ಕರಗುತಿದೆ ಸಮಯ

ಕರಗುತಿದೆ ಸಮಯ

ಕವನ

ಕರಗತೊಡಗಿದೆ ಸಮಯ

ಬೆರಗುಗೊಳ್ಳುವ ತರದೆ

ಸರಿದು ಹೋಗುತಲಿಹುದು ವ್ಯರ್ಥವಾಗಿ

ಬರಿದೆ ಯೋಚನೆಗಿಳಿದು

ನೆರಿಗೆಗಟ್ಟಿದೆ ದೇಹ

ಸುರಿಯದೆಲೆ ಕರಿಮುಗಿಲು ದೂರ ಸಾಗಿ

 

ಜಗದ ಬಾಳುವೆಯಲ್ಲಿ

ಸಿಗುವ ವೇಳೆಯೆ ಹೊನ್ನು

ತೆಗಳಿ ಕುಳಿತರೆ ಸಾಕೆ ಪರರ ಬಗೆಗೆ

ಬಗಲಿನಲ್ಲಿಹ ಮೃತ್ಯು

ಜಗಳವೇತಕೆ ಮನವೆ

ಗಗನ ಸೇರುವ ನಾವು ಬಾಳ ಕೊನೆಗೆ

 

ಜಿಪುಣನಾಗದೆ ಬಾಳು

ಚಪಲ ಕೆಟ್ಟದು ಕೇಳು

ವಿಫಲನಾಗದ ಹಾಗೆ ಹೆಜ್ಜೆಯಿರಿಸಿ

ಜಪವ ಗೈಯುತ ಹರಿಯ

ಸಫಲಗೊಳ್ಳಲಿ ಯತ್ನ

ಸುಫಲ ನೀಡಲಿ ಹರಿಯು ಕರುಣೆಯಿರಿಸಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ ಕೃಪೆ ಅಂತರ್ಜಾಲ) 

ಚಿತ್ರ್