ಕಪ್ಪು-ಬಿಳುಪು ಚಿತ್ರದಲ್ಲಿ ವರ್ಣ ಮೂಡಿಸಿದ ವಿ.ಕೆ.ಮೂರ್ತಿ

ಕಪ್ಪು-ಬಿಳುಪು ಚಿತ್ರದಲ್ಲಿ ವರ್ಣ ಮೂಡಿಸಿದ ವಿ.ಕೆ.ಮೂರ್ತಿ

ನೀವು ಸ್ವಲ್ಪ ಹಳೆಯ ಕಾಲದವರಾಗಿದ್ದು, ಕಪ್ಪು ಬಿಳುಪು ಚಿತ್ರ ನೋಡುವ ಹವ್ಯಾಸವುಳ್ಳವರಾಗಿದ್ದರೆ, ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಗುರುದತ್ ಅವರ ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀವೀ ಔರ್ ಗುಲಾಮ್, ಆರ್ ಪಾರ್ ಮುಂತಾದ ಚಿತ್ರಗಳನ್ನು ನೋಡಿಯೇ ಇರುತ್ತೀರಿ. ಇವೆಲ್ಲಾ ಆಲ್ ಟೈಂ ಕ್ಲಾಸಿಕ್ ಚಲನ ಚಿತ್ರಗಳು. ಗುರುದತ್ ನಮ್ಮ ಹೆಮ್ಮೆಯ ಕನ್ನಡಿಗರು. ಅವರ ಚಲನಚಿತ್ರಗಳು ಎಲ್ಲವೂ ಕಪ್ಪು ಬಿಳುಪು. ಎಲ್ಲೆಡೆ ನೆರಳು ಬೆಳಕಿನ ಆಟಗಳು. ಹೆಚ್ಚಿನ ತಂತ್ರಜ್ಞಾನದ ಬೆಂಬಲವಿಲ್ಲದ ಸಮಯದಲ್ಲೂ ಅವರ ಚಿತ್ರಗಳಲ್ಲಿ ಕಂಡುಬರುವ ಛಾಯಾಗ್ರಹಣದ ದೃಶ್ಯಗಳು ಮನಮೋಹಕ. ಈಗಲಾದರೆ ಬಣ್ಣ ಬಣ್ಣದ ಚಿತ್ರಗಳು, ದೃಶ್ಯಗಳನ್ನು ತೋರಿಸುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಬಹುದು. ಆದರೆ ಆ ಸಮಯದಲ್ಲಿ ಕೇವಲ ಕಪ್ಪು ಬಿಳುಪು ದೃಶ್ಯಗಳ ಮೂಲಕವೇ ಚಲನಚಿತ್ರವನ್ನು ಕಲರ್ ಫುಲ್ ಮಾಡಿದ ವ್ಯಕ್ತಿ ಯಾರು ಗೊತ್ತೇ? ವೆಂಕಟರಾಮ ಪಂಡಿತ್ ಕೃಷ್ಣಮೂರ್ತಿ ಅರ್ಥಾತ್ ವಿ.ಕೆ.ಮೂರ್ತಿ.

ಗುರುದತ್ ತಮ್ಮ ಚಿತ್ರಗಳ ಮೆದುಳಾದರೆ ವಿ.ಕೆ.ಮೂರ್ತಿ ಹೃದಯವಿದ್ದಂತೆ. ಇವೆರಡರ ಸಂಕಲನ ಹಾಗೂ ಸಹಯೋಗದಿಂದಲೇ ಬದುಕು ಸಾಗುವುದು. ಹಾಗೆಯೇ ಒಂದು ಉತ್ತಮ ಚಿತ್ರಕ್ಕೆ ಉತ್ತಮ ಛಾಯಾಗ್ರಹಣವೂ ಅತ್ಯಗತ್ಯ. ಬಹುತೇಕ ಗುರುದತ್ ಅವರ ಚಿತ್ರಗಳಿಗೆ ಕ್ಯಾಮರಾಮೆನ್ ಆಗಿದ್ದವರು ನಮ್ಮವರೇ ಆದ ಕನ್ನಡಿಗ ವಿ.ಕೆ.ಮೂರ್ತಿಯವರು. ೨೬ ನವೆಂಬರ್ ೧೯೨೩ರಲ್ಲಿ ಮೈಸೂರಿನಲ್ಲಿ ಜನಿಸಿದ ವಿ.ಕೆ.ಮೂರ್ತಿಯವರು ಉತ್ತಮ ವಯಲಿನ್ ನುಡಿಸುತ್ತಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜೈಲಿಗೂ ಹೋಗಿ ಬಂದಿದ್ದರು. 

ಮೂರ್ತಿಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಲಕ್ಷ್ಮೀಪುರಂ ಶಾಲೆಯಲ್ಲಿ ಪೂರೈಸಿದರು. ಬಾಲ್ಯದಿಂದಲೂ ಮೂರ್ತಿಯವರಿಗೆ ಸಂಗೀತದಲ್ಲಿ ಬಹಳ ಆಸಕ್ತಿ. ಆ ಕಾರಣದಿಂದ ಶಾಲೆಯಲ್ಲಿ ಅವರು ವಯಲಿನ್ ಕಲಿತರು. ೧೯೪೬ರಲ್ಲಿ ಆಗಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ನಲ್ಲಿ ಇವರು ಸಿನೆಮಾ ಛಾಯಾಗ್ರಹಣದಲ್ಲಿ ಡಿಪ್ಲೋಮಾ ಮಾಡಿದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಇವರು ಸ್ವಾತಂತ್ರ್ಯ ಹೋರಾಟಕ್ಕೂ ಇಳಿದಿದ್ದರು ೧೯೪೩ರಲ್ಲಿ ಗಾಂಧೀಜಿಯವರ ಭಾಷಣದ ಪ್ರಭಾವಕ್ಕೊಳಗಾಗಿ ಸುಮಾರು ೧೫೦ ಮಂದಿ ಜೊತೆ ಬ್ರಿಟೀಷ್ ಸರಕಾರದ ವಿರುದ್ಧವಾಗಿ ಸೈಕಲ್ ಜಾಥಾಗೆ ಹೋಗಿದ್ದರಂತೆ. ಈ ಜಾಥಾಗೆ ಬಿಸಿ ರಕ್ತದ ತರುಣರಾಗಿದ್ದ ವಿ.ಕೆ.ಮೂರ್ತಿಯವರದ್ದೇ ಸಾರಥ್ಯ. ಮೈಸೂರು ನಗರದಿಂದ ಜಾಥಾ ಹೊರಟು ಪೋಲೀಸ್ ಚೌಕಿಯಲ್ಲಿ ಕೊನೆಗೊಳಿಸುವುದೆಂದು ನಿರ್ಧರಿಸಲಾಗಿತ್ತು. ಹೀಗೆ ಪ್ರತಿಭಟನೆಯ ಜಾಥಾ ಪೋಲೀಸ್ ಚೌಕಿ ತಲುಪುತ್ತಲೇ ಪೋಲೀಸರು ಪ್ರತಿಭಟನಾಕಾರರನ್ನು ಬಂಧಿಸಲು ತಯಾರಾಗಿದ್ದರು. ಮೂರ್ತಿಯವರು ಹಿಂದಿರುಗಿ ನೋಡುವಾಗ ತಮ್ಮ ಹಿಂದೆ ಉಳಿದದ್ದು ಕೇವಲ ಬೆರಳೆಣಿಕೆಯಷ್ಟು ಬೆಂಬಲಿಗ ಪ್ರತಿಭಟನಾಕಾರರು ಮಾತ್ರ. ಮೂರ್ತಿಯವರು ಆ ಸಮಯ ಬಂಧನಕ್ಕೊಳಗಾಗಿ ಸ್ವಲ್ಪ ಸಮಯ ಜೈಲುವಾಸ ಅನುಭವಿಸಬೇಕಾಯಿತು. 

ಛಾಯಾಗ್ರಹಣದಲ್ಲಿ ಡಿಪ್ಲೋಮಾ ಕಲಿಯುತ್ತಿರುವಾಗಲೂ ಮೂರ್ತಿಯವರಿಗೆ ಆಸಕ್ತಿ ಇದ್ದುದು ನಟನಾಗಬೇಕೆಂದು. ಅದಕ್ಕಾಗಿ ಮುಂಬೈಗೆ ಹೋಗಿ ಸ್ಟುಡಿಯೋದಿಂದ ಸ್ಟುಡಿಯೋಗೆ ಒಂದು ಅವಕಾಶಕಾಗಿ ಅಲೆದರು. ಎಲ್ಲಿಯೂ ಅವರಿಗೆ ಅವಕಾಶ ಸಿಗಲಿಲ್ಲ. ಸ್ವಲ್ಪ ಸಮಯ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದರು. ಆದರೆ ಹಿಂದಿ ಚಿತ್ರರಂಗದಲ್ಲಿ ಅವರಿಗೆ ನಿರಾಶೆಯೇ ಕಾದಿತ್ತು. ಇದರಿಂದ ಬೇಸತ್ತು ಅವರು ಮರಳಿ ಮೈಸೂರಿಗೆ ಬಂದು ತಮ್ಮ ಡಿಪ್ಲೋಮಾವನ್ನು ಪೂರ್ಣಗೊಳಿಸಿದರು. ಛಾಯಾಗ್ರಹಣದ ಕಲೆ ಇವರಿಗೆ ಬಹುಬೇಗನೇ ಸಿದ್ಧಿಸಿತು. ಸಹಾಯಕ ಛಾಯಾಗ್ರಾಹಕರಾಗಿ ಇವರು ಕೆಲಸ ಮಾಡಿದ ಮೊದಲ ಚಿತ್ರ ಜಯಂತ ದೇಸಾಯಿಯವರ ‘ಮಹಾರಾಣಾ ಪ್ರತಾಪ್'. ಈ ಚಿತ್ರದಿಂದ ಮೂರ್ತಿಯವರ ಹೆಸರು ಹಿಂದಿ ಚಿತ್ರರಂಗದಲ್ಲಿ ಚಲಾವಣೆಗೆ ಬಂತು. ಮೂರ್ತಿಯವರು ‘ಆಮ್ರಪಾಲಿ' ಎಂಬ ಚಿತ್ರ ನೋಡಿ, ಅದರಲ್ಲಿ ಸಿನೆಮಾ ಛಾಯಾಗ್ರಹಣ ಮಾಡಿದ ಫಾಲಿ ಮಿಸ್ತ್ರಿಯವರ ಕೈಚಳಕವನ್ನು ಕಂಡು ಚಕಿತರಾಗುತ್ತಾರೆ. ಅವರ ಜೊತೆ ಸಹಾಯಕರಾಗಿ ದುಡಿದು ಅನುಭವ ಪಡೆದುಕೊಳ್ಳುತ್ತಾರೆ. ಮೂರ್ತಿಯವರು ಉತ್ತಮ ವಯಲಿನ್ ವಾದಕರಾಗಿದ್ದುದರಿಂದ ಮಿಸ್ತ್ರಿಯವರ ಎರಡು ಚಿತ್ರಗಳಲ್ಲಿ ವಯಲಿನ್ ನುಡಿಸಿದ್ದರು. 

೧೯೫೧ರಲ್ಲಿ ಗುರುದತ್ ಅವರ ನಿರ್ದೇಶನದ ಮೊದಲ ಚಿತ್ರ ‘ಬಾಜಿ' ಬಿಡುಗಡೆಯಾಗುತ್ತದೆ. ಈ ಚಿತ್ರದಲ್ಲಿ ಛಾಯಾಗ್ರಹಣ ಮಾಡಿದವರು ವಿ.ರಾತ್ರಾ ಎಂಬವರು. ಇವರ ಸಹಾಯಕರಾಗಿದ್ದವರು ಮೂರ್ತಿಯವರು. ಈ ಚಿತ್ರದಲ್ಲಿ ಮೂರ್ತಿಯವರ ಕೈಚಳಕವು ಗುರುದತ್ ಅವರಿಗೆ ಬಹಳ ಮೆಚ್ಚುಗೆಯಾಗುತ್ತದೆ. ನಂತರ ೧೯೫೨ರಲ್ಲಿ ಬಿಡುಗಡೆಯಾದ ಚಿತ್ರ ‘ಜಾಲ್'. ಈ ಚಿತ್ರದ ಮೂಲಕ ಗುರುದತ್ ಅವರು ಮೂರ್ತಿಯವರಿಗೆ ಸ್ವತಂತ್ರವಾಗಿ ಛಾಯಾಗ್ರಹಣ ಮಾಡುವ ಅವಕಾಶ ನೀಡಿದರು. ಈ ಚಿತ್ರದಲ್ಲಿ ಮೂರ್ತಿಯವರ ಕೆಲಸ ನೋಡಿ ನಂತರದ ದಿನಗಳಲ್ಲಿ ತಮ್ಮ ಚಿತ್ರ ನಿರ್ಮಾಣ ತಂಡ ತಯಾರಿಸಿದ ಎಲ್ಲಾ ಸಿನೆಮಾಗಳಲ್ಲಿ ಇವರಿಗೆ ಅವಕಾಶ ನೀಡಿದರು. ಈ ಅವಕಾಶವು ಗುರುದತ್ ಅವರು ೧೯೬೪ರಲ್ಲಿ ನಿಧನವಾಗುವ ಸಮಯದವರೆಗೆ ಮುಂದುವರೆಯಿತು. ತಮಗೆ ಸಿಕ್ಕ ಅವಕಾಶವನ್ನು ಮೂರ್ತಿಯವರು ಚೆನ್ನಾಗಿ ಬಳಸಿಕೊಂಡರು. ಗುರುದತ್ ನಟಿಸಿ ನಿರ್ದೇಶಿಸಿದ ಚಿತ್ರಗಳಲ್ಲಿ ಒಂದಾದ ‘ಕಾಗಜ್ ಕೆ ಫೂಲ್' ಮೂರ್ತಿಯವರಿಗೆ ಉತ್ತಮ ಹೆಸರನ್ನು ತಂದುಕೊಟ್ಟಿತು. ಆಗಿನ ಕಪ್ಪು ಬಿಳುಪು ಚಿತ್ರಗಳಲ್ಲಿ ಮೂರ್ತಿಯವರು ಸೃಷ್ಟಿಸುತ್ತಿದ್ದ ಮಾಯಾಜಾಲವು ಪ್ರೇಕ್ಷಕರನ್ನು ಬಹುವಾಗಿ ಸೆಳೆಯಿತು. ನಂತರದ ದಿನಗಳಲ್ಲಿ ಮೂರ್ತಿಯವರು ಹಿಂದಿರುಗಿ ನೋಡಲಿಲ್ಲ. ಮಿಸ್ಟರ್ ಆಂಡ್ ಮಿಸಸ್ ೫೫ (೧೯೫೫), ಸಿಐಡಿ (೧೯೫೬), ೧೨ ಓ ಕ್ಲಾಕ್ (೧೯೫೮), ಚೌದವೀ ಕಾ ಚಾಂದ್ (೧೯೬೦), ಲವ್ ಇನ್ ಟೋಕಿಯೋ (೧೯೬೬), ಸೂರಜ್ (೧೯೬೬), ಜುಗ್ನು (೧೯೭೩), ನಾಸ್ತಿಕ್ (೧೯೮೩), ದೀದಾರ್ (೧೯೯೨) ಇವರ ಪ್ರಮುಖ ಖ್ಯಾತಿವೆತ್ತ ಚಿತ್ರಗಳು. 

ಹುಟ್ಟು ಕನ್ನಡಿಗರಾಗಿದ್ದೂ ಇವರು ಛಾಯಗ್ರಹಣ ಮಾಡಿದ ಏಕೈಕ ಚಿತ್ರ ರಾಜೇಂದ್ರ ಸಿಂಗ್ ಬಾಬು ಅವರ ‘ ಹೂವು ಹಣ್ಣು'. ತಮಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ದೊರೆಯದಿರುವ ಬಗ್ಗೆ ಮೂರ್ತಿಯವರಿಗೆ ನಿರ್ಮಾಪಕರ ಮೇಲೆ ಮುನಿಸಿತ್ತು. ತಮ್ಮ ಪ್ರತಿಭೆಯನ್ನು ಹುಟ್ಟೂರು ಗುರುತಿಸಲೇ ಇಲ್ಲ ಎಂಬ ಬೇಸರವೂ ಇತ್ತು. ನಮ್ಮ ಚಿತ್ರರಂಗದ ದುರಾದೃಷ್ಟ ಹಿಂದಿ ಚಿತ್ರರಂಗದ ಅದೃಷ್ಟದ ಬಾಗಿಲು ತೆರೆಯಿತು. ಅತ್ಯುತ್ತಮ ಚಿತ್ರಗಳಿಗೆ ಛಾಯಾಗ್ರಹಣ ನೀಡಿದ ಖ್ಯಾತಿಗೆ ಪಾತ್ರರಾದರು ವಿ.ಕೆ.ಮೂರ್ತಿಯವರು. ಭಾರತೀಯ ಚಿತ್ರರಂಗದ ಮೊದಲ ಸಿನೆಮಾಸ್ಕೋಪ್ ಚಿತ್ರವಾದ ‘ಕಾಗಜ್ ಕೆ ಫೂಲ್’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ ಹೆಗ್ಗಳಿಕೆ ಮೂರ್ತಿಯವರದ್ದು. ಈ ಚಿತ್ರಕ್ಕೆ ಇವರಿಗೆ ೧೯೫೯ರಲ್ಲಿ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ಬಂತು. ಸಾಹೀಬ್ ಬೀವಿ ಔರ್ ಗುಲಾಮ್ ಚಿತ್ರಕ್ಕೆ ಮತ್ತೊಮ್ಮೆ ಇವರಿಗೆ ಪ್ರಶಸ್ತಿ ಬಂತು. ೨೦೦೫ರಲ್ಲಿ ಜೀವಮಾನದ ಸಾಧನೆಗಾಗಿ IIFA ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಇವರಿಗೆ ೨೦೦೮ರಲ್ಲಿ ಅರ್ಹವಾಗಿಯೇ ‘ದಾದಾ ಸಾಹೇಬ್ ಫಾಲ್ಕೆ' ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ೨೦೦೧ರಲ್ಲಿ ಮುಂಬೈಯಿಂದ ಬೆಂಗಳೂರಿಗೆ ಮರಳಿದ ವಿ.ಕೆ.ಮೂರ್ತಿಯವರು ತಮ್ಮ ೯೧ನೇ ವಯಸ್ಸಿನಲ್ಲಿ ೨೦೧೪ರ ಎಪ್ರಿಲ್ ೭ರಂದು ನಿಧನ ಹೊಂದಿದರು.

ಭಾರತ ಚಿತ್ರರಂಗದಲ್ಲಿ ಛಾಯಾಗ್ರಹಣದ ಕ್ಷೇತ್ರದಲ್ಲಿ ವಿ.ಕೆ.ಮೂರ್ತಿಯವರ ಸಾಧನೆ ಸದಾ ಅವರ. ಅವರು ತಮ್ಮ ಕ್ಯಾಮರಾದಲ್ಲಿ ಸೃಷ್ಟಿಸುತ್ತಿದ್ದ ನೆರಳು ಬೆಳಕಿನ ಚಮತ್ಕಾರಗಳು ಸಿನೆಮಾಗಳನ್ನು ಶ್ರೀಮಂತವನ್ನಾಗಿಸಿವೆ ಎನ್ನುವುದು ಚಿತ್ರ ರಸಿಕರ ಮನದಾಳದ ಮಾತು. 

 ಚಿತ್ರ ಕೃಪೆ: ಅಂತರ್ಜಾಲ ತಾಣ

 

Comments

Submitted by shreekant.mishrikoti Fri, 03/12/2021 - 20:09

ಅಶ್ವಿನ್ ರಾವ್ ಅವರೇ, ಲೇಖನಕ್ಕಾಗಿ ಧನ್ಯವಾದಗಳು.

 

ವಿ.ಕೆ.ಮೂರ್ತಿ ಅವರ ಕುರಿತಾದ ಒಂದು ಪುಸ್ತಕ - ಕನ್ನಡದಲ್ಲಿ ಓದಿದ್ದೆ. ಅದರ ಹೆಸರು ಬಹುಶಃ ಬಿಸಿಲುಕೋಲು ಎಂದಿರಬೇಕು. ತುಂಬ ಚೆನ್ನಾಗಿದೆ. ಓದಲು ಮರೆಯದಿರಿ.  

Comments

Submitted by Ashwin Rao K P Sat, 03/13/2021 - 08:49

ವಿ.ಕೆ.ಮೂರ್ತಿಯವರ ಬಗ್ಗೆ..

ನನ್ನ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ಖುಷಿಕೊಟ್ಟಿದೆ. ನೀವು ಹೇಳಿದ 'ಬಿಸಿಲು ಕೋಲು' ಪುಸ್ತಕವನ್ನು ಖಂಡಿತಾ ಓದುವೆ. ಹೀಗೆಯೇ ಮಾಹಿತಿ ಹಂಚಿಕೊಳ್ಳುತ್ತಿರಿ ಸರ್, ವಂದನೆಗಳು

Submitted by venkatesh Mon, 03/29/2021 - 10:52

vhttp://radhatanaya-devanahalli.blogspot.com/2010/06/blog-post_18.html