ಕರಣ ಕಾರಣ -೯

ಕರಣ ಕಾರಣ -೯

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಡಾ. ರಾಜಶೇಖರ ಜಮದಂಡಿ
ಪ್ರಕಾಶಕರು
ಅಲ್ಲಮಪ್ರಭು ಪೀಠ, ಕಾಂತಾವರ, ಕಾರ್ಕಳ, ಉಡುಪಿ. ದೂ: ೯೯೦೦೭೦೧೬೬೬
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ: ೨೦೨೨

ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೯ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೨೦ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ ೧೩ ಲೇಖನಗಳು ಈ ಪುಸ್ತಕದಲ್ಲಿವೆ. ಅವರ ಪ್ರಕಾರ ‘ಅಲ್ಲಮ ಪ್ರಭು ವಿಶ್ವದ ಶ್ರೇಷ್ಟ ದಾರ್ಶನಿಕ ಮಹಾಜ್ಞಾನಿ. ಮಾನವನಾದಿಯಾಗಿ ಸಕಲ ಜೀವಿಗಳ ಕುಲೋದ್ಧಾರದ ಮಹಾಚಿಂತಕ. ಭಾವುಕವಲ್ಲದ ವೈಚಾರಿಕ ದೃಷ್ಟಿಯಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಲೋಕವನ್ನೇ ಬೆರಗುಗೊಳಿಸಿದ ಅಪ್ರತಿಮ ಅನುಭಾವಿ. ಸತ್ಯದ ಪೂರ್ಣ ಸ್ವರೂಪವನ್ನು ಅರಿಯಲು ಬಾಹ್ಯ ಅನುಭವಗಳಿಗಿಂತ ಅಂತರಂಗದ ಅರಿವಿಗೆ ಪ್ರಾಮುಖ್ಯತೆ ನೀಡಿದ ವ್ಯೋಮಕೇಶಿ. ಬಸವಣ್ಣನವರ ಶೂನ್ಯ ಸಿಂಹಾಸನದ ಅಧ್ಯಕ್ಷ ಪದವಿಯಲ್ಲಿದ್ದರೂ ಒಂದು ರೀತಿಯಲ್ಲಿ ಅಪಾಂಥಿಕ, ಭಿನ್ನಾಭಿಪ್ರಾಯಗಳಿಲ್ಲದ ಹೊಸ ಸಮಾಜ ನಿರ್ಮಾಣದ ಕ್ರಾಂತಿಯ ಸಂದರ್ಭದಲ್ಲಿ, ಬಸವಣ್ಣನವರಿಗೆ ಮಾರ್ಗ ತೋರಿ ಸಂಚಲನವನ್ನುಂಟುಮಾಡಿದ ಸೀಮಾತೀತನಾದ ವೈರಾಗ್ಯನಿಧಿ. ಹೀಗೆ ಅಲ್ಲಮನ ಜೀವನ ಮತ್ತು ವ್ಯಕ್ತಿತ್ವ ಬಹಳ ನಿಗೂಢ.’

ತಮ್ಮ ಸಂಪಾದಕೀಯ ‘ನುಡಿ ದೀವಿಗೆ...'ಇದರಲ್ಲಿ ಜಮದಂಡಿಯವರು “ಕಳೆದ ಎರಡು ವರ್ಷಗಳಿಂದ ಪ್ರಪಂಚದ ಮಹಾಮಾರಿ ರೋಗವಾದ ಕರೋನ ಕಾರಣಕ್ಕಾಗಿ ಪ್ರತಿ ತಿಂಗಳು ನಿಂತಿದ್ದ ‘ಅನುಭವ ನಡೆ-ಅನುಭಾವದ ನುಡಿ' ಎಂಬ ಶೀರ್ಷಿಕೆಯಲ್ಲಿ ಉಪನ್ಯಾಸ ಕಾರ್ಯಕ್ರಮವು ಮತ್ತೆ ೨೦೨೧ ಅಕ್ಟೋಬರ್ ತಿಂಗಳಿಂದ ಆರಂಭಗೊಂಡಿದೆ. ಇದರಲ್ಲಿ ನಾಡಿನ ವಿದ್ವಾಂಸರು, ಚಿಂತಕರು, ಭೌತಿಕವಾದಿಗಳು, ಭೌದ್ಧಿಕವಾದಿಗಳು, ಸಾಹಿತ್ಯ ಮತ್ತು ಸಾಮಾಜಿಕ, ಧಾರ್ಮಿಕ ವಿಷಯಗಳ ಕುರಿತಾಗಿ ಮಾತಾಡುತ್ತಾರೆ. ಈ ಮಾತುಗಳನ್ನೆ ಅವರು ಲೇಖನ ರೂಪದಲ್ಲಿ ಸಿದ್ಧಪಡಿಸಿಕೊಟ್ಟಾಗ “ಕರಣ-ಕಾರಣ" ಎಂಬ ಶೀರ್ಷಿಕೆಯನ್ನೊಳಗೊಂಡಂತೆ ಈ ರೀತಿ ಪುಸ್ತಕದಲ್ಲಿ ಅವು ದಾಖಲೆಗೊಳ್ಳುತ್ತವೆ. ಇದರಿಂದಾಗಿ ಸಾಹಿತ್ಯಾಸಕ್ತರು ಇಲ್ಲಿನ ಲೇಖನಗಳನ್ನು ಓದಿ ಮನನ ಮಾಡಿಕೊಳ್ಳಲು ಅಥವಾ ತಮ್ಮ ಬರವಣಿಗೆಗೆ ಬಳಸಿಕೊಳ್ಳಲು ಅನುಕೂಲವಾಗಬಹುದು. ಈ ನಿಟ್ಟಿನಲ್ಲಿ ಈಗಾಗಲೇ ಎಂಟು ಸಂಪುಟಗಳು ಪ್ರಕಟಗೊಂಡಿವೆ. ಇದು ನಿರಂತರವಾಗಿ ಸಾಗಲೆಂದು ನಾನು ಹಾರೈಸುವೆನು.

ಕರಣ-ಕಾರಣ -೯ ಈ ಸಂಪುಟದಲ್ಲಿ ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ, ಕೇತಯ್ಯ, ಷಣ್ಮುಖ ಶಿವಯೋಗಿ ಮತ್ತು ದಾಸರ ಕುರಿತಾಗಿ ಜೀವನ, ವ್ಯಕ್ತಿತ್ವ ಆಶಯ, ಅನ್ವೇಷಣೆ, ತಾತ್ವಿಕತೆ, ಬದ್ಧತೆ ಹಾಗೂ ಸಿದ್ಧಾಂತಗಳ ವಿವರಣೆಗಳನ್ನು ನೋಡಬಹುದು. ಅವುಗಳ ಚರ್ಚೆ, ಅನುಸಂಧಾನ, ಅನಾವರಣ ಕೂಡ ಮಾಡಲಾಗಿದೆ. ಈ ರೀತಿಯ ವೈಚಾರಿಕತೆಯುಳ್ಳ ಲೇಖನಗಳನ್ನು ನಾನು ಅವಲೋಕಿಸುವುದರ ಮೂಲಕ ಸಂಕ್ಷಿಪ್ತ ಮಾಹಿತಿಯನ್ನು ಕ್ರೋಡೀಕರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.” ಎಂದಿದ್ದಾರೆ. 

ಈ ಪುಸ್ತಕದಲ್ಲಿ ಅಲ್ಲಮನಲ್ಲಿ ಶೈವ ಪ್ರಜ್ಞೆ (ಡಾ. ನಾ. ಮೊಗಸಾಲೆ), ಅಲ್ಲಮನ ತಾತ್ವಿಕತೆ : ಅದ್ವೈತ ಮತ್ತು ಭಕ್ತಿ ಮಾರ್ಗಗಳ ನಡುವಿನ ಅನುಸಂಧಾನ (ಡಾ. ರಾಜಾರಾಂ ಹೆಗಡೆ), ಏಲೇಶ್ವರ ಕೇತಯ್ಯ (ಡಾ. ಜಿ. ಎನ್. ಉಪಾಧ್ಯ), ಅಧ್ಯಾತ್ಮ ವಿಜ್ಞಾನಿ ಅಲ್ಲಮ ಪ್ರಭು (ಡಾ. ಎನ್. ಎಂ. ಗಿರಿಜಾಪತಿ), ಅಕ್ಕನ ವಚನಗಳಲ್ಲಿ ಅಂಗ ಮತ್ತು ಲಿಂಗ ವಿವೇಚನೆ (ಡಾ. ಅನ್ನಪೂರ್ಣ ಎನ್. ಎಸ್.), ‘ಅಲ್ಲಮ’ ಸಿನೆಮಾ : ಶೂನ್ಯ ಸಂಪಾದನೆಯ ತಾತ್ವಿಕ ಮತ್ತು ಕಲಾತ್ಮಕ ಪಯಣ ( ಡಾ. ಕುಪ್ನಳ್ಳಿ  ಎಂ. ಭೈರಪ್ಪ), ಅಕ್ಕನ ವಚನಗಳಲ್ಲಿ ದೇಹಮೀಮಾಂಸೆ (ಡಾ. ರಾಧಾಮಣಿ ಎಂ. ಎ.), ಶಿಶುನಾಳ ಶರೀಫರ ಅನುಭಾವ ಮತ್ತು ಗುರುಭಕ್ತಿ (ಡಾ. ರಾಜಶೇಖರ ಜಮದಂಡಿ) ಮುಂತಾದ ಮಹತ್ತರವಾದ ಲೇಖನಗಳಿವೆ. ಇಲ್ಲಿರುವ ಹದಿಮೂರು ಬರಹಗಳ ಲೇಖಕರ ಸವಿವರವಾದ ಪರಿಚಯವನ್ನು ಪುಸ್ತಕದ ಕೊನೆಗೆ ನೀಡಲಾಗಿದೆ. 

ಈ ಪುಸ್ತಕವನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮೂಡಿ ಗ್ರಾಮದ ಲಿಂ.ವೈ.ಶಿವಶಂಕರ್ ಸ್ಮರಣಾರ್ಥವಾಗಿ ಅವರ ಧರ್ಮಪತ್ನಿ ಶ್ರೀಮತಿ ಶಾಂತಲಾ ಶಿವಶಂಕರ (ಲಿಂ.ಎಂ.ಪಿ.ರುದ್ರಪ್ಪ ಹಾಗೂ ಶ್ರೀಮತಿ ಚನ್ನಮ್ಮ ಇವರ ಪುತ್ರಿ) ಹಾಗೂ ಇವರ ಸುಪುತ್ರರಾದ ವೀರೇಂದ್ರ ಕುಮಾರ, ಗಂಗಾಧರ ಮತ್ತು ಶಶಿಧರ ಇವರು ‘ದಾಸೋಹ' ರೂಪದಲ್ಲಿ ಸಾಹಿತ್ಯ ಲೋಕಕ್ಕೆ ಅರ್ಪಣೆ ಮಾಡಿದ್ದಾರೆ. ವೈ.ಶಿವಶಂಕರ್ ಅವರು ತಾರ್ಪಾಲಿನ್ಸ್ ವ್ಯವಹಾರವನ್ನು ಪ್ರಾರಂಭಿಸಿ, ಅದರಲ್ಲಿ ಉನ್ನತಿಯನ್ನು ಪಡೆದು ತಮ್ಮ ಜೊತೆ ತಮ್ಮ ಸಕುಟುಂಬಿಕರನ್ನೂ ಬೆಳೆಸಿದರು. ತಮ್ಮ ಬದುಕಿನುದ್ದಕ್ಕೂ ಕೊಡುಗೈ ದಾನಿಯಾಗಿದ್ದು, ತಾವು ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ಮರಳಿಸಿದ ಖ್ಯಾತಿ ಇವರದ್ದು. ಇವರು ತಮ್ಮ ಸಹೋದರ, ಸಹೋದರಿಯರ ಬಾಳನ್ನು ಹಸನು ಮಾಡುವುದರ ಜೊತೆಗೆ ತಮ್ಮ ಧರ್ಮಪತ್ನಿ ಶ್ರೀಮತಿ ಶಾಂತಲಾ ಅವರ ಅಣ್ಣನವರಾದ ಶ್ರೀ ಎಂ.ಪಿ.ಧರ್ಮರಾಜ್ ಅವರಿಗೆ ಮಂಗಳೂರಿನಲ್ಲಿ ನಂದಿ ತಾರ್ಪಾಲಿನ್ಸ್ ಸಂಸ್ಥೆಯನ್ನು ತೆರೆದು ಮುನ್ನಡೆಸಲು ಬಹಳಷ್ಟು ಸಲಹೆ, ಸೂಚನೆ, ಸಹಕಾರಗಳನ್ನು ನೀಡಿದರು. ತಮ್ಮ ೪೪ನೇ ಸಣ್ಣ ವಯಸ್ಸಿನಲ್ಲೇ ಲಿಂಗೈಕ್ಯರಾದ ಶಿವಶಂಕರ್ ಅವರ ಉತ್ತಮ ಚಿಂತನೆ ಮತ್ತು ಸಮಾಜಮುಖಿ ಸೇವೆಗಳನ್ನು ಇವರ ಪತ್ನಿ ಹಾಗೂ ಸುಪುತ್ರರು ಮುಂದುವರೆಸಿಕೊಂಡು ಬರುತ್ತಿದ್ದಾರೆ. 

ಕರಣ -ಕಾರಣ ೯ನೇ ಸಂಪುಟದ ಬಗ್ಗೆ ಅಲ್ಲಮ ಪ್ರಭು ಪೀಠದ ಸ್ಥಾಪಕ ಪ್ರಧಾನ ನಿರ್ದೇಶಕರಾದ ಡಾ. ನಾ ಮೊಗಸಾಲೆ ಇವರು ತಮ್ಮ ಬೆನ್ನುಡಿಯಲ್ಲಿ ಮಾಹಿತಿ ನೀಡಿದ್ದಾರೆ. ೧೮೪ ಪುಟಗಳ ಈ ಪುಸ್ತಕ ಉತ್ತಮ ಸಂಗ್ರಾಹ್ಯ ಮಾಹಿತಿಯನ್ನು ಹೊಂದಿರುವುದರಿಂದ ಪುಸ್ತಕ ಪ್ರಿಯರ ಗಮನ ಸೆಳೆಯಲಿದೆ.