ಕರಣ ಕಾರಣ -೭

ಕರಣ ಕಾರಣ -೭

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಡಾ. ರಾಜಶೇಖರ ಜಮದಂಡಿ
ಪ್ರಕಾಶಕರು
ಅಲ್ಲಮಪ್ರಭು ಪೀಠ, ಕಾಂತಾವರ
ಪುಸ್ತಕದ ಬೆಲೆ
ರೂ.200.00, ಮುದ್ರಣ: 2020

ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೭ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೧೮ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ ೧೦ ಲೇಖನಗಳು ಈ ಪುಸ್ತಕದಲ್ಲಿವೆ. ತಮ್ಮ ಸಂಪಾದಕೀಯದಲ್ಲಿ ಜಮದಂಡಿಯವರು ಅಲ್ಲಮಪ್ರಭುಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದಾರೆ. ಅವರು ಬರೆಯುತ್ತಾರೆ ‘ಅಲ್ಲಮ ಪ್ರಭು ವಿಶ್ವದ ಶ್ರೇಷ್ಟ ದಾರ್ಶನಿಕ ಮಹಾಜ್ಞಾನಿ. ಮಾನವನಾದಿಯಾಗಿ ಸಕಲ ಜೀವಿಗಳ ಕುಲೋದ್ಧಾರದ ಮಹಾಚಿಂತಕ. ಭಾವುಕವಲ್ಲದ ವೈಚಾರಿಕ ದೃಷ್ಟಿಯಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಲೋಕವನ್ನೇ ಬೆರಗುಗೊಳಿಸಿದ ಅಪ್ರತಿಮ ಅನುಭಾವಿ. ಸತ್ಯದ ಪೂರ್ಣ ಸ್ವರೂಪವನ್ನು ಅರಿಯಲು ಬಾಹ್ಯ ಅನುಭವಗಳಿಗಿಂತ ಅಂತರಂಗದ ಅರಿವಿಗೆ ಪ್ರಾಮುಖ್ಯತೆ ನೀಡಿದ ವ್ಯೋಮಕೇಶಿ. ಬಸವಣ್ಣನವರ ಶೂನ್ಯ ಸಿಂಹಾಸನದ ಅಧ್ಯಕ್ಷ ಪದವಿಯಲ್ಲಿದ್ದರೂ ಒಂದು ರೀತಿಯಲ್ಲಿ ಅಪಾಂಥಿಕ, ಭಿನ್ನಾಭಿಪ್ರಾಯಗಳಿಲ್ಲದ ಹೊಸ ಸಮಾಜ ನಿರ್ಮಾಣದ ಕ್ರಾಂತಿಯ ಸಂದರ್ಭದಲ್ಲಿ, ಬಸವಣ್ಣನವರಿಗೆ ಮಾರ್ಗ ತೋರಿ ಸಂಚಲನವನ್ನುಂಟುಮಾಡಿದ ಸೀಮಾತೀತನಾದ ವೈರಾಗ್ಯನಿಧಿ. ಹೀಗೆ ಅಲ್ಲಮನ ಜೀವನ ಮತ್ತು ವ್ಯಕ್ತಿತ್ವ ಬಹಳ ನಿಗೂಢ.’

ಈ ಪುಸ್ತಕದಲ್ಲಿ ಒಳಗೊಂಡಿರುವ ಲೇಖನಗಳ ಬರಹಗಾರರನ್ನು ಹಾಗೂ ಅವರ ಸತ್ವಭರಿತ ಲೇಖನದ ಕಿರುಪರಿಚಯವನ್ನು ಸಂಪಾದಕರು ಮಾಡಿಕೊಟ್ಟಿದ್ದಾರೆ. ಉಡುಪಿಯ ಡಾ, ಎ.ವಿ.ಬಾಳಿಗಾ ವೈದ್ಯಕೀಯ ಸಮೂಹ ಸಂಸ್ಥೆಗಳ ನಿರ್ದೇಶಕರು ಹಾಗೂ ಚಿಕಿತ್ಸಾ ತಜ್ಞರಾದ ಡಾ. ಪಿ.ವಿ.ಭಂಡಾರಿಯವರು ‘ಒತ್ತಡ ಮತ್ತು ಸಮಾಜ' ಎಂಬ ಲೇಖನದಲ್ಲಿ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಾನಸಿಕ ಒತ್ತಡದಿಂದ ಆಗುವ ತೊಂದರೆಗಳ ಬಗ್ಗೆ ಈ ಲೇಖನದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿನ ಒತ್ತಡ, ನಿದ್ರಾಹೀನತೆಯನ್ನು ಗುರುತಿಸುವುದು ಹೇಗೆ?, ಮಾದಕ ದ್ರವ್ಯ ವ್ಯಸನವನ್ನು ಗುರುತಿಸುವುದು ಹೇಗೆ? ಯುವ ಜನರಿಗೆ ನಾವು ಏನೆಲ್ಲಾ ಮಾಡಬಹುದು? ಪರೀಕ್ಷಾ ಸಮಯದ ಆತಂಕವನ್ನು ದೂರ ಮಾಡುವುದು ಹೇಗೆ? ಎಂಬೆಲ್ಲಾ ವಿಷಯಗಳು ನಮಗೆ ಬಹಳಷ್ಟು ಮಾಹಿತಿಯನ್ನು ನೀಡುತ್ತವೆ. ಇದರ ಜೊತೆ ತಂದೆ ತಾಯಿಯವರ ಜವಾಬ್ದಾರಿ ಹಾಗೂ ಶಿಕ್ಷಕರ ಜವಾಬ್ದಾರಿಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಇದರ ಜೊತೆ ಮಹಿಳೆಯರ ಮಾನಸಿಕ ಒತ್ತಡಗಳಿಗೆ ಕಾರಣಗಳು ಹಾಗೂ ಅವುಗಳ ನಿವಾರಣೆ ಮಾಡುವುದು ಹೇಗೆ ಎನ್ನುವುದರ ಬಗ್ಗೆಯೂ ಬರೆದಿದ್ದಾರೆ. ಕರ್ತವ್ಯ ನಿರತ ಪೋಲೀಸರ ಮೇಲೆ ಇರುವ ಒತ್ತಡಗಳ ಬಗ್ಗೆಯೂ ಡಾ. ಭಂಡಾರಿಯವರು ಬೆಳಕು ಚೆಲ್ಲಿದ್ದಾರೆ ಮತ್ತು ಅವುಗಳ ನಿವಾರಣೆಗೆ ಮಾರ್ಗೋಪಾಯಗಳನ್ನು ಬರೆದಿದ್ದಾರೆ. 

ಡಾ.ಭಂಡಾರಿಯವರ ಜೊತೆಗೆ ಪ್ರೊ. ಸಿದ್ದು ಯಾಪಲಪರ್ವಿಯವರು ‘ಶರಣರು ಕಟ್ಟಬಯಸಿದ್ದ ಸಮಾಜ ಮತ್ತು ವರ್ತಮಾನ', ಮುಮ್ತಾಜ್ ಬೇಗಂ ಬರೆದ ‘ಪ್ರವಾದಿಗಳ ದೃಷ್ಟಿಯಲ್ಲಿ ಧರ್ಮ', ಡಾ.ವಿಜಯಾ ಸುಬ್ಬರಾಜ್ ಅವರ ‘ವಚನ ಸಾಹಿತ್ಯ ಮತ್ತು ಸ್ತ್ರೀ ಸಬಲೀಕರಣ', ಡಿ. ವಿಷ್ಣು ಭಟ್ ಅವರ ‘ವೇದ ಸಂದೇಶಗಳು ಇಂದಿಗೂ ಪ್ರಸ್ತುತ', ಡಾ. ಮೀರಾಸಾಬಿ ಶಿವಣ್ಣ ಅವರ' ಜುಂಜಪ್ಪ ಮತ್ತು ಪಶುಪಾಲಕ ವೀರರ ಕಾವ್ಯಗಳು' , ಡಾ. ಎಸ್. ಪದ್ಮನಾಭ ಭಟ್ ಅವರ ‘ ಪ್ರಜಾ ಧರ್ಮವಾಗಿ ಶರಣ ಧರ್ಮ', ಕೆ.ಎಲ್. ಕುಂಡಂತಾಯರ ‘ ನಾಗಾರಾಧನೆಯ ತಾತ್ವಿಕ ನೆಲೆಗಳು' , ಅಡ್ಡೂರು ಕೃಷ್ಣ ರಾವ್ ಅವರ ‘ ಆಹಾರ ಮತ್ತು ಬದುಕು' ಮತ್ತು ಶ್ರೀಮತಿ ಭಾರತಿ ಹೆಗಡೆಯವರ ‘ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ’ ಎಂಬ ೧೦ ಸತ್ವಪೂರ್ಣ ಲೇಖನಗಳು ಈ ಪುಸ್ತಕದಲ್ಲಿ ಅಡಕವಾಗಿವೆ.

ಲೇಖನಗಳು ವಿದ್ವತ್ ಪೂರ್ಣವಾಗಿ, ಎಲ್ಲಾ ಲೇಖಕರು ಬಹಳಷ್ಟು ಶ್ರಮ ಪಟ್ಟು ವಿಷಯ ಸಂಗ್ರಹ ಮಾಡಿ ಲೇಖನಗಳನ್ನು ಬರೆದಿದ್ದಾರೆ. ಅಡ್ದೂರು ಕೃಷ್ಣ ರಾವ್ ಬರೆದ ‘ವಿಷಮುಕ್ತ ಆಹಾರ ಮತ್ತು ಬದುಕು' ಇಂತಹ ಲೇಖನಗಳಲ್ಲಿ ಒಂದು. ಚೆನ್ನಾಗಿ ಬದುಕ ಬೇಕೆಂಬ ಆಶಯ ಹೊಂದಿರುವ ನಾವು ಇಷ್ಟ ಪಟ್ಟು ತಿನ್ನುವ ಆಹಾರವೇ ವಿಷವಾದರೆ ಏನು ಗತಿ? ಎಂದು ಬರೆಯುವ ಇವರು, ನಮ್ಮ ಆಹಾರ ವಸ್ತುಗಳಲ್ಲಿರುವ ವಿಪರೀತ ವಿಷಗಳ ಬಗ್ಗೆ ಬರೆಯುತ್ತಾ ಹೋಗುತ್ತಾರೆ. ನಾವು ಬಳಸುವ ಅಕ್ಕಿ, ಗೋಧಿ, ರಾಗಿ, ಜೋಳ, ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಮಾಂಸ, ಎಣ್ಣೆಗಳು, ಬೇಕರಿ ತಿಂಡಿಗಳು ಮತ್ತು ಸಂಸ್ಕರಿತ ಆಹಾರಗಳು ಎಲ್ಲವೂ ವಿಷಭರಿತವಾಗಿವೆ. ಇದನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಖಚಿತ ಪಡಿಸಿವೆ. ಈ ಕಾರಣದಿಂದಾಗಿ ಪ್ರಪಂಚದಾದ್ಯಂತ ಕೋಟ್ಯಾಂತರ ಜನರು ಅನಾರೋಗ್ಯದಿಂದ ನರಳುತ್ತಿದ್ದಾರೆ ಹಾಗೂ ಕ್ಯಾನ್ಸರ್ ನಂತರ ಭೀಕರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಅಡ್ಡೂರು ಇವರು ನೋವಿನಿಂದ ಬರೆಯುತ್ತಾರೆ. ವಿಷ ನಮ್ಮ ಆಹಾರಕ್ಕೆ ಸೇರುವ ಬಗೆ, ಡಿಡಿಟಿಯ ನಿಯಂತ್ರಣ, ಪಂಜಾಬಿನ ಹಸಿರು ಕ್ರಾಂತಿಯ ದಾರುಣ ಕಥನ, ನಮ್ಮದೇ ಪಕ್ಕದ ರಾಜ್ಯ ಕೇರಳದ ಎಂಡೋಸಲ್ಫಾನ್ ರಾಸಾಯನಿಕದ ಸಿಂಪಡನೆಯ ದುಷ್ಪರಿಣಾಮ, ನಮ್ಮ ಊಟದ ಬಟ್ಟಲಿನಲ್ಲಿರುವ ವಿಷಾಹಾರ ಹಾಗೂ ಈ ವಿಷ ಮುಕ್ತ ಸಮಾಜದ ಸ್ಥಾಪನೆಗೆ ರೈತರು ಹಾಗೂ ಸಾಮಾನ್ಯ ಜನತೆ ಮಾಡಬೇಕಾದ ಕೆಲಸಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದ್ದಾರೆ. ಅಡ್ಡೂರು ಕೃಷ್ಣ ರಾವ್ ಇವರು. 

ಪುಸ್ತಕದ ಕೊನೆಯಲ್ಲಿ ಮಾಹಿತಿಪೂರ್ಣ ಬರಹಗಳನ್ನು ಬರೆದ ಲೇಖಕರ ಸವಿವರವಾದ ಮಾಹಿತಿ ಇದೆ. ಅವುಗಳನ್ನು ಗಮನಿಸಿದಾಗ ಲೇಖಕರ ಸಂಪೂರ್ಣ ವಿವರಗಳು ನಮಗೆ ತಿಳಿಯುತ್ತವೆ. ಮಂಗಳೂರಿನ ನಂದಿ & ಕೋ. ಸಂಸ್ಥೆಯ ಮಾಲಕರಾದ ಎಂ.ಪಿ.ಧರ್ಮರಾಜ್ ಇವರು ತಮ್ಮ ತಂದೆಯವರಾದ ಲಿಂ।.ಎಂ.ಪಿ.ರುದ್ರಪ್ಪನವರ ಪುಣ್ಯಸ್ಮರಣೆಗಾಗಿ ಗ್ರಂಥ ದಾಸೋಹಿಗಳಾಗಿ ಪುಸ್ತಕ ಹೊರ ತರಲು ಸಹಕಾರ ನೀಡಿದ್ದಾರೆ. ಇವರ ಈ ಉತ್ತಮ ಕೆಲಸಕ್ಕೆ ಅವರ ಚಿಕ್ಕಪ್ಪ ಎಂ.ಪಿ. ಗುರುಬಸಪ್ಪ ಇವರೂ ಕೈಜೋಡಿಸಿದ್ದಾರೆ. ಇವರುಗಳೆಲ್ಲರ ಸಹಕಾರದಿಂದ ಒಂದು ಉತ್ತಮ ಪುಸ್ತಕ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ದೊರೆತಿದೆ. ಸುಮಾರು ೨೦೦ ಪುಟಗಳ ಈ ಪುಸ್ತಕ ಬೆಳಕು ಕಾಣಲು ಕಾರಣವಾದವರ ಬಗ್ಗೆ ಅಲ್ಲಮಪ್ರಭು ಪೀಠ, ಕಾಂತಾವರ ಇದರ ರುವಾರಿಗಳಾದ ಡಾ. ನಾ. ಮೊಗಸಾಲೆಯವರು ಮಾಹಿತಿ ನೀಡಿದ್ದಾರೆ.