ಕರಡಿ ಬದುಕಿಸಿದಾತನಿಗೆ ಜೈಲಿನಲ್ಲಿ ಬಂಧನ!
ರಾಮ್ ಸಿಂಗ್ ಮುಂಡ ಒರಿಸ್ಸಾದ ಕಿಯೊನ್‌ಜಾರ್ ಜಿಲ್ಲೆಯ ರುತಿಸಿಲ ಹಳ್ಳಿಯ ಬುಡಕಟ್ಟು ಜನಾಂಗದವನು.
(ರಾಜಧಾನಿ ಭುವನೇಶ್ವರದಿಂದ ೧೫೦ ಕಿಮೀ ದೂರದಲ್ಲಿರುವ ಹಳ್ಳಿ.) ಅದೊಂದು ದಿನ ಕಟ್ಟಿಗೆ ತರಲಿಕ್ಕಾಗಿ ಹಳ್ಳಿಯ ಅಂಚಿನಲ್ಲಿದ್ದ ಕಾಡಿಗೆ ಹೋಗಿದ್ದ. ಅಲ್ಲೊಂದು ಕರಡಿ ಮರಿ ಬಿದ್ದಿತ್ತು - ತಾಯಿ ಕರಡಿ ತೊರೆದು ಹೋಗಿದ್ದ ಮರಿ. ಅದು ನಿತ್ರಾಣದಿಂದ ಸಾಯುವಂತಿತ್ತು.
ಅಯ್ಯೋ ಪಾಪ ಎನಿಸಿತು ರಾಮ್ ಸಿಂಗ್ ಮುಂಡನಿಗೆ. ಅದನ್ನು ಮನೆಗೆ ಹೊತ್ತು ತಂದ. ಅದಕ್ಕೆ ಆಹಾರ ನೀಡಿ, ಆರೈಕೆ ಮಾಡಿದ. ನಿಧಾನವಾಗಿ ಕರಡಿ ಮರಿ ಚೇತರಿಸಿಕೊಂಡಿತು. ಆತ ಅದನ್ನು ತನ್ನ ಮಗುವಿನಂತೆಯೇ ಜತನದಿಂದ ಬೆಳೆಸಿದ. ರಾಮ್ ಸಿಂಗನ ಮಡದಿ ತೀರಿಕೊಂಡಿದ್ದರಿಂದ ಅವನ ಮಗಳು ಗುಲ್ಕಿ ಒಂಟಿ ಬಾಲಕಿಯಾಗಿದ್ದಳು. ಅವಳ ಸಂಗಾತಿಯಾಗಿ ಬೆಳೆಯಿತು ಕರಡಿ ಮರಿ. ಅದಕ್ಕೆ "ರಾಣಿ" ಎಂದು ಚಂದದ ಹೆಸರಿಟ್ಟಳು ಗುಲ್ಕಿ.
ರಾಮ್ ಸಿಂಗ್ ಎಲ್ಲಿಗೆ ಹೋದರೂ ಕರಡಿ ಮರಿ "ರಾಣಿ" ಅವನನ್ನು ಹಿಂಬಾಲಿಸುತ್ತಿತ್ತು. ಅವನು ಹಳ್ಳಿಯ ಮಾರುಕಟ್ಟೆಗೆ ಸೈಕಲಿನಲ್ಲಿ ಹೋಗುವಾಗಲೂ ಅವನ ಹಿಂದೆ ಸೈಕಲಿನ ಕ್ಯಾರಿಯರಿನಲ್ಲಿ ಕುಳಿತು ಸವಾರಿ ಮಾಡುತ್ತಿತ್ತು! (ಫೋಟೋ ೧ ನೋಡಿ) ಹೀಗೆಯೇ ಒಂದೂವರೆ ವರುಷ ದಾಟಿತು.
ಅರಣ್ಯ ಇಲಾಖೆಯ ಸಿಬ್ಬಂದಿ ೧೭ ಜೂನ್ ೨೦೦೮ರಂದು ಏಕಾಏಕಿ ಬಂದು ರಾಮ್ ಸಿಂಗ್ ಮುಂಡನನ್ನು ಬಂಧಿಸಿದರು. ಆಗ ಕರಡಿ "ರಾಣಿ" ಕಾಡಿಗೆ ಓಡಿ ಹೋಯಿತು. ಅನಂತರ ಅದನ್ನೂ ಹಿಡಿದು ತಂದು, ನಂದನ್‌ಕಾನನ್ ಮೃಗಾಲಯದಲ್ಲಿ ಬಂಧಿಸಿಟ್ಟರು. ರಾಮ್ ಸಿಂಗ್ ಮುಂಡನನ್ನು ಜೈಲಿನಲ್ಲಿ ಬಂಧನದಲ್ಲಿ ಇಡಲಾಯಿತು. ಆತ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಐದು ಸೆಕ್ಷನುಗಳನ್ನು ಉಲ್ಲಂಘಿಸಿದ್ದಾನೆಂದು ಆಪಾದಿಸಲಾಯಿತು.
ರಾಮ್ ಸಿಂಗ್ ಮುಂಡ ಕಾಡುಪ್ರಾಣಿಯೊಂದನ್ನು ಕಾಡಿನಿಂದ ತಂದದ್ದು, ಅದನ್ನು ತನ್ನ ಮನೆಯಲ್ಲಿ ಇಟ್ಟು ಕೊಂಡದ್ದು, ಅರಣ್ಯ ಇಲಾಖೆಯ ಮೇಲಧಿಕಾರಿಗಳ ಲಿಖಿತ ಅನುಮತಿ ಪಡೆಯದೆ ಇದ್ದದ್ದು - ಇವೆಲ್ಲವೂ ಆತನಿಂದಾದ ಕಾಯಿದೆಯ ಉಲ್ಲಂಘನೆ ಎಂಬ ಆಪಾದನೆ! ಈ ಆಪಾದನೆಗಳು ಸಾಬೀತಾದರೆ ಆತನಿಗೆ ಮೂರು ವರುಷಗಳ ಜೈಲು ಶಿಕ್ಷೆ ವಿಧಿಸಬಹುದು.
ಆದರೆ ಇವೆಲ್ಲವೂ ಹುರುಳಿಲ್ಲದ ಆಪಾದನೆಗಳು. ಯಾಕೆಂದರೆ, ರಾಮ್ ಸಿಂಗ್ ಮುಂಡ ಸಾಯಬಹುದಾಗಿದ್ದ ಕರಡಿ ಮರಿಯೊಂದನ್ನು ಉಳಿಸಿ, ಮಾನವತೆಯನ್ನು ಮೆರೆದಿದ್ದ. ಆತ ಕರಡಿ "ರಾಣಿ"ಗೆ ಯಾವತ್ತೂ ಹಿಂಸೆ ನೀಡಿರಲಿಲ್ಲ. ಅದನ್ನು ಜನರೆದುರು ಕುಣಿಸಿ, ಹಣ ಗಳಿಸಲು ಯಾವತ್ತೂ ಪ್ರಯತ್ನಿಸಿರಲಿಲ್ಲ. ತಾನು ಅಪ್ಪಟ ಬಡತನದಲ್ಲಿದ್ದರೂ, ಮನೆಯಲ್ಲಿ ಎರಡು ಹೊತ್ತಿನ ಊಟಕ್ಕೆ ಕೊರತೆಯಿದ್ದರೂ ಆತ ಕರಡಿ “ರಾಣಿ"ಯ ಆಹಾರಕ್ಕೆ ಯಾವತ್ತೂ ಕೊರತೆ ಮಾಡಿರಲಿಲ್ಲ. ಎರಡು ಸಲ ಅವನು ಕರಡಿ "ರಾಣಿ"ಯನ್ನು ಕಾಡಿನಲ್ಲಿ ದೂರಕ್ಕೆ ಬಿಟ್ಟು ಬಂದಿದ್ದ. ಆದರೆ ಅದು ಕಾಡಿನಿಂದ ಅವನ ಮನೆಗೆ ವಾಪಾಸು ಬಂದಿತ್ತು! ಇವೆಲ್ಲದಕ್ಕೂ ಆ ಪುಟ್ಟ ಹಳ್ಳಿಯ ಜನರೆಲ್ಲರೂ ಸಾಕ್ಷಿಯಾಗಿದ್ದರು. ಇವಲ್ಲದೆ, ಕರಡಿ "ರಾಣಿ"ಯನ್ನು ಕಾಡುಪ್ರಾಣಿ ಅನ್ನೋದೇ ತಪ್ಪು; ಯಾಕೆಂದರೆ ಅದಾಗಲೇ ಸಾಕುಪ್ರಾಣಿಯಾಗಿತ್ತು. (ಫೋಟೋ ೨ ನೋಡಿ) ಆದ್ದರಿಂದ, ಈ ನಿಟ್ಟಿನಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸೆಕ್ಷನುಗಳು ಈ ಪ್ರಕರಣದಲ್ಲಿ ಅನ್ವಯ ಆಗೋದೇ ಇಲ್ಲ!
ನಿಜ ಹೇಳಬೇಕೆಂದರೆ, ಅರಣ್ಯ ಇಲಾಖೆಯ ಸಿಬ್ಬಂದಿಯೇ ಆ ಅನಾಥ ಕರಡಿ ಮರಿಯನ್ನು ರಕ್ಷಣೆ ಮಾಡಿ, ಸಲಹಬೇಕಾಗಿತ್ತು. ಅದರ ಬದಲಾಗಿ, ಅತ್ಯಂತ ಕರುಣೆಯಿಂದ ಅದನ್ನು ರಕ್ಷಿಸಿ, ಸಲಹಿದ ವ್ಯಕ್ತಿಯ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿದ್ದರು ಅರಣ್ಯ ಇಲಾಖೆಯ ಸಿಬ್ಬಂದಿ.
ಕೆಲವೇ ದಿನಗಳಲ್ಲಿ ಈ ಪ್ರಕರಣದ ಸುದ್ದಿ ರಾಷ್ಟ್ರವ್ಯಾಪಿ ಪತ್ರಿಕೆಗಳಲ್ಲಿ ಮತ್ತು ಟಿವಿ ಚಾನೆಲುಗಳಲ್ಲಿ ಸ್ಫೋಟಿಸಿತು. ವಿದೇಶದ ಪತ್ರಿಕೆಗಳಲ್ಲಿಯೂ ಇದು ದೊಡ್ಡ ಸುದ್ದಿಯಾಯಿತು. ವನ್ಯಜೀವಿಗಳ ಸಂರಕ್ಷಣೆಯ ಕಾಯಕದಲ್ಲಿ ತೊಡಗಿದ ಸ್ವಯಂ ಸೇವಾ ಸಂಸ್ಥೆಗಳು ರಾಮ್ ಸಿಂಗ್ ಮುಂಡನ ಬಿಡುಗಡೆಗಾಗಿ ಟೊಂಕ ಕಟ್ಟಿದವು. ಅಂತೂ, ಆತನಿಗೆ ನ್ಯಾಯಾಲಯ ಜಾಮೀನು ನೀಡಿದ್ದರಿಂದಾಗಿ, ೨೩ ಜೂನ್ ೨೦೦೮ರಂದು ಆತನನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
ರಾಮ್ ಸಿಂಗ್ ಮುಂಡ ಜೈಲಿನಿಂದ ನೇರವಾಗಿ ನಂದನ್‌ಕಾನನ್ ಮೃಗಾಲಯಕ್ಕೆ ಧಾವಿಸಿದ. (ಫೋಟೋ ೩ ನೋಡಿ) ಅಲ್ಲಿನ ಅಧಿಕಾರಿಗಳ ಕಣ್ಣೆದುರಿನಲ್ಲೇ ಅಲ್ಲೊಂದು ವಿಸ್ಮಯ ನಡೆಯಿತು. ರಾಮ್ ಸಿಂಗ್ ಮುಂಡನನ್ನು ಕಾಣುತ್ತಲೇ ಕರಡಿ "ರಾಣಿ" ಕೋಣೆಯ ಮೂಲೆಯಿಂದ ಎದ್ದು ಬಂದು ಅವನನ್ನು ಅಪ್ಪಿಕೊಂಡಿತು. ಅಲ್ಲಿಗೆ ತಂದಾಗಿನಿಂದಲೂ ಮಂಕಾಗಿದ್ದ "ರಾಣಿ" ಗೆಲುವಿನಿಂದ ಕುಣಿದಾಡಿತು. ಅನಂತರ, ದಿನಪತ್ರಿಕೆಯವರು ಈ ಭೇಟಿಯ ಬಗ್ಗೆ ರಾಮ್ ಸಿಂಗ್ ಮುಂಡನನ್ನು ಪ್ರಶ್ನಿಸಿದಾಗ, ಆತ ಹೀಗೆನ್ನುತ್ತ ಕಣ್ಣೀರಾದ: "ರಾಣಿ ಈಗ ಅಲ್ಲಿ ಒಂಟಿಯಾಗಿದ್ದಾಳೆ. ಅವಳು ಸರಿಯಾಗಿ ಆಹಾರ ತಿನ್ನುತ್ತಲೂ ಇಲ್ಲ. ಅವಳ ಕಣ್ಣುಗಳಲ್ಲಿ ಮಡುಗಟ್ಟಿರುವ ದುಃಖವನ್ನು ನನಗೆ ನೋಡಲಾಗುತ್ತಿಲ್ಲ.”
ಇಡೀ ಪ್ರಕರಣವನ್ನು ಅವಲೋಕಿಸಿದಾಗ, ಎದ್ದು ಕಾಣುವ ಸಂಗತಿ: ತನ್ನಿಂದ ವನ್ಯಜೀವಿ ಕಾಯಿದೆಯ ಉಲ್ಲಂಘನೆ ಆಗುತ್ತಿದೆ ಎಂಬುದು ರಾಮ್ ಸಿಂಗ್ ಮುಂಡನಿಗೆ ತಿಳಿದಿರಲೇ ಇಲ್ಲ. ಯಾಕೆಂದರೆ, ಆ ಕಾಯಿದೆ ಒರಿಯಾ ಭಾಷೆಗೆ ಅನುವಾದ ಆಗಿರಲಿಲ್ಲ ಮತ್ತು ಅದರ ವಿಧಿಗಳನ್ನು ಆತನಿಗೆ ಯಾರೂ ತಿಳಿಸಿರಲಿಲ್ಲ. ವಾಸ್ತವ ಏನೆಂದರೆ, ಒಂದೂವರೆ ವರುಷದಿಂದ ರಾಮ್ ಸಿಂಗ್ ಮುಂಡ ಕರಡಿ ಮರಿಯೊಂದನ್ನು ರಕ್ಷಿಸಿ, ಸಲಹುತ್ತಿದ್ದಾನೆ ಎಂಬುದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಚೆನ್ನಾಗಿ ತಿಳಿದಿತ್ತು. ಒಂದೂವರೆ ವರುಷ ಇದು ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಆ ಸಿಬ್ಬಂದಿ, ಅವನಿಗೆ ಕರಡಿಯನ್ನು ಸಾಕಲು "ಪರೋಕ್ಷ ಪರವಾನಗಿ” ಕೊಟ್ಟಂತಾಗಲಿಲ್ಲವೇ? ಈಗಲಾದರೂ, ಅರಣ್ಯ ಇಲಾಖೆಯ ಮೇಲಧಿಕಾರಿಗಳು, ವನ್ಯಜೀವಿ ಕಾಯಿದೆಯ ಅನುಸಾರ ಪೂರ್ವಾನ್ವಯವಾಗಿ ಲಿಖಿತ ಅನುಮತಿ ನೀಡಬಹುದಾಗಿತ್ತಲ್ಲವೇ?
ಯಾವುದೇ ಕಾಯಿದೆಯ ಅನುಸಾರ ಕ್ರಮ ಕೈಗೊಳ್ಳುವಾಗ ಅದರ “ಲೆಟರ್ ಆಂಡ್ ಸ್ಪಿರಿಟ್” ಗಮನಿಸಬೇಕೆಂಬುದು ಮುಖ್ಯ. ಅಂದರೆ, ಅದರ ಪದಗಳ ಅರ್ಥ ಮಾತ್ರವಲ್ಲ, ಕಾಯಿದೆಯ ಮೂಲ ಉದ್ದೇಶವನ್ನೂ ಗಮನಿಸತಕ್ಕದ್ದು. ವನ್ಯಜೀವಿ ಸಂರಕ್ಷಣಾ ಕಾಯಿದೆಯ ಮೂಲ ಉದ್ದೇಶ ವನ್ಯಜೀವಿಗಳ ಸಂರಕ್ಷಣೆ. ಅದನ್ನು ಇಡೀ ಜಗತ್ತಿಗೆ ಮಾದರಿಯಾಗುವಂತೆ ಪಾಲಿಸಿದ ವ್ಯಕ್ತಿಯನ್ನು, ಅದೇ ಕಾಯಿದೆಯ ಪದಗಳನ್ನು ತಪ್ಪಾಗಿ ಅರ್ಥೈಸಿ, ಜೈಲಿನಲ್ಲಿ ಬಂಧಿಸುವುದು ಅಸಂಬದ್ಧವಲ್ಲವೇ?