ಕರಡಿ ಮರಿ ಕಾಡಿಗೆ ಹೋಗಲೇ ಬೇಕು



ಕುಮುದ ಮರದ ನೆರಳಿನಲ್ಲಿ ಮಲಗಿದ್ದಾಗ ಅವಳ ಗೊಂಬೆ ಕಾಳು ಕರಡಿ ಕಾಡಿನೊಳಗೆ ಸುತ್ತಾಟಕ್ಕೆ ಹೋಗಿ ದಾರಿ ತಪ್ಪಿತು. ಅದಕ್ಕೆ ವಾಪಾಸು ಬರುವ ದಾರಿ ಗೊತ್ತಾಗಲೇ ಇಲ್ಲ. ಹಾಗಾಗಿ ಅದು ಒಂದು ಮರದ ಕೆಳಗೆ ಕುಳಿತು, “ಈಗ ಏನಪ್ಪಾ ಮಾಡೋದು" ಎಂದು ಯೋಚಿಸ ತೊಡಗಿತು.
ಕುಮುದ ನಿದ್ದೆಯಿಂದೆದ್ದು ನೋಡಿದಾಗ ಅವಳ ಕಾಳು ಕರಡಿ ಎಲ್ಲಿಯೂ ಕಾಣಿಸಲಿಲ್ಲ. ಅದನ್ನು ಯಾರೋ ಎತ್ತಿಕೊಂಡು ಹೋಗಿರಬೇಕು ಎಂದು ಅವಳು ಯೋಚಿಸಿದಳು. ಯಾಕೆಂದರೆ, ಮನುಷ್ಯರು ಮಲಗಿದಾಗ ಅವರ ಆಟದ ಗೊಂಬೆ ಕರಡಿಗಳು ಸುತ್ತಾಟಕ್ಕೆ ಹೋಗುತ್ತವೆ ಎಂಬುದು ಅವಳಿಗೆ ಗೊತ್ತಿರಲಿಲ್ಲ.
"ಕಾಳೂ, ಕಾಳೂ, ಎಲ್ಲಿದ್ದೀಯಾ?” ಎಂದು ಕೂಗಿದಳು ಕುಮುದ. ಕಾಳೂ ಹತ್ತಿರದಲ್ಲೇ ಇತ್ತು. ಸ್ವಲ್ಪ ಹೊತ್ತಿನಲ್ಲೇ ಗಿಡಗಳನ್ನು ಮೂಸುತ್ತಿದ್ದ ಕಾಳೂ ಕುಮುದಳಿಗೆ ಕಾಣಿಸಿತು. ಅದರ ಬಳಿಗೆ ಓಡಿ ಬಂದ ಕುಮುದ “ಅಬ್ಬ, ಇಲ್ಲಿದ್ದೀಯಾ!” ಎಂದು ನಿಟ್ಟುಸಿರು ಬಿಟ್ಟಳು. "ನೀನು ಕಾಣೆಯಾದೆ ಎಂದು ನಾನು ಅಂದುಕೊಂಡೆ. ನಿನ್ನ ಕೋಟು ಎಲ್ಲಿದೆ?” ಎನ್ನುತ್ತಾ ಅದನ್ನು ಎತ್ತಿಕೊಂಡಳು.
ಕುಮುದ ನಿಜವಾಗಿಯೂ ತನ್ನ ಗೊಂಬೆ ಕಾಳು ಕರಡಿಯನ್ನು ಕಳೆದು ಕೊಂಡಿದ್ದಳು. ಈಗ ಅವಳು ಮನೆಗೆ ಒಯ್ಯುತ್ತಿದ್ದದ್ದು ಕಾಳೂ ಕರಡಿಯನ್ನಲ್ಲ, ಬದಲಾಗಿ ನಿಜವಾದ ಕರಡಿ ಮರಿಯನ್ನು! ಕುಮುದ ಮನೆಗೆ ಓಡುತ್ತಿದ್ದಾಗ ಅವಳ ಕೈಯಲ್ಲಿದ್ದ ಕರಡಿ ಮರಿ ಅಲುಗಾಡದೆ ಕುಳಿತಿತು. ಕೆಲವೇ ನಿಮಿಷಗಳಲ್ಲಿ ಕುಮುದ ತನ್ನ ಮನೆಗೆ ನುಗ್ಗಿ, ಕರಡಿ ಮರಿಯನ್ನು ತನ್ನ ಮಲಗುವ ಕೋಣೆಯಲ್ಲಿನ ಮಂಚಕ್ಕೆ ಎಸೆದಳು. ಕೂಡಲೇ ಅವಳು ಸ್ನಾನ ಮಾಡಲು ಓಡಿದಳು.
“ಇಲ್ಲಿಂದ ತಪ್ಪಿಸಿಕೊಳ್ಳಲು ಇದುವೇ ಸರಿಯಾದ ಸಮಯ” ಎಂದುಕೊಂಡಿತು ಕರಡಿ ಮರಿ. ಅದು ಬೆಡ್ಷೀಟುಗಳನ್ನು ಎಳೆಯುತ್ತಾ ಮಂಚದಿಂದ ಇಳಿಯಿತು. ನಂತರ ಕಿಟಕಿಯ ಬಳಿಗೆ ಓಡಿ, ಅಲ್ಲಿದ್ದ ಪರದೆಗಳನ್ನು ಹಿಡಿದುಕೊಂಡು ಮೇಲಕ್ಕೆ ಹತ್ತಿತು. ಆ ಪರದೆಗಳು ಕಳಚಿ ಕೆಳಕ್ಕೆ ಬಿದ್ದವು. ಆಗ ಕುಮುದಳ ಅಮ್ಮ, ಅವರ ಹಿಂದೆ ಕುಮುದ ಅಲ್ಲಿಗೆ ಬಂದರು.
“ನೋಡು, ಇವೆಲ್ಲ ಮುದ್ದೆಮುದ್ದೆಯಾಗಿ ಬಿದ್ದಿವೆ. ನೀನು ಪುನಃ ಆ ಕರಡಿ ಜೊತೆ ತುಂಟಾಟ ಶುರು ಮಾಡಿದ್ದಿ. ಎಲ್ಲವನ್ನೂ ಸರಿಯಾಗಿ ಜೋಡಿಸಿಡು” ಎಂದರು ಕುಮುದಳ ಅಮ್ಮ. ಇದೆಲ್ಲ ಹೇಗಾಯಿತೆಂದು ಕುಮುದಳಿಗೆ ಗೊತ್ತಿರಲೇ ಇಲ್ಲ. ಆದರೂ ಅವಳು ಎಲ್ಲವನ್ನೂ ಸರಿಯಾಗಿ ಜೋಡಿಸಿಟ್ಟಳು. ನಂತರ ಕರಡಿ ಮರಿಯನ್ನು ಬಾತ್ ಟಬ್ಬಿನ ನೀರಿಗೆ ಹಾಕಿದಳು.
“ಇಲ್ಲಿಂದ ಕೆಳಗೆ ಬೀಳಬೇಡ” ಎನ್ನುತ್ತಾ ಕುಮುದ ಒಂದು ಟವೆಲ್ ತರಲು ಹೋದಳು. ಕರಡಿ ಮರಿ ತನ್ನ ಕೈಗಳನ್ನು ಜೋರಾಗಿ ಬೀಸಿತು. ಆಗ ಸಾಬೂನು ನೀರು ಸ್ನಾನದ ಕೋಣೆಯಲ್ಲೆಲ್ಲ ಚೆಲ್ಲಿತು. ಹೆಜ್ಜೆ ಸಪ್ಪಳ ಕೇಳಿದಾಗ, ಕರಡಿ ಮರಿ ಎದೆ ಮೇಲಾಗಿ ಟಬ್ಬಿನ ನೀರಿನಲ್ಲಿ ತೇಲಿತು - ಏನೂ ಆಗಿಲ್ಲ ಎಂಬಂತೆ. ಆಗಲೇ ಅಲ್ಲಿಗೆ ಬಂದರು, ಕುಮುದ ಮತ್ತು ಅವಳ ಅಮ್ಮ.
“ಓ ಕುಮುದಾ, ಏನಿದೆಲ್ಲ?” ಎಂದು ಕೇಳಿದರು ಕುಮುದಳ ಅಮ್ಮ. “ಏನಿಲ್ಲ ಅಮ್ಮ. ಕಾಳೂ ಕರಡಿ ನೀರಿನಲ್ಲಿ ಜಾರಿ ಬಿದ್ದಿರಬೇಕು” ಎಂದಳು ಕುಮುದ. “ಗೊಂಬೆ ಕರಡಿ ಇಷ್ಟೆಲ್ಲ ರಂಪ ಮಾಡಲು ಸಾಧ್ಯವೇ ಇಲ್ಲ. ಬೇಗ ಎಲ್ಲ ಶುಚಿ ಮಾಡು" ಎಂದು ಗದರಿಸಿದರು ಅಮ್ಮ.
ಕುಮುದ ಅಲ್ಲಿದ್ದ ಕರಡಿ ಮರಿಯನ್ನು ಸೂಕ್ಷ್ಮವಾಗಿ ನೋಡಿದಳು. ಏನೋ ಬದಲಾಗಿದೆ ಎಂದು ಅವಳಿಗೆ ಅನಿಸಿತು; ಆದರೆ ಅದೇನೆಂದು ಅವಳಿಗೆ ಗೊತ್ತಾಗಲಿಲ್ಲ. ಆ ದಿನ ರಾತ್ರಿ ಕುಮುದ ಮಲಗಿದ್ದಾಗ, ಕರಡಿ ಮರಿ ಮೆತ್ತಗೆ ಹೆಜ್ಜೆಯಿಡುತ್ತಾ ಮಾಳಿಗೆಯಿಂದ ಇಳಿದು ಬಂತು. ಅದು ಕಾಡಿಗೆ ವಾಪಾಸು ಹೋಗಲು ಹಾತೊರೆಯುತ್ತಿತ್ತು. ಆದರೆ ಈಗ ಅದಕ್ಕೆ ಜೋರು ಹಸಿವಾಗಿತ್ತು. ಅದು ಮೆಲ್ಲಗೆ ಅಡುಗೆ ಕೋಣೆಗೆ ಹೋಯಿತು. ಅಲ್ಲಿದ್ದವು ಬಗೆಬಗೆಯ ತಿನಿಸುಗಳು. ಕರಡಿ ಮರಿ ಹೊಟ್ಟೆ ಬಿರಿಯುವಷ್ಟು ತಿಂದಿತು.
ಅಷ್ಟರಲ್ಲಿ ಕುಮುದ ಒಂದು ಲೋಟ ಹಾಲು ಕುಡಿಯಲಿಕ್ಕಾಗಿ ಅಡುಗೆ ಕೋಣೆಗೆ ಬಂದಳು. ಅಲ್ಲಿದ್ದ ಕರಡಿ ಮರಿಯ ಕೈಗಳಲ್ಲಿ ಆಹಾರದ ಚೂರುಗಳು ಇರೋದನ್ನು ಕಂಡಳು. ಕರಡಿ ಮರಿ ಪೆಚ್ಚಾಯಿತು. ಆಗಲೇ ಕುಮುದಳ ಅಮ್ಮ ಅಲ್ಲಿಗೆ ಬಂದರು.
"ಕುಮುದಾ, ಇದೇ ಕೊನೆ. ಇವತ್ತು ಇಡೀ ದಿನ ಮನೆಯೆಲ್ಲ ರಂಪ. ಪ್ರತೀ ಸಲ ಏನಾದರೂ ಫಜೀತಿ ಆದಾಗ ನಿನ್ನೊಂದಿಗೆ ಆ ಕರಡಿ ಮರಿಯೂ ಇದೆ. ಇನ್ನೊಂದು ಸಲ ಏನಾದರೂ ರಂಪ ಆದರೆ, ಆ ಕರಡಿ ಮರಿ ನಮ್ಮ ಮನೆ ಬಿಟ್ಟು ಹೋಗಲೇ ಬೇಕು” ಎಂದು ಗದರಿಸಿದರು ಕುಮುದಳ ಅಮ್ಮ.
ಅಮ್ಮ ಅಲ್ಲಿಂದ ಮನೆಯ ಮಾಳಿಗೆಗೆ ಹೋದಾಗ, ಕುಮುದ ಕರಡಿ ಮರಿಯನ್ನು ಎತ್ತಿ ಹಿಡಿದು ಪರಿಶೀಲಿಸಿದಳು. “ನೀನು ಕಾಳು ಕರಡಿ ಗೊಂಬೆ ಅಲ್ಲ, ಸರಿ ತಾನೇ?" ಎಂದು ಕೇಳಿದಳು. ಕರಡಿ ಮರಿ ಕಣ್ಣು ರೆಪ್ಪೆ ಬಡಿಯುತ್ತಾ ಅವಳನ್ನೇ ನೋಡಿತು. “ಅಯ್ಯೋ, ನೀನು ನಿಜವಾದ ಕರಡಿ ಮರಿ" ಎಂದು ಕೂಗಿದಳು ಕುಮುದ.
ಕುಮುದಳಿಗೆ ಈಗ ಎಲ್ಲವೂ ಅರ್ಥವಾಯಿತು! ತಾನು ಇಂತಹ ತಪ್ಪು ಮಾಡಿದೆನೆಂದು ನಂಬಲು ಕುಮುದಳಿಗೆ ಸಾಧ್ಯವಾಗಲಿಲ್ಲ. ಅವಳು ಕರಡಿ ಮರಿಯನ್ನು ಕೈಯಿಂದ ತಟ್ಟಿದಾಗ, ಅದು ಅವಳ ಕೈ ನೆಕ್ಕಿತು.
“ಮನೆಯಲ್ಲಿ ಇನ್ನೇನಾದರೂ ರಂಪ ಮಾಡುವ ಮುಂಚೆ, ಇದನ್ನು ಕಾಡಿನಲ್ಲಿ ಬಿಟ್ಟು ಬರಬೇಕು. ಅಷ್ಟೇ ಅಲ್ಲ, ಕಾಳೂ ಕರಡಿ ಗೊಂಬೆಯನ್ನು ಹುಡುಕಬೇಕು" ಎಂದುಕೊಂಡಳು ಕುಮುದ.
ಮರುದಿನ ಮುಂಜಾನೆ ಅಪ್ಪ-ಅಮ್ಮ ಏಳುವ ಮುಂಚೆ ಕುಮುದ ಕರಡಿ ಮರಿಯೊಂದಿಗೆ ಮನೆಯಿಂದ ಮೆಲ್ಲನೆ ಹೊರಗೆ ಬಂದು ಕಾಡಿನತ್ತ ನಡೆದಳು. ಕಾಡಿನೊಳಗೆ ಬಂದೊಡನೆ ಅವಳು ಕರಡಿ ಮರಿಯನ್ನು ನೆಲಕ್ಕೆ ಇಳಿಸಿದಳು. ಅದು ಪ್ರೀತಿಯಿಂದ ಅವಳ ಕೈ ನೆಕ್ಕಿ, ಕಾಡಿನೊಳಗೆ ಓಡಿತು.
ಕರಡಿ ಮರಿ ದೂರಕ್ಕೆ ಹೋಗುತ್ತಿದ್ದಂತೆ ಕುಮುದಳಿಗೆ ಅಳುವೇ ಬಂತು. ಕಣ್ಣೀರನ್ನು ಒರಸಿಕೊಳ್ಳುತ್ತಾ ಅವಳು ಅಲ್ಲಿಂದ ದೂರಕ್ಕೆ ನಡೆದಳು. ಆಗಲೇ ಅವಳಿಗೆ ಅಲ್ಲೊಂದು ಮರದ ಬುಡದಲ್ಲಿ ಕುಳಿತಿದ್ದ ಕಾಳೂ ಕರಡಿಮರಿ ಗೊಂಬೆ ಕಾಣಿಸಿತು. ಅಲ್ಲಿಗೆ ಧಾವಿಸಿ ಹೋಗಿ, ಅದನ್ನು ಎತ್ತಿಕೊಂಡಳು ಕುಮುದ.
“ಎಲ್ಲಿ ಹೋಗಿದ್ದೆ ನೀನು? ನೀನು ಕಾಣೆಯಾಗಿ ನನಗೆ ಎಷ್ಟು ತೊಂದರೆಯಾಯಿತು ಗೊತ್ತಾ? ರಾತ್ರಿಯೆಲ್ಲ ಇಲ್ಲೇನು ಮಾಡುತ್ತಿದ್ದೆ?" ಎಂದು ಹಲವು ಪ್ರಶ್ನೆಗಳನ್ನು ಒಮ್ಮೆಲೇ ಕೇಳಿದಳು ಕುಮುದ. ಕಾಳೂ ಕರಡಿ ಮರಿ ಉತ್ತರಿಸಲಿಲ್ಲ. ಬದಲಾಗಿ ಅದು ಮುಗುಳ್ನಗುತ್ತಾ ಕುಮುದಳನ್ನು ನೋಡಿತು. ಅದುವೇ ಅದರ ಉತ್ತರ.
ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ