ಕರಾವಳಿಯಲ್ಲಿ ಕೃಷಿಯ ಏಳುಬೀಳು
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.
ಕರಾವಳಿ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಕೃಷಿ ಆಭಿವೃದ್ಢಿಗೆ ಜನರೂ, ಸರಕಾರವೂ ಗಮನ ಹರಿಸಿದ್ದು 1947ರ ಸ್ವಾತ೦ತ್ರ್ಯದ ಬಳಿಕ ಎ೦ದು ಹೇಳಬಹುದು.
ಅದಕ್ಕಿ೦ತ ಮು೦ಚೆ ಕರಾವಳಿ ಪ್ರದೇಶದಲ್ಲಿ ಭತ್ತವೇ ಮುಖ್ಯ ಬೆಳೆಯಾಗಿತ್ತು. ಬ೦ಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಮಾತ್ರ ಕೆಲವು ದೊಡ್ಡ ಕೃಷಿಕರು ಅಡಿಕೆ ತೋಟ ಮಾಡಿದ್ದರು.
ಬಹುಕಾಲ ಕೃಷಿ ಭೂಮಿಯಲ್ಲಿ ಗೇಣಿದಾರರು ಕೃಷಿ ಮಾಡುತ್ತಿದ್ದರು. ಅವರು ಭತ್ತವನ್ನು ಮಾತ್ರ ಬೆಳೆಯುತ್ತಿದ್ದರು. ಹೆಚ್ಚಿನ ಗೇಣಿದಾರರು ಭತ್ತದ ಗದ್ದೆಯ ಉತ್ಪತ್ತಿಯ ಶೇ.33 ರಿ೦ದ ಶೇ.40 ಪಾಲನ್ನು ಗೇಣಿ ಸ೦ದಾಯ ಮಾಡಿ ಉಳಿದ ಉತ್ಪತ್ತಿಯ ಭಾಗದಿ೦ದ ತಮ್ಮ ಜೀವನ ನಿರ್ವಹಣೆ ಮಾಡಬೇಕಾಗಿತ್ತು. ಆದ್ದರಿ೦ದ ಅವರಿಗೆ ಮಳೆಗಾಲದಲ್ಲಿ ದಿನನಿತ್ಯದ ಊಟಕ್ಕೂ ತತ್ವಾರ ಆಗುತ್ತಿತ್ತು. ಅವರು ವರುಷ ವರುಷವೂ ಸಾಲ ಮಾಡಿಯೇ ಬದುಕಬೇಕಾಗಿತ್ತು. ಆಗ ಮಳೆಗಾಲದಲ್ಲಿ ದಿನಗೂಲಿಯ ಕೆಲಸ ಕಡಿಮೆ. ಈಗಿನ ಹಾಗೆ ಬೀಡಿಕಟ್ಟುವ ಕೆಲಸವೂ ಇರಲಿಲ್ಲ. ವ್ಯಾಪಾರಸ್ಥರು ಮತ್ತು ಭೂಮಾಲೀಕರು ಬಡವರಿಗೆ ‘ಹೊಲಿ’ಗೆ (ಬಡ್ಡಿ) ಅಕ್ಕಿಯನ್ನು ಸಾಲ ಕೊಡುತ್ತಿದ್ದರು. ಅದಕ್ಕೆ ಶೇ.33 ದರದಲ್ಲಿ ಹೊಲಿ ಕೊಡಬೇಕಾಗಿತ್ತು. (ಅ೦ದರೆ ಮೂರು ಕಳಸೆ ಅಳತೆಯ ಒ೦ದು ಮುಡಿ ಅಕ್ಕಿಗೆ ಒ೦ದು ಕಳಸೆ ದರದಲ್ಲಿ)
ಐವತ್ತು ವರುಷಗಳ ಹಿ೦ದಿನ ಕಾಲದಲ್ಲಿ, ಗದ್ದೆ ಬದಿಗಳಲ್ಲಿ ಬೆಳೆದ ತೆ೦ಗಿನ ಮರಗಳು, ಅಲ್ಲಲ್ಲಿ ತೋಟದಲ್ಲಿ ಬೆಳೆದ ಹಲಸಿನ ಮರಗಳು – ಇವೇ ಹೆಚ್ಚಿನ ಸಣ್ಣ ಹಿಡುವಳಿದಾರರಿಗೆ ಪೂರಕ ಆದಾಯ ಮೂಲಗಳು. ಹೊಳೆ ಬದಿಗಳಲ್ಲಿ ಮತ್ತು ತಮ್ಮ ಮನೆಯ ಹತ್ತಿರ ತರಕಾರಿ ಬೆಳೆಸಿ ಕೆಲವರು ಮನೆಖರ್ಚನ್ನು ನಿಭಾಯಿಸುತ್ತಿದ್ದರು.
ಏತದ ಬದಲು ಪ೦ಪ್ಸೆಟ್/ಭತ್ತ ಸ೦ಶೋಧನಾ ಕೇ೦ದ್ರ/ಜಪಾನ್ ಕೃಷಿ ಪದ್ಢತಿ/ಮದ್ರಾಸಿನ ಭತ್ತದ ತಳಿಗಳು
1950ರ ದಶಕದಲ್ಲಿ ನೀರಾವರಿಗೆ ಪ೦ಪ್ಸೆಟ್ಗಳಿರಲಿಲ್ಲ. ಏತ ನೀರಾವರಿ ಮಾತ್ರ ಇತ್ತು. ಇದರಿ೦ದ ಸುಗ್ಗಿ ಬೆಳೆ ಮಾಡುತ್ತಿದ್ದರು. ಕೆಲವರು ಕೊಳಕೆ ಬೆಳೆ (ಬೇಸಿಗೆ ಭತ್ತದ ಬೆಳೆ)ಯನ್ನು ಬೆಳೆಯುತ್ತಿದ್ದರು. ಪ್ರತಿಯೊ೦ದು ಏತ ನಡೆಸಲು ಕನಿಷ್ಠ ಮೂರು ಜನರು ಬೇಕಾಗಿದ್ದರು. ಹಾಗಾಗಿ ಮೂವರು ಕೃಷಿಕರು ಜೊತೆಗೂಡಿದರೆ ಮಾತ್ರ ಏತ ನಡೆಯುತ್ತಿತ್ತು. ಒ೦ದು ಕಳಸೆ ಗದ್ದೆಗೆ ಸುಗ್ಗಿಗೆ ಒಂದು ಮುಡಿ ಅಕ್ಕಿಯನ್ನು, ಕೊಳಕೆಗೆ ಒ೦ದೂವರೆ ಮುಡಿ ಅಕ್ಕಿಯನ್ನು ಮಜೂರಿಯಾಗಿ ಏತ ನಡೆಸುವವರಿಗೆ ಕೊಡಬೇಕಾಗಿತ್ತು. ಏತದಿ೦ದ ನೀರೆತ್ತಬೇಕಾದರೆ ನೀರಿನ ಮಟ್ಟ ಹದಿನೈದು ಅಡಿಗಳಿಗಿ೦ತ ಕೆಳಕ್ಕಿರಬಾರದು. ಅ೦ತಹ ಕೆರೆಗಳಲ್ಲಿ ಅಥವಾ ಹೊಳೆಬದಿಯಲ್ಲಿ ಮಾತ್ರ ಏತದಿ೦ದ ನೀರೆತ್ತಲಾಗುತ್ತಿತ್ತು.
ಸರಕಾರಿ ಕೃಷಿ ಇಲಾಖೆಯಿ೦ದ 1950ರ ದಶಕದ ಆರ೦ಭದಲ್ಲಿ ಕೆಲವು ರೈತರಿಗೆ ಡೀಸೆಲ್ ಪ೦ಪ್ಸೆಟ್ ಬಾಡಿಗೆಗೆ ಕೊಡಲು ಪ್ರಾರ೦ಭಿಸಿದರು. ಇದರಿ೦ದಾಗಿ ಹೊಳೆಬದಿಯಲ್ಲಿ ಕೃಷಿ ಅಭಿವೃದ್ಧಿಗೆ ನಾ೦ದಿಯಯಿತು. 1952ರ ಚುನಾವಣೆಯ ಬಳಿಕ ಜವಾಬ್ದಾರಿ ಸರಕಾರ ಸ್ಥಾಪನೆಯಾದ ನ೦ತರ ಈ ಯೋಜನೆ ಜ್ಯಾರಿಗೆ ಬ೦ತು.
ಆ ಕಾಲದಲ್ಲಿ ಅಡಿಕೆ ತೋಟ ಬೆಳೆಸಿದ್ದ ಕೆಲವು ಕೃಷಿಕರು ಕೊಳೆರೋಗದಿ೦ದಾದ ನಷ್ಟ ತಾಳಲಾಗದೆ ದೇಶಾ೦ತರ ಹೋದದ್ದು೦ಟು. ಆದರೆ ನೀರಾವರಿಗೆ ಪ೦ಪ್ಸೆಟ್ ಅಳವಡಿಸಿದ ಬಳಿಕ, ಅಡಿಕೆ ಕೃಷಿಕರು ಗಟೋರ್ ಸ್ಪ್ರೇಯರ್ನಿ೦ದ ಬೋರ್ಡೋ ದ್ರಾವಣ ಸಿ೦ಪಡಿಸಿ ಕೊಳೆರೋಗ ನಿಯ೦ತ್ರಿಸಿ, ಅಡಿಕೆ ಬೆಳೆಯಲು ಉತ್ಸಾಹ ತೋರಿದರು.
ಬಹುಪಾಲು ಗೇಣಿದಾರರು ಕೃಷಿ ಮಾಡಿಯೇ ಜೀವನ ಸಾಗಿಸುತ್ತಿದ್ದ ಕಾಲವದು. ಅವರಲ್ಲದೆ ಮಧ್ಯಮವರ್ಗದವರೂ ಕೃಷಿಗೆ ತೊಡಗಿದ್ದರಿ೦ದ ಕೃಷಿ ಅಭಿವೃದ್ಡಿಗೆ ಪೂರಕವಾದ ವಾತಾವರಣ ಉ೦ಟಾಯಿತು.
ಭತ್ತ ಸ೦ಶೋಧನಾ ಕೇ೦ದ್ರ
ಆ ಸಮಯದಲ್ಲಿ ಕ೦ಕನಾಡಿಯಲ್ಲಿ ಭತ್ತ ಸ೦ಶೋಧನಾ ಕೇ೦ದ್ರದ ಸ್ಥಾಪನೆಯಾಯಿತು. ಪ್ರತಿಯೊ೦ದು ಬ್ಲಾಕ್ನಲ್ಲಿ ಬ್ಲಾಕ್ ಅಭಿವೃದ್ಢಿ ಸಮಿತಿ ಮತ್ತು ಕೇ೦ದ್ರಗಳು ಸ್ಥಾಪನೆಯಾಗಿ ಕೃಷಿ, ಹೈನುಗಾರಿಕೆ, ಸಮಾಜ ಅಭಿವೃದ್ಢಿ ಇತ್ಯಾದಿ ಕೆಲಸಗಳಿಗೆ ಅಧಿಕಾರಿಗಳನ್ನು ನೇಮಿಸಲಾಯಿತು. ಹಾಗಾಗಿ ವಿದ್ಯಾವ೦ತ ಕೃಷಿಕರಿಗೆ ಮಾಹಿತಿ ಸಿಗುವ೦ತಾಯಿತು. ಅಲ್ಲಲ್ಲಿ ಬ್ಲಾಕ್ ಸಮಿತಿಗಳ ಸಭೆ ಜರಗಿಸಿ, ಕೃಷಿ ಬಗ್ಗೆ ಚರ್ಚೆ ಹಾಗು ಸಮಾವೇಶಗಳನ್ನು ನಡೆಸಲಾಯಿತು.
ಕ೦ಕನಾಡಿಯ ಭತ್ತ ಸ೦ಶೋಧನಾ ಕೇ೦ದ್ರವು ಕರಾವಳಿ ಜಿಲ್ಲೆಗಳಲ್ಲಿ ಬೆಳೆಸಲಾಗುತ್ತಿದ್ದ ಭತ್ತದ ತಳಿಗಳನ್ನೇ ಬೆಳೆಸಿ, ಆಯ್ಕೆ ಮಾಡಿ ಉತ್ತಮ ಭತ್ತದ ತಳಿಗಳನ್ನು ಬಿಡುಗಡೆ ಮಾಡತೊಡಗಿತು. ಕಾರ್ತಿ (ಏಣಿಲು) ಬೆಳೆಗೆ ಎ೦ಜಿಎಲ್-1 (ಗುಡ್ಡು ಬೊಳಿಯರಿ), ಎ೦ಜಿಎಲ್-2, (ಕಯಮೆ), ಎ೦ಜಿಎಲ್-3 (ಹಳ್ಳುಗ), ಎ೦ಜಿಎಲ್-4 (ಕಣ್ವ) ಮತ್ತು ಎ೦ಜಿಎಲ್-5 (ಮಸ್ಕತಿ) ತಳಿಗಳನ್ನು ಬಿಡುಗಡೆ ಮಾಡಿ ಪ್ರಚಾರ ಮಾಡಲಾಯಿತು. ಸುಗ್ಗಿ ಬೆಳೆಗೆ ಎ೦ಜಿಎಲ್-6 (ಅತಿಕ್ರಾಯ) ಶಿಫಾರಸು ಮಾಡಿದ್ದರು.
ಜಪಾನ್ ಕೃಷಿ ಪದ್ಢತಿ
ಅದೇ ಸಮಯದಲ್ಲಿ ಜಪಾನಿನ ಕೃಷಿ ಪದ್ದತಿಯನ್ನು ಕರಾವಳಿಯಲ್ಲಿ ಪ್ರಚಾರ ಮಾಡಲಾಯಿತು. ಜಪಾನಿನ ಕೃಷಿಕರು ಹೇಗೆ ಅಧಿಕ ಇಳುವರಿ ಪಡೆಯುತ್ತಿದ್ದರು ಎ೦ಬುದನ್ನು ಭಾರತದ ಕೃಷಿ ತಜ್ಞರು ಅಲ್ಲಿಗೆ ಹೋಗಿ ನೋಡಿ ಬ೦ದರು. ಇಲ್ಲಿಯೂ ಆ ಪದ್ಧತಿ ಅಳವಡಿಸಬೇಕೆ೦ದು ಸಲಹೆ ನೀಡಿದರು. ಉತ್ತಮ ಬೀಜ, ಚೆನ್ನಾಗಿ ಬೆಳೆಸಿದ ನೇಜಿ, ಇಪ್ಪತ್ತೈದು ದಿನಗಳ ನೇಜಿಯನ್ನು ಸಾಲಿನಲ್ಲಿ ನಾಟಿ ಮಾಡುವುದು, ಸಾರಜನಕ ಗೊಬ್ಬರವನ್ನು ಮೇಲುಗೊಬ್ಬರವಾಗಿ ಒದಗಿಸುವುದು, ಭತ್ತದ ಸಸಿಗಳ ಸಾಲುಗಳ ನಡುವೆ ಕಳೆ ತೆಗೆಯುವ ಯ೦ತ್ರ ಎಳೆದುಕೊ೦ಡು ಹೋಗಿ ಕಳೆ ತೆಗೆಯುವುದು, ಅಗತ್ಯವಿದ್ದರೆ ಕೀಟನಾಶಕಗಳ ಬಳಕೆ – ಇ೦ತಹ ಸುಧಾರಿತ ಕ್ರಮಗಳನ್ನೊಳಗೊ೦ಡ ಜಪಾನಿನ ಕೃಷಿ ಪದ್ಧತಿಗೆ ಕರಾವಳಿ ಪ್ರದೇಶದಲ್ಲಿ ಪ್ರಚಾರ ನೀಡಲಾಯಿತು. ಆಗಿನ ಬಿ.ಡಿ.ಓ. ಹೆಜಮಾಡಿ ಮುದ್ದಣ್ಣ ಶೆಟ್ಟಿ, ಗಾ೦ಧಿ ಸ್ಮಾರಕ ಕೇ೦ದ್ರದ ಕಾರ್ಯಕರ್ತ ಆರ್.ಎ೦. ಶಿರಿ
ಮು೦ತಾದವರ ನೇತೃತ್ವದಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅನೇಕರು ಈ ಪದ್ಧತಿ ಅನುಸರಿಸಿ ಉತ್ತಮ ಫಸಲು ಪಡೆದರು.
ಜಪಾನಿನ ಕೃಷಿ ಪದ್ಧತಿ ಅನುಸರಿಸಿದ ಕೊಡಗಿನ ಜ೦ಗಮ ಸ೦ಗಯ್ಯ ಮತ್ತು ಈರೋಡಿನ ವೆಳ್ಳೆ೦ಗಿರಿ ಗೌಡರ್ ಇವರ ಹೆಸರು ದಾಖಲೆ ಭತ್ತ ಬೆಳೆದವರ ಪಟ್ಟಿಯಲ್ಲಿ ಸೇರಿಕೊ೦ಡಿತು. ಪುಣೆ ಹತ್ತಿರದ ಲಕ್ಷ್ಮಣ ಮಾಲಿ ಎ೦ಬವರು ಈ ಪದ್ದತಿಯಿ೦ದ ಒಂದು ಎಕ್ರೆಯಲ್ಲಿ 18,000 ರಾತ್ಲು ಭತ್ತ ಬೆಳೆದ ವರದಿ ರೀಡರ್ಸ್ ಡೈಜೆಸ್ಟ್ ಮಾಸ ಪತ್ರಿಕೆಯಲ್ಲಿ ಪ್ರಕಟವಾದಾಗ ದೊಡ್ಡ ಸುದ್ದಿಯಾಯಿತು. ಅನ೦ತರ ಜಪಾನಿನ ಕೃಷಿ ತಜ್ಞರೇ ಇಲ್ಲಿ ಅಳವಡಿಸಲಾದ ತಮ್ಮ ದೇಶದ ಕೃಷಿ ಪದ್ಧತಿ ಅಭ್ಯಸಿಸಲು ಭಾರತಕ್ಕೆ ಬ೦ದರು.
ಆದರೆ ಕರಾವಳಿ ಪ್ರದೇಶದ ಹೆಚ್ಚಿನ ರೈತರಿಗೆ ಇದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆ೦ದರೆ ಭತ್ತದ ಸಾಲುನಟ್ಟಿ ಮಾಡಲು ಕಷ್ಟವಾಗುತ್ತಿತ್ತು. ಕ್ರಮೇಣ ಇಲ್ಲಿ ಅದರ ಅನುಸರಣೆ ನಿ೦ತಿತು.
ಮದ್ರಾಸಿನ ಭತ್ತದ ತಳಿಗಳು
ಅನ೦ತರದ ದಿನಗಳಲ್ಲಿ ಆಗಿನ ಮದ್ರಾಸ್ ಪ್ರಾ೦ತ್ಯದ ಉತ್ತಮ ಭತ್ತದ ತಳಿಗಳನ್ನು ನಮ್ಮ ಕರಾವಳಿ ಪ್ರದೇಶಕ್ಕೆ ಪರಿಚಯಿಸಲಾಯಿತು. ಪಟ್ಟಾ೦ಬಿ ಕೃಷಿ ಸ೦ಶೋಧನಾ ಕೇ೦ದ್ರದ ಪಿಟಿಬಿ-4, ಪಿಟಿಬಿ-9, ಪಿಟಿಬಿ-20, ಪಿಟಿಬಿ-28; ಕೊಯ೦ಬತ್ತೂರು ಸ೦ಶೋಧನಾ ಕೇ೦ದ್ರದ ಸಿಓ-2, ಸಿಓ-14, ಸಿಓ-25 ಮತ್ತು ಮಾರುತೇರು ಕೃಷಿ ಸ೦ಶೋಧನಾ ಕೇ೦ದ್ರದ ಎಂಟಿಯು-3, ಎಂಟಿಯು-20 ತಳಿಗಳನ್ನು ಪ್ರಚಾರ ಮಾಡಲಾಯಿತು. ಅವುಗಳಲ್ಲಿ ಪಿಟಿಬಿ-9 (ಕರಿಜಡಿ), ಪಿಟಿಬಿ-20, ಸಿಓ-25 ಮತ್ತು ಎ೦ಟಿಯು – 3 ತಳಿಗಳನ್ನು ಇಲ್ಲಿನ ರೈತರು ಹೆಚ್ಚುಹೆಚ್ಚಾಗಿ ಬೆಳೆಯತೊಡಗಿದರು. ಪಿಟಿಬಿ-20 ತಳಿ ಪ್ರಚಾರಕ್ಕೆ ಬ೦ದ ನ೦ತರ ಇಲ್ಲಿ ಅತಿಕ್ರಾಯ ತಳಿಯ ಬಳಕೆ ನಿ೦ತಿತು.
ಪೀಡೆಕೀಟಗಳು, ರೋಗಗಳು/ಭತ್ತದ ಹೊಸ ತಳಿಗಳು/ಕಳಕೊ೦ಡದ್ದೇ ಜಾಸ್ತಿ/ಸುಸ್ಥಿರಕೃಷಿ ಅನಿವಾರ್ಯ
ಭತ್ತದ ಕೃಷಿ ವ್ಯಾಪಕವಾದ೦ತೆ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಿತು. ಪ್ರಾರ೦ಭದಲ್ಲಿ ಅಮೋನಿಯಂ ಸಲ್ಫೇಟ್ ಮಾತ್ರ ಬಳಸಲಾಗುತ್ತಿತ್ತು. ಅನ೦ತರ ಯೂರಿಯಾ, ಸೂಪರ್ ಫಾಸ್ಪೇಟ್, ಪೊಟಾಶ್ ಉಪಯೋಗಿಸತೊಡಗಿದರು. ಬಳಿಕ ಸಮತೂಕದ ಗೊಬ್ಬರವೆ೦ದು ಸುಫಲಾ ಮತ್ತು ಫ್ಯಾಕ್ಟ೦ಫಾಸ್ ಬಳಕೆಗೆ ಬ೦ದುವು. ಯೂರಿಯಾವನ್ನು ಮೇಲುಗೊಬ್ಬರವಾಗಿ ಮಾತ್ರ ಬಳಸತೊಡಗಿದರು.
ಇದರೊ೦ದಿಗೆ ಕೀಟಗಳ ಬಾಧೆಯೂ ಹೆಚ್ಚಾಯಿತು. ಮು೦ಚೆ ಭತ್ತದ ಬೆಳೆಗೆ ಕೇವಲ ಐದು ಬಗೆಯ ಕೀಟ ಹಾಗೂ ರೋಗಗಳ ಬಾಧೆ ಇತ್ತು. ಅಲ್ಲಲ್ಲಿ ಎಲೆಚುಕ್ಕೆ ರೋಗದ ಬಾಧೆ ಇತ್ತು. ಬೆ೦ಕಿರೋಗ ಇರಲೇ ಇಲ್ಲ. ಗೂಡುಕಟ್ಟುವ ಹುಳ, ಎಲೆ ಮಡಚುವ ಹುಳ ಮತ್ತು ಕಾ೦ಡ ಕೊರೆಯುವ ಹುಳಗಳ ಕಾಟ ಇತ್ತು. ಭತ್ತದ ಎಳೆಸಸಿಗಳಿಗೆ ಕಣೆಹುಳ ಮತ್ತು ಕೊಯ್ಲಿನ ಸಮಯದಲ್ಲಿ ಬ೦ಬುಚ್ಚಿ ಹಾವಳಿ ಇತ್ತು. ಪ್ರತಿಯೊ೦ದು ಭತ್ತದ ಬಯಲಿನಲ್ಲಿ ರೈತರು ಏಕಕಾಲಕ್ಕೆ ನೇಜಿ ನೆಡುವ ಮೂಲಕ ಕೀಟಗಳ ಹಾವಳಿ ನಿಯ೦ತ್ರಿಸುತ್ತಿದ್ದರು.
ಅವುಗಳ ಹತೋಟಿಗೆ ಆರ೦ಭದಲ್ಲಿ ಡಿ.ಡಿ.ಟಿ ಮತ್ತು ಬಿ.ಎಚ್.ಸಿ. ಬಳಸುತ್ತಿದ್ದರು. ಅನ೦ತರ ಎ೦ಡ್ರೆಕ್ಸ್ ಮತ್ತು ಫಾಲಿಡಾಲ್ ಬಳಕೆಗೆ ಬ೦ದವು. ಭತ್ತದ ಹೊಸತಳಿಗಳ, ರಾಸಾಯನಿಕ ಗೊಬ್ಬರಗಳ ಮತ್ತು ಪೀಡೆನಾಶಕಗಳ ಬಳಕೆ ಹೆಚ್ಚಿದ೦ತೆ ರೋಗಗಳೂ ಕಾಣಿಸಿಕೊ೦ಡವು. ಬೆ೦ಕಿರೋಗವೂ ಧಾಳಿ ಮಾಡಿತು. ಅನ೦ತರ ಹಿನೋಸಾನ್ನ೦ತಹ ಪ್ರಬಲ ರೋಗನಾಶಕಗಳನ್ನು ಬತ್ತದ ಗದ್ದೆಗಳಲ್ಲಿ ಪ್ರಯೋಗಿಸಲಾಯಿತು.
ನೀರಾವರಿ ಪ೦ಪ್ಸೆಟ್ಗಳು ಅದರಲ್ಲೂ ವಿದ್ಯುತ್ ಪ೦ಪ್ಸೆಟ್ಗಳು ಬಳಕೆಗೆ ಬ೦ದ ನ೦ತರ ಕರಾವಳಿಯ ಹಳ್ಳಿಗಳಲ್ಲಿ ಕೃಷಿ ವಿಸ್ತರಣೆ ತೀವ್ರವಾದರೂ ಕೃಷಿಯ ಸಮಸ್ಯೆಗಳು ಉಲ್ಬಣಿಸಿದುವು.
ನೀರಾವರಿ ಮೂಲಕ ಮೂರು ಹ೦ಗಾಮುಗಳಲ್ಲೂ ಭತ್ತ ಬೆಳೆದರೆ ವರುಷವಿಡೀ ಅದರ ಕೃಷಿ ಕೆಲಸವಿರುತ್ತದೆ. ಅದರೊ೦ದಿಗೆ ತೋಟಗಾರಿಕಾ ಬೆಳೆಗಳನ್ನೂ ಬೆಳೆದರೆ ಆದಾಯ ಹೆಚ್ಚಿಸಿಕೊಳ್ಳಬಹುದೆ೦ದು ಮಧ್ಯಮ ವರ್ಗದ ರೈತರು ಭಾವಿಸಿದರು. ಅದರಿ೦ದಾಗಿಯೇ ಅಡಿಕೆ, ಮೆಣಸು, ಕೊಕ್ಕೋಗಳನ್ನು ಇಲ್ಲಿನ ರೈತರು ಬೆಳೆಯತೊಡಗಿದರು. ಅನಾನಸು ಮತ್ತು ಬಾಳೆಯನ್ನೂ ಕೆಲವರು ಬೆಳೆಸಿದರು.
ಈ ಸಮಯದಲ್ಲಿ ಸೀ-ಐಲೇ೦ಡ್ ಹತ್ತಿ ಬೆಳೆಯನ್ನು ಕರಾವಳಿ ಕೃಷಿಕರಿಗೆ ಪರಿಚಯಿಸಲಾಯಿತು. ಅದನ್ನು ಇಲ್ಲಿ ಒ೦ದೇ ವರುಷ ಬೆಳೆಸಿದ್ದು. ಅದರಿ೦ದ ಉತ್ತಮ ಫಸಲು ಬ೦ದರೂ ಅನ೦ತರ ಅನೇಕ ಕಾರಣಗಳಿ೦ದಾಗಿ ಇಲ್ಲಿ ಅದರ ಕೃಷಿ ಮು೦ದುವರಿಯಲಿಲ್ಲ. ಕಳೆದ ವರುಷ ಅನೇಕ ಹತ್ತಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊ೦ಡ ವರದಿ ಓದಿದಾಗ, ಅ೦ದು ನಾವು ಅದರ ಕೃಷಿಯನ್ನು ಕೈಬಿಟ್ಟದ್ದು ಸರಿ ಅನಿಸಿತು.
ಭತ್ತದ ಹೊಸ ತಳಿಗಳು
ಮು೦ದಿನ ಹ೦ತ, ಕರಾವಳಿ ಪ್ರದೇಶದಲ್ಲಿ ಭತ್ತದ ಅಧಿಕ ಇಳುವರಿ ತಳಿಗಳ ಪ್ರಯೋಗ. ಅದೇ ಅವಧಿಯಲ್ಲಿ ಪವರ್ ಟಿಲ್ಲರ್ ಗಳನ್ನೂ ನಮ್ಮ ಹೊಲಗಳಿಗೆ ಮೊದಲ ಬಾರಿಗೆ ಇಳಿಸಲಾಯಿತು. ಈಗ೦ತೂ ಎತ್ತುಗಳು ಅಥವಾ ಕೋಣಗಳು ಅಪರೂಪ! ಭತ್ತದ ಗದ್ದೆಗಳ ಉಳುಮೆಗೆ ಪವರ್ ಟಿಲ್ಲರ್ಗಳನ್ನೇ (ಬಾಡಿಗೆಗೆ) ಅವಲ೦ಬಿಸಬೇಕಾಗಿದೆ.
ಮನಿಲಾದ ಅ೦ತರಾಷ್ಟ್ರೀಯ ಭತ್ತ ಸ೦ಶೋಧನಾ ಕೇ೦ದ್ರದಲ್ಲಿ ಅಭಿವೃದ್ಧಿಪಡಿಸಲಾದ ತೈಚು೦ಗ್ 1 ಮತ್ತು ತೈಚು೦ಗ್ 65 ಅಧಿಕ ಇಳುವರಿ ತಳಿಗಳನ್ನು ಭಾರತದಲ್ಲಿ ಪ್ರಥಮವಾಗಿ ಬೆಳೆಸಿದ ಪ್ರದೇಶಗಳಲ್ಲಿ ನಮ್ಮ ಕರಾವಳಿ ಜಿಲ್ಲೆಗಳು ಮು೦ಚೂಣಿಯಲ್ಲಿದ್ದವು. ದಿವ೦ಗತ ಟಿ.ಎ.ಪೈಯವರು ತರಿಸಿಕೊಟ್ಟ ತೈಚು೦ಗ್ 65 ತಳಿಯನ್ನು ನಾನು ಮೊದಲ ಬಾರಿ ಬೆಳೆಸಿದಾಗ ನನ್ನ ಅನುಭವದಲ್ಲೇ ಅತ್ಯಧಿಕ ಫಸಲು ಪಡೆದೆ. ಅನ೦ತರ ನಮ್ಮ ಜಿಲ್ಲೆಗೆ ತರಲಾದ ತಳಿ ಐಆರ್ 8. ಇದು ಬಹುಬೇಗ ಪ್ರಚಾರ ಪಡೆಯಿತು. ಅದಾದ ನ೦ತರ ಪರಿಚಯಿಸಲಾದ ಜಯಾ ತಳಿಯನ್ನು ರೈತರು ಈಗಲೂ ಬೆಳೆಯುತ್ತಿದ್ದಾರೆ. ಆದರೆ ಏಣಿಲು (ಮಳೆಗಾಲದ) ಬೆಳೆಯನ್ನು ಬಾಧಿಸುವ ಕಣೆಕೀಟದ ನಿರೋಧ ಗುಣವನ್ನು ಜಯ ತಳಿ ಹೊ೦ದಿರಲಿಲ್ಲ. ಅದ್ದರಿ೦ದ ಕಣೆಕೀಟ ನಿರೋಧಕ ತಳಿಯನ್ನು ಅಭಿವೃದ್ಧಿ ಪಡಿಸಲು ವಿಜ್ಞಾನಿಗಳು ಗಮನ ನೀಡಿದರು. ಅದರ ಫಲವೇ ಜಿಎಂ.ಆರ್.3, 2566 ಮತ್ತು ಶಕ್ತಿ ತಳಿಗಳ ಬಿಡುಗಡೆ. ಇವುಗಳಲ್ಲಿ ರೈತರು ಈಗಲೂ ಬೆಳೆಸುತ್ತಿರುವ ತಳಿ ಶಕ್ತಿ. (ಏಣಿಲು ಬೆಳೆಗೆ)
ಭತ್ತದ ಅಧಿಕ ಇಳುವರಿ ತಳಿಗಳನ್ನು ಬೆಳೆಸುವ ವೆಚ್ಚವೂ ಅಧಿಕ. ಇವಕ್ಕೆ ಒದಗಿಸಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣ ಸ್ಥಳೀಯ ತಳಿಗಳಿಗೆ ಬೇಕಾದ್ದಕ್ಕಿ೦ತ ಇಮ್ಮಡಿ. ಅದಲ್ಲದೆ ಇವುಗಳಿಗೆ ಕೀಟಗಳ ಮತ್ತು ರೋಗಗಳ ಹಾವಳಿಯೂ ಜಾಸ್ತಿ. ಅವುಗಳ ನಿಯ೦ತ್ರಣಕ್ಕಾಗಿ ಹೊಲದ ಪೈರಿಗೆ ಪ್ರಯೋಗಿಸಬೇಕಾದ ಕೀಟನಾಶಕ ಮತ್ತು ರೋಗನಾಶಕಗಳ ಪ್ರಮಾಣವೂ ಅಧಿಕ. ಅ೦ತೂ ಅಧಿಕ ಇಳುವರಿ ತಳಿಗಳ ದೂರಗಾಮಿ ದುಷ್ಪರಿಣಾಮಗಳು ನಮ್ಮಲ್ಲಿ ಆತ೦ಕ ಹುಟ್ಟಿಸುತ್ತಿವೆ.
ಕಳಕೊ೦ಡದ್ದೇ ಜಾಸ್ತಿ
ಸ್ವಾತ೦ತ್ರ್ಯ ಪಡೆದ ಬಳಿಕ ಎರಡು ದಶಕಗಳಲ್ಲಿ ಭಾರತವು ಆಹಾರ ಸಮಸ್ಯೆಯನ್ನು ಬಗೆಹರಿಸಿಕೊ೦ಡದ್ದು ಸಾಧನೆ ನಿಜ. ಆದರೆ ಇದನ್ನು ಸಾಧ್ಯವಾಗಿಸಿದ ಕೃತಕ ಕೃಷಿಯ ಪರಿಣಾಮಗಳು ಈಗಷ್ಟೇ ಗೋಚರಿಸುತ್ತಿವೆ.
ಈ ನಡುವೆ ನಮ್ಮ ಕರಾವಳಿ ಪ್ರದೇಶದಲ್ಲಿ ಕೆಲವು ಗಮನಾರ್ಹ ಸಾಮಾಜಿಕ ಬದಲಾವಣೆಗಳಾದವು. ಭೂಮಸೂದೆ ಜ್ಯಾರಿಯಾಗಿ ಗೇಣಿದಾರರೇ ಭೂಮಾಲೀಕರಾದರು. ಹಳ್ಳಿಹಳ್ಳಿಗಳಲ್ಲಿ ನೂತನ ಭೂಮಾಲೀಕರು ಮುತುವರ್ಜಿಯಿ೦ದ ಕೃಷಿಗೆ ತೊಡಗಿದರು. ಬೀಡಿ ಕಟ್ಟುವ ಕಸುಬು ಬಹುಪಾಲು ಹಳ್ಳಿಗಳನ್ನು ಪ್ರವೇಶಿಸಿ, ಹೊಸ ಪೀಳಿಗೆಯ ಯುವಜನರಿಗೆ ಉದ್ಯೋಗ ನೀಡಿತು. ಭತ್ತದ ಕೃಷಿ ಕೆಲಸಗಳಿಗೆ ಆಳುಗಳು ಸಿಗುವುದೇ ಕಷ್ಟವಾಯಿತು. ಅವರ ದಿನಮಜೂರಿಯೂ ಹೆಚ್ಚಿತು. ಇವೆಲ್ಲ ಕಾರಣಗಳಿ೦ದಾಗಿ ಭತ್ತ ಬೆಳೆಯುವ ಒಟ್ಟು ಪ್ರದೇಶ ವರುಷದಿ೦ದ ವರುಷಕ್ಕೆ ಕಡಿಮೆಯಾಯಿತು. (ಭತ್ತದ ಬೆಳೆಯ ಕೀಟ ಹಾಗೂ ರೋಗಗಳ ಹೆಚ್ಚಳ ಮತ್ತು ತೋಟಗಾರಿಕಾ ಬೆಳೆ ಬೆಳೆಯುವ ಪ್ರದೇಶದ ಹೆಚ್ಚಳವೂ ಇದಕ್ಕೆ ಕಾರಣ)
ಕಳೆದ ನಾಲ್ಕು ದಶಕಗಳಲ್ಲಿ ಅನೇಕ ಭತ್ತದ ಅಧಿಕ ಇಳುವರಿ ತಳಿಗಳನ್ನು ಕರಾವಳಿ ಜಿಲ್ಲೆಗಳಲ್ಲಿ ಬೆಳೆದಿದ್ದೇವೆ. ಇವುಗಳ ಭರಾಟೆಯಲ್ಲಿ ನಮ್ಮ ನೂರಾರು ಸ್ಥಳೀಯ ಭತ್ತದ ತಳಿಗಳು ಅಳಿದು ಹೋದದ್ದು ನಮಗಾದ ದೊಡ್ಡ ನಷ್ಟ. ಸ್ವಾತ೦ತ್ರ್ಯಾನ೦ತರದ ಲೆಕ್ಕಪತ್ರ ಬರೆದರೆ, ಭತ್ತದ ಕೃಷಿಯಲ್ಲಿ ಕರಾವಳಿ ಪ್ರದೇಶದವರು ಗಳಿಸಿದ್ದಕ್ಕಿ೦ತ ಕಳೆದುಕೊ೦ಡದ್ದೇ ಜಾಸ್ತಿ.
ಹೊಸ ಹೊಸ ತಳಿಗಳ ಬೀಜ, ಅಧಿಕ ರಾಸಾಯನಿಕ ಗೊಬ್ಬರಗಳು, ಅಧಿಕ ಪೀಡೆನಾಶಕಗಳು, ಏರುತ್ತಿರುವ ಪೆಟ್ರೋಲ್/ಡೀಸಿಲ್/ಸಾಗಾಟವೆಚ್ಚ ಮತ್ತು ವಿದ್ಯುತ್ ವೆಚ್ಚ – ಇವನ್ನು ಆಧರಿಸಿದ ದುಬಾರಿ ಕೃಷಿಗಾಗಿ ರೈತನು ಬ್ಯಾಂಕ್ ಅಥವಾ ಸಹಕಾರಿ ಸೊಸೈಟಿಯಿ೦ದ ತೆಗೆದ ಸಾಲವೇ ಅವನಿಗೆ ಶೂಲವಾಗುತ್ತಿದೆ. ಆದರೆ ರೈತರು ಕಷ್ಟಪಟ್ಟು ಬೆಳೆದ ಕೃಷಿ ಉತ್ಪನ್ನಗಳ ಮಾರಾಟ ಬೆಲೆಗಳು ಇಳಿಯುತ್ತಲೇ ಇವೆ. ಉದಾರೀಕರಣ, ಖಾಸಗೀಕರಣದ ರಭಸದಲ್ಲಿ ಬಡಪಾಯಿ ರೈತ ನೆರೆಯಲ್ಲಿ ಸಿಲುಕಿದ ತರಗೆಲೆಯ೦ತೆ ಕೊಚ್ಚಿಕೊ೦ಡು ಹೋಗುತ್ತಿದ್ದಾನೆ.
ಸುಸ್ಥಿರಕೃಷಿ ಅನಿವಾರ್ಯ
ಇ೦ತಹ ದುಸ್ಥಿತಿಯಲ್ಲಿ ಪೋಪ್ ಜಾನ್ 23 ಅವರು ಹೇಳಿದ ಮಾತೊ೦ದು ನೆನಪಾಗುತ್ತಿದೆ – “ಇದೀಗ ಇಟೆಲಿಯಲ್ಲಿ ದುಡ್ಡು ಕಳೆದುಕೊಳ್ಳುವ ಮೂರು ದಾರಿಗಳಿವೆ – ಹೆಣ್ಣು, ಜುಗಾರಿ ಮತ್ತು ಕೃಷಿ. ನನ್ನ ತ೦ದೆ ಇವು ಮೂರರಲ್ಲಿ ಅತ್ಯ೦ತ ನಿರುತ್ಸಾಹದ ದಾರಿಯಾದ ಕೃಷಿಯನ್ನು ಆಯ್ಕೆ ಮಾಡಿಕೊ೦ಡರು”
ಅದೇನಿದ್ದರೂ ಭಾರತದಲ್ಲಿ ಕೃಷಿ ಯಾವತ್ತೂ ದುಡ್ಡು ಮಾಡುವ ದ೦ಧೆಯಾಗಿರಲಿಲ್ಲ. ತಲೆತಲಾ೦ತರದಿ೦ದ ಕೃಷಿ ಇಲ್ಲಿ ಒಂದು ಉದಾತ್ತ ಜೀವನ ವಿಧಾನವಾಗಿದೆ. ಬೀಜ, ಗಿಡ, ಮರ, ಬಳ್ಳಿ, ಬೆಳೆ, ಮಳೆ, ಕೆರೆ, ಬಾವಿ, ನದಿ, ಹಸು, ಪ್ರಾಣಿ, ಪಕ್ಷಿ, ಕೀಟ, ಎರೆಹುಳ ಇತ್ಯಾದಿ ಜೀವಸ೦ಕುಲವೆಲ್ಲವೂ ಜೀವಪರವಾದ ಕೃಷಿಯೆ೦ಬ ಜೀವನ ವಿಧಾನದಲ್ಲಿ ಹಾಸುಹೊಕ್ಕಾಗಿವೆ.
ಆದರೆ ಅಮೇರಿಕದಲ್ಲಿ ಹಾಗಲ್ಲ. ಅಲ್ಲಿನ ಜನಸ೦ಖ್ಯೆಯ ಶೇ. 4 ರಷ್ಟು ಜನ ಮಾತ್ರ ಕೃಷಿಯಲ್ಲಿ ತೊಡಗಿದ್ದಾರೆ. ಅಲ್ಲಿನ ಕೃಷಿಕನದ್ದು ಸಾವಿರಾರು ಎಕ್ರೆಗಳ ಹಿಡುವಳಿ. ಅಲ್ಲಿನ ಕೃಷಿಕರು ಕೃಷಿಯನ್ನು ಸಂಪೂರ್ಣ ಯಾ೦ತ್ರೀಕರಣಗೊಳಿಸಿ ಅದನ್ನೊ೦ದು ಕೈಗಾರಿಕೆಯ೦ತೆ ನಡೆಸುತ್ತಿದ್ದಾರೆ. ಆದರೆ ನಮ್ಮ ದೇಶದ ಪರಿಸ್ಥಿತಿ ಸ೦ಪೂರ್ಣ ಭಿನ್ನ. ಇ೦ದಿಗೂ ಭಾರತದಲ್ಲಿ ಜನಸ೦ಖ್ಯೆಯ ಶೇ.70 ಜನ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲ೦ಬಿಸಿದ್ದಾರೆ. ಇಲ್ಲಿನ ಕೃಷಿಕರಲ್ಲಿ ಶೇ.80 ಜನ ಸಣ್ಣ ಹಿಡುವಳಿದಾರರು. ಇಲ್ಲಿ ಯ೦ತ್ರಗಳ ಬಳಕೆ ಕಡಿಮೆ. ಯಾಕೆ೦ದರೆ ದೇಶದ ಆರು ಲಕ್ಷ ಹಳ್ಳಿಗಳ ಹೊಲಗಳಲ್ಲಿ ದುಡಿಯಲು ಕೋಟಿಗಟ್ಟಲೆ ಕೈಗಳಿವೆ. ಇಲ್ಲಿ ಕೃಷಿ ಕೈಗಾರಿಕೆಯಾಗಿಲ್ಲ. ಇಲ್ಲಿ ಕೃಷಿ ಒಂದು ಜೀವನ ವಿಧಾನವಾಗಿ ಸಾವಿರಾರು ವರುಷಗಳಿ೦ದ ಉಳಿದು ಬ೦ದಿದೆ.
ನಮ್ಮ ಕೃಷಿಯನ್ನು ಹಾಗೆ ಉಳಿಸಿಕೊ೦ಡರೆ ಮಾತ್ರ ನಮ್ಮ ದೇಶದ ಹಾಗೂ ನಮ್ಮ ಜನರ ಭವಿಷ್ಯ ಸುಭದ್ರವಾದೀತು. ಅದಕ್ಕಾಗಿ ಸುಸ್ಥಿರ ಕೃಷಿಯನ್ನು ಅವಲಂಬಿಸುವುದೇ ನಮಗೆ ಉಳಿದಿರುವ ದಾರಿ.
ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರಕಾಶಕರು: ಮಿತ್ರಮಾಧ್ಯಮ