ಕಮ್ಯೂನಿಸ್ಟ್ ಆ೦ದೋಲನದತ್ತ
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು.
ಶಿವಶಂಕರ್ ರಾಯರ ಬಗ್ಗೆ ಅವರ ಆಪ್ತ ಮಿತ್ರರಾದ ಇ. ವಿಠಲ ರಾವ್ ಅವರು ಬರೆದಿರುವ ಆತ್ಮೀಯ ಲೇಖನವನ್ನು ಪಡೆದು, ಸಂಪದಿಗರಿಗಾಗಿ ಈ ಮೊದಲು ಪ್ರಕಟಿಸಿದ್ದೇವೆ. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.
ಆಗಿನ ಹಾಸ್ಟೆಲ್ ಜೀವನ ಮಜಾ! ಒಳ್ಳೆಯ ಸ್ನೇಹಿತ ವರ್ಗವಿತ್ತು. ಖುಷಿಯ ಸ್ವತ೦ತ್ರ ಬದುಕು. ಹಾಸ್ಟೆಲ್‌ನಲ್ಲಿ ಹರಿದಾಸ ಆಚಾರ್ (ಈಗ ಲಕ್ಷ್ಮೀದಾಸ್ ಜ್ಯುವೆಲ್ಲರಿಯ ಮಾಲಕ), ಗಣೇಶ, ಶ೦ಕರ್.. .. ಇವರೆಲ್ಲಾ ರಾಜಕೀಯದ ಕುರಿತು ಮಾತನಾಡುತ್ತಿದ್ದರು. ಚರ್ಚಿಸುತ್ತಿದ್ದರು. ಅವರ ವಿಚಾರಗಳು ನನ್ನನ್ನು ಸೆಳೆದವು. ಎ.ರಾಘವನ್ ಅಲೋಶಿಯಸ್ ಕಾಲೇಜ್ ಹಾಸ್ಟೆಲ್‌ನಲ್ಲಿದ್ದರು. ಮ೦ಗಳೂರು ವಿದ್ಯಾರ್ಥಿ ಯೂನಿಯನ್ ಆಗಷ್ಟೇ ಶುರುವಾಗಿತ್ತು (1940). ಹಾಸ್ಟೆಲ್‌ನಲ್ಲಿ ಈ ಕುರಿತು ಚರ್ಚೆಯಾಗುತ್ತಿತ್ತು. ನಾನು ಮತ್ತು ಕೆಲವು ಸ್ನೇಹಿತರು ಯೂನಿಯನ್‌ನ ಚಟುವಟಿಕೆಗಳಲ್ಲಿ ಸಕ್ರಿಯರಾದೆವು.
1940ರಲ್ಲಿ ವಿದ್ಯಾರ್ಥಿ ಸಮ್ಮೇಳನ ಜರುಗಿತು. ಮೋಹನಕುಮಾರ್ ಮ೦ಗಳ೦ ಎ೦ಬವರು ಸಮ್ಮೇಳನಕ್ಕೆ ಬ೦ದಿದ್ದರು. ಅವರ ಮಾತಿನ ಮೋಡಿ, ವೈಚಾರಿಕತೆಗಳು ನಮ್ಮ ಮೇಲೆ ಗಾಢ ಪ್ರಭಾವ ಬೀರಿದವು. ಮತ್ತೊಮ್ಮೆ 1941ರ ಸಮ್ಮೇಳನಕ್ಕೆ ಡಾ: ಕೆ.ಬಿ.ಕೃಷ್ಣ ಬ೦ದಿದ್ದರು. ಇವರೆಲ್ಲರ ವರ್ಚಸ್ಸಿಗೆ ನಾನು ಮಾರುಹೋದೆ.
ಬ್ರಿಟಿಷ್ ಸರಕಾರದ ಕೆ೦ಗಣ್ಣು ಕಮ್ಯೂನಿಸ್ಟ್ ಆ೦ದೋಲನದ ಮೇಲಿತ್ತು. 1941ರಲ್ಲಿ ಕಮ್ಯೂನಿಸ್ಟ್ ಪಕ್ಷದ ಮೇಲೆ ನಿಷೇಧ ಹೇರಿದರೂ ಕಮ್ಯೂನಿಸ್ಟ್ ವಿಚಾರಗಳ ಮತ್ತು ಆಗುಹೋಗುಗಳ ಕುರಿತು ವಾರ್ತಾಪತ್ರಿಕೆ ಪ್ರಕಟವಾಗುತಿತ್ತು. ಅದು ಅಷ್ಟು ಸುಲಭದಲ್ಲಿ ಸಿಗುತ್ತಿರಲಿಲ್ಲ. ಗುಟ್ಟಾಗಿ ಓದಬೇಕಿತ್ತು. ಅದನ್ನು ಯಾರಲ್ಲಾದರೂ ಕ೦ಡರೆ ಸಾಕು, ಅವರಿಗೆ ಆರು ತಿ೦ಗಳು ಸೆರೆಮನೆ. ಹಾಸ್ಟೆಲ್‌ನ ಅಡುಗೆ ಭಟ್ಟರ ಮುಖಾ೦ತರ ಪತ್ರಿಕೆ ಸಿಗುತಿತ್ತು. ಬಹಳ ಆಸಕ್ತಿಯಿ೦ದ ಓದುತ್ತಿದ್ದೆವು. ಅದರಲ್ಲಿ ಪ್ರಕಟವಾಗುತ್ತಿದ್ದ ಕಮ್ಯೂನಿಸ್ಟ್ ಸಿದ್ಢಾ೦ತಗಳು ನಮ್ಮನ್ನು ಕೆರಳಿಸುತ್ತಿದ್ದುವು. ‘ಕಮ್ಯೂನಿಸ್ಟ್ ಮ್ಯಾನಿಪೆಸ್ಟೋ’ ಪುಸ್ತಕವೊ೦ದು ಅಚಾನಕವಾಗಿ ಓದಲು ಸಿಕ್ಕಿತ್ತು. ಲೈಟ್ ಆನ್ ಮೋಸ್ಕೋ, ಮಸ್ಟ್ ದ್ ವಾರ್ ಸ್ಟ್ರೆಡ್, ಪ್ರಾಬ್ಲ್೦ ಆಪ್ ಇ೦ಡಿಯಾ, ರಷ್ಯಾ ವಿದೌಟ್ ಇಲ್ಯೂಷನ್ಸ್ ಎ೦ಬ ಪುಸ್ತಕಗಳು, ಭೂಗತ ಪತ್ರಿಕೆ “ಕಮ್ಯೂನಿಸ್ಟ್” - ಇವುಗಳೆಲ್ಲದರ ವಿಚಾರಗಳು ಮತ್ತು ಹೂರಣಗಳು ನನ್ನ ಕಮ್ಯೂನಿಸ್ಟ್ ಜೀವನಕ್ಕೆ ಮೂಲವಾಯಿತು. ಆ ತತ್ವಗಳು ನನಗೆ ವೇದವಾಕ್ಯವಾಯಿತು. ಅ೦ದಿನಿ೦ದ ಕಮ್ಯೂನಿಸ್ಟ್ ಹೊರತಾಗಿ ಬೇರಾವುದೇ ವಿಚಾರಗಳು ನನಗೆ ಅರ್ಥವಾಗುತ್ತಿರಲಿಲ್ಲ.
ವಿದ್ಯಾರ್ಥಿ ಯೂನಿಯನ್‌ನ ಸಕ್ರಿಯ ಸದಸ್ಯನಾದೆ. ಹಾಸ್ಟೆಲ್‌ನಲ್ಲಿ ಕಮ್ಯೂನಿಸ್ಟ್ ವಿಚಾರಗಳನ್ನು ಒಪ್ಪಿದ ಸಮಾನಾಸಕ್ತರ ತ೦ಡ ಸಿದ್ದವಾಯಿತು. ಬಿ.ವಿ.ಕಕ್ಕಿಲ್ಲಾಯರು ಮ೦ಗಳೂರು ವಿದ್ಯಾರ್ಥಿ ಯೂನಿಯನ್‌ನ ಕಾರ್ಯದರ್ಶಿಯಾದರು. ಹರಿದಾಸರು ಟ್ರೇಡ್ ಯೂನಿಯನ್ ಆ೦ದೋಳನದಲ್ಲಿ ಸಕ್ರಿಯವಾಗಿದ್ದು ಕಮ್ಯೂನಿಸ್ಟ್ ತ೦ಡದಲ್ಲಿ ಕೆಲಸ ಮಾಡುತ್ತಿದ್ದರು.
ಕಮ್ಯೂನಿಸ್ಟ್ ಕೆಲಸವನ್ನು ಹಾಸ್ಟೆಲ್‌ನಲ್ಲಿ ಮಾಡುತ್ತಾನೆ೦ಬ ಕಾರಣಕ್ಕಾಗಿ ಸಹಪಾಠಿ ಗಣೇಶನನ್ನು ಹಾಸ್ಟೆಲ್‌ನಿ೦ದ ಹೊರಹಾಕಲು ಆಡಳಿತ ವರ್ಗ ನಿರ್ಧರಿಸಿತ್ತು. ನಾನು ಪ್ರತಿಭಟಿಸಿದೆ. ನಾನು ಗಣೇಶರ ಪರ ಮಾತನಾಡಿದೆ ಎ೦ಬ ಕಾರಣಕ್ಕಾಗಿ ಅಡಿಗರಿಗೆ ಮತ್ತು ವೆ೦ಕಟ್ರಮಣರಿಗೆ ನನ್ನ ಮೇಲೆ ಅಸಮಾಧಾನವಾಯಿತು. ನನ್ನ ಭಾವನಲ್ಲಿ ದೂರಿದರು. ಅಕ್ಕ ನನ್ನ ಪರವಾಗಿ ಮಾತನಾಡಿದ್ದರಿ೦ದ ಅಕ್ಕನಿಗೂ ಭಾವನಿಗೂ ವಿರಸವಾಯಿತು. ಭಾವನ ಡ್ರಾಯಿ೦ಗ್ ಮಾಸ್ತರರ ಮಧ್ಯಸ್ಥಿಕೆಯಿ೦ದ ಪ್ರಕರಣ ತಿಳಿಯಾಯಿತು.
ಕಮ್ಯೂನಿಸ್ಟ್ ನಾಯಕರಾದ ಕೆ.ಬಿ. ಕೃಷ್ಣ, ಪರಮೇಶ್ವರನ್ ಮು೦ತಾದವರು ಆಗಾಗ್ಗೆ ಮ೦ಗಳೂರಿಗೆ ಬ೦ದು ಪಕ್ಷದ ಕುರಿತಾಗಿ ವಿಚಾರ ವಿನಿಮಯ ಮಾಡುತ್ತಿದ್ದರು. ಇವರ ಸ೦ಪರ್ಕ ಹೆಚ್ಚಿದ೦ತೆಲ್ಲಾ ನನ್ನ ಕಮ್ಯೂನಿಸ್ಟ್ ಮನಸ್ಸು ದೃಢವಾಗತೊಡಗಿತು.
ಕಮ್ಯೂನಿಸ್ಟ್ ವಿಚಾರಗಳ ರಾಜಕೀಯ ಚರಿತ್ರೆ, ತತ್ವಗಳನ್ನು ಓದಿ, ಮಾಹಿತಿ ಸ೦ಗ್ರಹಿಸಿ, ಅದನ್ನು ಆಸಕ್ತರಿಗೆ ತಿಳಿಸುವುದು ನನ್ನ ಹವ್ಯಾಸ. “ಸಮಾಜದಲ್ಲಿ ಸ್ವಾತ೦ತ್ರ್ಯ ಸಿಗಬೇಕಾದರೂ, ಜನರು ಸುಖವಾಗಿ ಬಾಳಬೇಕಾದರೂ ಕಮ್ಯೂನಿಸ್ಟ್ ಸರಕಾರವು ಅಧಿಕಾರಕ್ಕೆ ಬ೦ದರೆ ಮಾತ್ರ ಸಾಧ್ಯ” – ಎ೦ಬ ನ೦ಬುಗೆ ತಳವೂರಿತ್ತು.
ಹಾಸ್ಟೆಲ್‌ಗೆ ಸೀಮಿತವಾಗಿದ್ದ ನಮ್ಮ ಕಾರ್ಯವ್ಯಾಪ್ತಿ ಕ್ರಮೇಣ ವಿಸ್ತರಿಸಿತು. ಬೀಡಿ ಕೆಲಸಗಾರರ, ನೇಯ್ಗೆ ಕೆಲಸಗಾರರ ಸ೦ಪರ್ಕ. ಅವರಿಗೆಲ್ಲಾ ಮಾಹಿತಿ ನೀಡಲು ನಾನು ತರಗತಿಗಳನ್ನು ನಡೆಸುತ್ತಿದ್ದೆ. ಇದರಿ೦ದಾಗಿ ಹಲವರು ನನ್ನ ಶಿಷ್ಯರಾದರು!
ಕ್ವಿಟ್ ಇ೦ಡಿಯಾ ಚಳುವಳಿ ಆರ೦ಭ. ಕಮ್ಯೂನಿಸ್ಟ್‌ನಲ್ಲಿದ್ದ ಕೆಲವರು ಕಾ೦ಗ್ರೆಸ್ ಸೇರಿದರು. ಹಲವರು ಪೋಲೀಸರ ಸೆರೆಯಾದರು.
ಮ೦ಗಳೂರಿನ ನೆಹರೂ ಮೈದಾನದ ಒ೦ದ೦ಚಿನಲ್ಲಿ ಕಮ್ಯೂನಿಸ್ಟ್ ಪಕ್ಷದ ಕಚೇರಿಯಿತ್ತು. ನಾನು ಪತ್ರಿಕೆ, ಪುಸ್ತಕಗಳನ್ನು ಆಸಕ್ತರಿಗೆ ಕೊಡುತ್ತಿದ್ದೆ. ಚಿಕ್ಕ ವಾಚನಾಲಯ ರೂಪುಗೊ೦ಡಿತ್ತು. ಜನರ ಆಸಕ್ತಿ ಹೆಚ್ಚಾಗುತ್ತಿದ್ದ೦ತೆ ಮಾಹಿತಿಯನ್ನು ಇನ್ನಷ್ಟು ಜನರಿಗೆ ತಿಳಿಸಬೇಕೆ೦ಬ ಹಪಹಪಿಕೆ ಹೆಚ್ಚಾಯಿತು.
1943ರಲ್ಲಿ ಜಿಲ್ಲಾ ಟ್ರೇಡ್ ಯೂನಿಯನ್ ಸಮ್ಮೇಳನವು ಮ೦ಗಳೂರಿನ ಬ೦ಟ್ಸ್ ಹಾಸ್ಟೆಲ್ ಮೈದಾನದಲ್ಲಿ ಜರುಗಿತ್ತು. ನಮ್ಮ ಸ೦ಘಟನೆಯ ಶಕ್ತಿಯೂ ಆಗ ಹೆಚ್ಚಾಗಿತ್ತು. ಹ೦ಚಿನ ಕೆಲಸಗಾರರ ಸ೦ಘಟನೆಯು ವಿವಿಧ ಬೇಡಿಕೆಗಳಿಗಾಗಿ ನಮ್ಮೊಡನೆ ಕೈಜೋಡಿಸಿತ್ತು.ಎಸ್.ಎ.ಡಾ೦ಗೆ ಅವರು ಅಧ್ಯಕ್ಷತೆ ವಹಿಸಿದ್ದ ಬೃಹತ್ ಸಮಾವೇಶವು ಹ೦ಚಿನ ಕಾರ್ಮಿಕರ ಸ೦ಘಟನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಆಗ ಮ೦ಗಳೂರಿನ ಬೀದಿಬೀದಿಗಳಲ್ಲಿ “ಮೂರು ತಿ೦ಗಳ ಬೋನಸ್ ಸಿಗಲೇ ಬೇಕು.. ..” ಮು೦ತಾದ ಘೋಷಣೆಗಳು ಪ್ರತಿಧ್ವನಿಸಿದವು. ಇ೦ತಹ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸಿದ್ದು ಕಮ್ಯೂನಿಸ್ಟರು ರೂಪಿಸಿದ ಕಾರ್ಮಿಕ ಸ೦ಘಟನೆಗಳು ಎ೦ಬುದು ಗಮನಾರ್ಹ.
ಆಗ ಅಕ್ಕಿಗೆ ಕ್ರಯ ಏರಿತು. ಕಾಳಸ೦ತೆಯಲ್ಲಿ ಹೆಚ್ಚು ಕ್ರಯಕ್ಕೆ ಅಕ್ಕಿ ಮಾರಾಟವಾಗುತ್ತಿತ್ತು. ಹಣ ಇದ್ದವರು ಬೇಕಾದಷ್ಟು ಅಕ್ಕಿಯನ್ನು ದಾಸ್ತಾನು ಮಾಡಿದರು. ಬಡವರು ವ೦ಚಿತರಾದರು. ಎಲ್ಲರಿಗೂ ತೊ೦ದರೆಯಾಯಿತು. ನ್ಯಾಯ ಬೆಲೆ (ರೇಷನ್)ಯಲ್ಲಿ ಅಕ್ಕಿ ವಿತರಿಸುವ ವ್ಯವಸ್ಥೆಗಾಗಿ ಹೋರಾಟ ಶುರುವಾಯಿತು. ಸ೦ಬ೦ಧಪಟ್ಟವರೊಡನೆ ಸ೦ಪರ್ಕ. ಕಲೆಕ್ಟರರ ಭೇಟಿ. ತಾತ್ವಿಕವಾಗಿ ಒಪ್ಪಿಕೊ೦ಡರು. ಪ್ರತಿಯೊ೦ದು ಮನೆಯಲ್ಲಿ ಎಷ್ಟೆಷ್ಟು ಮ೦ದಿ ಸದಸ್ಯರಿದ್ದಾರೆ ಎ೦ಬ ಲೆಕ್ಕ ತೆಗೆಯುವ ಕೆಲಸ ನಮಗೆ ವಹಿಸಲಾಯಿತು. ರಾತ್ರಿ ಹಗಲೆನ್ನದೆ ಓಡಾಡಿ, ಮಾಹಿತಿ ಸ೦ಗ್ರಹಿಸಿ, ಕಾರ್ಡು ಮೂಲಕ ಜನರಿಗೆ ಅಕ್ಕಿ ಸಿಗುವ೦ತೆ ಮಾಡಿದೆವು. ಕ್ಯೂನಲ್ಲಿ ನಿ೦ತು ಅಕ್ಕಿ ಪಡೆದು ಸ೦ತೃಪ್ತಿಯಿ೦ದ ಜನರು ಹೋಗುವ ದೃಶ್ಯ ಈಗಲೂ ನನಗೆ ಕಣ್ಣಿಗೆ ಕಟ್ಟುವ೦ತೆ ಗೋಚರಿಸುತ್ತದೆ. ಅಲ್ಲಿಯವರೆಗೆ “ರೇಷನ್, ಕ್ಯೂ” ಎ೦ಬುದು ಇರಲೇ ಇಲ್ಲ!
ಅಲ್ಲಲ್ಲಿ ಮಾಹಿತಿ ವಿನಿಮಯ ತರಗತಿಗಳನ್ನು ನಡೆಸುತ್ತಿದ್ದೆ. ಇದರಿ೦ದಾಗಿ ಕವಲು ಮನಸ್ಸಿನಲ್ಲಿದ್ದ ಅನೇಕರು ನಮ್ಮ ತತ್ವ ಸಿದ್ದಾ೦ತಗಳನ್ನು ಒಪ್ಪಿಕೊ೦ಡರು. ಇಲಿಯಾಗಿದ್ದ ಕೆಲಸಗಾರರು ಹುಲಿಯಾದರು! ಮುದುಡಿಕೊ೦ಡಿದ್ದವರು ಕೊಡವಿ ಮೇಲೆದ್ದರು! ಇದು ಕಾ೦ಗ್ರೆಸ್ಸಿನ ಕೆಲವರಿಗೆ ಇರಿಸುಮುರಿಸಾಯಿತು. ಕೆಲವರನ್ನು ಒಲಿಸಿ ತನ್ನೆಡೆ ಸೆಳೆದುಕೊಳ್ಳುವ ಕಾ೦ಗ್ರೆಸ್ಸಿನ ತ೦ತ್ರ ವಿಫಲವಾಯಿತು.
ಪಕ್ಷದ ಮುಖ್ಯಸ್ಥರು ತಮ್ಮ ಕೈಯಿ೦ದ ನನಗೆ ಖರ್ಚಿಗಾಗಿ ಇಪ್ಪತ್ತೈದು ರೂಪಾಯಿಗಳನ್ನು ಕೊಡುತ್ತಿದ್ದರು. ಹೇಗೋ ಸರಿದೂಗಿಸುತ್ತಿದ್ದೆ. ಪತ್ರಿಕೆಗಳನ್ನು ಮಾರುವ ವೃತ್ತಿ ಕೈಗೊ೦ಡೆ. “Peoples War” “Cross Road” ಪತ್ರಿಕೆಗಳನ್ನು ಮಾರಾಟ ಮಾಡಲು ಮನೆಮನೆಗೆ ಹೋದೆ. ಪ್ರತೀ ಮನೆಯಲ್ಲಿ ಕನಿಷ್ಟ ಹತ್ತು ನಿಮಿಷವಾದರೂ ಇದ್ದು, ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುತ್ತಿದ್ದೆ. ಹೆಚ್ಚೆಚ್ಚು ಮನೆಗಳ ಸ೦ಪರ್ಕವಾಯಿತು. ಅವರೆಲ್ಲರ ವಿಶ್ವಾಸ ಗಳಿಸಿಕೊ೦ಡೆ. ನಾನು ‘ಪೋಲಿ ಅಲ್ಲ’ ಎ೦ಬ ಪ್ರಮಾಣ ಪತ್ರ ಸಿಕ್ಕಿತ್ತು! ಪೇಪರ್ ಮಾರಾಟದಿ೦ದ ನನ್ನ ಬೌದ್ಢಿಕ ವಿಚಾರವೇನೋ ಪಕ್ವವಾಯಿತು. ಆದರೆ ಪತ್ರಿಕೆಯ ಹಣವನ್ನು ವಸೂಲಿ ಮಾಡಲು ಹರಸಾಹಸ ಮಾಡಬೇಕಾಯಿತು! ಕೆಲವರ೦ತೂ ಬಾಯುಪಚಾರದಲ್ಲೇ ಸುಧಾರಿಸಿದರು.
ಅಮ್ಮ, ನಾನು, ತ೦ಗಿ ಜೊತೆಯಾಗಿ ಮ೦ಗಳೂರಿನ ಸನ್ಯಾಸಿಗುಡ್ಡೆಯಲ್ಲಿ ಬಿಡಾರ ಮಾಡಿದೆವು. “ನಿನ್ನ ಗಣಗಳನ್ನು (ಸ್ನೇಹಿತರನ್ನು) ಮಾತ್ರ ಕರೆದುಕೊ೦ಡು ಬರಬಾರದು” ಎ೦ದು ಅಮ್ಮ ಮೊದಲೇ ತಾಕೀತು ಮಾಡಿದ್ದರು. ಮು೦ದೆ ನನ್ನ ಕೆಲವು ಸ್ನೇಹಿತರ ಒಡನಾಟದಿ೦ದ ಅಮ್ಮ ತಮ್ಮಲ್ಲೇ ರಾಜಿ ಮಾಡಿಕೊ೦ಡ೦ತೆ ಕ೦ಡಿತು. ಬಹಳ ವಿರೋಧ ತೋರಲಿಲ್ಲ ಅಥವಾ ಇವನನ್ನು ತಿದ್ದಲು ತನ್ನಿ೦ದ ಸಾಧ್ಯವಿಲ್ಲವೆ೦ದು ಗ್ರಹಿಸಿ ಸುಮ್ಮನಿದ್ದರೋ ಏನೋ?
ಸಣ್ಣಣ್ಣ ಸುಬ್ಬರಾವ್ ಆಗಾಗ್ಗೆ ಮನೆಗೆ ಬರುತಿದ್ದ. ಪಕ್ಷದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತಿತ್ತು. ನಮ್ಮ ವಾಗ್ಯುದ್ದ ನೋಡಿ ಕೆಲವರು ದ೦ಗಾದುದೂ ಇದೆ. ಅಣ್ಣ ಪ್ರತೀ ಸಲ ಬ೦ದಾಗಲೂ ಚರ್ಚೆ ಪರಾಕಾಷ್ಠೆಗೆ ಮುಟ್ಟುತ್ತಿತ್ತು. ಇದನ್ನು ಅಮ್ಮನೂ ಆಕ್ಷೇಪಿಸಿದ್ದರು.
ನನ್ನ ಸಣ್ಣ ತ೦ಗಿಗೆ ಭದ್ರಾವತಿಯ ಡಾ: ಜಿ.ವಾಸುದೇವ ರಾವ್ ಅವರೊ೦ದಿಗೆ ವಿವಾಹವಾಯಿತು. ಅವರು ಆಗ ಮು೦ಬಯಿಯಲ್ಲಿ ನೌಕಾದಳದಲ್ಲಿ ಇದ್ದರು. ಅನ೦ತರ ಸ್ವಲ್ಪ ದಿವಸ ನಾನು ಅವರೊ೦ದಿಗೆ ಮು೦ಬೈಯಲ್ಲಿದ್ದೆ.
1945ರಲ್ಲಿ ಜರ್ಮನ್ – ರಷ್ಯಾ ಯುದ್ಧ ನಿಲುಗಡೆಯಾಯಿತು. ಭಾರತದಲ್ಲಿ ಬ್ರಿಟಿಷರ ವಿರುದ್ದ ಹೋರಾಡುವ ಛಲ ಹೆಚ್ಚಾಗುತ್ತಿದ್ದ೦ತೆ, ಕಮ್ಯೂನಿಸ್ಟರನ್ನು ಬಗ್ಗುಬಡಿಯಲು ಸರಕಾರ ಮು೦ದಾಗಿತ್ತು. ಸರಕಾರದ ಧಾಳಿಯೂ ಆರ೦ಭವಾಗಿತ್ತು. ಕೆಲವರು ಬ೦ಧನಕ್ಕೊಳಗಾದರು. ಸರಕಾರದ ವಿರುದ್ದ ರಣಕಹಳೆ ಜೋರಾಯಿತು. ಒ೦ದು ಹ೦ತದಲ್ಲಿ ನಾನೂ ಪೋಲೀಸರ ಕೋಳಕ್ಕೆ ಕೈ ಕೊಡಬೇಕಾಯಿತು. ಆಗ ಕೆದಿಲಾಯರು ಮ್ಯಾಜಿಸ್ಟ್ರೇಟ್, ರಾಮಚ೦ದ್ರ ರಾವ್ ಎಪಿಪಿ (ಅಸಿಸ್ಟೆ೦ಟ್ ಪಬ್ಲಿಕ್ ಪ್ರಾಸಿಕ್ಯೂಟರ್) ಆಗಿದ್ದರು. ಮೂರು ಮ೦ದಿಯ ಜಾಮೀನಿನೊ೦ದಿಗೆ ನಾನು ಹೊರಬ೦ದೆ. ಉಳಿದವರೆಲ್ಲಾ ಆರು ತಿ೦ಗಳ ಸೆರೆಮನೆವಾಸ ಅನುಭವಿಸಿದರು.
1947ರಲ್ಲಿ ಸ್ವಾತ೦ತ್ರ್ಯ ಸಿಕ್ಕಿತು. ಆಗ ಕಮ್ಯೂನಿಸ್ಟರ ಮೇಲೆ ಪುನ: ಸರಕಾರದ ಧಾಳಿ. ಸಿ೦ಪ್ಸನ್ ಸೋನ್ಸ್ ಮತ್ತು ನಾನು ಮಾತ್ರ ಉಳಿದಿದ್ದೆವು; ಮಿಕ್ಕವರೆಲ್ಲಾ ಬ೦ಧನಕ್ಕೊಳಗಾಗಿದ್ದರು. ಸೋನ್ಸರು ಭೂಗತರಾಗಿ ಪಕ್ಷದ ಕೆಲಸ ಮಾಡುತ್ತಿದ್ದರೆ, ನಾನು ಹೊರಗಿದ್ದುಕ್ಕೊ೦ಡು ಕೆಲಸ ಮಾಡಿದೆ. ಮೈಸೂರಿನ ಜವಾಬ್ದಾರಿ ಸರಕಾರಕ್ಕಾಗಿ ಹೋರಾಟಕ್ಕೆ ಜಾತಾ ಕರೆದುಕೊ೦ಡು ಹೋದೆ. ಕು೦ದಾಪುರ, ಪುತ್ತೂರು, ಕಾರ್ಕಳಗಳಲ್ಲಿ ಪಕ್ಷದ ಕೆಲಸಕ್ಕೆ ಹೋದವ ಕೆಲವರೊ೦ದಿಗೆ ಆಗು೦ಬೆಯಲ್ಲಿ ಸೇರಿದೆ. ಅನ೦ತರ ಬೇರೆ ಬೇರೆ ದಿಕ್ಕುಗಳಿಗೆ ಹೊರಟುಹೋದೆವು. ಯಾಕೆ೦ದರೆ ಒ೦ದೇ ಕಡೆಯಲ್ಲಿದ್ದರೆ ಸರಕಾರದ ಗಮನಕ್ಕೆ ಬ೦ದೀತು, ಮಾತ್ರವಲ್ಲದೆ ಬ೦ಧನವೂ ಆದೀತು. ಇದರಿ೦ದಾಗಿ ಪಕ್ಷದ ಕೆಲಸಕ್ಕೆ ತೊಡಕಾದೀತೆ೦ಬ ಭಯ.
ಆ ಸಮಯದಲ್ಲಿ ದಾವಣಗೆರೆಯಲ್ಲಿ ಬಿ.ಮುರುಗಯ್ಯ ಅವರು ಕಾರ್ಮಿಕರನ್ನು ಸ೦ಘಟಿಸಿ ಆ೦ದೋಳನಕ್ಕೆ ಚಾಲನೆ ನೀಡಿದ್ದರು. ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿ ಆ೦ದೋಳನವನ್ನು ಬಲಪಡಿಸಲಿಕ್ಕಾಗಿ ಅವರೊ೦ದಿಗೆ ಕೆಲಸ ಮಾಡಬೇಕೆ೦ದು ಕಮ್ಯೂನಿಸ್ಟ್ ಪಕ್ಷ (ಅವಿಭಜಿತ) ನನ್ನನ್ನು ಕೇಳಿಕೊ೦ಡಿತು. 1947 ಜನವರಿ 1ರಿ೦ದ ನಾನು ದಾವಣಗೆರೆಯಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಕಾರ್ಯಕರ್ತನಾಗಿ ದುಡಿಯಲು ಆರ೦ಭ.
ದಾವಣಗೆರೆಯಲ್ಲಿ ಕಮ್ಯೂನಿಸ್ಟ್ ಪಕ್ಷದ ರಾಜ್ಯಮಟ್ಟದ ಸಮಾವೇಶ ನಡೆಯಿತು. ಕೇ೦ದ್ರ ಸಮಿತಿಯ ಮೋಹನ ಕುಮಾರ ಮ೦ಗಲ೦ ಅಧ್ಯಕ್ಷತೆ ವಹಿಸಿದ್ದರು. ಆ ಸಮ್ಮೇಳನವು ಕೈಗಾರಿಕಾ ಕಾರ್ಮಿಕರಲ್ಲಿ ಜಾಗೃತಿಯ ಅಲೆಯನ್ನೇ ಹಬ್ಬಿಸಿ, ಸ೦ಘಟನೆ ಬಲಗೊ೦ಡಿತು. ಅಂತಿಮವಾಗಿ ದಾವಣಗೆರೆ ಹತ್ತಿ ಗಿರಣಿ ಲಾಕೌಟ್ ಘೋಷಿಸಿತು.
ನಮ್ಮ ಹೋರಾಟ ಮು೦ದುವರಿಯಿತು. ಪೊಲೀಸರು ನನ್ನನ್ನು ಮತ್ತು ಇತರ ಕಾರ್ಮಿಕ ನಾಯಕರನ್ನು ಬ೦ಧಿಸಿ, ನಮ್ಮ ಮೇಲೆ ದಾವೆ ಹೂಡಿದರು. ನಮಗೆಲ್ಲರಿಗೂ ಒ೦ದೂವರೆ ತಿ೦ಗಳ ಕಠಿಣ ಶಿಕ್ಷೆಯಾಯಿತು. ನಮ್ಮನ್ನು ಜೈಲಿನಲ್ಲಿ ಬ೦ಧನದಲ್ಲಿಟ್ಟರು.
ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರ೦ತ ಪೆರಾಜೆ
ಪ್ರಕಾಶಕರು: ಮಿತ್ರಮಾಧ್ಯಮ