ಕರಾವಳಿಯ ಮನೆಯಲ್ಲೊಂದು ಮುಂಜಾನೆ...
ಎವೆಯಿಕ್ಕದೆ ನೋಡಿದೆ. ಹಾಗೇ ನೋಡ್ತಾ ಹೋದೆ. ಎಂತಹ ಅದ್ಭುತ ಜೋಡಿ, ಉಪ್ಪಿಟ್ಟು ಅವಲಕ್ಕಿಯದ್ದು. (ನಮ್ಮತುಳು ಭಾಷೆಯಲ್ಲಿದು ಸಜ್ಜಿಗೆ ಬಜಿಲ್ ) ಕೆಂಪು ಕೆಂಪಾದ ಒರಟಿನ ಚೆಲುವ ಚೆನ್ನಿಗನ ಜೊತೆ, ಬೆಳ್ಳಗಿನ, ಮೃದುವಾದ ಬಾಲೆ. ಜೋಡಿ ಅಂದ್ರೆ ಹೀಗಿರಬೇಕು ಅನ್ನಿಸಿತು.
ಆ ಉಪ್ಪಿಟ್ಟು (ಸಜ್ಜಿಗೆ) ಬಹುತೇಕ ನಿರಾಭರಣ ಸುಂದರಿ. ಒಂದು ಈರುಳ್ಳಿ ಇಲ್ಲ, ಟೊಮೆಟೊ ಇಲ್ಲ. ಕೇವಲ ಹಸಿ ಮೆಣಸು, ಶುಂಠಿ, ಕರಿಬೇವಿನ ಅಲಂಕಾರ, ತುಸು ಲಿಂಬೆಯ ಜೊತೆ. ರವೆಯ ನವಿರಾದ ಹೊರನೋಟ, ಸರಳತೆಯ ಸಾಕಾರ ರೂಪ. ಏನೋ ಒಂದಿಷ್ಟು ಪೋಷಕಾಂಶ, ಪ್ರೋಟೀನನ್ನ ಮೈಗೂಡಿಸಿಕೊಂಡಿದ್ದಾಳೆ, ಅಷ್ಟೆ. ಆದ್ರೆ ಅವಳಿಗೆ ಮರುಳಾಗದವರೇ ಇಲ್ಲ. ಎಲ್ಲರ ಅಚ್ಚುಮೆಚ್ಚಿನ ಕನ್ನಿಕೆ.
ಅವಲಕ್ಕಿ (ಬಜಿಲ್) ಕೂಡಾ ಇದಕ್ಕೆ ಹೊರತಾಗಿಲ್ಲ ನೋಡಿ. ಉಪ್ಪಿಟ್ಟಿನ ಚೆಲುವಿಗೆ ಮಾರು ಹೋಗಿ ಅವಳ ಪಕ್ಕ ತನ್ನ ಜಾಗ ಭದ್ರ ಮಾಡಿಟ್ಟುಕೊಂಡು ಬಿಟ್ಟ. ಅವ -- ಲಕ್ಕೀ ಆದ. ಅವನದ್ದೋ ಕೆಂಪುಕೆಂಪಾದ ದೃಢವಾದ ಮೈಕಟ್ಟು. ಅವಳಿಗೆ 'ಕಬ್ಬಿಣ'ದ ಅಂಶದ ಜೊತೆಗಾರ. ಇವರಿಬ್ಬರ ಜೋಡಿ ಮೈ ತಳೆದದ್ದು ನಮ್ಮ ಕರಾವಳಿಯಲ್ಲಿ. ಭಾರಿ ಪೊರ್ಲುದ( ಚೆಂದದ) ಜೋಡಿ.
ಅಲ್ಲಾ, ಇವರಿಬ್ಬರ ನಡುವೆ ಈ ಬಾಳೆಹಣ್ಣಿಗೇನು ಇಲ್ಲಿ ಕೆಲಸ ಅಂತೀರಾ? ಈ ಜೋಡಿಗೆ ತನ್ನ ಶಕ್ತಿ ಕೊಟ್ಟು ಹರಸಲಿಕ್ಕೆ ಅಂತಾನೇ ಬಂದು ನಿಂತದ್ದು ಅವಳು. ನಿಜ ಹೇಳಬೇಕೆಂದರೆ ಅವಲಕ್ಕಿಯ ಮೊದಲ ಪ್ರೀತಿ ಅವಳು.( ಮುಸು ಮುಸು ನಗು ನಂಗೆ) ಇವರ ಒಡನಾಟದಲ್ಲಿ ತನಗೂ ಪಾಲು ಇದೆ ಅಂತ, ಅಲ್ನೋಡಿ, 'ಕಣ್ಣ ಚಾಯ್'(ಹಾಲಿಲ್ಲದ ಕಪ್ಪು ಚಹಾ) ಬಂದು ನಿಂತದ್ದು, ಒಳ್ಳೇ ಕೋಟೆ ಕಾಯುವ ಕಾವಲುಗಾರನಂತೆ! ಇದೊಂದು ಕರಾವಳಿಯ ಮುಂಜಾವಿನ ಉಪಾಹಾರದ ಸಂಪೂರ್ಣ ಅನುಭವ . ನಮಗಿದು ಅತ್ಯಂತ ಪ್ರಿಯ.
ಬನ್ನಿ, ನೀವೂ ಇಂತಹ ಒಂದು ಮುಂಜಾವಿನಲ್ಲಿ ಮೈ ಮರೆಸಿಕೊಳ್ಳಿ.
-ಡಾ.ವಸುಧಾ ತೀರ್ಥರಾಮ್.
ಇಂಟರ್ನೆಟ್ ಸಂಗ್ರಹ ಚಿತ್ರ