ಕನ್ಯಾಕುಮಾರಿ ಮತ್ತು ಇತರ ಕಥೆಗಳು

ಕನ್ಯಾಕುಮಾರಿ ಮತ್ತು ಇತರ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು
ಐಬಿಎಚ್ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. 70/-

ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈವಿಧ್ಯಮಯವಾದ 10 ಕತೆಗಳು ಈ ಸಂಗ್ರಹದಲ್ಲಿವೆ. ಹಳ್ಳಿಯ ಬದುಕನ್ನು ತನ್ನ  ಬರಹದಲ್ಲಿ ಸೊಗಸಾಗಿ ಚಿತ್ರಿಸಿದವರು ಇವರು. ಸುಲಲಿತವಾಗಿ ಓದಿಸಿಕೊಂಡು ಹೋಗುವುದೇ ಗೊರೂರರ ಕತೆಗಳ ವಿಶೇಷತೆ. ಜೊತೆಗೆ ಇವು ಸುಮಾರು 60 ವರುಷಗಳ ಮುಂಚೆ ಬರೆದ ಕಥೆಗಳಾದರೂ ಇವೆಲ್ಲದರ ಸಂದೇಶಗಳು ಇಂದಿಗೂ ಪ್ರಸ್ತುತ.

ಮೊದಲನೆಯ ಕತೆ “ಕನ್ಯಾಕುಮಾರಿ”. ಚಂದ್ರವಳ್ಳಿಯ ಶ್ರೀಧರ ಬೆಂಗಳೂರಿನಲ್ಲಿ ಬಿ.ಎ. ಓದುತ್ತಿದ್ದ. ಅವನಿಗೆ ಸಂಗೀತ ಒಲಿದಿತ್ತು. ರಜೆಯಲ್ಲಿ ಹಳ್ಳಿಗೆ ಬಂದಾಗ ಅಲ್ಲಿನ ಶಾಲೆಯ ಹೆಣ್ಣುಮಕ್ಕಳಿಗೆ ಸಂಗೀತ ಕಲಿಸುತ್ತಿದ್ದ. ಅವರಲ್ಲಿ ಒಬ್ಬಾಕೆ ಕಲ್ಯಾಣಿ. ರೂಪದಲ್ಲಿ ಅಪ್ಸರೆ. ಅವಳ ಕಂಠವೂ ಚೆನ್ನಾಗಿತ್ತು. ಶ್ರೀಧರನಿಗೆ ಅವಳಲ್ಲಿ ಅನುರಾಗ ಮೂಡಿತು. ಆಕೆಯ ತಂದೆ ತೀರಿಕೊಂಡಿದ್ದು, ಮಗಳನ್ನು ತಾಯಿ ಕಷ್ಟದಿಂದ ಸಲಹುತ್ತಿದ್ದಳು. ಆ ತಾಯಿಯೊಂದಿಗೆ ಕಲ್ಯಾಣಿಯ ಜೊತೆ ಶ್ರೀಧರ ತನ್ನ ಮದುವೆಯ ಪ್ರಸ್ತಾಪ ಮಾಡಿದಾಗ ಆಕೆ ಒಪ್ಪಿದಳು. ಆದರೆ ಶ್ರೀಧರನ ತಂದೆತಾಯಿ ಸುತಾರಾಂ ಒಪ್ಪಲಿಲ್ಲ. ತನ್ನ ಓದು  ಮುಗಿಸಲಿಕ್ಕಾಗಿ ಶ್ರೀಧರ ಬೆಂಗಳೂರಿಗೆ ಬಂದಾಗ ಕಲ್ಯಾಣಿಗೆ 45 ವರುಷ ವಯಸ್ಸಿನವನ ಜೊತೆ ಮದುವೆ ಮಾಡಲಾಯಿತು.  

ಇದರಿಂದಾಗಿ ತತ್ತರಿಸಿ ಹೋದ ಶ್ರೀಧರ ಊರು ಬಿಟ್ಟು ಹೊರಟ. ಕಾಲುನಡಿಗೆಯಲ್ಲೇ ಹರಿದ್ವಾರ ಸೇರಿದ. ಅಲ್ಲಿ ಆಶ್ರಮದಲ್ಲಿ ಕಠಿಣ ಸಾಧನೆ ಮಾಡಿದ. ತತ್ವಜ್ಞಾನದ ಗ್ರಂಥಗಳನ್ನು ಅಧ್ಯಯನ ಮಾಡಿ ಜ್ಞಾನ ಸಂಪನ್ನನಾದ. ಸಂಗೀತದ ಅಭ್ಯಾಸ ಮುಂದುವರಿಸಿ ಸುಶ್ರಾವ್ಯವಾಗಿ ಹಾಡುವುದನ್ನು ಕರಗತ ಮಾಡಿಕೊಂಡ. ಆದರೆ ಅವನ ಮನಸ್ಸಿಗೆ ಶಾಂತಿ ಸಿಗಲಿಲ್ಲ. ಇದನ್ನು ಗಮನಿಸಿದ ಅವನ ಗುರುಗಳು ಅವನಿಗೆ ದೇಶಾಂತರ ಹೋಗಲು ಸಲಹೆಯಿತ್ತರು. ಹಾಗೆ ಊರೂರು ಸುತ್ತುತ್ತಾ ಶ್ರೀಧರ ಕನ್ಯಾಕುಮಾರಿಗೆ ಬಂದ. ಅಲ್ಲಿನ ವಾತಾವರಣ, ಅಗಾಧ ಸಮುದ್ರದ ಸಾನಿಧ್ಯ ಅವನಿಗೆ ಹಿತವೆನಿಸಿತು. ಒಂದು ದಿನ ತನ್ನ ಪತಿಯೊಂದಿಗೆ ಅಲ್ಲಿಗೆ ಬಂದ ಕಲ್ಯಾಣಿಯನ್ನು ಕಂಡು ಅವನ ಮನಸ್ಸು ಅಲ್ಲೋಲಕಲ್ಲೋಲವಾಯಿತು. ವಿಧಿಯ ಲೀಲೆಗೆ ಏನೆನ್ನಬೇಕು? ಕಲ್ಯಾಣಿ ಮತ್ತು ಅವಳ ಪತಿ ಅಲ್ಲಿ ಸಮುದ್ರದ ಪಾಲಾದರು. ಈಗ ಶ್ರೀಧರನಿಗೆ ಬದುಕಿನಲ್ಲಿ ನಿಜವಾದ ವೈರಾಗ್ಯ  ಮೂಡಿತು. ಆತ ಕಲ್ಯಾಣಿಯ ಪುಟ್ಟ ಮಗಳನ್ನು ಕರೆದುಕೊಂಡು ಕಲ್ಯಾಣಿಯ ಗಂಡನ ಮನೆಯಿದ್ದ ಮಲ್ಲಿಗೆ ಹಳ್ಳಿಗೆ ಬಂದ. ಅಲ್ಲಿನ ಹಿರಿಯರೊಬ್ಬರಿಗೆ ಆ ಮಗುವನ್ನು ಒಪ್ಪಿಸಿ, ಎತ್ತಲೋ ಹೊರಟು ಹೋದ.

ಎರಡನೆಯ ಕತೆ “ಕನ್ನಡ ಮೌಲ್ವಿ” ಕನ್ನಡದಲ್ಲಿ ಪಾಠ ಮಾಡುವ ಮಲ್ವಿಯೊಬ್ಬರ ವೃತ್ತಾಂತವನ್ನು ಸ್ವಾರಸ್ಯಕರವಾಗಿ ತಿಳಿಸುತ್ತದೆ.
ಮೂರನೆಯ ಕತೆ “ಮುಳ್ಳು ಗಿಡ”. ತಾಲೂಕು ಕಚೇರಿಯ ಗುಮಾಸ್ತ ಸೂರಪ್ಪನಿಗೆ ಮೂವತ್ತು ರೂಪಾಯಿ ಸಂಬಳ. ಅವನ ಪತ್ನಿ ತಿರುಮಲಮ್ಮ ಅನಕ್ಷರಸ್ಥೆ. ಹಾಗಾಗಿ ಅವನಿಗೆ ಅವಳ ಬಗ್ಗೆ ತಾತ್ಸಾರ. ನಾಲ್ಕು ಮಕ್ಕಳಾದರೂ ಅವಳೊಂದು ಮುಳ್ಳು ಗಿಡವೆಂದೇ ಭಾವಿಸಿದ್ದ. ಅವನ ಕಚೇರಿಗೆ ಹೈಸ್ಕೂಲು ಸಹಪಾಠಿ ಕೃಷ್ಣಮೂರ್ತಿ ಸಬ್ ಜಡ್ಜ್ ಆಗಿ ಬರುತ್ತಾನೆ. ಕೃಷ್ಣಮೂರ್ತಿಯ ಪತ್ನಿ ಲಲಿತ ಸೂರಪ್ಪನ ಸಹಪಾಠಿಯೇ. ಅವಳನ್ನು ಮದುವೆ ಆಗಬೇಕೆಂಬ ಸೂರಪ್ಪನ ಕನಸು ನನಸಾಗಿರಲಿಲ್ಲ. ಇದೀಗ 450 ರೂಪಾಯಿ ಸಂಬಳ ಪಡೆಯುತ್ತಿರುವ ಕೃಷ್ಣಮೂರ್ತಿಯ ಜೀವನ ಸುಖದ ಸುಪ್ಪತ್ತಿಗೆ ಎಂಬುದು ಸೂರಪ್ಪನ ಯೋಚನೆ. ಅದೊಂದು ದಿನ ಕೃಷ್ಣಮೂರ್ತಿಯ ಮನೆಗೆ ಹೋದ ಸೂರಪ್ಪನು ಕೃಷ್ಣಮೂರ್ತಿ ಮತ್ತು ಪತ್ನಿ ಲಲಿತಳ ಸಂಭಾಷಣೆ ಕೇಳಿಸಿಕೊಳ್ಳುತ್ತಾನೆ. ಆಗ ಅವನಿಗೆ ತಾನೆಷ್ಟು ಅದೃಷ್ಟವಂತ ಎಂದು ಅರಿವಾಗುತ್ತದೆ.

“1942ನೆಯ ಆಗಸ್ಟ್” ನಾಲ್ಕನೆಯ ಕತೆ. 1920ರಿಂದ ಶುರು ಮಾಡಿ, ಹಲವು ಸ್ವಾತಂತ್ರ್ಯ ಹೋರಾಟದ ಸತ್ಯಾಗ್ರಹಗಳ ಕಾಲದಲ್ಲಿ ಇನ್ಸ್-ಪೆಕ್ಟರ್ ಗುಂಡೂರಾಯ ಬ್ರಿಟಿಷ್ ಪ್ರಭುಗಳ ಸೇವೆ ನಡೆಸಿದ್ದ. “ಭಾರತದಿಂದ ತೊಲಗಿ” ಪ್ರತಿಭಟನೆಯ ರುದ್ರನರ್ತನದಲ್ಲಿ ಅವನ ಪ್ರಾಂತ್ಯದ ಮುಖ್ಯ ಪಟ್ಟಣದ ಮದ್ದುಗುಂಡುಗಳ ಉಗ್ರಾಣಕ್ಕೆ ಬೆಂಕಿ ಹಚ್ಚಲಾಯಿತು. ಆಪಾದಿತನನ್ನು ಬಂಧಿಸಿ ಜೈಲಿಗೆ ಹಾಕಿದರೂ ಅವನು ರಾತ್ರಿಯಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಹೋದ. ಅವನ ಮರು ಬಂಧನಕ್ಕಾಗಿ ಪೊಲೀಸ್ ಪಡೆ ಸಜ್ಜಾಯಿತು. ಗುಂಡೂರಾಯನಿಗೆ ದೋಣಿಯಲ್ಲಿ ನದಿ ದಾಟುವ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆ. ಆ ರಾತ್ರಿ, ಕಾನ್-ಸ್ಟೇಬಲುಗಳನ್ನು ಅತ್ತ ಕಳಿಸಿ, ಗುಂಡೂರಾಯ ಒಬ್ಬನೇ ಅಲ್ಲಿ ಕಾವಲು ನಿಂತ - ಆಪಾದಿತನನ್ನು ಬಂಧಿಸಿ, “ಬಹುಮಾನದ ಹಣ”ವನ್ನೆಲ್ಲಾ ತಾನೊಬ್ಬನೇ ಲಪಟಾಯಿಸಬೇಕೆಂದು. ರಾತ್ರಿ ಅಲ್ಲೊಬ್ಬ ಏಕತಾರಿ ಹಿಡಿದ ವ್ಯಕ್ತಿ ಕಂಬಳಿ ಹೊದ್ದು ಬಂದ. ಯಾರೆಂದು ಕೇಳಿದಾಗ, “ನಾನೊಬ್ಬ ಗೋಸಾಯಿ. ಹಾಡು ಹಾಡುತ್ತಾ ದೇಶ ತಿರುಗುತ್ತಿದ್ದೇನೆ” ಎಂದ. ನಡುರಾತ್ರಿಯ ವರೆಗೂ ಆತ ಹಾಡುಗಳನ್ನು ಹಾಡುತ್ತಲೇ ಇದ್ದ. ಇನ್-ಸ್ಪೆಕ್ಟರ್ ಗುಂಡೂರಾಯನಿಗೆ ಅವನೇ ಆಪಾದಿತ ಎಂದು ಅನುಮಾನ ಬಂದರೂ ಅವನು ನಡುರಾತ್ರಿಯಲ್ಲಿ ದೋಣಿ ಹತ್ತಿ ಪಾರಾಗಲು ಬಿಡುವ ವೃತ್ತಾಂತವೇ ಈ ಕತೆ.

ಮುಂದಿನ ಎರಡು ಕಥೆಗಳೂ ಭಗ್ನ ಪ್ರೇಮಿಗಳ ಬದುಕಿನ ಚಿತ್ರಣಗಳು. “ಪುಂಗಿ” ಕತೆಯಲ್ಲಿ ಹರಿಹರಪುರ ಗ್ರಾಮದ ರಂಗಸ್ವಾಮಿಗೆ ಚಂದದ ರೂಪಿನ ಸರೋಜಳ ಮೇಲೆ ಪ್ರೇಮಾಂಕುರ ಆಗಿರುತ್ತದೆ. ಆದರೆ ಸರೋಜಳ ಮದುವೆ ಕರಿಯನಾದ ಉಗ್ರಯ್ಯನ ಜೊತೆ ನಡೆದು ಹೋಗುತ್ತದೆ. ಉಗ್ರಯ್ಯನಿಗೆ ಚಂದದ ಗಿಣಿಯಂತಿರುವ ಪತ್ನಿಯ ಮೇಲೆ ಎಲ್ಲದಕ್ಕೂ ಅನುಮಾನ. ಅವಳಿಗೆ ವಿನಾಕಾರಣ ಬಡಿಯುತ್ತಿರುತ್ತಾನೆ. ಕೊನೆಗೆ, ಪ್ರಿಯಕರ ರಂಗಸ್ವಾಮಿಯ ಒಂದು ಸಲಹೆಯನ್ನು ಜಾಣತನದಿಂದ ಅನುಸರಿಸುವ ಸರೋಜ ಗಂಡ ಉಗ್ರಯ್ಯನನ್ನು ಪುಂಗಿಗೆ ಹೆಡೆಯಾಡಿಸುವ ಹಾವಿನಂತೆ ಬದಲಾಯಿಸಲು ಸಮರ್ಥಳಾಗುತ್ತಾಳೆ. “ತಪ್ಪಿದ ರೈಲು” ಕತೆಯಲ್ಲಿ ಭಗ್ನಪ್ರೇಮಿ ಕಥಾನಾಯಕ ಬೆಂಗಳೂರಿನಲ್ಲಿ ತುಮಕೂರಿನ ರೈಲು ಹತ್ತುತ್ತಾನೆ.  ಆದರೆ ಅವನ ಕೈಯಲ್ಲಿ ಇದ್ದದ್ದು ಪೂನಾದ ರೈಲಿನ ಟಿಕೇಟು. ಅವನು “ತಪ್ಪಾದ ರೈಲು” ಹತ್ತಲು ಕಾರಣ: ಅದರಲ್ಲಿ ಮದುವೆಯಾದ ಅವನ ಪ್ರಿಯತಮೆ ಪತಿಯೊಂದಿಗೆ ಪಯಣಿಸುತ್ತಿದ್ದಳು. ಅವಳಿಗೋಸ್ಕರ ತಂದಿದ್ದ ಬಂಗಾರದ ಸರವನ್ನು ಜಾಣತನದಿಂದ ಜೂಜು ಕಟ್ಟಿ ಅವಳಿಗೆ ತಲಪಿಸಲು ಯಶಸ್ವಿಯಾಗುತ್ತಾನೆ.

ನಂತರದ ಬರಹ “ಜಪ, ತಪ, ಅನುಷ್ಠಾನ”ವನ್ನು ಚೇತೋಹಾರಿಯಾಗಿ ಪ್ರಸ್ತುತಪಡಿಸುತ್ತದೆ. ಮುಂದಿನ ಕತೆ “ಬೆಟ್ಟದ ಮನೆಯಲ್ಲಿ” ಹೆಸರೇ ಸೂಚಿಸುವಂತೆ ಬೆಟ್ಟದಲ್ಲಿ ಮನೆ ಮಾಡಿಕೊಂಡ ಕಥಾನಾಯಕನ ಅನುಭವಗಳ ಚಿತ್ರಣ.

ಅನಂತರದ್ದು ದೀಪಾವಳಿಯ ಬಗೆಗಿನ ಮಾಹಿತಿ ಪೋಣಿಸಿದ ಕಥನ: “ಜಾನಪದ ಜೀವನಕ್ಕೆ ದೀಪಾವಳಿಯ ಸ್ಫೂರ್ತಿ”. ಕೊನೆಯ ಬರಹ “ಒಂದು ಸಂಜೆ”. ಮನೆಯ ಜಗಲಿಯಲ್ಲಿ ಕುಳಿತಿದ್ದಾಗ ಲೇಖಕರ ಮನದಲ್ಲಿ ಮೂಡಿ ಬಂದ ಯೋಚನಾ ಸರಣಿಯ ಚಿತ್ರಣ.