ಕನ್ನಡ ಶಬ್ದ, ನುಡಿಗಟ್ಟು, ಭಾಷೆ
’ಲಿವಿಂಗ್ ಟುಗೆದರ್’ ಎನ್ನುವ ಬದಲಿಗೆ ’ಒಟ್ಟುಳಿಕೆ’ ಎನ್ನಬಹುದೆಂದು ಗಂಗಾಧರ ಶಾಸ್ತ್ರಿ ಎನ್ನುವವರು ಈಚೆಗೆ ದಿನಪತ್ರಿಕೆಯೊಂದರಲ್ಲಿ ಪತ್ರಮುಖೇನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಈ ಅಭಿಪ್ರಾಯ ಒಪ್ಪತಕ್ಕದ್ದಾಗಿದೆ. ಆದರೆ, ’ಉಳಿಕೆ’ ಎಂಬ ಪದವು ’ಉಳಿತಾಯ’ ಎಂಬರ್ಥದಲ್ಲಿ ಬಳಕೆಯಲ್ಲಿರುವುದರಿಂದ ’ಒಟ್ಟುಳಿಕೆ’ ಪದವು ಸರಿಹೋಗದಿದ್ದರೆ, ’ಸಹವಾಸ’, ’ಸಹಬಾಳ್ವೆ’, ’ಸಹಜೀವನ’ ಎಂಬ ಪದಗಳನ್ನು ಬಳಸಬಹುದು. ’ಸಹವಾಸ’ ಪದವು ಬೇರೆ ಅರ್ಥದಲ್ಲಿ ಬಳಕೆಯಲ್ಲಿದ್ದರೂ, ’ಸಹಬಾಳ್ವೆ’, ’ಸಹಜೀವನ’ ಪದಗಳನ್ನು ವಿಶಾಲ ಅರ್ಥವ್ಯಾಪ್ತಿಯಲ್ಲಿ ಬಳಸಲಾಗುತ್ತಿದ್ದರೂ ಈ ಮೂರೂ ಪದಗಳೂ ’ಲಿವಿಂಗ್ ಟುಗೆದರ್’ ಎಂಬ ಧ್ವನಿಯನ್ನೇ ಹೊರಡಿಸುತ್ತವೆ. ಯಾವ ಪದವೇ ಆಗಲಿ, ನುಡಿಗಟ್ಟೇ ಆಗಲಿ ಸತತ ಬಳಕೆಯಿಂದಾಗಿ ಕ್ರಮೇಣ ಜನಮಾನಸಕ್ಕೆ ಒಗ್ಗಬೇಕಷ್ಟೆ.
ನನ್ನ ಮಿತ್ರ, ಜನಪ್ರಿಯ ಲೇಖಕ, ಅಂಕಣಕಾರ ನಾಗೇಶ ಹೆಗಡೆ ಅವರು ’ಕಾಕತಾಳೀಯ’ ಎಂಬ ಪದಕ್ಕೆ ಪರ್ಯಾಯಪದವೊಂದನ್ನು ಸೂಚಿಸುವಂತೆ ಈಚೆಗೆ ನನ್ನನ್ನು ಕೇಳಿದರು. ಆಗ ನಾನು ’ಒಟ್ಟುಜ್ಜುಗ’ ಎಂದೊಂದು ಪದಜೋಡಣೆ ಮಾಡಿ ಅವರಿಗೆ ತಿಳಿಸಿದೆ. ಅದು ಅವರಿಗೆ ಒಪ್ಪಿಗೆಯಾಯಿತು. ಅರ್ಥದಲ್ಲಿ ಮತ್ತು ವ್ಯಾಪ್ತಿಯಲ್ಲಿ ಅದು ’ಕಾಕತಾಳೀಯ’ ಎಂಬ ಪದಕ್ಕೆ ಯಥಾವತ್ ಹೋಲದಿದ್ದರೂ ’ಉಜ್ಜುಗ’ ಎಂಬ ಪದಕ್ಕೆ ’ಕೆಲಸ’, ’ಆರಂಭ’ ಈ ಎರಡು ಅರ್ಥಗಳಿರುವುದರಿಂದ ’ಒಟ್ಟುಜ್ಜುಗ’ ಪದವು ಸತತ ಬಳಕೆಯಿಂದ ಕ್ರಮೇಣ ’ಕಾಕತಾಳೀಯ’ ಎಂಬ ಪದಕ್ಕೆ ಪರ್ಯಾಯಪದವಾಗಿ ಜನಮಾನಸದಲ್ಲಿ ನೆಲೆನಿಲ್ಲುವುದರಲ್ಲಿ ಅನುಮಾನವಿಲ್ಲ.
ಹೀಗೆ ನಾವು ಅನೇಕ ಆಂಗ್ಲ ಭಾಷೆಯ ನುಡಿಗಟ್ಟುಗಳಿಗೆ ಮತ್ತು ಸಂಸ್ಕೃತಭಾರದಿಂದ ಕುಸಿಯುವ ’ಕನ್ನಡ’ ನುಡಿಗಟ್ಟುಗಳಿಗೆ ಸರಳ ಕನ್ನಡದಲ್ಲಿ ಅಥವಾ ಕನ್ನಡ ಮತ್ತು ಸರಳಸಂಸ್ಕೃತಜನ್ಯ ಕನ್ನಡ ಇವುಗಳ ಪ್ರಚಲಿತ ಸರಳರೂಪಗಳ ಮಿಶ್ರಣದಲ್ಲಿ ಪರ್ಯಾಯಪದಗಳನ್ನು ಸೃಷ್ಟಿಸಿ ಬಳಕೆಗೆ ತರಬಹುದು. ಇದರಿಂದಾಗಿ ಕನ್ನಡ ಬೆಳೆಯುತ್ತದೆ.
ಅದೇ ವೇಳೆ, ’ಬಸ್/ಬಸ್ಸು, ಪೆನ್/ಪೆನ್ನು, ಸಿನೆಮಾ, ಮೆನೇಜರ್, ವಾಕಿಂಗ್.....’, ಹೀಗೆ ಕನ್ನಡವೇ ಆಗಿಹೋಗಿರುವ ಸಾವಿರಾರು ಆಂಗ್ಲ ಪದಗಳಿಗೆ ಕನ್ನಡದ ಮಾನ್ಯತೆ ನೀಡಿ ಕನ್ನಡ ಶಬ್ದಕೋಶದಲ್ಲಿ ಸೇರಿಸುವುದರಿಂದಲೂ ಕನ್ನಡ ಭಾಷಾಸಂಪತ್ತು ಅಧಿಕೃತವಾಗಿ ಇನ್ನಷ್ಟು ಶ್ರೀಮಂತವಾದಂತಾಗುತ್ತದೆ. ಆಂಗ್ಲ ಭಾಷೆಯು ಬೆಳೆದದ್ದು ಹೀಗೇ ಅಲ್ಲವೆ?
ಕನ್ನಡಿಗರಾದ ನಾವು, ತೀರಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ, ಯಾರೊಡನೆಯೇ ಆಗಲಿ ಅನ್ಯ ಭಾಷೆಗಳಲ್ಲಿ ಮಾತನಾಡುವುದು ಬೇಡ; ಇಂಗ್ಲಿಷ್ನ ವಾಕ್ಯಗಳನ್ನು ಬಳಸುವುದು ಬೇಡ; ಬೆಂಗಳೂರಿನ ಎಫ್.ಎಂ. ರೇಡಿಯೋ ನಿರೂಪಕರಹಾಗೆ ಇಂಗ್ಲಿಷ್ಮಯವಾದ ಅಧ್ವಾನದ ಕನ್ನಡ ಮಾತಾಡುವುದು ಎಂದಿಗೂ ಬೇಡ; ಆದರೆ, ಮೇಲೆ ಉದಾಹರಿಸಿದಂಥ, ಕನ್ನಡವೇ ಆಗಿಹೋಗಿರುವ ಇಂಗ್ಲಿಷ್ ಪದಗಳನ್ನು ಮಾತ್ರ, ಅವಶ್ಯಕತೆ ಮನಗಂಡು ಬಳಸಿದರೆ ತಪ್ಪಿಲ್ಲ. ಅದೇ ವೇಳೆ, ’ಒಟ್ಟುಳಿಕೆ’, ’ಒಟ್ಟುಜ್ಜುಗ’ಗಳಂಥ ಇನ್ನಷ್ಟು ನುಡಿಗಳನ್ನು ಸೃಷ್ಟಿಸಿ ಬಳಕೆಗೆ ತರುವುದುತ್ತಮ.
ಹೀಗೆ ಸೃಷ್ಟಿಸುವಾಗ, ’ಕಶೇರುಕ’, ’ಅಕಶೇರುಕ’, ’ಅಧೀಕ್ಷಕ ಅಭಿಯಂತರ’.....ಇಂಥ ಕಬ್ಬಿಣದ ಕಡಲೆಗಳನ್ನು ಮಾತ್ರ ಇನ್ನುಮುಂದೆ ಸೃಷ್ಟಿಸದಿರೋಣ. ಈ ಪದಗಳ ಬದಲಿಗೆ, ’ಬೆನ್ನೆಲುಬುಳ್ಳದ್ದು (ಬೆನ್ನೆಲುಬುಳ್ಳ ಜೀವಿ)’, ’ಬೆನ್ನೆಲುಬಿಲ್ಲದ್ದು (ಬೆನ್ನೆಲುಬಿಲ್ಲದ ಜೀವಿ)’, ’ಸೂಪರ್ಡೆಂಟ್ ಇಂಜಿನೀರ್ (ಸೂಪರಿಂಟೆಂಡಿಂಗ್ ಎಂಜಿನಿಯರ್)’ ಎಂದು ಹೇಳುವುದೇ ಎಷ್ಟೋ ಮೇಲೆನಿಸುವುದಿಲ್ಲವೆ?