ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವಚನಸಾಹಿತ್ಯ
ಪ್ರಪ್ರಥಮವಾಗಿ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನಾಯಕತ್ವದಲ್ಲಿ ಜನಸಾಮಾನ್ಯರ ಧ್ವನಿಯಾಗಿ ಜನ ಬದುಕಲೆಂದೇ ಉದಯವಾದ ಸಾಹಿತ್ಯ ವಚನ ಸಾಹಿತ್ಯ. ಅವರೊಳಗಿರುವ ದೇವರನ್ನು ಅವರೇ ಮನದುಂಬಿ ಪೂಜಿಸುವ ಸ್ವಾತಂತ್ರ್ಯ ಕೊಟ್ಟ ಶ್ರೇಯಸ್ಸು ವಚನ ಸಾಹಿತ್ಯಕ್ಕಿದೆ. ಸಾಹಿತ್ಯ ಸೃಷ್ಟಿಸುವ ಉದ್ದೇಶದಿಂದಲೇ ವಚನಸಾಹಿತ್ಯ ಕನ್ನಡ ಸಾಹಿತ್ಯವನ್ನೇ ಅತ್ಯಂತ ಶ್ರೀಮಂತಗೊಳಿಸಿದ್ದು ವಚನಸಾಹಿತ್ಯ. ಅದು ಎಲ್ಲ ಕಾಲಕ್ಕೂ ಪ್ರಸ್ತುತ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಬಸವಾದಿ ಪ್ರಥಮರಿಗಿಂತ ಮುಂಚಿತವಾಗಿ ರಾಜ ಮಹಾರಾಜರ ಕುರಿತು ಹೊಗಳಿ ಬರೆಯುವುದಷ್ಟೇ ಸಾಹಿತ್ಯದ ಕಾರ್ಯವಾಗಿತ್ತು. ವಚನಗಳು ಹಿಂದಿನ ಋಷಿಮುನಿಗಳಂತೆ, ಕಾವ್ಯಪುರಾಣಗಳಂತೆ ಒಂದೇ ಕಡೆ ಕೂತು ರಚನೆ ಮಾಡುವುದು ಅಲ್ಲ. ತಮ್ಮ ಅಂತರಂಗದ ಅನುಭಾವದಿಂದ ಹೊರಹೊಮ್ಮುವ ಹೃದಯಗೀತೆಗಳು ವಚನಗಳು. ಕನ್ನಡ ಸಾಹಿತ್ಯದಲ್ಲಿ ಯಾವ ಪ್ರಕಾರಕ್ಕೂ ಹೋಲದ ವಿಶಿಷ್ಟವಾದ ಹೊಸದೊಂದು ಪ್ರಕಾರದ ವಚನ ಸಾಹಿತ್ಯವನ್ನು ಕೊಟ್ಟ ಶ್ರೇಯಸ್ಸು ಶರಣರದು. ವಚನ ಸಾಹಿತ್ಯ ಎರವಲು ತಂದದ್ದಲ್ಲ. ಅದು ಕನ್ನಡದ ಸೊತ್ತು. ವಚನಕಾರರು ಅಚ್ಚಕನ್ನಡದ ಬೇಸಾಯಗಾರರು.
ಕ್ರೈಸ್ತರಿಗೆ ಬೈಬಲ್ ಇದ್ದ ಹಾಗೆ, ಮುಸಲ್ಮಾನರಿಗೆ ಕುರಾನ್ ಇದ್ದ ಹಾಗೆ ಲಿಂಗಾಯತ ಧರ್ಮಿಯರಿಗೆ ವಚನ ಸಾಹಿತ್ಯ ಇದೆ ಮುಂದೆ ಬರುವ ಹರಿಹರ ಕವಿಯಿಂದ ಹಿಡಿದು ಎಡೆಯೂರು ಸಿದ್ಧಲಿಂಗೇಶ್ವರರು, ಷಣ್ಮುಖ ಶಿವಯೋಗಿಗಳು ಮುಂತಾದ ಶರಣರ ಸಾಹಿತ್ಯವೂ ಸಹಿತ ವಚನ ಸಾಹಿತ್ಯ ಪರಂಪರೆಯನ್ನೇ ಪೂರಕವಾಗಿ ಪ್ರಚಾರ ಮಾಡುತ್ತ ಪ್ರಸಾರ ಮಾಡುತ್ತ ಲಿಂಗಾಯತ ಸಂಸ್ಕೃತಿಯನ್ನು ಕಾಯ್ದುಕೊಂಡು ಬರಲು ಕಾರಣವಾಗಿದೆ. ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ ಎಂದಿದ್ದಾರೆ. ಅನುಭವ ಮಂಟಪದ ಮೂಲಕ ಮಾನವೀಯ ಸೇವೆಗೆ, ಸಾಮಾಜಿಕ ಬದಲಾವಣೆಯ ಮೂಲಕ ಕಲ್ಯಾಣ ರಾಜ್ಯ ನಿರ್ಮಾಣ ಮಾಡಿ ತೋರಿಸಿದ್ದು ಲಿಂಗಾಯತ ಧರ್ಮ.
ಲಿಂಗಾಯತ ಧರ್ಮದಲ್ಲಿ ಬಹುದೇವೋಪಾಸನೆ, ತೀರ್ಥಯಾತ್ರೆ ಮುಂತಾದ ಕೆಲವು ವೈದಿಕಾಚರಣಿ ನುಸುಳಿದ್ದಕ್ಕೆ ಪ್ರಮುಖ ಕಾರಣವೆಂದರೆ ವಚನ ಸಾಹಿತ್ಯ. ವಚನ ಸಾಹಿತ್ಯದ ಪಿತಾಮಹ ಡಾ. ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯ ಹೊರತಂದು ಮಹದುಪಕಾರ ಮಾಡಿದ್ದಾರೆ. ವಚನ ಸಾಹಿತ್ಯಕ್ಕಾಗಿ ತಮ್ಮನ್ನು ತಾವೇ ಅರ್ಪಿಸಿ ಕೊಂಡಿದ್ದಾರೆ. ಇಂದು ಮತ್ತೆ ವಚನ ಸಾಹಿತ್ಯ ಪ್ರಚಾರ-ಪ್ರಸಾರ ಭರದಿಂದ ಸಾಗುತ್ತಿದೆ. ಅನೇಕ ಮಠಗಳು ಈ ದಿಶೆಯಲ್ಲಿ ವಚನ ಸಾಹಿತ್ಯದ ಪ್ರಸಾರಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡಿವೆ. ಇನ್ನು ಬಹಳಷ್ಟು ಮಠಗಳು ವೈದಿಕ ಸಂಸ್ಕೃತಿಯಿಂದ ಹೊರಬಂದು ವಚನ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕಾಗಿದೆ, ಒಪ್ಪಿಕೊಳ್ಳಬೇಕಾಗಿದೆ. ನಮಗೆ ವಚನಗಳೇ ಮಂತ್ರಗಳು, ವಚನಗಳೇ ಸರ್ವಸ್ವ, ವಚನಗಳೇ ನಮ್ಮ ಸಂಪತ್ತು. ಎಲ್ಲಾ ರಂಗಗಳಲ್ಲೂ ವಚನ ಸಾಹಿತ್ಯದ ಪ್ರಚಾರ-ಪ್ರಸಾರ ಭರದಿಂದ ನಡೆಯಬೇಕು.
ಇಂದು ವಚನ ಸಾಹಿತ್ಯ ಧರ್ಮಗ್ರಂಥದ ಕೊಂಡಿ ಲಿಂಗಾಯತ ಸಮಾಜದಿಂದ ಕಳಚಿದ್ದರಿಂದಲೇ ಅನ್ಯ ವೈದಿಕ ಆಚರಣೆಗಳು ಒಳಗೆ ನುಸುಳಿಕೊಂಡಿವೆ. ಅದರ ಶುದ್ಧೀಕರಣವಾಗಬೇಕಾದರೆ ಮತ್ತೆ ವಚನ ಸಾಹಿತ್ಯ ನಮ್ಮ ಕಣ ಕಣದಲ್ಲಿ ಹರಿಯಬೇಕು. ವಿಶ್ವಗುರು ಬಸವಣ್ಣನವರು ವಚನಗಳ ಮಹತ್ವದ ಕುರಿತು ಈ ರೀತಿಯಾಗಿ ಹೇಳುತ್ತಾರೆ.
ಆದ್ಯರ ವಚನ ಪುರುಷ ಕಂಡಣ್ಣಾ
ಸದಾಶಿವನೆಂಬ ಲಿಂಗವ ನಂಬುವುದು
ನಂಬಲೊಡನೆ ನೀ ವಿಜಯಿ ಕಂಡಯ್ಯಾ
ಅಧರಕ್ಕೆ ಕಹಿ ಉದರಕ್ಕೆ ಸಿಹಿ
ಕೂಡಲಸಂಗನ ಶರಣರ ವಚನ ಬೇವು ಸವಿದಂತೆ.
ವಚನಗಳು ಶ್ರದ್ಧೆಯಿಂದ ನಂಬಿದಾಗ, ನಾವು ಜೀವನದಲ್ಲಿ ವಿಜಯಶಾಲಿಗಳಾಗುವುದು ಖಚಿತ ಎಂಬ ವಿಶ್ವಾಸ ಮೂಡಿಸುತ್ತಾರೆ. ಪರುಷಮಣಿ ಹೇಗೆ ಕಬ್ಬಿಣವನ್ನು ಬಂಗಾರವನ್ನಾಗಿ ಪರಿವರ್ತನೆ ಮಾಡುತ್ತದೆಯೋ ಅದೇ ರೀತಿ ವಚನಗಳು ನಮ್ಮ ಅಂತರಂಗದಲ್ಲಿರುವ ಅಜ್ಞಾನದ ಕತ್ತಲೆ ಕಳೆದು ಜ್ಞಾನಜ್ಯೋತಿ ಹೊತ್ತಿಸುತ್ತವೆ. ಬೇವು ಬಾಯಿಗೆ ಕಹಿ ಎನಿಸಿದರೂ ನಮ್ಮ ಆರೋಗ್ಯಕ್ಕೆ ಹಿತವಾಗಿರುತ್ತದೆ. ಅದೇ ರೀತಿಯಾಗಿ ಮೂಢನಂಬಿಕೆಗಳು, ಕಂದಾಚಾರಗಳು, ಅರ್ಥವಿಲ್ಲದ ಸಂಪ್ರದಾಯಗಳು ಬಿಡಲಿಕ್ಕೆ ಕಷ್ಟವಾದರೂ ಚಿಂತೆಯಿಲ್ಲ, ಅವುಗಳನ್ನು ಬಿಟ್ಟು ವಚನಗಳ ಆಚರಣೆ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ವಿಜಯಶಾಲಿಗಳಾಗುವಲ್ಲಿ ಸಂದೇಹವೇ ಇಲ್ಲ.
ವಿಜಯ ಮಹಾಂತೇಶ ಶಿವಯೋಗಿಗಳು ಸದಾಕಾಲ ವಚನಗ್ರಂಥ ತಮ್ಮ ಬೆನ್ನಿಗೆ ಕಟ್ಟಿಕೊಂಡು ಸಂಚರಿಸುತ್ತ, ಜನ ಮನದ ಹೃದಯದಲ್ಲಿ ವಚನ ಧರ್ಮದ ಬೀಜ ಬಿತ್ತಿ, ಜಂಗಮ ಕಾರ್ಯ ಮಾಡಿದ್ದು ಇಂದು ಇತಿಹಾಸವಾಗಿದೆ. ನಾವೆಲ್ಲರೂ ಮತ್ತೊಮ್ಮೆ ವಚನವೈಭವ ಮೆರಸೋಣ. ವಚನಸಂಸ್ಕೃತಿ ಬೆಳೆಸೋಣ. ನಮ್ಮ ಭಾವೀ ಪೀಳಿಗೆಯಲ್ಲಿ ವಚನ ಸಂಸ್ಕೃತಿಯನ್ನು ಅಳವಡಿಸುವಂತೆ ಮಾಡೋಣ. ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥವೆಂದು ಹೃದಯದಲ್ಲಿ ಪ್ರತಿಷ್ಠಾಪಿಸೋಣ.
-ಪರಮೇಶ.ಡಿ.ವಿಳಸಪೂರೆ , ಬೀದರ ಜಿಲ್ಲೆ