ಕಪಿಧ್ವಜ
‘ಕಪಿಧ್ವಜ ಮೊದಲಾದ ಕೆಲವು ಸತ್ಯಸಾಯೀ ಕತೆಗಳು' ಈ ಕೃತಿಯನ್ನು ರಚಿಸಿದವರು ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರು. ಇವರು ಮಕ್ಕಳ ಸಾಹಿತಿ ಎಂದೂ ಖ್ಯಾತಿಯನ್ನು ಪಡೆದಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ‘Sathya Sai Speaks’ ಸಂಪುಟಗಳಿಂದ ಈ ಕತೆಗಳನ್ನು ಆಯ್ದುಕೊಳ್ಳಲಾಗಿದೆ. ಈ ಕತೆಗಳು ‘ಸುಧಾ’ ಹಾಗೂ ‘ಮಯೂರ' ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿವೆ.
ಕೃತಿಯ ಬಗ್ಗೆ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ತಮ್ಮ ಬೆನ್ನುಡಿಯಲ್ಲಿ “ತಮ್ಮ ಅನ್ಯದುರ್ಲಭ ವ್ಯಕ್ತಿತ್ವ ಮತ್ತು ವೈವಿಧ್ಯತರ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕೆ ಬೆಲೆ ಬಾಳುವ ಬಳುವಳಿಯನ್ನು ಓದಿಸಿರುವ ಮಹನೀಯ ಚೇತನ ಡಾ. ಜಿ.ಪಿ.ರಾಜರತ್ನಂ. ಸುದೀರ್ಘ ಕಾಲದ ಬಹು ವಿಫುಲ ಬರಹಗಳ ಜೊತೆಗೆ ಹಿರಿಯ ಮತ್ತು ನವೋದಿತರ ಲಿಖಾವಟ್ಟುಗಳ ಸತ್ಯ, ಸವಿಗಳನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಮನಗಾಣಿಸುವ ಕೈಂಕರ್ಯವನ್ನು ಕೈಕೊಂಡು ಕೃತಕೃತ್ಯರಾದವರು ಜಿ.ಪಿ.ರಾಜರತ್ನಂ.
ಅವರಿಂದ ರಚಿತವಾದ ಶಿಶು ಸಾಹಿತ್ಯ, ನಾಟಕ ಹಾಗೂ ಇತರ ಗದ್ಯ ಲೇಖನಗಳ ಇಪ್ಪತೈದು ಕೃತಿಗಳು ಇದೀಗ ಬೆಂಗಳೂರಿನ ಸುವಿಖ್ಯಾತ ಸಪ್ನ ಬುಕ್ ಹೌಸ್ ವತಿಯಿಂದ ಪುನಃ ಬೆಳಕು ಕಾಣುತ್ತಿವೆ. ಇಲ್ಲಿನ ಬರಹಗಳಲ್ಲಿ ರಾಜರತ್ನಂ ಅವರ ಹೃದಯಂಗಮ ಶೈಲಿಯ, ಸುಗಮ ಗ್ರಹಿಕೆಯ ಆಪ್ತ ನುಡಿಗಾರಿಕೆಯ ಮೊಹರು ಅಚ್ಚೊತ್ತಿದೆ. ಅವರ ಸರ್ವ ಸಮನ್ವಯ ರೂಪಿ ನಿರ್ಮಲಾಂತಃಕರಣದ ಮುಕ್ತ ಸೆಲೆಯ ಗಂಡು ಧ್ವನಿ ಅನುರಣಿಸಿದೆ.
ಜಿ.ಪಿ.ರಾಜರತ್ನಂ ವಿರಚಿತ ಇನ್ನೂರ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತರುವ ಗುರುತರ ಹಾಗೂ ಸಾಹಸಮಯ ಯೋಜನೆಯನ್ನು ಸಪ್ನ ಬುಕ್ ಹೌಸ್ ಹಮ್ಮಿಕೊಂಡಿರುವುದು ಅಭಿನಂದನೀಯ ಸಂಗತಿ. ಕನ್ನಡದ ರತ್ನಪ್ರಾಯ ಸಾಹಿತ್ಯ ಪರಿಚಾರಕನ ಕೃತಿಗಳಿಗೆ ಮರುಜೀವ ಹಾಗೂ ಪ್ರಸಾರವನ್ನು ಒದಗಿಸಲಿರುವ ಈ ಪ್ರಕಾಶನ ಸಂಸ್ಥೆಗೆ ಅಮಿತ ಯಶಸ್ಸನ್ನು ಹಾರೈಸುತ್ತೇನೆ" ಎಂದು ಬರೆದಿದ್ದಾರೆ.
ಈ ಪುಸ್ತಕದಲ್ಲಿ ಮಕ್ಕಳಿಗೆ ಮುದ ನೀಡಬಹುದಾದ ೩೩ ಪುಟ್ಟ ಪುಟ್ಟ ಕಥೆಗಳಿವೆ. ಕಪಿಧ್ವಜ, ಶಬರಿ, ಶಿಶುಪಾಲ, ಶ್ರೀಕೃಷ್ಣನ ಇಕ್ಕಟ್ಟು, ಶ್ರೀರಾಮನ ಸೇವಕ ಮುಂತಾದ ಪೌರಾಣಿಕ ಕಥೆಗಳನ್ನು ಓದಿ ಮಕ್ಕಳಿಗೆ ಹೇಳಬಹುದು. ಪುಟ್ಟ ಮಕ್ಕಳೂ ಸುಲಭವಾಗಿ ಈ ಕಥೆಗಳನ್ನು ಓದಿಕೊಳ್ಳಬಹುದು. ಸುಮಾರು ೧೧೦ ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ಸರಾಗವಾಗಿ ಓದಿ ಮುಗಿಸಬಹುದಾಗಿದೆ.