ಕರಗಿ ಹೋದ ನೊಬೆಲ್ ಪದಕಗಳು !

ಕರಗಿ ಹೋದ ನೊಬೆಲ್ ಪದಕಗಳು !

ಒಬ್ಬ ವ್ಯಕ್ತಿಗೆ ನೊಬೆಲ್ ಪ್ರಶಸ್ತಿ ಸಿಗುವುದೆಂದರೆ ಅದಕ್ಕಿಂತ ದೊಡ್ದ ಪಾರಿತೋಷಕ ಬೇರೆ ಯಾವುದೂ ಇಲ್ಲ. ವಿಶ್ವದ ಎಲ್ಲೆಡೆ ನೊಬೆಲ್ ಪ್ರಶಸ್ತಿ ವಿಜೇತರಿಗೆ ಸಿಗುವ ಗೌರವ ಅಪಾರ. ಆದುದರಿಂದ ನೊಬೆಲ್ ಪ್ರಶಸ್ತಿ ವಿಜೇತರು ತಮಗೆ ಸಿಕ್ಕ ನೊಬೆಲ್ ಪದಕವನ್ನು ತುಂಬಾ ಜಾಗರೂಕತೆಯಿಂದ ನಿಧಿಯಂತೆ ಕಾಪಾಡಿಕೊಳ್ಳುತ್ತಾರೆ. ಹಲವಾರು ಬಾರಿ ಈ ಪದಕಗಳು ಕಳವಾದದ್ದೂ ಇವೆ. ಭಾರತಕ್ಕೆ ಮೊದಲ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಅವರ ಪದಕವನ್ನೂ ಕಳ್ಳನೊಬ್ಬ ಕದ್ದುಕೊಂಡು ಹೋಗಿದ್ದ. ಹೀಗೆ ನೊಬೆಲ್ ಪದಕಕ್ಕೆ ಇರುವ ಬೆಲೆ ಅನನ್ಯ. 

ನೊಬೆಲ್ ಪದಕವು ಬಂಗಾರದ್ದಾಗಿರುವುದರಿಂದ ಅದಕ್ಕೆ ಬಂಗಾರದ ಬೆಲೆ ಇದೆ. ಬಂಗಾರ ಎಂಬ ಹಳದಿ ಲೋಹದ ಮೋಹ ಯಾರಿಗೆ ತಾನೇ ಇಲ್ಲ? ಚಿನ್ನಕ್ಕೂ ಅದರದ್ದೇ ಆದ ಗುಣ ಲಕ್ಷಣಗಳಿವೆ. ಅದು ಬೆಳಕಿಗೆ ಹೊಳೆಯುತ್ತದೆ, ತುಕ್ಕು ಹಿಡಿಯುವುದಿಲ್ಲ, ಬೇಕಾದ ಆಕೃತಿಗೆ ಬದಲಾಯಿಸಬಹುದಾಗಿದೆ. ಬೇರೆ ವಸ್ತುಗಳೊಂದಿಗೆ ಸುಲಭವಾಗಿ ಪ್ರತಿಕ್ರಿಯಿಸುವುದಿಲ್ಲ. ಹೀಗಾಗಿ ಬಂಗಾರ ಎಲ್ಲರಿಗೂ ಅದರಲ್ಲೂ, ಭಾರತೀಯ ಮಹಿಳೆಯರಿಗೆ ಬಹಳ ಅಚ್ಚುಮೆಚ್ಚು.

ಇದು ೧೯೩೦ರಲ್ಲಿ ನಡೆದ ಘಟನೆ. ಆ ಸಮಯ ಜರ್ಮನಿಯಲ್ಲಿ ನಾಜಿಗಳು ಅಧಿಕಾರ ನಡೆಸುತ್ತಿದ್ದರು. ಅವರಿಗೂ ಯಹೂದಿಗಳಿಗೂ ಬಹಳ ದ್ವೇಷವಿತ್ತು. ಆ ಕಾರಣದಿಂದ ನಾಜಿಗಳು ಯಹೂದಿಗಳ ಮನೆಗಳಿಗೆ ನುಗ್ಗಿ ಚಿನ್ನ, ಆಭರಣಗಳನ್ನು ಲೂಟಿ ಮಾಡುತ್ತಿದ್ದರು. ಯಹೂದಿಗಳಿಗೆ ತಮ್ಮಲ್ಲಿರುವ ಚಿನ್ನವನ್ನು ನಾಜಿಗಳಿಂದ ರಕ್ಷಿಸಿಕೊಳ್ಳಬೇಕೆಂಬ ಹಂಬಲ. ಆ ಸಮಯದಲ್ಲಿ ಜರ್ಮನಿಯಲ್ಲಿ ಮ್ಯಾಕ್ಸ್ ವಾನ್ ಲಾವ್ (Max Von Laue) ಹಾಗೂ ಜೇಮ್ಸ್ ಫ್ರಾಂಕ್ (James Franck) ಎಂಬ ಇಬ್ಬರು ಯಹೂದಿಗಳು ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು ವಾಸಿಸುತ್ತಿದ್ದರು. ಅವರಿಗೆ ನಾಜಿಗಳಿಂದ ತಮ್ಮ ಬಂಗಾರದ ಪದಕವನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಕಾಡಿತು. ಅವರಿಗೆ ಆ ಸಮಯ ಕಂಡ ಹಾದಿಯೆಂದರೆ ತಮ್ಮ ದೇಶದಿಂದ ಪಕ್ಕದ ಹೊರದೇಶಕ್ಕೆ ಚಿನ್ನವನ್ನು ಕಳ್ಳಸಾಗಣೆ ಮೂಲಕ ಸಾಗಿಸುವುದು. 

ಅದರಂತೆ ಅವರು ತಮ್ಮ ಚಿನ್ನದ ನೊಬೆಲ್ ಪದಕಗಳನ್ನು ಡೆನ್ಮಾರ್ಕ್ ದೇಶದ ಕೋಪನ್ ಹೇಗನ್ ನಲ್ಲಿದ್ದ ತಮ್ಮ ಪರಿಚಿತನಾದ ನೀಲ್ಸ್ ಬೋರ್ ಎಂಬವನಿಗೆ ಕಳ್ಳಸಾಗಣೆ ಮೂಲಕ ಕಳುಹಿಸಿಕೊಟ್ಟರು. ಈ ನೀಲ್ಸ್ ಬೋರ್ (Niels Henrik David Bohr) ಎಂಬವನು ಭೌತಶಾಸ್ತ್ರದಲ್ಲಿ ನೊಬೆಲ್ ಪುರಸ್ಕೃತ. ಗ್ರಹಚಾರ ವಕ್ಕರಿಸಿದರೆ, ಪಾಪಿ ಸಾಯಲು ಹೋದರೂ ಮೊಣಕಾಲಷ್ಟೇ ನೀರು ಇರುತ್ತದೆ ಎಂಬಂತೆ ೧೯೪೦ರಲ್ಲಿ ಡೆನ್ಮಾರ್ಕ್ ದೇಶವನ್ನೂ ನಾಜಿಗಳು ಆಕ್ರಮಿಸಿ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡರು. ಇದರಿಂದ ನೀಲ್ಸ್ ಬೋರ್ ನ ಸಮಸ್ಯೆಗಳು ಇನ್ನಷ್ಟು ಹೆಚ್ಚಾದವು. ಆತನಿಗೆ ನಾಜಿಗಳಿಂದ ತನ್ನ ಮಿತ್ರರ ನೊಬೆಲ್ ಪದಕಗಳನ್ನು ರಕ್ಷಿಸುವ ಅನಿವಾರ್ಯತೆ ಇತ್ತು. ಆದರೆ ಅವುಗಳನ್ನು ಹೇಗೆ ರಕ್ಷಿಸುವುದು? ನೆಲದ ಅಡಿಯಲ್ಲಿ ಹೂಳುವಂತೆಯೂ ಇರಲಿಲ್ಲ, ನಾಜಿಗಳು ಹುಡುಕಿ ತೆಗೆದರೆ ಸಾವೇ ಗತಿಯಾಗುತ್ತಿತ್ತು. ಅದಾಗಲೇ ಚಿನ್ನವನ್ನು ದೇಶದಿಂದ ಹೊರಗೆ ಸಾಗಿಸುವುದು ಅಪರಾಧ ಎಂದು ನಾಜಿಗಳು ಕಾನೂನು ಜಾರಿಗೆ ತಂದಿದ್ದರು. ಪದಕಗಳ ಮೇಲೆ ಅವುಗಳ ವಿಜೇತರ ಹೆಸರೂ ಇದ್ದುದರಿಂದ ಎಲ್ಲಾದರೂ ಆ ಪದಕಗಳು ನಾಜಿಗಳ ಕೈಗೆ ಸಿಕ್ಕರೆ ಜೇಮ್ಸ್ ಮತ್ತು ಮ್ಯಾಕ್ಸ್ ಅವರ ಕತೆ ಮುಗಿದಂತೆಯೇ ಆಗಿತ್ತು. ಕಾನೂನು ಬಾಹಿರ ಕೆಲಸಕ್ಕಾಗಿ ಅವರನ್ನು ಜೈಲಿಗೆ ಹಾಕುವ ಅಥವಾ ನೇಣಿಗೂ ಹಾಕುವ ಸಾಧ್ಯತೆ ಇತ್ತು.

ನೀಲ್ಸ್ ಬೋರ್ ಅವರಿಗೆ ಉಭಯ ಸಂಕಟ. ಆ ಸಮಯದಲ್ಲಿ ಅವರ ನೆರವಿಗೆ ಬಂದವನು ಜಾರ್ಜ್ ಡಿ ಹೆವಸಿ (George de Hevesy) ಎಂಬ ವಿಜ್ಞಾನಿ. ಇವರೂ ರಸಾಯನ ಶಾಸ್ತ್ರದಲ್ಲಿ ನೊಬೆಲ್ ಬಹುಮಾನ ವಿಜೇತರು. ಅಂದುಕೊಂಡಂತೇ ನಾಜಿಗಳು ಕೋಪನ್ ಹೇಗನ್ ಪಟ್ಟಣದ ಮೇಲೆ ಆಕ್ರಮಣ ಮಾಡಿದರು. ಆ ಸಮಯದಲ್ಲಿ ಜಾರ್ಜ್ ಅವರು ಒಂದು ಉಪಾಯ ಮಾಡಿದ್ದರು. ನೀಲ್ಸ್ ಬೋರ್ ಅವರು ನೀಡಿದ ಎರಡೂ ಪದಕಗಳನ್ನು ಆಕ್ವಾ ರೆಜಿಯಾ (Aqua Regia) ದ್ರಾವಣದಲ್ಲಿ ಕರಗಿಸಿಬಿಟ್ಟಿದ್ದರು. ಆಕ್ವಾ ರೆಜಿಯಾವು ನೈಟ್ರಿಕ್ ಆಮ್ಲ ಮತ್ತು ಹೈಡ್ರೋಕ್ಲೋರಿಕ್ ಆಮ್ಲ ಇವುಗಳ ಸಂಯೋಜನೆಯಿಂದ ತಯಾರಿಸಿದ ದ್ರಾವಣ. ಚಿನ್ನವನ್ನು ಕರಗಿಸಬಲ್ಲ ಕೆಲವೇ ಕೆಲವು ವಸ್ತುಗಳಲ್ಲಿ ಆಕ್ವಾ ರೆಜಿಯಾ ದ್ರಾವಣವೂ ಒಂದು. ಇದನ್ನು ದ್ರವಗಳ ರಾಜ (Royal Water) ಎಂದೂ ಕರೆಯುತ್ತಾರೆ. 

ನೀಲ್ಸ್ ಬೋರ್ ಹಾಗೂ ಜಾರ್ಜ್ ಡಿ ಹೆವಸಿ ಇವರು ಅಂದುಕೊಂಡಂತೆಯೇ ನಾಜಿಗಳೂ ಅವರು ಕೆಲಸ ಮಾಡುತ್ತಿದ್ದ ಕಟ್ಟಡವನ್ನು ಸ್ವಾಧೀನಕ್ಕೆ ತೆಗೆದುಕೊಂಡು ಚಿನ್ನಕ್ಕಾಗಿ ಹುಡುಕಾಡಿದರು. ಆದರೆ ಚಿನ್ನ ಎಲ್ಲಿತ್ತು? ಅದು ಆಗಲೇ ದ್ರವರೂಪಕ್ಕೆ ಮಾರ್ಪಾಡಾಗಿತ್ತು. ಕಟ್ಟಡದ ಮೂಲೆ ಮೂಲೆ ಹುಡುಕಾಡಿದರೂ ಅವರಿಗೆ ಚಿನ್ನ ಸಿಗಲಿಲ್ಲ. ದ್ರಾವಣದಲ್ಲಿ ಕರಗಿ ಹೋದ ಪದಕಗಳ ಬಟ್ಟಲು ಅವರ ಎದುರೇ ಇದ್ದ ಕಪಾಟಿನಲ್ಲಿದ್ದರೂ ಅವರು ಅದನ್ನು ಗಮನಿಸಲು ಹೋಗಲೇ ಇಲ್ಲ. ನಾಜಿಗಳು ಈ ವಿಜ್ಞಾನಿಗಳಂತೆ ಬುದ್ಧಿಶಾಲಿಗಳಾಗಿರಲಿಲ್ಲ. ಅವರು ಶಕ್ತಿವಂತರಾಗಿದ್ದರೂ ಯುಕ್ತಿವಂತರಾಗಿರಲಿಲ್ಲ. ಈ ಕಾರಣದಿಂದ ನಾಜಿಗಳು ಬಂಗಾರ ಸಿಗದೇ ಬರಿಗೈಯಲ್ಲೇ ಹಿಂದಿರುಗಿದರು.

ಯುದ್ಧ ಮುಗಿದ ನಂತರ ವಿಜ್ಞಾನಿಗಳು ಚಿನ್ನವನ್ನು ಮತ್ತೊಂದು ರಾಸಾಯನಿಕ ಪ್ರಕ್ರಿಯೆಯ ಮೂಲಕ ಆ ದ್ರಾವಣದಿಂದ ಹೊರತೆಗೆದರು. ಇದನ್ನು ಬಳಸಿಕೊಂಡು ನೊಬೆಲ್ ಪ್ರತಿಷ್ಟಾನವು ಮತ್ತೆ ಅದಕ್ಕೆ ಪದಕಗಳ ರೂಪ ನೀಡಿತು. ಈ ಮೂಲಕ ತಮ್ಮ ಬುದ್ದಿವಂತಿಕೆ ಮತ್ತು ವಿಜ್ಞಾನದ ಜ್ಞಾನವನ್ನು ಬಳಸಿ ನೀಲ್ಸ್ ಬೋರ್ ಹಾಗೂ ಜಾರ್ಜ್ ಹೆವಸಿ ಇವರು ಮ್ಯಾಕ್ಸ್ ಮತ್ತು ಜೇಮ್ಸ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡರು.

(ಮೂಲ ಮಾಹಿತಿ: ಸೂತ್ರ ಪತ್ರಿಕೆ)    

ಆಕ್ವಾ ರೇಜಿಯಾ ದ್ರಾವಣದಲ್ಲಿ ಪದಕ ಕರಗುವ ಸಾಂಕೇತಿಕ ಚಿತ್ರ ಕೃಪೆ: ಅಂತರ್ಜಾಲ ತಾಣ