ಕಪ್ಪು ಬಿಳುಪು ಈಗ ವರ್ಣರಂಜಿತ…

ಕಪ್ಪು ಬಿಳುಪು ಈಗ ವರ್ಣರಂಜಿತ…

ಈಗಾಗಲೇ ನಾವು ನೆರಳಚ್ಚು ಯಂತ್ರ (ಫೋಟೋ ಕಾಪಿ) ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವ ಝೆರಾಕ್ಸ್ ಮೆಶೀನ್ ಬಗ್ಗೆ ಹಿಂದಿನ ಲೇಖನಗಳಲ್ಲಿ ತಿಳಿದುಕೊಂಡಿದ್ದೇವೆ. ಆ ಯಂತ್ರದ ಆವಿಷ್ಕಾರ, ನಂತರದ ಪ್ರಗತಿ ಬಗ್ಗೆ ಮಾಹಿತಿಯನ್ನು ಅರಿತಿದ್ದೇವೆ. ಆ ಸಮಯದಲ್ಲಿ ತೆಗೆಯುತ್ತಿದ್ದ ಪ್ರತಿಗಳು ಕೇವಲ ಕಪ್ಪು ಬಿಳುಪಿನದ್ದಾಗಿದ್ದವು. ನಿಮಗೇ ಗೊತ್ತಿರಬಹುದು, ಆಗ ನಾವು ಪ್ರತಿ ತೆಗೆಯುತ್ತಿದ್ದ ವರ್ಣ ರಂಜಿತ ಫೊಟೋಗಳೂ ಕಪ್ಪು ಬಿಳುಪು ಬಣ್ಣದಲ್ಲೇ ಬರುತ್ತಿದ್ದವು. ಆ ಸಮಯ ನಮ್ಮಲ್ಲಿದ್ದ ಬಹುತೇಕ ಯಂತ್ರಗಳು ಝೆರಾಕ್ಸ್ (Xerox) ಸಂಸ್ಥೆಗೆ ಸೇರಿದ್ದಾಗಿದ್ದವು. 

ಹಲವಾರು ವರ್ಷಗಳ ಹಿಂದೆ ಈ ಝೆರಾಕ್ಸ್ ಸಂಸ್ಥೆಯೇ ಹೊಸ ತಂತ್ರಜ್ಞಾನದ ವರ್ಣರಂಜಿತ ನೆರಳು ಪ್ರತಿ ತೆಗೆಯುವ ಯಂತ್ರವನ್ನು ಆವಿಷ್ಕಾರ ಮಾಡಿತು. ನಾವು ಈ ತಂತ್ರಜ್ಞಾನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಇದರ ಹಿಂದೆ ಇರುವ ತಂತ್ರಜ್ಞಾನ ಇ.ಎ. ಏನಿದು ಇ.ಎ.? ಇ.ಎ. ಎಂಬುವುದು ಝೆರಾಕ್ಸ್ ನ ಹೊಸ ಒಣ ಶಾಯಿ (Dry Ink) ತಂತ್ರಜ್ಞಾನ. ನಿಮಗೆ ತಿಳಿದಿರುವಂತೆ ನಮ್ಮಲ್ಲಿರುವ ನೆರಳು ಪ್ರತಿಗಳನ್ನು ತೆಗೆಯುವ ಯಂತ್ರಗಳಲ್ಲಿ ಎರಡು ರೀತಿಯ ಶಾಯಿಗಳನ್ನು ಬಳಸಬಹುದು. ಒಂದು ದ್ರವ ರೂಪದ ಕಪ್ಪು ಶಾಯಿ ಮತ್ತೊಂದು ಹುಡಿ ರೂಪದ ಕಪ್ಪು ವಸ್ತು. ಇವುಗಳನ್ನು ಬಳಸಿದಾಗ ನಮಗೆ ಕಪ್ಪು ಬಿಳುಪು ಬಣ್ಣದ ಪ್ರತಿಗಳು ಮಾತ್ರ ಸಿಗುತ್ತಿದ್ದವು.

ಹೊಸ ತಂತ್ರಜ್ಞಾನದಲ್ಲಿ ಕಪ್ಪು ಹುಡಿಯ ಬದಲು ವಿವಿಧ ಬಣ್ಣದ ಹುಡಿಗಳನ್ನು ಬಳಸಿ ಆಫ್ ಸೆಟ್ ಮುದ್ರಣದಂತೆಯೇ ಬಣ್ಣದ ಪ್ರತಿಗಳನ್ನು ತೆಗೆಯಬಹುದಾಗಿದೆ. ಸುಮಾರು ಮೂರು ದಶಕಗಳ ಹಿಂದೆ ಕೆನಡಾದಲ್ಲಿರುವ ಝೆರಾಕ್ಸ್ ಸಂಶೋಧನಾ ಕೇಂದ್ರದಲ್ಲಿ ಈ ಸಂಶೋಧನೆ ಮಾಡಲಾಯಿತು. ಇವುಗಳನ್ನು ನಾಲ್ಕು ವರ್ಣಗಳ ಮುದ್ರಣ (4 colour printing) ಎಂದು ಕರೆಯಬಹುದಾಗಿದೆ. ಏಕೆಂದರೆ ಇದಕ್ಕೆ ಬಳಸಲಾಗುವ ನಾಲ್ಕು ವರ್ಣಗಳು ನೀಲಿ (Cyan), ಗುಲಾಬಿ (Magenta), ಹಳದಿ (Yellow), ಕಪ್ಪು (Black) ಒಟ್ಟಾಗಿ CMYK ತಂತ್ರಜ್ಞಾನವೆಂದು ಹೆಸರಾಯಿತು. ಈ ಎಲ್ಲಾ ಬಣ್ಣಗಳು ಎಷ್ಟು ಪ್ರಮಾಣದಲ್ಲಿ ಸೇರಿದರೆ ನಾವು ಬಯಸುವ ಚಿತ್ರ ತಯಾರಾಗುತ್ತದೆ ಎಂಬುದನ್ನು ಕಂಪ್ಯೂಟರ್ ನಲ್ಲಿರುವ ಸಾಫ್ಟ್ ವೇರ್ ನಿರ್ಧಾರ ಮಾಡುತ್ತದೆ. ಇದೇ ರೀತಿ ನೆರಳು ಪ್ರತಿ ತೆಗೆಯುವ ಯಂತ್ರವೂ ಅದರಲ್ಲಿ ಪ್ರತಿ ತೆಗೆಯಲು ಇರಿಸಿದ ಮೂಲ ಪ್ರತಿಗಳಲ್ಲಿರುವ (Original Copy) ವರ್ಣಗಳನ್ನು ಗ್ರಹಿಸಿಕೊಂಡು ಆ ವರ್ಣಗಳಿಗೆ ಅಗತ್ಯವಾದಷ್ಟು ಮಾತ್ರ ಹುಡಿಯನ್ನು ಬಳಸಿ ಖಾಲಿ ಕಾಗದದಲ್ಲಿ ಮುದ್ರಣವಾಗುತ್ತದೆ. ಅಂದರೆ ವಿವಿಧ ಬಣ್ಣದ ಒಣ ಶಾಯಿ ಹುಡಿಗಳು ಗಾತ್ರ, ಆಕಾರ ಮತ್ತು ಸಾಂದ್ರತೆಗಳಲ್ಲಿ ನಿಯಂತ್ರಿಸಲ್ಪಟ್ಟು ಮೂಲ ಚಿತ್ರದ ಬಿಂಬದಂತೆ ಯಾವ ಪ್ರಮಾಣದಲ್ಲಿ ಬೇಕೋ ಅಷ್ಟು ಮಾತ್ರ ಕಾಗದದ ಮೇಲೆ ಮುದ್ರಿತವಾಗುವಂತೆ ಯಂತ್ರವು ನೋಡಿಕೊಳ್ಳುತ್ತದೆ. ಮುದ್ರಣವಾಗಿ ಹೊರಬರುವಾಗ ಡ್ರೈಯರ್ ನಲ್ಲಿ ಸುಟ್ಟು ಹೊರ ಬರುತ್ತದೆ. ಇಲ್ಲವಾದರೆ ಆ ಹುಡಿ ಪೇಪರ್ ಗೆ ಅಂಟಿಕೊಳ್ಳದೇ ಹೊರ ಬಂದಾಗ ಕೈಗೆ , ಮೈಗೆ ಅಂಟಿಕೊಳ್ಳುವ ಸಾಧ್ಯತೆ ಇದೆ.    

ಕ್ರಮೇಣ ಇದೇ ರೀತಿಯ ತಂತ್ರಜ್ಞಾನವನ್ನು ಬಳಸಿ ಡಿಜಿಟಲ್ ಪ್ರತಿ ತೆಗೆಯುವ ಯಂತ್ರಗಳು ಮಾರುಕಟ್ಟೆಗೆ ಬಂದವು. ಈ ತಂತ್ರಜ್ಞಾನದಲ್ಲಿ ನೀವು ನಿಮ್ಮ ಕಂಪ್ಯೂಟರ್ ನಲ್ಲಿ ತಯಾರಿಸುವ ಯಾವುದೇ ವಿನ್ಯಾಸವನ್ನು (Design) ಅದೇ ರೀತಿಯಲ್ಲಿ ಮುದ್ರಿಸಬಹುದಾಗಿದೆ. ಆಫ್ ಸೆಟ್ ಮುದ್ರಣದಲ್ಲಿ ಒಂದೆರಡು ಪ್ರತಿಗಳನ್ನು ಮುದ್ರಿಸಲು ಆಗುತ್ತಿರಲಿಲ್ಲ. ಆದರೂ ಅತ್ಯಂತ ದುಬಾರಿಯಾಗುತ್ತಿತ್ತು. ಈ ಡಿಜಿಟಲ್ ತಂತ್ರಜ್ಞಾನದಿಂದ ಕ್ಷಣಾರ್ಧದಲ್ಲಿ ನೀವು ಬಯಸುವ ಪ್ರತಿ ನಿಮ್ಮ ಕೈಯಲ್ಲಿರುತ್ತದೆ. ಪ್ರಾರಂಭದಲ್ಲಿ ಒಂದು ಪ್ರತಿಗೆ ಸುಮಾರು ನೂರು ರೂಪಾಯಿಯಷ್ಟು ವೆಚ್ಚವಾಗುತ್ತಿತ್ತು. ಆದರೆ ೨ ದಶಕಗಳಿಂದ ವರ್ಷ ವರ್ಷವೂ ನೂತನ ತಂತ್ರಜ್ಞಾನಗಳ ಆವಿಷ್ಕಾರಗಳಿಂದ ವೆಚ್ಚಗಳು ಕಡಿಮೆಯಾಗಿ ಈ ಪ್ರತಿ ಈಗ ಸುಮಾರು ೧೦ ರೂಪಾಯಿಗಳ ಆಸುಪಾಸಿಲ್ಲಿ ಲಭ್ಯವಾಗುತ್ತಿದೆ. ಮೇಲೆ ಹೇಳಿದ ನಾಲ್ಕು ವರ್ಣಗಳಿಂದ ಇನ್ನೂ ೨ ಬಣ್ಣಗಳು ಹೆಚ್ಚಾಗುವ ಲಕ್ಷಣವೂ (ಬಂಗಾರ ಹಾಗೂ ಬೆಳ್ಳಿ ವರ್ಣ) ಇದೆ. ಈಗಾಗಲೇ ಕೆಲವೆಡೆ ಇದರ ಸಫಲ ಪ್ರಯೋಗಗಳೂ ಆಗಿವೆ. ಇದು ಎಲ್ಲಾ ಯಂತ್ರಗಳಲ್ಲಿ ಬಳಕೆಗೆ ಬಂದರೆ ನೀವು ಬಂಗಾರದ ವರ್ಣದ ಅಕ್ಷರಗಳನ್ನು ಹೊಂದಿದ ಮುದ್ರಣವನ್ನು ಪಡೆಯಬಹುದಾಗಿದೆ. 

ಕಳೆದ ಎರಡು ದಶಕಗಳಲ್ಲಿ ಈ ಮುದ್ರಣ ವಿಭಾಗ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ನಾವು ಬಳಸುವ ಮೊಬೈಲ್ ನಂತೆಯೇ ಈ ಮುದ್ರಣ ಯಂತ್ರಗಳೂ ಕಾಲದಿಂದ ಕಾಲಕ್ಕೆ ತ್ವರಿತ ರೀತಿಯ ಬದಲಾವಣೆ ಕಾಣುತ್ತಿವೆ. ಮೊದಲಿಗೆ ಬಂದ ಕಲರ್ ಪ್ರತಿ ತೆಗೆಯುವ ಯಂತ್ರದ ಗಾತ್ರ ಬಹಳ ದೊಡ್ಡದಾಗಿತ್ತು. ಕಾಲಕ್ರಮೇಣ ಅದರ ಗಾತ್ರ ಬಹಳ ಸಣ್ಣದ್ದಾಗಿದೆ. ಝೆರಾಕ್ಸ್ ಕಂಪೆನಿಯ ಜೊತೆಗೆ ಕೆನಾನ್, ಬ್ರದರ್ಸ್, ರಿಸೋ, ಕೊನಿಕಾ ಮಿನೋಲ್ಟಾ ಹೀಗೆ ಹತ್ತಾರು ಕಂಪೆನಿಗಳು ಈ ರೀತಿಯಾದ ಯಂತ್ರಗಳನ್ನು ತಯಾರಿಸುತ್ತಿವೆ. 

ಇದೇ ರೀತಿಯಾದ ತಂತ್ರಜ್ಞಾನ ಬಳಕೆಯಿಂದ ಬೃಹತ್ ಗಾತ್ರದ ಕಟೌಟ್ ಗಳಿಗೆ ಬಳಕೆಯಾಗುವ ಫ್ಲೆಕ್ಸ್ ಗಳೂ ಕ್ಷಣಮಾತ್ರದಲ್ಲಿ ಮುದ್ರಿತವಾಗುತ್ತಿವೆ. ಬೋರ್ಡ್ ಗಳಿಗೆ ಅಂಟಿಸುವಂಥಹ ವಿನೈಲ್ ಮಾದರಿ ಮುದ್ರಣವೂ ಇದೆ. ಬಟ್ಟೆಯ ಮೇಲೆ ಬ್ಯಾನರ್ ಗಳೂ ಮುದ್ರಣವಾಗುತ್ತಿವೆ. ಮೊದಲು ಒಬ್ಬ ಕಲಾವಿದ ಚಿತ್ರ ಬಿಡಿಸಲು ಹಲವಾರು ದಿನಗಳನ್ನು ತೆಗೆದುಕೊಳ್ಳುತ್ತಿದ್ದ. ಆದರೆ ಈ ಫ್ಲೆಕ್ಸ್ ಮುದ್ರಣ ತಂತ್ರಜ್ಞಾನದಿಂದ ಅವರ ಬದುಕೂ ಕಷ್ಟದಲ್ಲಿದೆ. ಆದರೆ ಹೊಸ ತಂತ್ರಜ್ಞಾನಗಳಿಗೆ ನಾವು ನಮ್ಮನ್ನು ಒಗ್ಗಿಸಿಕೊಳ್ಳಲೇ ಬೇಕಾಗಿದೆ. ಇಲ್ಲವಾದಲ್ಲಿ ಎಲ್ಲರೂ ಓಡುತ್ತಿರುವಾಗ ನಾವು ತೆವಳಿದಂತೆ ಆಗುತ್ತದೆ.  

ಈಗ ಯಾವುದಾದರೂ ಕಾರ್ಯಕ್ರಮದ ಅಥವಾ ವಿವಾಹದ ಆಹ್ವಾನ ಪತ್ರಿಕೆಗಳು ಇನ್ನಷ್ಟು ಸೊಗಸಾಗಿ ವರ್ಣ ರಂಜಿತವಾಗಿ ಹೊರಬರುತ್ತಿವೆ. ಮುದ್ರಣಕ್ಕೆ ಸಮಯಾವಕಾಶವೂ ಕಡಿಮೆ ಸಾಕಾಗುತ್ತಿದೆ. ಸ್ಕ್ರೀನ್ ಪ್ರಿಂಟಿಂಗ್ ಎಂಬ ಮುದ್ರಣ ತಂತ್ರಜ್ಞಾನ ನಿಧಾನವಾಗಿ ಮರೆಗೆ ಸರಿಯುತ್ತಿದೆ. ಹೊಸ ನೀರು ಹರಿದಂತೆ ಮುದ್ರಣ ಕ್ಷೇತ್ರ ಹಳೆಯ ನೀರನ್ನು (ತಂತ್ರಜ್ಞಾನ) ಬದಿಗೆ ಸರಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಮುದ್ರಣ ಕ್ಷೇತ್ರ ಇನ್ನಷ್ಟು ಪ್ರಗತಿಯನ್ನು ಕಾಣಲಿದೆ. ಹೊಸ ಬದಲಾವಣೆಗಾಗಿ ನಾವು ತಯಾರಿ ಮಾಡಿಕೊಳ್ಳೋಣ…

ಚಿತ್ರ ಕೃಪೆ: ಅಂತರ್ಜಾಲ ತಾಣ