ಕನ್ನಡ ಸಾಹಿತ್ಯೋತ್ಸವದಲ್ಲಿ ಲೋಕಾರ್ಪಣೆಗೊಂಡವು ಎಂಟು ಮುತ್ತುಗಳು !

ಕನ್ನಡ ಸಾಹಿತ್ಯೋತ್ಸವದಲ್ಲಿ ಲೋಕಾರ್ಪಣೆಗೊಂಡವು ಎಂಟು ಮುತ್ತುಗಳು !

ಶ್ರೀಮತಿ ರತ್ನಾ ಟಿ. ಕೆ. ಭಟ್ ತಲಂಜೇರಿ ಹಾಗೂ ಹಾ. ಮ. ಸತೀಶ ಇಬ್ಬರೂ ನನ್ನ ಆತ್ಮೀಯರು, ಆಪ್ತರು, ಸಾಹಿತ್ಯ ಚಟುವಟಿಕೆಯ ಒಡನಾಡಿಗಳು. 1990ರ ದಶಕದಲ್ಲಿ ನಾನು ಹುಟ್ಟೂರು ಕುಂಬಳೆಯಲ್ಲಿದ್ದಾಗ ಪರಿಚಯವಾಗಿ ಹತ್ತಿರವಾದವರು.

ಮಂಗಳ ಕಲಾ ಸಾಹಿತ್ಯ ವೇದಿಕೆ - ಎಡನಾಡು ಘಟಕ ಮತ್ತು ದರ್ಪಣ ಸಾಹಿತ್ಯ ವೇದಿಕೆ ಮೂಲಕ ಸೂರಂಬೈಲು ಸಹಿತ ಗಡಿನಾಡು ಕಾಸರಗೋಡಿನ ವಿವಿಧೆಡೆಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾಗ ಬಂಟ್ವಾಳ ತಾಲೂಕಿನ ಗೂಡಿನಬಳಿ ಹಯಾತುಲ್ ಇಸ್ಲಾಮಿಯಾ ಶಾಲೆಯಲ್ಲಿ ಶಿಕ್ಷಕರಾಗಿದ್ದ ಹಾ. ಮ. ಸತೀಶರು ಸಾಹಿತಿಯಾಗಿ ಪ್ರಸಿದ್ಧಿ ಪಡೆಯುತ್ತಿದ್ದವರು. ಇವರ ಬರಹಗಳು ಪ್ರಕಟವಾಗದ ಪತ್ರಿಕೆಗಳೇ ಇರಲಿಲ್ಲ ಎಂಬಷ್ಟು ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದುವು. ಅದೇ ರೀತಿ ಕರಾವಳಿಯಾದ್ಯಂತ ನಡೆಯುತ್ತಿದ್ದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲೂ ಕವಿಯಾಗಿ ಭಾಗವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪರಿಚಯವಾಗಿ ಆತ್ಮೀಯರಾದವರು ಹಾ. ಮ. ಸತೀಶರು. ಕವಿ, ಲೇಖಕ, ವಿಮರ್ಶಕ, ಗಾಯಕ, ವ್ಯಂಗ್ಯಚಿತ್ರಕಾರ, ಸ್ಕೌಟ್ ಶಿಕ್ಷಕ ಹೀಗೆ ಇವರ ಪ್ರತಿಭೆ ಮತ್ತು ಸಾಧನೆ ಬಹುಮುಖವಾದದ್ದು.

ರತ್ನಾ ಟಿ. ಕೆ. ಭಟ್ ತಲಂಜೇರಿ ಇವರು ಹಾ. ಮ. ಸತೀಶರ ಒಡಹುಟ್ಟಿದ ಅಕ್ಕ. ಶಿಕ್ಷಕಿಯಾಗಿ, ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಯಾಗಿ, ವೇಷಧಾರಿಯಾಗಿ ಇವರು ಖ್ಯಾತರು. ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿ, ಅಮೈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ರತ್ನಕ್ಕನವರು ನಿವೃತ್ತರಾದ ಬಳಿಕ ಸಾಹಿತ್ಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕೈಯಾಡಿಸಿ ಸೈ ಎನ್ನಿಸಿಕೊಂಡವರು. ಇಲ್ಲೂ ಸಾಧನೆ ಮೆರೆದವರು.

ರತ್ನಕ್ಕನವರು ಪ್ರಸ್ತುತ ಪುತ್ತೂರಿನಲ್ಲಿ ವಾಸವಾಗಿದ್ದಾರೆ. ಹಾ. ಮ. ಸತೀಶರು ಬೆಂಗಳೂರಿನಲ್ಲಿ ವಾಸವಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ವೃತ್ತಿ ನಿರತರಾಗಿದ್ದಾರೆ. ಇವರಿಬ್ಬರ ನೂತನ ಕೃತಿಗಳ ಬಿಡುಗಡೆ ಸಮಾರಂಭವು ಇತ್ತೀಚೆಗೆ (25-02-2024) ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಯಶಸ್ವಿಯಾಗಿ, ಅವಿಸ್ಮರಣೀಯ ರೀತಿಯಲ್ಲಿ ನಡೆಯಿತು. ಮಂಗಳೂರಿನ ಕಥಾಬಿಂದು ಪ್ರಕಾಶನ ಮತ್ತು ಯುಗಪುರುಷದ ಸಂಯುಕ್ತ ಆಶ್ರಯದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು, ನಾನು ಅಡ್ಮಿನ್ ಆಗಿರುವ "ಕರ್ನಾಟಕ ಬರಹಗಾರರ ವೇದಿಕೆ" ವಾಟ್ಸಾಪ್ ಬಳಗದಲ್ಲಿ ಹಾ. ಮ. ಸತೀಶರು ಹಾಕಿದ ಕೂಡಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕೆಂದು ನಿರ್ಧರಿಸಿದೆ. ಭಾಗವಹಿಸಿದೆ. ಸಭಾ ಕಾರ್ಯಕ್ರಮ ಆರಂಭವಾಗುವ ಮೊದಲೇ ಕಿನ್ನಿಗೋಳಿ ತಲುಪಿದೆ. ಯುಗಪುರುಷ ಸಭಾಂಗಣದ ಮುಂದೆ ಬೈಕ್ ನಿಲ್ಲಿಸಿ ನನ್ನಣ್ಣ ರವಿರಾಜ ದಿವಾಣನ ಜೊತೆ ಸಭಾಂಗಣದೊಳಗೆ ಹೊರಟಾಗ ಅಲ್ಲೇ ಇದ್ದ ರತ್ನಕ್ಕ ಪ್ರೀತಿಯಿಂದ ಎದುರ್ಗೊಂಡದ್ದು ಖುಷಿಕೊಟ್ಟಿತು. ಆತ್ಮೀಯರಾದ ಕವಯಿತ್ರಿ, ಗಾಯಕಿ ಸುಭಾಷಿಣಿಚಂದ್ರ ಹಾಗೂ ಆಪ್ತ ಗೆಳೆಯ ಅಶ್ವಿನ್ ರಾವ್ ಪದವಿನಂಗಡಿ (ನಿರ್ವಾಹಕರು "ಸಂಪದ" ಜಾಲತಾಣ) ಕಾರ್ಯಕ್ರಮಕ್ಕೆ ಆಗಮಿಸಿದ್ದು ನನ್ನ ಖುಷಿಯನ್ನು ಇಮ್ಮಡಿಗೊಳಿಸಿತು. ಕಾರ್ಯಕ್ರಮ ಮುಗಿದ ಬಳಿಕ ಹಿರಿಯ ಬರಹಗಾರರಾದ, ಆತ್ಮೀಯ ಉದಯಕುಮಾರ್ ಹಬ್ಬು ಅವರನ್ನು ಅವರ ಮನೆಗೆ ಹೋಗಿ ಭೇಟಿಯಾಗಲು ಉದ್ಧೇಶಿಸಿದ್ದೆ. ಆದರೆ ಅವರೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರಣ ಅವರೊಂದಿಗೆ ಮಾತನಾಡುವ ನನ್ನ ಆಶಯ ಕಾರ್ಯಕ್ರಮದ ಸಭಾಂಗಣದಲ್ಲಿಯೇ ಈಡೇರಿತು.    

ರತ್ನಾ ಟಿ. ಕೆ. ಭಟ್ ಅವರ ರಾಘವೇಂದ್ರ ಚರಿತ್ರೆ (ಮೊದಲ ಕೃತಿ), ಹೊನ್ನ ರಶ್ಮಿ (ಕವನಗಳು), ಹನಿ ಹನಿಗಳ ನಡುವೆ (ಹಾಯ್ಕು, ಟಂಕಾ, ಅಬಾಬಿ, ಚುಟುಕು, ರುಬಾಯಿ, ಶಿಶುಗೀತೆ ಮತ್ತು ಮಿನಿ ಕವನಗಳು), ಮುಂಜಾವಿನ ಧ್ವನಿ (ಗಝಲ್ ಗಳು), ವಚನ ಬಿಂದು (ಆಧುನಿಕ ವಚನಗಳು) ಎಂಬ ಐದು ಕೃತಿಗಳು ಹಾಗೂ ಸಾಂಕೇತಿಕವಾಗಿ ಮುಕ್ತಕ ರತ್ನ ಎಂಬ ಕೃತಿ ಮತ್ತು ಹಾ. ಮ. ಸತೀಶರ ಕೊನೆಯ ನಿಲ್ದಾಣ (ಕವನಗಳು), ಪ್ರಕೃತಿ ಪ್ರೀತಿ ಬದುಕು (ಗಝಲ್ ಗಳು) ಕೃತಿಗಳನ್ನು ಈ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. " ಕೊನೆಯ ನಿಲ್ದಾಣ" ಹಾ. ಮ. ಸತೀಶರ ಹತ್ತನೇ ಕೃತಿಯಾಗಿರುವುದು ಒಂದು ವಿಶೇಷ. ಪ್ರಕೃತಿ ಪ್ರೀತಿ ಬದುಕು ಹನ್ನೊಂದನೇ ಕೃತಿ. ಕೃತಿಗಳನ್ನು ಬಿಡುಗಡೆ ಮಾಡಿದವರು ಮೂಡಬಿದ್ರೆಯ ಹಿರಿಯ ಉದ್ಯಮಿ ಶ್ರೀಪತಿ ಭಟ್ ಅವರು.

"ಯುಗಪುರುಷ"ದ ಭುವನಾಭಿರಾಮ ಉಡುಪ, ಸಾಹಿತ್ಯ ಸಂಘಟಕ, ಅನುವಾದಕರಾದ ಮೋಹನದಾಸ್ ಸುರತ್ಕಲ್, ಖ್ಯಾತ ವೈದ್ಯರೂ, ಹಿರಿಯ  ಸಾಹಿತಿಗಳೂ ಆದ ಡಾ. ಸುರೇಶ್ ನೆಗಳಗುಳಿ, ಖ್ಯಾತ ಯಕ್ಷಗಾನ ಕಲಾವಿದರಾದ ಸೀತಾರಾಮ ಕುಲಾಲ್ ಕಟೀಲು, ರಾಜೇಂದ್ರ ಕಟೀಲು, ಖ್ಯಾತ ಕಲಾವಿದೆ ಶ್ರೀಮತಿ ಪದ್ಮಶ್ರೀ ಭಟ್ ಅತಿಥಿ ಅಭ್ಯಾಗತರಾಗಿದ್ದರು. ಸುರೇಶ್ ನೆಗಳಗುಳಿಯವರು ಬಿಡುಗಡೆಯಾದ ಕೃತಿಗಳನ್ನು ಸಂಕ್ಷಿಪ್ತವಾಗಿ ಆದರೆ ಅತ್ಯಂತ ಸಮರ್ಥವಾಗಿ ಪರಿಚಯಿಸಿದರು. ಕೃತಿಕಾರರಾದ ರತ್ನಾ ಭಟ್ ಹಾಗೂ ಹಾ. ಮ. ಸತೀಶರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಸನ್ಮಾನ ಸ್ವೀಕರಿಸಿ, ಕೃತಜ್ಞತಾ ನುಡಿಗಳೊಂದಿಗೆ, ತಮ್ಮ ಬದುಕು - ಬರೆಹ - ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. 

ಸನ್ಮಾನ ಸ್ವೀಕರಿಸಿದ ರತ್ನಕ್ಕನವರು ಈ ಸಾಧನೆಗೆ ಬೆನ್ನೆಲುಬಾಗಿ ನಿಂತ ತಮ್ಮ ಪತಿ ಶ್ರೀಯುತ ತಲಂಜೇರಿ ಕೃಷ್ಣ ಭಟ್ ಅವರನ್ನು ನೆನಪಿಕೊಂಡರು. ತುಂಬಿದ ಕುಟುಂಬವೊಂದಕ್ಕೆ ಪಿಯುಸಿ ಓದುತ್ತಿದ್ದ ರತ್ಕಕ್ಕ ಮದುವೆಯಾಗಿ ಬಂದು, ಗಂಡ, ಮನೆ ಮಕ್ಕಳು ಎಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡನೇ ಮಗು ಹುಟ್ಟಿದ ಬಳಿಕ ರತ್ನಕ್ಕನವರ ಪತಿಯೇ ಅವರನ್ನು ಮುಂದಕ್ಕೆ ಓದುವಂತೆ ಪ್ರೇರೇಪಿಸಿ, ಶಿಕ್ಷಕಿಯಾಗಿ ಕೆಲಸದೊರೆಯುವಂತೆ ನೋಡಿಕೊಂಡರು. ಪತ್ನಿಯ ಶ್ರೇಯಸ್ಸಿನಲ್ಲಿ ತಮ್ಮ ಖುಷಿಯನ್ನು ಕಂಡವರು ಕೃಷ್ಣ ಭಟ್ಟರು. ಅವರೊರ್ವ ಆದರ್ಶ ಪತಿ, ತಮ್ಮ ಬೆನ್ನ ಹಿಂದಿನ ಶಕ್ತಿ ಎಂದು ತಮ್ಮ ಹಿಂದಿನ ದಿನಗಳ ಕಥನವನ್ನು ನೆನಪಿಕೊಂಡಾಗ ಅವರ ಕಣ್ಣಿನಲ್ಲಿ ನೀರಿತ್ತು. ಸಭಿಕರ ಕಣ್ಣಾಲಿಗಳೂ ತೇವವಾಗಿದ್ದವು. ವಯೋ ಸಹಜ ಅನಾರೋಗ್ಯದ ಕಾರಣ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.  

ಕಥಾಬಿಂದು ಪ್ರಕಾಶನದ ಸಂಚಾಲಕರೂ, ಪ್ರಕಾಶಕರೂ, ಪ್ರಸಿದ್ಧ ಕಾದಂಬರಿಕಾರರೂ ಆದ ಪಿ. ವಿ. ಪ್ರದೀಪ್ ಕುಮಾರ್ ಅವರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ದಯಾಮಣಿ ಎಕ್ಕಾರು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಟಿಯೂ ನಡೆಯಿತು. ರೇಮಂಡ್ ಡಿಕೂನಾ ತಾಕೊಡೆ, ಜೊಸ್ಸಿ ಪಿಂಟೋ, ಕೃಷ್ಣಾನಂದ ಶೆಟ್ಟಿ ಐಕಳ, ಸುಭಾಷಿಣಿ ಚಂದ್ರ ಬೇಕೂರು, ದೀಪ್ತಿ ರೋಹಿತ್, ಬಿ. ಆರ್. ಕಬಕ ಕಲ್ಲಡ್ಕ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀಮತಿ ಪದ್ಮಶ್ರೀ ಭಟ್ ಇವರ "ವಾಯ್ಸ್ ಆಫ್ ಆರಾಧನಾ" ತಂಡದ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು. ಮಧ್ಯಾಹ್ಮ 2 ಗಂಟೆಯವರೆಗೂ ನಿರಂತರವಾಗಿ ನಡೆದ ಕಾರ್ಯಕ್ರಮಗಳನ್ನು ಸಾಹಿತ್ಯಾಸಕ್ತರು, ಕಲಾರಸಿಕರು ಆಸಕ್ತಿ ಮತ್ತು ಅಭಿಮಾನದಿಂದ ಆಲಿಸುತ್ತಾ ವೀಕ್ಷಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಸೊಗಸಾದ ಭೋಜನ ವ್ಯವಸ್ಥೆಯನ್ನೂ ಸಂಘಟಕರು ಏರ್ಪಡಿಸಿದ್ದರು.

ಚಿತ್ರ ವಿವರ:

೧ ಮತ್ತು ೨. ಗಣ್ಯರ ಅಮೃತಹಸ್ತದಿಂದ ಬಿಡುಗಡೆಯಾಗುತ್ತಿರುವ ಕೃತಿಗಳು

೩. ಹಾ. ಮ. ಸತೀಶರಿಗೆ ಸನ್ಮಾನ

೪. ರತ್ನಾ ಟಿ. ಕೆ. ಭಟ್ ಅವರಿಗೆ ಸನ್ಮಾನ

ಚಿತ್ರ ಮತ್ತು ವರದಿ - ಶ್ರೀರಾಮ ದಿವಾಣ, ಉಡುಪಿ