ಕನ್ನಡ ವಿಕಿಪೀಡಿಯದಲ್ಲಿ : ಇಂಗ್ಲಿಷ್ ಪದಗಳಿಗೆ ತಕ್ಕುದಾದ ಕನ್ನಡ ಪದಗಳು

ಕನ್ನಡ ವಿಕಿಪೀಡಿಯದಲ್ಲಿ : ಇಂಗ್ಲಿಷ್ ಪದಗಳಿಗೆ ತಕ್ಕುದಾದ ಕನ್ನಡ ಪದಗಳು

ನೆನ್ನೆಯ (೨೪/೧೨/೨೦೧೦) ಕನ್ನಡ ವಿಕಿ ಸಮ್ಮೇಲನದಲ್ಲಿ ಭಾಷಾಂತರಿಸುವಾಗ ಇಂಗ್ಲಿಷ್ ಪದಗಳಿಗೆ ತಕ್ಕುದಾದ ಕನ್ನಡಪದಗಳ ಕುರಿತು ಕೊಂಚ ವಿಚಾರ ವಿನಿಮಯವಾಯ್ತು.  ನನಗೆ ಆಗ ನಾನು ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ನೋಡಿದ್ದ ಒಂದು ನಿಘಂಟಿನ ನೆನಪಾಯ್ತು. ಈಗ ಕೊಂಚ ಗೆದ್ದಲು ಹಿಡಿದಿದ್ದರೂ ನಮ್ಮ ತಂದೆಯವರು ಜೋಪಾನವಾಗಿಟ್ಟಿರುವ ಮಣ ಭಾರದ ನಿಘಂಟು ಅಟ್ಟದಲ್ಲಿ ಸಿಕ್ಕಿತು.
ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರು ಸಮಗ್ರ ಇಂಗ್ಲಿಷ್- ಕನ್ನಡ ನಿಘಂಟು ಅತ್ಯಾವಷ್ಯಕ ಎಂದು ನಿರ್ದೇಶಿಸಿದ ಮೇರೆಗೆ ರೂಪುಗೊಂಡ ಈ ನಿಘಂಟಿನ ಪ್ರಕಟಣೆ ೧೯೪೬ರಲ್ಲಿ. ಇದರ ಸಂಪಾದಕ ಮಂಡಲಿ ನೋಡಿ ನೀವೇ ಇದರ ಬೆಲೆಯನ್ನು ಊಹಿಸಿಕೊಳ್ಳಬಹುದು.
ಪ್ರಧಾನ ಸಂಪಾದಕರು ಮತ್ತು ಸಂಪಾದಕಸಮಿತಿಯ ಅಧ್ಯಕ್ಷರು:
ಪ್ರೊ.  ಬಿ. ವೆಂಕಟನಾರಣಪ್ಪ (ರಿಟೈರ್ಡ್ ಪ್ರೊಫೆಸರ್, ಭೌತಶಾಸ್ತ್ರ, ಸೆಂಟ್ರಲ್ ಕಾಲೆಜ್, ಬೆಂಗಳೂರು)
ಎಮ್. ಆರ್. ಶ್ರೀನಿವಾಸಮೂರ್ತಿ (ಮೈಸೂರ್ ಎಜ್ಯುಕೇಶನಲ್ ಸೆರ್ವೀಸ್)

ಸದಸ್ಯರು:
ಡಿ. ವಿ. ಗುಂಡಪ್ಪ
(ಪತ್ರಿಕೋದ್ಯಮಿಗಳು ಮತ್ತು ಕ. ಸಾ. ಪ. ಉಪಾಧ್ಯಕ್ಷರು)
ಬಿ. ಎಂ. ಶ್ರೀಕಂಠಯ್ಯ
(ಇಂಗ್ಲಿಷ್ ಪ್ರೊಫೆಸರ್ ಮತ್ತು ಕನ್ನಡ ಆನರರಿ ಪ್ರೊಫೆಸರ್, ಮೈಸೂರ್ ವಿವಿ)
ತಳುಕಿನ ವೆಂಕಣ್ಣಯ್ಯ
(ಕನ್ನಡ ಪ್ರೊಫೆಸರ್, ಮಹಾರಾಜ ಕಾಲೇಜ್, ಮೈಸೂರ್)
ಏ. ಆರ್. ಕೃಷ್ಣಶಾಸ್ತ್ರಿ
(ಕನ್ನಡ ಪ್ರೊಫೆಸರ್, ಮಹಾರಾಜ ಕಾಲೇಜ್, ಮೈಸೂರ್)
ಸಿ. ಕೆ. ವೆಂಕಟರಾಮಯ್ಯ
(ಕನ್ನಡ ಭಾಷಾಂತರಕಾರರು, ಮೈಸೂರ್ ಸರ್ಕಾರ)
 . . .
ಸಹಾಯಕ ಪಂಡಿತರು:
ಎಲ್. ಗುಂಡಪ್ಪ
ಕೆ. ವಿ. ರಾಘವಾಚಾರ್
ಎಂ. ವಿ. ಸೀತಾರಾಮಯ್ಯ:  

ಇದರ ಮುನ್ನುಡಿಯಲ್ಲಿರುವ ಕೆಲವು ಗಮನಿಸಬೇಕಾದ ಮಾತುಗಳು
". . .ಇಂಡಿಯಾದ ಬಾಷೆಗಳು ಬಳಸಬೇಕಾದ ವೈಜ್ಞಾನಿಕ ಪರಿಭಾಷೆಯನ್ನು ಅಖಿಲ ಭಾರತಕ್ಕೂ ಅನ್ವಯಿಸುವ ತಳಹದಿಯ ಮೇಲೆ ರಚಿಸಬೇಕೆಂದು ಈ ಸಂಪಾದಕ ಮಂಡಲಿ ಅಭಿಪ್ರಾಯ ಪಡುತ್ತದೆ. ಈಗಿನ ವಿದ್ಯಾಭ್ಯಾಸದ ಕ್ರಮದಲ್ಲಿ ವಿಶ್ವವಿದ್ಯಾನಿಲಯಗಳ ಮೆಲಿನ ವ್ಯಾಸಾಂಗ ಕ್ಷೇತ್ರಗಳಲ್ಲಿ ಇಂಗ್ಲಿಷನ್ನು ವಾಹನವಾಗಿಟ್ಟುಕೊಂಡಿರುತ್ತಾರೆ. ಆದ್ದರಿಂದ ಸುಮ್ಮನೆ ಸಂಸ್ಕೃತ ಪದಗಳನ್ನು ಸೃಷ್ಟಿಸುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ."

" . . .ಆದರ್ಶಾತ್ಮಕವಾದ ನಿರ್ದುಷ್ಟ ಪದರೂಪ ಅಥವಾ ಖಚಿತವಾದ ಲಕ್ಷಣ ನಿರೂಪಣೆ-ಇವುಗಳಿಗಿಂತ ಅಡಕ, ಸರಳತೆ ಮತ್ತು ಅರ್ಥ ಸುಲಭತೆ-ಇವು ಮುಖ್ಯವೆಂದು ನಾವು ಪರಿಗಣಿಸಿದೆವು. ಬಳಕೆಯಲ್ಲಿ ಒಂದು ಪದ ಸಿದ್ಧವಾದಾಗ ಅದು ಅನಿಷ್ಕೃಷ್ಟವಾಗಿದ್ದರೂ ಒರಟಾಗಿದ್ದರೂ, ಪಾಂಡಿತ್ಯದ ನಿಷ್ಕೃಷ್ಟತೆಗೆ ಹೆಚ್ಚು ತೃಪ್ತಿಕರವಾದ ಪದವನ್ನು ಕೈಬಿಟ್ಟು ಸಾಮಾನ್ಯವಾಗಿ ಆ ಬಳಕೆಯ ಪದವನ್ನೇ ಉಪಯೋಗಿಸಿದ್ದೇವೆ."

". . .ಹಲವು ಇಂಗ್ಲೀಷು ಪದಗಳಿಗೆ ಇಂಡಿಯದ ಯಾವ ಭಾಷೆಯೂ- ಕಡೆಗೆ ಸಂಸ್ಕೃತ ಭಾಷೆಯು ಕೂಡ- ಸಮಾನಾರ್ಥಕಗಳನ್ನು ಒದಗಿಸಲಾಗದ ಸಂದರ್ಭಗಳು ಅಪರೂಪವೇನಲ್ಲ. ಆದ್ದರಿಂದ ಇಂತಹ ಕೆಲವು ಸಂದರ್ಭಗಳಲ್ಲಿ ಕನ್ನಡದ ಅಕ್ಷರಗಳಲ್ಲಿ ಬರೆದು ಆ ಇಂಗ್ಲಿಷು ಪದಗಳನ್ನೇ ಬಳಕೆಗೆ ತರಬೇಕೆಂದು ಹೇಳುವ ನಿರ್ಬಂದ ಸಂಪಾದಕ ಮಂಡಲಿಗೆ ಒದಗಿತು."

". . . ಈ ನಿಘಂಟು ಸಾಧ್ಯವಾದಷ್ಟು ಪ್ರಾಮಾಣಿಕವಾಗಿಯೂ ಏರ್ಪಡುವಂತೆ ಪರಸ್ಪರ ಸೈರಣೆಯಿಂದಲೂ ಸ್ನೇಹಪೂರ್ವಕವಾದ ವಿಮರ್ಶೆಗಳಿಂದಲೂ ತಮ್ಮೊಂದಿಗೆ ದುಡಿದ ದೊಡ್ಡ ದೊಡ್ಡ ವಿದ್ವಾಂಸರಾದ ಸಂಪಾದಕ ಮಂಡಲಿಯ ಸದಸ್ಯರಿಗೆ ಪ್ರಧಾನ ಸಂಪಾದಕರು ಬಹಳ ಕೃತಜ್ಞರಾಗಿದ್ದಾರೆ."

-ಪ್ರಭು ಮೂರ್ತಿ

Comments