ಕರಾವಳಿಯಲ್ಲಿ ಯುಗಾದಿ

ಕರಾವಳಿಯಲ್ಲಿ ಯುಗಾದಿ

ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ೧೪ರ ಯುಗಾದಿ ಸಂಭ್ರಮದ ಹಬ್ಬ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ)

ಸೌರಮಾನ ದಿನಗಣನೆ ಅನುಸಾರ ಹೊಸ ವರುಷದ ಮೊದಲ ದಿನ ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ. ಕೃಷಿಕರಾದರೆ ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಹೂ, ಹಣ್ಣು, ತರಕಾರಿಗಳನ್ನು ತಂದು ದೇವರಿಗೆ ಅರ್ಪಿಸಿ ಕೈಮುಗಿಯುತ್ತಾರೆ. ಈಗ ನಗರಗಳಲ್ಲಿ ವಿವಿಧ ಧಾನ್ಯ, ಹೂ, ಹಣ್ಣು, ತರಕಾರಿಗಳನ್ನು ಖರೀದಿಸಿ ತಂದು ದೇವರ ಮೂರ್ತಿಯೆದುರು ಇಟ್ಟು ನಮಿಸುತ್ತಾರೆ.

ಇಲ್ಲಿ ಯುಗಾದಿಯಂದು ಬೆಳಗ್ಗೆ ಎದ್ದೊಡನೆ ಯುಗಾದಿ "ಕಣಿ" ನೋಡಿ, ಕಣ್ತುಂಬಿಸಿಕೊಂಡು ಅದಕ್ಕೆ ನಮಿಸುವುದು ವಾಡಿಕೆ. ಅದಕ್ಕಾಗಿ ಮುಂಚಿನ ದಿನ ರಾತ್ರಿಯೇ "ಕಣಿ" ಜೋಡಿಸುತ್ತಾರೆ.

ಅಂದರೆ, ದೇವರ ಮೂರ್ತಿಯೆದುರು ಮರದ ಮಣೆ ಇಟ್ಟು, ಅದರ ಮೇಲೆ ಜೋಡಿ ಬಾಳೆಲೆ. ಬಾಳೆಲೆಯಲ್ಲಿ ಬಾಳೆಹಣ್ಣು, ಮಾವು, ಪೇರಳೆ, ಕಿತ್ತಳೆ, ಲಿಂಬೆ, ಮುಸುಂಬಿ, ನೆಲ್ಲಿ, ಪಪ್ಪಾಯಿ, ಕಲ್ಲಂಗಡಿ, ಪುನರ್ಪುಳಿ, ರಾಮಫಲ, ಸೀತಾಫಲ, ಅನಾನಸ್ ಇತ್ಯಾದಿ ಹಣ್ಣುಗಳು. ಜೊತೆಗೆ ಸೌತೆ, ಮುಳ್ಳುಸೌತೆ, ಬದನೆ, ಬೆಂಡೆ, ತೊಂಡೆ, ಅಲಸಂಡೆ, ಬೀನ್ಸ್, ರೆಕ್ಕೆ ಬೀನ್ಸ್, ಚೀನಿಕಾಯಿ, ಕುಂಬಳಕಾಯಿ, ಹೀರೆಕಾಯಿ, ಪಡುವಲಕಾಯಿ, ಹಾಗಲಕಾಯಿ ಇತ್ಯಾದಿ ತರಕಾರಿಗಳು. ಎಲ್ಲವನ್ನೂ ಚಂದವಾಗಿ ಜೋಡಿಸಿ ಹೂಗಳಿಂದ ಅಲಂಕಾರ. ಅಕ್ಕಿ, ಹಾಲು, ತೆಂಗಿನಕಾಯಿ, ಅಡಿಕೆ ಮತ್ತು ವೀಳ್ಯದೆಲೆಗಳ ಸಮರ್ಪಣೆ. ಹೀಗೆ ಜೋಡಿಸಿಟ್ಟ "ಕಣಿ" ಆಯಾ ಕುಟುಂಬದ ಸಮೃದ್ಧಿಯ ಹಾರೈಕೆಯ ಸಂಕೇತ. ಈ "ಕಣಿ"ಯನ್ನು ತುಳಸಿಕಟ್ಟೆ ಅಥವಾ ಭೂತಾರಾಧನೆ ನಡೆಯುವ ಮನೆಗಳಲ್ಲಿ ಭೂತದ ಕೋಣೆಯಲ್ಲಿ ಇರಿಸುವುದೂ ಸಂಪ್ರದಾಯ.

ಯುಗಾದಿಯ ದಿನ ಬೆಳಗ್ಗೆ ಬೇಗನೇ ಎದ್ದು, ಸ್ನಾನ ಮಾಡಿ, ಹೊಸ ಉಡುಪು ಧರಿಸುವ ಸಂಭ್ರಮ. ನಂತರ ಮನೆಯ ಹಿರಿಯರಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವ ವಾಡಿಕೆ. ಯುಗಾದಿಯ ದಿನ ಮನೆಯ ಯಜಮಾನ ಹಣದ ಪೆಟ್ಟಿಗೆ ತೆರೆಯಬಾರದು; ಯಾರಿಗೂ ಹಣ ಅಥವಾ ಬೀಜ ಕೊಡಬಾರದು ಎಂಬ ನಿಷೇಧಗಳಿವೆ.

ಕೃಷಿಕರಿಗಂತೂ ಕೃಷಿಯ ಆರಂಭದ ದಿನ ಯುಗಾದಿ. ಎತ್ತುಗಳನ್ನು ಹಳ್ಳಿಯ ಹಲವಾರು ಕೃಷಿಕರು ಸಾಕುತ್ತಿದ್ದ ಕಾಲದಲ್ಲಿ, ಮುಂಜಾನೆ ಅವನ್ನು ಹೊಲಕ್ಕೆ ಕರೆದೊಯ್ಯುತ್ತಿದ್ದರು. ಅನಂತರ ಹೊಲದಲ್ಲಿ ಬೀಜ ಬಿತ್ತುವ ವಾಡಿಕೆ ಇತ್ತು. ಇದಕ್ಕೆ ತುಳುವಿನಲ್ಲಿ "ಕೈ ಬಿತ್ತ್ ಬಿತ್ತುನ” ಎನ್ನುತ್ತಾರೆ.

ಹಬ್ಬ ಅಂದ ಮೇಲೆ ಹಬ್ಬದೂಟ ಇರಬೇಡವೇ? ಕರಾವಳಿಯಲ್ಲಿ ಯುಗಾದಿ ಹಬ್ಬದೂಟಕ್ಕೆ ಬಿಸಿಬಿಸಿ ಅನ್ನದ ಜೊತೆಗೆ ಸೌತೆ ಸಾಂಬಾರು, ಕಡಲೆ ಗಸಿ, ತೊಂಡೆ ಪಲ್ಯ, ಕಡಲೆ ಬೇಳೆ ಅಥವಾ ಹೆಸರುಬೇಳೆ ಪಾಯಸ, ಹಪ್ಪಳ , ಸಂಡಿಗೆ, ಉಪ್ಪಿನಕಾಯಿ ಇದ್ದರೆ ಅದುವೇ ಭರ್ಜರಿ ಊಟ. ಇಲ್ಲಿ ಯುಗಾದಿಯ ವಿಶೇಷ ತಿನಿಸು ಮೂಡೆ. ಹಲಸಿನ ಮೂರು ಎಲೆಗಳನ್ನು ಕಡ್ಡಿಯಿಂದ ಚುಚ್ಚಿ ಮಾಡಿದ ಲೋಟಕ್ಕೆ ಹಿಟ್ಟು ಹೊಯ್ದು, ಹಬೆಯಲ್ಲಿ ಬೇಯಿಸಿ ತಯಾರಿಸುವ ತಿನಿಸು. ಇದರ ಜೊತೆ ಮಾವಿನಕಾಯಿ ಚಟ್ನಿ ಇದ್ದರಂತೂ ಮೂರ್ನಾಲ್ಕು ಮೂಡೆ ತಿನ್ನದೆ ಏಳಲಾಗದು.

ಯಾವುದೇ ಮಂಗಳ ಕಾರ್ಯವನ್ನು ಮಾಡಲು ಯುಗಾದಿಯ ಅತ್ಯಂತ ಶುಭ ದಿನ. ಗೃಹಪ್ರವೇಶ, ಮನೆಗೆ ಅಡಿಪಾಯ ಹಾಕುವುದು, ವಾಹನ ಖರೀದಿ, ಕಿವಿ ಚುಚ್ಚುವುದು ಇತ್ಯಾದಿ ಶುಭಕಾರ್ಯಗಳಿಗೆ ಯುಗಾದಿ ಮಂಗಳಕರ ದಿನ.

ಮುಗಿದ ವರುಷದ ಎಲ್ಲ ನೋವುಗಳನ್ನು, ಸೋಲುಗಳನ್ನು ಮರೆತು, "ಹೊಸ ವರುಷದಲ್ಲಿ ಎಲ್ಲವೂ ಒಳಿತಾಗಲಿದೆ” ಎಂಬ ತುಂಬು ನಂಬಿಕೆಯಿಂದ ಮುನ್ನಡಿ ಇಡೋಣ.