಯ್ತು. ಆ ವಮ್ಮ ನೈಟಿಯಲ್ಲಿ ರಂಗೋಲಿ ಹಾಕ್ತಾ ಇತ್ತು. ಎತ್ತಾಕಂಡ್ ಬಂದು ಕನ್ನಡದ ಬಾವುಟ ಮೈ ಮ್ಯಾಕೆ ಸುತ್ತಿ ಕನ್ನಡಾಂಬೆ ಮಾಡಿದ್ದಾತು. ಒಳ್ಳೇ ದುರ್ಗಾದೇವಿ ಪೋಸ್್ನಾಗೆ ಆವಮ್ಮ ತ್ರಿಸೂಲ ಹಿಡಿಕಂಡು ನಿಂತ್ಕಂತು. ಜನಾ ನೋಡ್ರಲಾ ಕನ್ನಡಾಂಬೆ ಒಳ್ಳೆ ರಮ್ಯಾ ಇದ್ದಂಗೆ ಅವ್ಳೆ ಅನ್ನೋರು. ಗೌಡಪ್ಪ ದೃಷ್ಟಿ ತೆಗಿರಲಾ ಅನ್ನೋನು, ಮೆರವಣಿಗೆ ಹೊಂಟು ಎರಡೇ ನಿಮಿಸಕ್ಕೆ ಕನ್ನಡ ರಕ್ಸಣಾ ವೇದಿಕೆಯೋರು ಗೌಡಪ್ಪಂಗೆ ಮುಖ ಮೂತಿ ಚಚ್ಚಿದ್ರು. ಯಾಕ್ರಲಾ, ನೀನು ಕನ್ನಡ ರಾಜ್ಯೋಸ್ತವ ಮಾಡು ಹಂದ್ರೆ ವಿಜಯದಸಮಿ ಮಾಡ್ತಾ ಇದೀಯಲಾ ಅಂತಾ ಅಂದ್ರು ಕರವೇ ಅಧ್ಯಕ್ಸ ನಾಗೇಗೌಡ್ರು, ಬಸಮ್ಮನ ಕೈಲಿ ಇದ್ದ ತ್ರಿಸೂಲ ಇಸ್ಕಂಡ್ವಿ. ಬಸಮ್ಮ ಮಾತ್ರ ಎಲ್ಲರಿಗೂ ಸ್ಮೈಲ್ ಕೊಡ್ತಾ ಇದ್ಲು. ಯಾಕವ್ವಾ ಹಿಂಗ್ ಕಿಸಿತಾ ಇದೀಯಾ ಅಂದ ಗೌಡಪ್ಪ. ನಾನು ಕನ್ನಡಾಂಬೆ, ರಾಜ್ಯದ ಸ್ವತ್ತು ಅಂದ್ಲು ಬಸಮ್ಮ,. ಏ ಥೂ
ಮೆರವಣಿಗೆಯಲ್ಲಿ ಕೆಲವರು ಕನ್ನಡದ ಬಾವುಟದ ಟೋಪಿ ಮಾತ್ರ ಹಾಕಿದ್ರು. ಯಾಕ್ರಲಾ ಅಂದ ಸುಬ್ಬ. ಗೌಡಪ್ಪ ನಮಗೆ ಕೊಟ್ಟಿದ್ದು ಬರೀ ಅರ್ಧ ಮೀಟರ್ ಮಾತ್ರ ಅಂದ್ವು. ಲೇ ಕಿಸ್ನ ನೀನು ಹೆಂಗಲಾ ಪ್ಯಾಂಟು ಸಲ್ಟು ಹೊಲಿಸ್ಕಂಡಿದಿಯಾ ಅಂದ ಸುಬ್ಬ. ನೋಡಲಾ ಗೌಡಪ್ಪನ ಮನ್ಯಾಗೆ ಅವರಪ್ಪನ ತಿಥಿಗೆ ಅಂತಾ ಪಂಚೆ ಕೊಟ್ಟಿದ್ರು, ಅದ್ರಾಗೆ ಅರ್ಧಕ್ಕೆ ಅರಿಸಿನ ಮಿಕ್ಕರ್ಧಕ್ಕೆ ಕುಂಕುಮ ಹಚ್ಚೀವ್ನಿ ಅಂದ ಕಿಸ್ನ. ಮಗನೇ ಅದಕ್ಕೆ ಸಿದ್ದೇಸನ ಗುಡೀಲಿ ಹಣೆಗೆ ಅಂತಾ ಕುಂಕುಮ ಇಟ್ಟಿದ್ದು ಎಲ್ಲಿ ಅಂತಾ ಪೂಜಾರ್ ಹುಡಕ್ತಾ ಇದ್ರು. ನೀನೇ ಏನಲಾ. ಬಣ್ಣ ಏನಾದರೂ ಹೋದರೆ ಆಮೇಲೆ ನಿನಗೈತೆ ಅಣ್ಣಮ್ಮನ ಹಬ್ಬ ಅಂದ ಸುಬ್ಬ, ಎಲ್ಲಾರು ಹಣೆಗೆ ಬಣ್ಣ, ಬೆಳಗ್ಗೆಯಿಂದ ಪೇಂಟರ್ ಬಳಿದು, ಕಯ ಸೋತು ಹೋಗೈತೆ ಅಂತಾ ಲಟಿಗೆ ತೆಗಿತಾ ಇದ್ದ. ಬೆರಳು ಸಟ್ಕಂಡೈತೆ ಅನ್ನೋನು.
ಸರಿ ಸಂಜೆ ಕಾರ್ಯಕ್ರಮ ಸುರುವಾತು. ಇನ್ನೂ ಪ್ರಾರ್ಥನೆ ಸುರುವಾಗಿ ಎರಡೇ ನಿಮಿಸಕ್ಕೆ, ಕನ್ನಡ ರಕ್ಸಣಾ ವೇದಿಕೆಯೋರು ಗೌಡಪ್ಪಂಗೆ ಮತ್ತೆ ವೇದಿಕೆಗೆ ಬಂದು ಚಚ್ಚಿ ಹೋದ್ರು. ಯಾಕ್ ಸಾರ್ ಹೊಡಿತಿರೋದು ಅಂದ ಗೌಡಪ್ಪ. ಮಗನೇ ಹಿಂತಿರುಗಿ ನೋಡು ಅಂದ್ರೆ,. ತಮಿಳುನಾಡು ಬಾವುಟ ಇತ್ತು, ನೋಡಿದ್ರೆ ಕಿಸ್ನ ಪಳನಿ ಮನೇಲಿ ಇರೋ ತಮಿಳುನಾಡು ಬಾವುಟ ಅಂಟಿಸಿದ್ದ. ಗೌಡಪ್ಪನ ಹೆಂಡರು ಬಸಮ್ಮ ಮಾತ್ರ ಅಂಗೇ ಸ್ಮೈಲ್ ಕೊಡ್ತಾನೇ ಇದ್ಲು. ಸಂಜೆ ತಾವ ನಿನ್ನನ್ನ ನೋಡಿ ಐಕ್ಳು, ಹಾಳಾಗ್ತವೆ ನೀನು ಮನೆಗೆ ಹೋಗು ಅಂದ ಗೌಡಪ್ಪ. ಇರಲಿ ಬುಡಿ ಅಂದ್ರು ಅತಿಥಿಗಳು. ಏ ಥೂ
ಸರಿ ಎಂದಿನಂತೆ ನನ್ನ ಪ್ರಾರ್ಥನೆ. ಕನ್ನಡವನ್ನ ಉಳಿಸಿ. ಕನ್ನಡವನ್ನ ಬೆಳಸಿ. ಆದರೆ ಕನ್ನಡವನ್ನ ಕನ್ನಡವಾಗಿಯೇ ಉಳಿಸಿ, ಏನಲಾ ಇದು ಪ್ರಾರ್ಥನೆ, ವಾಟಾಳ್ ನಾಗರಾಜ್ ಕಪ್ಪು ಕನ್ನಡಕ ಅಂಗೇ ಟೋಪಿ ಹಾಕ್ಕಂಡು ಮಾತಾಡ್ತದಂಗೆ ಆಯ್ತಲಾ ಅಂದ ಗೌಡಪ್ಪ. ಸರಿ ಇದೀಗ ಗೌಡಪ್ಪನವರಿಂದ ಭಾಸಣ, ಅಂತಿದ್ದಾಗೆನೇ ಐಕ್ಳು ಚಪ್ಪಾಲೆ ಹೊಡಿದ್ವು. ಯಾಕ್ರಲಾ, ನಿಮ್ಮ ಭಾಸಣ ಮುಗೀತು ಅಂದ್ರೆ ಕಾರ್ಯಕ್ರಮ ಮುಗೀತು ಅಂತಾ ಅಂದ ಸುಬ್ಬ. ಸರೀ ಗೌಡಪ್ಪ ಭಾಸಣ ಸುರು ಹಚ್ಕಂಡ. ನಾನ್ ಒರು ದಡವೇ ಸೊನ್ನ ನೂರು ದಡವೇ ಸೊನ್ನ ಮಾದರಿ ಅಂತಾ ಭಾಸಣ ಸುರು ಮಾಡ್ತಿದ್ದಂಗೆನೇ ಮತ್ತೆ ಕನ್ನಡ ರಕ್ಸಣಾ ವೇದಿಕೆಯೋರು ನಾಯಿ ಹೊಡೆದಂಗೆ ಗೌಡಪ್ಪಂಗೆ ಹೊಡೆದ್ರು. ಮೂಗು ಬಾಯ್ನಾಗೆ ರಕ್ತ, ನಮ್ಮ ಫಸ್ಟ್ ಏಯ್ಡ್ ಬಾಕ್ಸ್್ನಲ್ಲಿ ನೋಡಿದ್ರೆ ಅರಿಸಿನ ಖಾಲಿ. ಎಲ್ರೋ ಅರಿಸಿನ, ಅಣ್ಣಾ ಸಕ್ತಿ ಬ್ರಾಂಡ್ ಅರಿಸಿನ ಸಾನೇ ದುಬಾರಿ ಆಗೈತೆ, ದೀಪಾವಳಿ ಹಬ್ಬಕ್ಕೆ ಸೆಟ್ರು ಅಂಗಡೀಲಿ ಡಿಸ್ಕೌಂಟ್ ಮಡಗವ್ರೆ, ಅದಕ್ಕೆ ನಾವು ಅಂಗಡಿಯಿಂದ ತರದೇ ಬಂದ್ವಿ ಅಂದ ಸೀನ. ಕಡೆಗೆ ಕಿಸ್ನ ಪಂಚೆಗೆ ಹಚ್ಚಿದ್ದ ಅರಿಸಿನನೇ ಗೌಡಪ್ಪನ ಮುಖಕ್ಕೆ ಒತ್ತಿದ್ವಿ. ರಕ್ತ ಮತ್ತಷ್ಟು ಜಾಸ್ತಿಯಾಯ್ತು. ಯಾಕ್ರಲಾ ಅಂದ ಸುಬ್ಬ. ಲೇ ಪಂಚೆ ಗಂಜಿ ಇನ್ನೂ ಸರಿಯಾಗಿ ಹೋಗಿಲ್ಲ ಕಲಾ, ದೋಬಿ ಒಗೆದಿಲ್ಲಾ ಕಲಾ ಅಂದ ಕಿಸ್ನ.
ಸರಿ ಗೌಡಪ್ಪ ಯಾಕ್ರಲಾ ಹೊಡೆದೀರಿ ಅಂದ್ರೆ ನೀನು ತಮಿಳು ಮಾತಾಡ್ತಾ ಇದೀಯಾ ಅದಕ್ಕೆ ಅಂದ್ವು ಕರವೇಯೋರು. ಲೇ ಪೂರ್ತಿ ಭಾಸಣ ಕೇಳ್ರಲಾ ಅಂದು ರಜನಿಕಾಂತ್ ಭಾಷಾ ಸ್ಟೋರಿ ಹೇಳ್ದ. ಲೇ ರಂಗ ಮೈಕ್ ಸೆಟ್ ಆಫ್ ಆಗೈತೆ ಅಂತ ಗೌಡಪ್ಪ ಹೇಳ್ತದ್ದಾಗೆನೇ ರಂಗ ಸರಿ ಮಾಡೋನು. ಇದು ಹೆಂಗಲಾ ಗೌಡಪ್ಪಂಗೆ ಗೊತ್ತಾಯ್ತದೆ ಅಂತಿದ್ದ ಸೀನಿ. ಲೇ ಅವನ ಹಿಂದೆ ಮೈಕ್ ಸೆಟ್ ಹಾರ್ನ್ ಮಡಗವ್ನೆ. ಆ ಸವಂಡಿಗೆ ಅವನ ಕೂದಲು ಹಾರ್ತದೆ ಆವಾಗ ಗೊತ್ತಾಯ್ತದೆ ಅಂದ ಸುಬ್ಬ. ಗೌಡಪ್ಪ ಒಂತರಾ ನ್ಯೂಟನ್ ಬುಡಲಾ ಅಂದ ಸೀನ. ಭಾಸೆ ವೇಸ ದೋಸೆ ಸುದ್ದವಾಗಿದ್ದರೆ ಮಾತ್ರ ನಮಗೆ ಬೆಲೆ ಇರ್ತದೆ . ನಮ್ಮ ಚಾ ಅಂಗಡಿ ನಿಂಗ, ಟೀ ಸ್ಟಾಲು ಅಂತ ಹಾಕವ್ನೆ, ಮೊದಲು ಅವನ ಅಂಗಡಿಗೆ ನಾಳೆ ದಾಳಿ ಮಾಡ್ರಿ ಅಂದ ಗೌಡಪ್ಪ. ಚಾ ಕೊಡಕ್ಕೆ ಅಂತ ನಿಂತಿದ್ದ ನಿಂಗ, ಇನ್ನು ಧರ್ಮದೇಟು ಬೀಳ್ತದೆ ಅಂತ ಓಡಿ ಹೋಗಿ ಬೋರ್ಡ್ ಮುಚ್ಚಿಟ್ಟ, ಕತ್ತಲಾಗೆ ಶೌಚಾಲಯ ಅಂತ ಜನ ಅವನ ಅಂಗಡೀಲಿ ಏನೇನೋ ಮಾಡಿದ್ವು.
ಸರಿ ಬೆಳಗ್ಗೆ ನಿಂಗನ ಚಾ ಅಂಗಡಿ ತಾವ ಹೋಗಂಗೆ ಇರ್ಲಿಲ್ಲ. ಯಾಕಲಾ ನಿಂಗ. ಲೇ ಇದೆಲ್ಲಾ ಗೌಡಪ್ಪನ ಐಡಿರೀಯಾ ಕಲಾ ಅಂತ ಉರ್ಕಂತಿದ್ದ ನಿಂಗ. ಅವನ ಮನೆ ಯಕ್ಕಟ್ಟು ಹೋಗ, ಮುಂಡಾ ಮೋಚ ಅಂತಿದ್ದ. ಅಟೊತ್ತಿಗೆ ಗೌಡಪ್ಪ ಬಂದ. ಗೌಡಂಗೆ ಸಾನೇ ಸುಗರ್ ಹಾಕಿ ಚಾ ಕೊಟ್ಟಿದ್ದ. ಗೌಡಪ್ಪ ಒಂದು ವಾರ ನಿಂಗನ ಅಂಗಡಿ ತಾವ ಬಂದೇ ಇರ್ಲಿಲ್ಲ, ಯಾಕೆ ಅಂದ್ರೆ. ಸುಗರ್ 700 ಪಾಯಿಂಟ್ ಆಗೈತೆ ಕಲಾ ಇನ್ನು ಮ್ಯಾಕೆ ನಿಂಗನ ಅಂಗಡಿ ಸುದ್ದಿ ಮಾತಾಡಕ್ಕೆ ಇಲ್ಲಾ ಅನ್ನೋನು ಗೌಡಪ್ಪ.