ಕಯ್ಯಾರ ಕಿಞ್ಞಣ್ಣ ರೈಗಳೆಂಬ ದೈತ್ಯ ಶಕ್ತಿ-ಗಡಿನಾಡಿನ ಧೀಮಂತ ವ್ಯಕ್ತಿ

ಕಯ್ಯಾರ ಕಿಞ್ಞಣ್ಣ ರೈಗಳೆಂಬ ದೈತ್ಯ ಶಕ್ತಿ-ಗಡಿನಾಡಿನ ಧೀಮಂತ ವ್ಯಕ್ತಿ

ಏರುತಿಹುದು ಹಾರುತಿಹುದು

ನೋಡು ನಮ್ಮ ಬಾವುಟ

ತೋರುತಿಹುದು ಬಾನಿನಗಲ

ಹೊಡೆದು ಹೊಡೆದು ಪಟಪಟ

ಕೇಸರಿ ಬಿಳಿ ಹಸಿರು ಮೂರು

ಬಣ್ಣ ನಡುವೆ ಚಕ್ರವು

ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು

ಪ್ರಾಥಮಿಕ ಶಾಲೆಯ ಶಿಕ್ಷಕರು ಅಭಿನಯದೊಂದಿಗೆ ಕಲಿಸಿದ, ಕುಣಿಸಿದ, ಧ್ವಜ ಹಿಡಿದು ನಡೆದ ಈ ಪದ್ಯವನ್ನು ಮರೆಯಲು ಸಾಧ್ಯವೇ? ಇದನ್ನು ಬರೆದವರು ಗಡಿನಾಡಿನ ಧೀಮಂತ ವ್ಯಕ್ತಿ,ಹಿರಿಯ ಸಾಹಿತಿ, ಮಹಾಕವಿಯೆನಿಸಿದ, ಬಹುಮುಖ ಪ್ರತಿಭೆಯ, ಸ್ವಾತಂತ್ರ್ಯ ಹೋರಾಟಗಾರರೆನಿಸಿದ, ಕರ್ನಾಟಕ ಏಕೀಕರಣ ಚಳುವಳಿ, ಕಾಸರಗೋಡಿನ ಸಮಸ್ಯೆಗಳು, ವಿಲಿನೀಕರಣದ ಹೋರಾಟದ ಪ್ರಧಾನ ಸಂಚಾಲಕರಾದ ಮಾನ್ಯ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈಗಳು. ಸದಾಕಾಲ ನೆನಪಿನಲ್ಲಿ ಉಳಿಯುವವರು.

ಜನರ ಸೊತ್ತನ್ನು ಸುಲಿದು ದ್ರವ್ಯರಾಶಿಯ ಪಡೆದು

ದುಡಿದು ಸಾಯಿಸಿ ಕಟ್ಟಿಸಿದ ತಾಜಮಹಲು

ಪ್ರೇಯಸಿಯ ನೆನಹಿಂಗೆ-ಶಾಜಹಾನ್ ದೊರೆ, ದೊರೆಯೆ

ಈ ಮನೋರಮೆಯ ಮರ್ಜಿಗೆ? ಬೆಲೆಯ ಹೇಳು!

ಶ್ರೀಯುತರ ಮನದ ನೋವಿನಾಳದ ಬೇಸರದ ನಿಟ್ಟುಸಿರೇ ಕವನವಾಗಿರಬಹುದಲ್ಲವೇ? ವಿದೇಶಿಯರ ದುರಾಚಾರ, ಸ್ವದೇಶಿಗರ ಕಷ್ಟ, ಗಡಿನಾಡಿನ ಜನರ ತೊಳಲಾಟ, ಅನ್ಯಭಾಷಿಗರ ಪ್ರಹರ ಎಲ್ಲವನ್ನೂ ಇವರ ಅನೇಕ ಕವನಗಳಲ್ಲಿ ಓದಬಹುದು. ನೊಂದ ಮನದ ಆಲೋಚನೆ, ಭಾವನೆಗಳೇ ಬರೆಯಲ್ಪಟ್ಟಿದೆ ಎಂದರೆ ತಪ್ಪಾಗಲಾರದು.

ಪ್ರಯತ್ನಕ್ಕೆ ತಕ್ಕ ಫಲ ಸಿಗಲೆಂದು ಪ್ರಾರ್ಥನೆ ಮಾಡುವುದು ತಪ್ಪಲ್ಲ,ಆದರೆ ಪ್ರಾರ್ಥನೆಯೇ ಮಾಡದಿದ್ದರೆ ಹೇಗೆ? ಇದು ದೊಡ್ಡ ತಪ್ಪು ಎಂದವರು. ಪ್ರೀತಿ-ದ್ವೇಷಗಳ ಸಮ್ಮಿಶ್ರಣ ಸಂಸಾರ ಸಾಗರ. ಹಾಗೆಂದು ದ್ವೇಷ, ಕೋಪ, ಸಿಟ್ಟು ಸದಾ ಒಳ್ಳೆಯದಲ್ಲ, ದ್ವೇಷ ‌ಸಾವಿಗೆ ಸಮ ಎಂದರು. ನೋಡುವ ದೃಷ್ಟಿ ಮತ್ತು ಕಾವ್ಯದ ಸೃಷ್ಟಿ ಎರಡೂ ಸಮ್ಮಿಲಿತವಾದರೆ ಒಂದು ಸುಲಲಿತ, ಸುಂದರ ಕಾವ್ಯ ಆಗಬಹುದೆಂದರು. ಬುದ್ಧಿ ಭಾವಗಳ ರಾಸಾಯನಿಕ ಸಂಯೋಗವೇ ಉತ್ಕೃಷ್ಟ ಕಾವ್ಯದ ಬುನಾದಿ, ಹಾಗೆಯೇ ಬರೆದರು ಸಹ.

ಕೇರಳದ ಕಾಸರಗೋಡಿನ ಪೆರಡಾಲದ ಕಯ್ಯಾರ ಎಂಬಲ್ಲಿ ಶ್ರೀ ದುಗ್ಗಪ್ಪ ರೈ, ದೈಯಕ್ಕ ದಂಪತಿಗಳಿಗೆ ಜೂನ್ ೮, ೧೯೧೫ರಂದು ಜನಿಸಿದ ರತ್ನಸಾದೃಶರು. ಮುಂದೆ ವಿದ್ಯಾಭ್ಯಾಸ ಪಡೆದು ನವಜೀವನ ಹೈಸ್ಕೂಲ್ ಪೆರಡಾಲದಲ್ಲಿ ಅಧ್ಯಾಪಕ ವೃತ್ತಿಗೆ ಸೇರಿದರು.ಸ್ಥಳೀಯ ಪಂಚಾಯತಿನ ಅಧ್ಯಕ್ಷರೂ ಆದ ಅನುಭವ, ರಾಜಕೀಯ ಸಮಸ್ಯೆಗಳ ಅರಿವು ಮೂಡಿಸಲು ಸಾಧ್ಯವಾಯಿತು. ಸುಮಾರು ೫ ಸಾವಿರ ಲೇಖನಗಳನ್ನು ಪತ್ರಿಕೆಗಳಿಗೆ ಬರೆದವರೆಂದು ತಿಳಿದು ಬರುತ್ತದೆ. ಎಲ್ಲಾ ಬರವಣಿಗೆಯ ಸಾರ, ಪರಕೀಯರ ದಾಳಿ, ಅವರ ದುರಾಡಳಿತ, ನಮ್ಮವರ ನೋವು, ದೇಶಾಭಿಮಾನದ ಕಿಚ್ಚು, ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಬಲವಾದ ಆಕಾಂಕ್ಷೆ ಎದ್ದು ಕಾಣುತ್ತಿತ್ತು. ಪ್ರಾದೇಶಿಕ ರಂಗು, ಜಾನಪದ ಲೋಕದ ಅನಾವರಣ ಬರಹಗಳಲ್ಲಿ ನೋಡಬಹುದು. ‘ದುಡಿತವೇ ನನ್ನ ದೇವರು’ ಆತ್ಮಕಥನ. ರಾಷ್ಟ್ರಕವಿ ಮಂಜೇಶ್ವರ ಗೋವಿಂದಪೈಯವರ ಕುರಿತಾಗಿ ಖಂಡ ಕಾವ್ಯ ಬರೆದಿದ್ದಾರೆ. ಕಥಾ ಸಂಗ್ರಹ, ಕವನ ಸಂಕಲನ, ಜೀವನ ಚರಿತ್ರೆ, ನಾಟಕ ಅನೇಕ ಕವನಗಳನ್ನು ರಚಿಸಿದವರು. ತುಳು ಭಾಷೆಯ ಸ್ಥಿತಿಯನ್ನು ನೆನೆದು ವ್ಯಥೆಪಡುತ್ತಿದ್ದರಂತೆ.

ಶ್ರೀಯುತರಿಗೆ ನಾಡೋಜ, ಪಂಪ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು, ರಾಷ್ಟ್ರಮಟ್ಟದ ಅಧ್ಯಾಪಕ ಪ್ರಶಸ್ತಿ, ಕರ್ನಾಟಕ ಏಕೀಕರಣ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರಗಳು ದೊರೆತಿರುತ್ತದೆ. ಮಂಗಳೂರು ವಿ.ವಿಯ ಗೌರವ ಡಾಕ್ಟರೇಟಿಗೂ ಭಾಜನರಾಗಿದ್ದಾರೆ. ಇಂತಹ ಮಹಾನ್, ಶ್ರೇಷ್ಠ ಸಾಹಿತಿಗಳಿಗೆ ಜ್ಞಾನಪೀಠವಾಗಲಿ, ಪದ್ಮಶ್ರೀಯಾಗಲಿ ಸಿಗದಿರುವುದು ಬೇಸರದ ವಿಷಯ.

ಕೊರಳ ಮೇಲೆತ್ತಿ ಶುಭ ನವೋದಯವ

ಸಾರಿತೊಂದು ಮುಂಗೋಳಿ

ಕಣ್ಣು ತೆರೆದು ಜನ ಕಂಡಿತ್ಯೆ ಜಗವ ಜುಟ್ಟು

ನಿತ್ಯದ ಕೆಲಸ ಕಾರ್ಯಗಳು ಅದರಷ್ಟಕ್ಕೇ ಆಗುತ್ತಿರುತ್ತದೆ, ಅದನು ಕಂಡು, ಕೇಳಿ, ಅನುಭವದ ಹೂರಣವ ಸೇರಿಸಿ ಬರೆಯುವ ಸಾಹಿತಿ,ಕವಿ ಓರ್ವ ಮಂತ್ರವಾದಿ ಎಂದು ಹೇಳಿದರು. ಕವಿತ್ವದಲ್ಲಿ ಆಕರ್ಷಣೆ, ವಾಸ್ತವ, ನೈಜ ತತ್ವಗಳು ಸೇರಿದ್ದು ಸೆಳೆಯಲ್ಪಡಬೇಕೆಂದರು.

ಆವ  ಶ್ರೀಮಂತನೋ,ಆವ ಸಾಮಂತನೋ

ನೀಡಲೂಬಹುದು* *ಮೃಷ್ಟಾನ್ನಭೋಜನವ;

ಎನ್ನ ಕಿರುಮನೆಯೊಳೆಮ್ಮೊಂದಿಗರ ಸಹಪಂಕ್ತಿ

ಕುಡಿವುಪ್ಪುಗಂಜಿ ತೆಳಿ ಕೊಡರೆ ಸಾಂತ್ವನವ?

ಎಷ್ಟು ಅರ್ಥವತ್ತಾಗಿದೆಯಲ್ಲವೇ?

ಬೆಂಕಿ ಬಿದ್ದಿದೆ ಮನೆಗೆ

ಓ ಬೇಗ ಬನ್ನಿ

ಎಲ್ಲರೂ ಎದ್ದೆದ್ದು ಓಡಿ ಬನ್ನಿ

ತಡ ಮಾಡಿದರೆ ಸುಟ್ಟು ಹೋದೀತು

ಸಾಲುಗಳಲ್ಲಿ ಅಡಗಿದ ಪದಗಳ ತಾತ್ಪರ್ಯ ಪ್ರಕೃತ ಸನ್ನಿವೇಶದ ಚಿತ್ರಣವೇ ಆಗಿದೆ.

(ಹಿರಿಯ ಸಾಹಿತಿ ಡಾ ನಾಡೋಜ ಕಯ್ಯಾರ ಕಿಞ್ಞಣ್ಣ ರೈಗಳ  ಹುಟ್ಟಿದ ದಿನಕ್ಕೊಂದು (೧೦೮ ವರ್ಷಗಳು)ನೆನಹು)

ಸಂಗ್ರಹ: ಹಿರಿಯ ಸಾಹಿತಿಗಳ ಪರಿಚಯ ಪುಸ್ತಕ

-ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ