ಕರಾವಳಿಯಲ್ಲೂ ಬೆಳೆಸಬಹುದು ಕರಬೂಜ!

ಕರಾವಳಿಯಲ್ಲೂ ಬೆಳೆಸಬಹುದು ಕರಬೂಜ!

ಅಧಿಕ ಮಳೆಯಾಗುವ ಕರಾವಳಿಗೆ ತೆಂಗು, ಅಡಿಕೆ, ರಬ್ಬರ್ ಮುಂತಾದ ತೋಟಗಾರಿಕಾ ಬೆಳೆಗಳು ಮಾತ್ರವೇ ಹೊಂದಿಕೆಯಾಗುತ್ತದೆ ಎಂದು ಹೇಳುತ್ತಿದ್ದ ಪರಿಸ್ಥಿತಿ ಈಗ ಬದಲಾಗಿದೆ. ಇಲ್ಲಿ ಬಯಲು ಸೀಮೆಯಲ್ಲಿ ಮಾತ್ರವೇ ಹೆಚ್ಚಾಗಿ ಬೆಳೆಸಲ್ಪಡುತ್ತಿದ್ದ ಕರಬೂಜವನ್ನು (Muskmelon) ಬೆಳೆಸಲಿಕ್ಕಾಗುತ್ತದೆ. ಉತ್ತಮ ಇಳುವರಿಯೂ ಬರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಹಿರಿಯಡ್ಕದ ಕೃಷಿಕ ಸುರೇಶ್ ನಾಯಕ್.

ಉಡುಪಿ ಜಿಲ್ಲೆಯ ಹಿರಿಯಡ್ಕದ ಸುರೇಶ್ ನಾಯಕ್ ಓರ್ವ ಯುವ ಕೃಷಿಕ. ಕೃಷಿಯಲ್ಲೇ ಬದುಕು ಕಾಣಬೇಕೆಂದು ಹಠತೊಟ್ಟು, ಉತ್ತಮ ಸುಧಾರಿತ ತಳಿಗಳ ಭತ್ತ ಬೆಳೆಸುತ್ತಿದ್ದರು. ಭತ್ತದ ಬೇಸಾಯಕ್ಕೆ ಯಾಂತ್ರೀಕರಣ ಪರಿಕಲ್ಪನೆಯನ್ನು ಸುಮಾರು ಹದಿನೈದು ವರ್ಷಗಳ ಹಿಂದೆಯೇ ಸ್ವತಃ ಮಾಡಿದವರು. ಕೆಲವು ವರ್ಷದಿಂದ ಇವರಿಗೆ ನೆರೆಯಿಂದ ಏಣಿಲು ಭತ್ತದ ಬೇಸಾಯ ಅಸಾಧ್ಯವಾದ ಸ್ಥಿತಿ ಬಂತು. ಏನು ಮಾಡುವುದು ಎಂದು ಯೋಚಿಸಿ ಕರಾವಳಿಯಲ್ಲಿ ಆಗಲೇ ಪಾಸ್ ಆದ ಕಲ್ಲಂಗಡಿ ಬೆಳೆಸಲು ಪ್ರಾರಂಭಿಸಿದರು. ಅದರಲ್ಲಿ ಯಶಸ್ಸು ಕಂಡರು. ಈ ವರ್ಷ ಕೆಲವು ಮಿತ್ರರ ಸಲಹೆಯಂತೆ ಕರಬೂಜವನ್ನು ಬೆಳೆಸಿದರೆ ಹೇಗೆ ಎಂದು ಅದಕ್ಕೂ ಕೈ ಹಾಕಿದರು. ೨೦೧೫ ರ ಫೆಬ್ರವರಿ ತಿಂಗಳಲ್ಲಿ ಸುಮಾರು ಕಾಲು ಎಕ್ರೆಗೂ ಕಡಿಮೆ ಸ್ಥಳದಲ್ಲಿ ನಾಮಧಾರಿ ಮತ್ತ್ತು ಇಂಡೋ ಅಮೇರಿಕನ್ ಹೈಬ್ರೀಡ್ ಸೀಡ್ ಕಂಪೆನಿಯ ಕರಬೂಜ ತಳಿಯ ಬೀಜಗಳನ್ನು ಬಿತ್ತಿ ಫಸಲನ್ನು ಪಡೆದಿದ್ದಾರೆ.

ಪ್ರಾರಂಭದಲ್ಲಿ ಹೊಲವನ್ನು ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ ಮತ್ತು ಅಷ್ಟೂ ಜಾಗಕ್ಕೆ ೧೦ ಕಿಲೋ ಎನ್ ಪಿ ಕೆ ಗೊಬ್ಬರ ಹಾಕಿ ಅವುಗಳನ್ನು ಮಣ್ಣಿಗೆ ಮಿಶ್ರಣ ಮಾಡಿ ನಂತರ ಅದೇ ಮಣ್ಣಿನಲ್ಲಿ ಆರು ಅಡಿಗೊಂದರಂತೆ ೧/೨ ಅಡಿ ಎತ್ತರಿಸಿದ ಸಾಲುಗಳನ್ನು ಮಾಡಿದ್ದಾರೆ. ನಂತರ ಅದರ ಮಧ್ಯದಲ್ಲಿ ೧೬ ಎಂ ಎಂ ನ ಇನ್ ಲೈನ್ ಡ್ರಿಪ್ಪರನ್ನು ಹಾಕಿ ಅದರ ಮೇಲೆ ಕಳೆ ನಿಯಂತ್ರಣ ಮತ್ತು ತೇವಾಂಶ ಸಂರಕ್ಷಣೆಗಾಗಿ ಪಾಲಿಥೀನ್ ಶೀಟನ್ನು ಹೊದಿಸಿದ್ದಾರೆ. ಅದರ ಮೇಲೆ ತ್ರಿಕೋನಾಕಾರದಲ್ಲಿ ಗಿಡದಿಂದ ಗಿಡಕ್ಕೆ ೨ ಅಡಿ ಅಂತರವಿರುವಂತೆ ತೂತನ್ನು ಮಾಡಿ ಅದಕ್ಕೆ ಕಂಪೆನಿಯಿಂದ ತಂದ ಬೀಜಗಳನ್ನು ನೇರವಾಗಿ ಬಿತ್ತನೆ ಮಾಡಿದ್ದಾರೆ. ನೀರಾವರಿ ಮಾಡಿದ್ದಾರೆ. ಬಿತ್ತನೆ ಮಾಡಿದ ೧೪ನೇ ದಿನಕ್ಕೇ ಗಿಡಗಳು ನಾಲ್ಕು ಎಲೆ ಬಿಟ್ಟು ಬೆಳೆದಿವೆ. ಫೆಬ್ರವರಿ ಮೊದಲ ವಾರದಲ್ಲಿ ನಾಟಿ ಮಾಡಿದ್ದು ಮಾರ್ಚ್ ಕೊನೇ ವಾರಕ್ಕೆ ಕಟಾವಿಗೆ ಸಿದ್ದವಾದುವು. ಈ ಮಧ್ಯೆ ಒಮ್ಮೆ ೧ ಕಿಲೋ ೧೯:೧೯:೧೯ ನೀರಿನಲ್ಲಿ ಕರಗುವ ಗೊಬ್ಬರವನ್ನು ೧೦೦ ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಿದ್ದಾರೆ. ಪ್ರತೀ ಎರಡು ದಿನಕ್ಕೊಮ್ಮೆ ೧ ಗಂಟೆಯಂತೆ ನೀರಾವರಿ ಬಿಟ್ಟರೆ ಬೇರೆ ಯಾವುದೇ ಗೊಬ್ಬರವನ್ನೂ ನೀಡಿಲ್ಲವಂತೆ. ಗೊಬ್ಬರ ಬೇಕು ಆದರೆ ಇದು ಪ್ರಯೋಗಾರ್ಥವಾಗಿ ಮಾಡಿದ ಕೃಷಿ ಬರುತ್ತದೆಯೋ ಬರುದಿಲ್ಲವೋ ಎಂದು ನೊಡೋಣ ಎಂದು ಈ ರೀತಿ ಮಾಡಿದ್ದಾರಂತೆ. ಮಧ್ಯಂತರದ ಕಳೆಯನ್ನೂ ತೆಗೆಯಲು  ಹೋಗಿಲ್ಲ. ಕನಿಷ್ಟ ಆರೈಕೆಯಲ್ಲಿ ಒಂದು ಗಿಡಕ್ಕೆ ಸರಾಸರಿ ನಾಲ್ಕು ಕಾಯಿಯಂತೆ ಒಟ್ಟು  ೧೦೦೦ ಗಿಡದಲ್ಲಿ  ೩೦೦೦ ಕಾಯಿಗಳನ್ನು ಕಟಾವು ಮಾಡಿದ್ದಾರೆ. ಪ್ರತೀ ಕಾಯಿ ಸರಾಸರಿ ೮೦೦-೯೦೦ ಗ್ರಾಂ ತೂಕ ಬಂದಿದ್ದು ಕಿಲೋಗೆ ೨೦-೨೫ ರೂ ನಂತೆ ಮಾರಾಟ ಮಾಡುತ್ತಿದ್ದಾರೆ.

ಕರಬೂಜ ೨ ತಿಂಗಳ ಬೆಳೆ. ಇದನ್ನು “ಚಿಪ್ಪಡ್” ಎಂಬ ಹೆಸರಿನಿಂದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಇದಕ್ಕೆ  ಆಂಗ್ಲ ಭಾಷೆಯಲ್ಲಿ ‘ಮಸ್ಕ್‌ಮೆಲನ್’ ಎನ್ನುತ್ತಾರೆ. ಇದರ ಆಕರ್ಷಕ ಕಿತ್ತಳೆ ಬಣ್ಣದ ತಿರುಳು ಮತ್ತು ಅದರ ಸುವಾಸನೆ ಇದರ ಜನಪ್ರಿಯತೆಗೆ ಕಾರಣ. ಇದರಲ್ಲಿ ಎ ಮತ್ತು ಸಿ ಅನ್ನಾಂಗಗಳಿದ್ದು ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜ್ಯೂಸ್ ಗಾಗಿ ಬಳಕೆಯಾಗುತ್ತದೆ. ಕಲ್ಲಂಗಡಿ ಹಣ್ಣಿನಷ್ಟೇ ಬೇಡಿಕೆ ಉಳ್ಳ ಇದನ್ನು ಬೆಳೆಸುವುದು ಸುಲಭ. ಸಾಮಾನ್ಯವಾಗಿ ಒಣ ಹವೆ ವಾತಾವರಣ ಮತ್ತು ಬೇಸಿಗೆಯ ವಾತಾವರಣದಲ್ಲಿ  ಬೆಳೆದರೆ ಮಾತ್ರ ಇದಕ್ಕೆ ಸುವಾಸನೆ ಮತ್ತು ಸಿಹಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕೂಡಿಕೊಳ್ಳುತ್ತದೆ. ಸಡಿಲವಾದ ಮರಳು ಮಿಶ್ರಿತ ಫಲವತ್ತಾದ ಮಣ್ಣಿನಲ್ಲಿ ಕರಬೂಜವನ್ನು ನೆಟ್ಟು ಎಂಟು ಎಲೆ ಬರುವಾಗಲೇ ಹೂ ಬಿಡಲು ಪ್ರಾರಂಭವಾಗುತ್ತದೆ. ಎರಡನೇ ತಿಂಗಳಿಗೆ ಫಸಲು ಕಟಾವಿಗೆ ಸಿದ್ದ. ಕರಾವಳಿಯಂತ ಮಳೆ ಹೆಚ್ಚು ಬರುವ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಎರಡು ಬೆಳೆ ಉತ್ತಮವಾಗಿ ಬೆಳೆಸಬಹುದು.

ಸುರೇಶ್ ನಾಯಕ್‌ರವರ ಭೂಮಿ ನೆರೆ ನಿಲ್ಲುವ ಪಲವತ್ತತೆ ಉಳ್ಳ ಸಡಿಲ ಮರಳು ಮಿಶ್ರ ಮಣ್ಣಾಗಿದ್ದು ಕರಬೂಜ ಮತ್ತು ಕಲ್ಲಂಗಡಿಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಕಲ್ಲಂಗಡಿಗೆ ಹೋಲಿಸಿದರೆ ಕರಬೂಜಕ್ಕೆ ಹೆಚ್ಚಿನ ದರ ಇದೆ. ತೂಕ ಕಡಿಮೆ ಮತ್ತು ಗಟ್ಟಿ ಸಿಪ್ಪೆಯ ಕಾರಣ ಸಾಗಾಟವೂ ಸುಲಭ. ಬೇಡಿಕೆಯೂ ಉತ್ತಮವಾಗಿದೆ. ಉತ್ತಮ ಇಳುವರಿಯನ್ನೂ ಕೊಡುತ್ತದೆ. ಈ ವರ್ಷದ ಬೆಳೆಯಿಂದ ಪ್ರೇರಿತರಾಗಿ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಬೇಸಿಗೆ ಕಾಲದುದ್ದಕ್ಕೂ ಕಾಯಿ ದೊರೆಯುವಂತೇ ಹಂತ ಹಂತವಾಗಿ ಸ್ವಲ್ಪ ಸ್ವಲ್ಪವೇ ಬೆಳೆ ಬೆಳೆಸಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಕಲ್ಲಂಗಡಿಯಾಗಲೀ, ಕರಬೂಜವಾಗಲೀ ನಾಟಿ ಮಾಡಿ ಕಟಾವು ಮಾಡುವ ತನಕ ಮಳೆ ಬರಬಾರದು. ಒಂದು ಸಲ ಆಲಿಕಲ್ಲು ಮಳೆ ಬಂದು ಬೆಳೆ ಸ್ವಲ್ಪ ಹಾನಿಯಾಗಿತ್ತು. ಮಳೆ ಬಾರದಿರುವ ಸಮಯವನ್ನು ನೋಡಿ ಬಿತ್ತನೆ ಮಾಡಿ ಕಟಾವು ಮಾಡಬೇಕು.

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ.