ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು

ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗುರುರಾಜ ಸನಿಲ್
ಪ್ರಕಾಶಕರು
ಗುರುರಾಜ ಸನಿಲ್, ಕೊಳಂಬೆ-ಪುತ್ತೂರು, ಉಡುಪಿ- 576 105
ಪುಸ್ತಕದ ಬೆಲೆ
ರೂ.120.00, ಮುದ್ರಣ: 2018

*ಗುರುರಾಜ ಸನಿಲ್ ಅವರ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು"*

ಖ್ಯಾತ ಉರಗ ವಿಜ್ಞಾನಿ, ಪರಿಸರ ಅಧ್ಯಯನಕಾರ, ಕಥೆಗಾರ, ಲೇಖಕ ಗುರುರಾಜ ಸನಿಲ್ ಅವರ ಆರನೇ ಕೃತಿ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು" ಎಂಬ ಲೇಖನಗಳ ಸಂಕಲನ. 2018ರಲ್ಲಿ ಪ್ರಕಟವಾದ, 12 + 106 ಪುಟಗಳ ಕೃತಿಯ ಬೆಲೆ 120 ರೂಪಾಯಿ. ಲೇಖಕರೇ (ಗುರುರಾಜ ಸನಿಲ್, ಕೊಳಂಬೆ - ಪುತ್ತೂರು, ಉಡುಪಿ - 576105, ಮೊಬೈಲ್: 9845083869) ಕೃತಿಯ ಪ್ರಕಾಶಕರು.

ಮಂಗಳೂರಿನ ಪ್ರಸಿದ್ಧ ಮುದ್ರಕ, ಲೇಖಕ ಕಲ್ಲೂರು ನಾಗೇಶ್ ಅವರ ಮುನ್ನುಡಿ ಮತ್ತು ಖ್ಯಾತ ಛಾಯಾಗ್ರಾಹಕ ಸತೀಶ್ ಇರಾ ಅವರ ಬೆನ್ನುಡಿ ಕೃತಿಗಿದೆ. ಲೇಖಕರೇ ಸೆರೆಹಿಡಿದ ಮತ್ತು ಕಾರ್ಯಾಚರಣೆ ಸಮಯದಲ್ಲಿ ತೆಗೆಸಿಕೊಂಡ, ಲೇಖನಗಳಿಗೆ ಪೂರಕವಾದ ಛಾಯಾಚಿತ್ರಗಳನ್ನು ಸಂಕಲನದಲ್ಲಿ ಅಳವಡಿಸಲಾಗಿದೆ.

ಗುರುರಾಜ ಸನಿಲ್ ರವರ ಹತ್ತಿರದ ಒಡನಾಡಿಯೂ ಆಗಿರುವ ಕಲ್ಲೂರು ನಾಗೇಶ್ ಅವರು; ಗುರುರಾಜರ ಜ್ಞಾನದ ಪ್ರಖರತೆಯನ್ನು, ಜೀವಪರ ಕಾಳಜಿಯ ಮನಸ್ಸನ್ನು ಮತ್ತು, ಅವರ ಬದುಕಿನ ಸೂಕ್ಷ್ಮವನ್ನೂ ಸಂಕ್ಷಿಪ್ತವಾಗಿ, ಆದರೆ ಅತ್ಯಂತ ಸ್ಪಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ಅದು ಹೀಗಿದೆ:

"ಗುರುರಾಜರು ಕಾಠಿಣ್ಯದ ಬಾಲ್ಯವನ್ನು ಎದುರಿಸಿ ಬೆಳೆದವರು. ಅವರ 'ವಿಷಯಾಂತರ'  ಕೃತಿಯಲ್ಲಿ ಇದು ದಾಖಲಾಗಿದೆ. ಈ ಕಾಠಿಣ್ಯ ಸ್ಥಿತಿಯೇ ಅವರನ್ನು ಜೀವನದಲ್ಲಿ ತರಬೇತುಗೊಳಿಸಿದೆ ಎಂದು ನನಗನಿಸುತ್ತದೆ. ಜೀವಜಾಲಕ್ಕೆ ದಯೆ ತೋರುವ ಪರಿಸರ ಕಾಳಜಿಯ ಗುರುರಾಜರು ತನ್ನ ಅನುಭವಕ್ಕೆ ದಕ್ಕಿದ ಸತ್ಯದ ಸಾರವನ್ನು ತನ್ನೊಳಗೆ ಮರೆಯಾಗಿಸದೇ ಅವಕ್ಕೆಲ್ಲ ಅಕ್ಷರ ರೂಪ ನೀಡಿ ಇತರರಿಗೂ ಹಂಚುತ್ತಿರುವವರು. ಕೇವಲ ಬರವಣಿಗೆಗಾಗಿ, ಪುಸ್ತಕ ಪ್ರಕಟಣೆಗಾಗಿ ಅಥವಾ ಚಟಕ್ಕಾಗಿ ಬರೆಯದೇ ತಾನು ಕಂಡ ವಾಸ್ತವಗಳು ಇತರರಿಗೂ ತಿಳಿಯಲಿ, ಅದು ಜೀವಜಾಲಕ್ಕೆ ನೆರವಾಗಲಿ ಎಂಬ ಉದಾತ್ತ ಧ್ಯೇಯ ಇರಿಸಿಕೊಂಡವರು. ತನ್ನ ಬದುಕಿನುದ್ದಕ್ಕೂ ಬಂದ, ಮುಂದೆಯೂ ಬರಬಹುದಾದ ಗಂಡಂತರಗಳನ್ನು ಲೆಕ್ಕಿಸದೆ ಸಂರಕ್ಷಣೆ, ಅಧ್ಯಯನ ಎನ್ನುತ್ತಾ ಹಾವುಗಳ ಪರಿಸರದ ಒಡನಾಟದಲ್ಲಿರುವವರು. ನೆಲದ ಗುಣವನ್ನು ಹೊತ್ತ ನಮ್ಮ ಹಿಂದಿನ ತಲೆಮಾರು ಜೀವಪರವಾದ ಸಹಬಾಳ್ವೆಯ ಬಳುವಳಿಯನ್ನು ನಮಗೆ ಬಿಟ್ಟುಹೋಗಿದೆ. ವ್ಯಾವಹಾರಿಕ ಕಸರತ್ತುಗಳಿಂದ ಸ್ವಾರ್ಥಪರರಾಗಿ ಅಂತಹ ಅಪೂರ್ವ ಬಳುವಳಿಗೆ ಕೇಡುಂಟು ಮಾಡದೆ ಅದನ್ನು ಮುಂದಿನ ಪೀಳಿಗೆಗೆ ನಾವು ವರ್ಗಾಯಿಸಬೇಕೆನ್ನುವ ತುಡಿತ ಗುರುರಾಜ ಸನಿಲರ ಈ ಕೃತಿಯುದ್ದಕ್ಕೂ ಕಾಣಿಸಿಕೊಂಡಿದೆ".

ಕೃತಿಯಲ್ಲಿ ಒಟ್ಟು 23 ಲೇಖನಗಳಿವೆ. "ಜ್ಯೋತಿಶ್ಶಾಸ್ತ್ರವನ್ನೇ ಲೇವಡಿ ಮಾಡುತ್ತಿರುವ ಕಾಳಸರ್ಪ ದೋಷ !" ಎಂಬುದು ಮೊದಲ ಲೇಖನ. ಮೊದಲು ಜ್ಯೋತಿಷ್ಯರು "ಕಾಳಸರ್ಪ ಯೋಗ" ಎಂದು ಹೇಳುತ್ತಿದ್ದರು. ಈಗ ಇದನ್ನೇ "ಕಾಳಸರ್ಪ ದೋಷ" ಎಂದು ಹೇಳತೊಡಗಿದ್ದಾರೆ. ಜ್ಯೋತಿಷ್ಯ ಕೇಳಲು ಬಂದವರನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಟ್ಟಲಾಗುತ್ತಿತ್ತು. ಈಗ ಕೆಲವು ಮಂದಿ ಜ್ಯೋತಿಷ್ಯರು, ಕಾಳಸರ್ಪ ಯೋಗಕ್ಕೆ ಸಂಬಂಧವೇ ಇಲ್ಲದ ದೂರದ ಕಾಳಹಸ್ತಿಗೆ ಅಂಡಲೆಸುತ್ತಿದ್ದಾರೆ. "ಹಸ್ತಿ" ಎಂದರೆ ಆನೆ. ಕಾಳಹಸ್ತಿ ದೇವಸ್ಥಾನದಲ್ಲಿ ಆನೆಯ ಕಪ್ಪು ಶಿಲ್ಪವೊಂದು ಇದೆಯಷ್ಟೇ. ಎರಡು ದಶಕದ ಹಿಂದಿನವರೆಗೂ ಕಾಳಹಸ್ತಿ ದೇವಸ್ಥಾನದ ಅಧಿಕೃತರಿಗೂ  ಕಾಳಸರ್ಪ ಯೋಗದ ಬಗ್ಗೆ ತಿಳಿದೇ ಇರಲಿಲ್ಲ. ಇದೀಗ ಭಕ್ತರು ಕಾಳಸರ್ಪದ ಹೆಸರೇಳಿಕೊಂಡು ಪರಿಹಾರ ಕಾರ್ಯಗಳಿಗಾಗಿ ಬರುತ್ತಿರುವ ಕಾರಣ, ಅಲ್ಲೂ ಭಕ್ತರ ಬೇಡಿಕೆಯನುಸಾರ ಹೊಸದಾಗಿ ಹೊಸ ಪರಿಹಾರ ಕಾರ್ಯಗಳನ್ನು ಶುರುಮಾಡಿದ್ದಾರೆ ಎಂಬಿತ್ಯಾದಿ ವಿಚಾರಗಳನ್ನು ಲೇಖಕ ಗುರುರಾಜ ಸನಿಲ್ ಅವರು ಲೇಖನದಲ್ಲಿ ಸವಿವರವಾಗಿ  ಚರ್ಚಿಸಿದ್ದಾರೆ. "ಮೊದಲೇ 'ನಾಗದೋಷ' ಎಂಬ ಅರ್ಥವಿಲ್ಲದ ವಿಚಿತ್ರ ನಂಬಿಕೆಯೊಂದಕ್ಕೆ ಕುಖ್ಯಾತಿ ಪಡೆದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಈಗ 'ಕಾಳಸರ್ಪ ದೋಷ' ಎಂಬ ಹೊಸ ಪಿಡುಗೊಂದು ಜ್ಯೋತಿಷ್ಯ ನಂಬುವವರನ್ನು ಕಂಗಾಲಾಗಿಸುತ್ತಿದೆ" ಎಂಬ ಕಟುಸತ್ಯವನ್ನು ಓದುಗರೆದುರು ಲೇಖಕರು ತೆರೆದಿಟ್ಟಿದ್ದಾರೆ.

ವಿಷದ ಹಾವುಗಳು ಕಚ್ಚಿದಲ್ಲಿ ಕಚ್ಚಿಸಿಕೊಂಡವರಿಗೆ ವೈದ್ಯರು ಪ್ರತಿವಿಷದ ಚಿಕಿತ್ಸೆ ನೀಡುವ ಅಗತ್ಯ ಇದೆಯೇ ಹೊರತು,  

ಯಾವುದೇ ವಿಷ ರಹಿತ ಹಾವುಗಳು ಕಚ್ಚಿದಲ್ಲಿ ಕಚ್ಚಿಸಿಕೊಂಡವರನ್ನು ಪ್ರತಿವಿಷ ಚಿಕಿತ್ಸೆಗೆ ಒಳಪಡಿಸುವ ಅಗತ್ಯವೇ ಇರುವುದಿಲ್ಲ. ಆದರೆ, ಕುಟುಂಬದ ಭಯ ಮತ್ತು ಅಜ್ಞಾನದ ದುರ್ಲಾಭವನ್ನು ಪಡೆದುಕೊಂಡು ವಿಷ ರಹಿತ ಹಾವು ಕಚ್ಚಿಸಿಕೊಂಡವರಿಗೂ ಆಸ್ಪತ್ರೆಗಳಲ್ಲಿ ವೈದ್ಯರು ಪ್ರತಿವಿಷದ ಚಿಕಿತ್ಸೆ ನೀಡುವ ಮೂಲಕ ಅನಗತ್ಯವಾಗಿ ಹಣ ಮಾಡುವ ದಂಧೆ ನಡೆಸುತ್ತಿರುವ ಬಗ್ಗೆ "ಹಾವಿನ ಕಡಿತ: ಚಿಕಿತ್ಸೆಯ ದುರ್ಲಾಭ" ಎಂಬ ಲೇಖನದಲ್ಲಿ ಉರಗತಜ್ಞ ಗುರುರಾಜ್ ಸನಿಲ್ ವಿವರವಾದ ಮಾಹಿತಿಗಳನ್ನು ನೀಡಿದ್ದಾರೆ.

ಕೆಲವರು "ಕೃಷ್ಣ ಸರ್ಪ" ಎಂದು ಅದ್ಯಾವುದೋ ಒಂದು ಹಾವನ್ನು ಗುರುತಿಸುವುದು ಅಥವಾ ಹೇಳುವುದನ್ನು ಹಲವರು ಕೇಳಿಯೇ ಕೇಳಿರುತ್ತಾರೆ. ಮರಿ ಹಾವನ್ನು ಕೃಷ್ಣ ಸರ್ಪ ಎಂದು ಕರೆಯುವುದನ್ನು ನಾನು ಸಹ ಚಿಕ್ಕಂದಿನಲ್ಲಿ ಕೇಳಿಸಿಕೊಂಡದ್ದಿದೆ. ಆದರೆ, ನಮ್ಮ ನಡುವಿನ ಉರಗ ವಿಜ್ಞಾನಿ ಗುರುರಾಜ ಸನಿಲ್ ಸ್ಪಷ್ಟವಾದ ಮಾತುಗಳಲ್ಲೇ ಹೇಳುತ್ತಾರೆ, "ಕೃಷ್ಣ ಸರ್ಪ ಎಂಬ ಒಂದು ಹಾವೇ ಇಲ್ಲ" ಎಂದು. "ನಾಗರಹಾವಿನ ಮರಿಯನ್ನು ಉಡುಪಿ ಶ್ರೀಕೃಷ್ಣನ ಹೆಸರಿಟ್ಟು ಕೃಷ್ಣ ಸರ್ಪ ಎಂದು ಕರೆಯುತ್ತಾರೆಯೇ ಹೊರತು ವಾಸ್ತವದಲ್ಲಿ "ಕೃಷ್ಣ ಸರ್ಪ"  ಎಂಬ ಹಾವೇ ಇಲ್ಲ" ಎನ್ನುತ್ತಾರೆ ಲೇಖಕರು. ಕಪ್ಪು ತಲೆಯ ವಿಷ ರಹಿತ ಹಾವೊದನ್ನು ಕೃಷ್ಣ ಸರ್ಪವೆಂದು ಹೇಳಿಕೊಂಡು ಕೆಲವರು ಸರ್ಪ ಸಂಸ್ಕಾರ ಮಾಡುತ್ತಿರುವ ಬಗ್ಗೆ ಮತ್ತು ಈ ವಿಚಾರದ ಮೇಲೆ ಇನ್ನೂ ಒಂದಷ್ಟು ಮಾಹಿತಿಪೂರ್ಣ ವಿಚಾರಗಳನ್ನು ಗುರುರಾಜ್ ಅವರು "ನಾಗನ ಸಂಸ್ಕಾರ ಕಾಗೆಗೆ ಮಾಡಿದಂತೆ" ಎಂಬ ಲೇಖನದಲ್ಲಿ ಹಂಚಿಕೊಂಡಿದ್ದಾರೆ.

" 'ಉತ್ತರಕಾಂಡ' (ಎಸ್. ಎಲ್. ಭೈರಪ್ಪ) ಪುಟ, 174ರ ಎರಡನೇ ಪ್ಯಾರಾದಲ್ಲಿ ಹಾವೆಂಬ ಸರೀಸೃಪದ ಕುರಿತು ಒಂದು ತಪ್ಪು ಮಾಹಿತಿ ಇದೆ. ಅದರಲ್ಲಿ ರಾಮನಿಗೆ ಲಕ್ಷ್ಮಣ ಹೇಳುತ್ತಾನೆ "ಅಣ್ಣಾ ಕಾಡಿನಲ್ಲಿ ಬರಿಗಾಲಿನಲ್ಲಿ ತಿರುಗಬಾರದು. ಕೊಳಕು ಮಂಡಲ ಹಾವಿನ ಉಸಿರು ತಾಗಿದ ಮುಳ್ಳು ಚುಚ್ಚಿದರೆ ಕಾಲೆಲ್ಲಾ ಕೊಳೆತು ಹೋಗುತ್ತೆ ಅಂತ ಒಬ್ಬ ಕುರಿಗಾಹಿ ಹೇಳಿದ್ದನ್ನ ಕೇಳಿದ್ದೀನಿ" ಎಂಬುದು. ಆದರೆ ಇದೊಂದು ತಪ್ಪು ನಂಬಿಕೆ. ಮೂಲ ರಾಮಾಯಣದಲ್ಲೇ ಈ ದೋಷವಿದೆಯೋ ಅಥವಾ ಈಗಾಗಲೇ ಪ್ರಚಲಿತದಲ್ಲಿರುವ ಈ ನಂಬಿಕೆಯನ್ನು ಭೈರಪ್ಪನವರೇ ಕಾದಂಬರಿಯೊಳಗೆ ರೋಚಕತೆ ತುಂಬಲು ಸೇರಿಸಿದರೋ -ಗೊತ್ತಿಲ್ಲ. ವಾಸ್ತವ ಸಂಗತಿಯೆಂದರೆ, ಕೊಳಕು ಮಂಡಲ ಹಾವಿನ ವಿಷಕ್ಕೆ ಮಾತ್ರ ಕೊಳೆಯಿಸುವ ಗುಣವಿದ್ದು, ಈ ಹಾವು ಕಚ್ಚಿದಾಗ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಹಾವು ಕಚ್ಚಿದ ದೇಹದ ಭಾಗ ಕೊಳೆಯುವ ಸಾಧ್ಯತೆ ಇರುತ್ತದೆಯೇ ಹೊರತು ಈ ಹಾವನ್ನು ಸ್ಪರ್ಶಿಸುವುದರಿಂದಾಗಲೀ, ಅದರ ಉಸಿರು ಅಥವಾ ಚರ್ಮ , ಪೊರೆ ಸೋಕುವುದರಿಂದಾಗಲೀ ಯಾವ ಜೀವಿಗೂ ಯಾವುದೇ ಅಪಾಯವಾಗುವುದಿಲ್ಲ ಹಾಗೂ ಅಂಥ ಭಯಂಕರವಾದ ಹಾವೂ  ಪ್ರಕೃತಿಯಲ್ಲಿಲ್ಲ". (ಬರೆದುದೆಲ್ಲವ ನಂಬಿ ಕೆಡುವವರುಂಟು ! / ಪುಟ 88).

"ಲಾಗಾಯ್ತಿನಿಂದಲೂ ನಮ್ಮ ಕನ್ನಡ ಸಾಹಿತ್ಯದಲ್ಲಿ ಮುಖ್ಯವಾಗಿ ಹಾವುಗಳ ಕುರಿತು ಅನೇಕ ಅಸಹಜ ವಿಚಾರ, ಮಾಹಿತಿಗಳು ಪ್ರಸಾರವಾಗುತ್ತಾ ಬಂದಿವೆ" ಎಂಬ ಸತ್ಯವನ್ನು ಬರೆದಿರುವ ಗುರುರಾಜ ಸನಿಲ್ ರವರು, ಡಾ. ಬಿ. ಜಿ. ಎಲ್. ಸ್ವಾಮಿಯವರ "ಹಸಿರು ಹೊನ್ನು" ಮತ್ತು ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕಥೆ" ಯಲ್ಲೂ ಸರೀಸೃಪಗಗಳಿಗೆ ಸಂಬಂಧಿಸಿದಂತೆ ಕೆಲವು ತಪ್ಪು ಮಾಹಿತಿಗಳಿರುವುದನ್ನು ಉದಾಹರಣೆಗಾಗಿ ಗುರುತಿಸಿ ವಿವರಿಸಿದ್ದಾರೆ.

ಈ ಲೇಖನವನ್ನು ಓದುವಾಗ ಒಂದಷ್ಟು ಸಿನಿಮಾಗಳು ನೆನಪಿಗೆ ಬರುತ್ತವೆ. ಸಿನಿಮಾಗಳ ಕಥೆಗಳಲ್ಲೂ, ಹಾಡುಗಳಲ್ಲಿಯೂ ಇಂಥ ತಪ್ಪು ಮಾಹಿತಿಗಳನ್ನು ಸಿನಿಮಾ ಚಿತ್ರಕಥೆಗಾರರು, ಗೀತ ರಚನಾಕಾರರು, ನಿರ್ದೇಶಕರೆಲ್ಲರೂ ಸೇರಿ ಹರಿಯಬಿಟ್ಟು, ಜನರು ಸುಳ್ಳನ್ನೇ ಸತ್ಯವೆಂದು ನಂಬುವಂತೆ ಮಾಡುವಲ್ಲಿ ಯಶಸ್ವಿಯಾದದ್ದುಂಟು. ಇದಕ್ಕೆ ಒಂದು ಪ್ರಸಿದ್ಧ ಉದಾಹರಣೆಯೆಂದರೆ, ಸಿನಿಮಾವೊಂದರ ಬಹು ಜನಪ್ರಿಯ ಹಾಡಾದ "ಹಾವಿನ ದ್ವೇಷ, ಹನ್ನೆರಡು ವರುಷ" ಎಂಬ ಚಿತ್ರಗೀತೆ. ವಾಸ್ತವ ಎಂದರೆ, ಹಾವಿಗೆ ಧ್ವೇಷ ಎಂಬುದು ಇಲ್ಲ.

ಶಾಲೆಗಳಲ್ಲಿ ಮಕ್ಕಳ ಜ್ಞಾನವೃದ್ಧಿಗಾಗಿ ಆಯೋಜಿಸುವ ಅತ್ಯಂತ ಅಮೂಲ್ಯವಾದ ಕಾರ್ಯಕ್ರಮಗಳು ಹೇಗಿರಬಾರದು ಎಂಬುದು ಗೊತ್ತಾಗಬೇಕಾದರೆ, "ಸಭಾ ಕಾರ್ಯಕ್ರಮದ ಭರಾಟೆಗೆ ಬಾಡುವ ಎಳೆಯ ಮನಸುಗಳು" ಲೇಖನ ಓದಬೇಕು.

"ಬಾಯ್ಕಳಕ ಬಕವೂ, ಹಳ್ಳಿಯ ವೃದ್ಧೆಯೂ" , "ಇಲ್ಲಿ ಸಾವು ನೋವುಗಳಲ್ಲಿ ಎಲ್ಲರಿಗೂ ಸಮಪಾಲು" , "ಹಾವಿನ ಸ್ಪರ್ಶಕ್ಕೂ ಧ್ಯಾನಸ್ಥ ಸ್ಥಿತಿಗೂ ಸಂಬಂಧವಿದೆಯೇ !" , "ಅವಳ ಭಯ ನಿವಾರಣೆಗೆ ನಾನೇ ಕಚ್ಚಿಸಿಕೊಂಡೆ !" , "ಹಂದಿ, ನರಿಗಳ ಸಮರಸ ಭಾವ..." , " ಎಲ್ಲೆಲ್ಲೂ ಹಸಿರು, ಎಲ್ಲರಿಗೂ ಉಸಿರು" , "ಲಕ್ಷಾಂತರ ಜೀವಿಗಳು ನಮ್ಮ ಒಡನಾಡಿಗಳು" , "ಪತ್ರಿಕಾ ವರದಿಗಳ ಸತ್ಯಾಸತ್ಯತೆ !" , "ಇಲಿಜ್ವರ ಮತ್ತು ಮೂಷಿಕ ಪುರಾಣ" , "ಆಯುರ್ವೇದದಲ್ಲಿ ವಿಷ ಚಿಕಿತ್ಸೆ ಎಷ್ಟು ಪರಿಣಾಮಕಾರಿ ?" , "ನೆಲದ ಋಣ, ಗುಣಗಳನ್ನು ಮರೆತರೆ..." , "ನಾಗನಿಗೂ ಉಂಟು ಜೀರ್ಣ ದೋಷ !" , "ಒಂದು ಹೆಬ್ಬಾವಿನ ಮೊಟ್ಟೆಯ ಕಥೆ" , "ಜೀವಕ್ಕೆ ಎರವಾದ ಬುದ್ಧಿಮಾಂದ್ಯತೆ !" , "ಜೀವ ಶಾಸ್ತ್ರಜ್ಞನ ನಿರ್ಜೀವ ಜ್ಞಾನ" , "ಹೊಂಚು ಹಾಕಿ ಸಂಚು ಹೂಡುವವರುಂಟು" , "ವೀಕ್ ನೆಸ್ಸೇ ಇಲ್ಲಿ ಬ್ಯುಸಿನೆಸ್ಸು"  ಮತ್ತು "ಪ್ರಥಮ ಚಿಕಿತ್ಸೆ" ಎಂಬ ಲೇಖನಗಳೂ "ಕಮರಿದ ಸತ್ಯಗಳು, ಚಿಗುರಿದ ಸುದ್ಧಿಗಳು" ಕೃತಿಯಲ್ಲಿವೆ.

ಇಲ್ಲಿರುವ ಒಂದೊಂದು ಲೇಖನಗಳೂ, ಒಂದಕ್ಕಿಂತ ಮತ್ತೊಂದು ಅಮೂಲ್ಯ ಎಂಬಂತಿದೆ. ಪ್ರತೀ ಲೇಖನಗಳಲ್ಲಿಯೂ ಅಧ್ಯಯನಾತ್ಮಕ, ಸಂಶೋಧನಾತ್ಮಕ ಮಾಹಿತಿಗಳಿವೆ. ಜ್ಞಾನವೃದ್ಧಿಸಿಕೊಳ್ಳಲು ಅತೀ ಅಗತ್ಯವಾಗಿ ಓದಲೇಬೇಕಾದ ಕೃತಿಗಳ ಪಟ್ಟಿಯಲ್ಲಿ ಮೊದಲ ಸಾಲಲ್ಲಿ ನಿಲ್ಲುವ ಕೃತಿ ಇದಾಗಿದೆ.

ಗುರುರಾಜ ಸನಿಲ್ ರವರ ಅನನ್ಯವಾದ ಪರಿಸರ ಪ್ರೀತಿ ಮತ್ತು ಅಪಾರವಾದ ಜೀವಪರ ಕಾಳಜಿಗೆ ದ್ಯೋತಕವಾಗಿ ಇಲ್ಲಿರುವ ಬರೆಹಗಳು ಮೂಡಿಬಂದಿವೆ. ಬದುಕುವ ಕಲೆ ಮತ್ತು ಇತರರ ಜೀವಗಳನ್ನು, ಜೀವಿಗಳನ್ನು ಬದುಕಿಸುವ ಕಲೆ, ಸಿದ್ಧಿ ಸುಮ್ಮನೇ ಸಿದ್ಧಿಸುವುದಿಲ್ಲ. ವಿಶೇಷವೂ, ವಿಶಿಷ್ಟವೂ ಆದ ಅದ್ಯಾತ್ಮ ಮತ್ತು ಧ್ಯಾನಸ್ಥ ಮನಸ್ಥಿತಿ ಇದ್ದಾಗ ಮಾತ್ರ ಇದೆಲ್ಲವೂ ಸಾಧ್ಯ. ಇದೆಲ್ಲವನ್ನೂ ಗುರುರಾಜ ಸನಿಲ್ ರವರಲ್ಲಿ ಕಾಣಲು ಸಾಧ್ಯ. ಗುರುರಾಜರ ಸಿದ್ಧಿ ಮತ್ತು ಸಾಧನೆಗಳನ್ನು ಇತರರಿಗೆ  ತಮ್ಮದನ್ನಾಗಿಸಲು ಸಾಧ್ಯವಿಲ್ಲವಾದರೂ, ಇವರ ಕೃತಿರತ್ನಗಳನ್ನು ಓದಿಕೊಂಡು, ಓದಿನಿಂದ ಸಂಪಾದಿಸಿದ ಜ್ಞಾನವನ್ನು, ಜೀವಪರ ಕಾಳಜಿಯನ್ನು ಇತರರಿಗೆ ವಿನಿಮಯ, ವರ್ಗಾವಣೆ ಮಾಡಿಕೊಳ್ಳುವ ಮೂಲಕ ಮತ್ತು ನಮ್ಮ ಜೀವನದಲ್ಲಿ ಕೆಲವೊಂದಷ್ಟನ್ನು ಅಳವಡಿಸಿ ಪಾಲಿಸಿಕೊಂಡು ಮುಂದುವರಿಯುವ ಮೂಲಕ ನಾವೂ ನಮ್ಮದನ್ನಾಗಿಸಿಕೊಳ್ಳುವ ಅವಕಾಶ ಖಂಡಿತಾ ಇದ್ದೇ ಇದೆ. ಗುರುರಾಜ ಸನಿಲ್ ರವರ ಯಾವುದೇ ಕೃತಿಗಳನ್ನಾದರೂ ಓದುವುದರೊಂದಿಗೆ ಗುರುರಾಜರ ಸಿದ್ಧಿ, ಸಾಧನೆಗಳಲ್ಲಿನ ಒಂದಂಶವನ್ನು ಓದುಗರು ಸಹ ತಮ್ಮದನ್ನಾಗಿಸಿಕೊಳ್ಳಬಹುದು. ಈ ಸದಾವಕಾಶವನ್ನು ಕಳೆದುಕೊಂಡರೆ ನಿಜಕ್ಕೂ ನಷ್ಟವೇ.

~ *ಶ್ರೀರಾಮ ದಿವಾಣ*