ಕರಾವಳಿ ಜಿಲ್ಲೆಗಳ ಜನರ ಜೀವನ ಮಟ್ಟ ಏರುತ್ತಿದೆಯೇ?

ಕರಾವಳಿ ಜಿಲ್ಲೆಗಳ ಜನರ ಜೀವನ ಮಟ್ಟ ಏರುತ್ತಿದೆಯೇ?

ಸರಕಾರಿ ಲೆಕ್ಕಾಚಾರದಲ್ಲಿ ಕರ್ನಾಟಕದ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಇರಬಹುದು. ಆದರೆ ವಾಸ್ತವಿಕತೆ ಇದಕ್ಕಿಂತ ಭಿನ್ನವಾಗಿದೆ. ಬಡತನ ಇರಬೇಕಾದರೆ ದುಡಿಯಲು ಉದ್ಯೋಗ ಅವಕಾಶ ಇಲ್ಲದಾಗಬೇಕು. ಇಲ್ಲಿ ಉದ್ಯೋಗಕ್ಕೆ ಬರವಿಲ್ಲ. ಉದ್ಯೋಗ ವಿಲ್ಲದೆ ಇರುವವರೇ ಇಲ್ಲ.
ಹೊರದೇಶಕ್ಕೆ ಹೋದರೆ ಕೈತುಂಬಾ ಸಂಪಾದನೆ ಎಂದು ಹೇಳುವುದು ವಾಡಿಕೆ. ಆದರೆ ನಾನು ಕಂಡಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಡಿಯುವ ಕೆಲಸಗಾಗರಿಗೆ ಹೊರ ದೇಶದ ಸಂಪಾದನೆಯನ್ನೂ ಮೀರಿಸುವ ಸಂಪಾದನೆ ಮಾಡಲು ಅವಕಾಶಗಳಿವೆ. ಇಲ್ಲಿ ಒಬ್ಬ ವ್ಯಕ್ತಿ ದಿನಕ್ಕೆ ಏನಿಲ್ಲವೆಂದರೂ ೬೦೦-೮೦೦ ರೂ. ಸರಾಸರಿ ಸಂಪಾದನೆ ಮಾಡಬಹುದು. ಇಲ್ಲಿ ಯುವಕರಿಂದ ವೃದ್ದರ ವರೆಗೂ ಕೆಲಸ ಮಾಡುವುದಿದ್ದರೆ ಅವಕಾಶವಿದೆ. ಇದು ಸಂಪಾದನೆಗೆ ಅತೀ ಹೆಚ್ಚು ಅವಕಾಶವಿರುವ ಜಿಲ್ಲೆ ಎಂದರೂ ತಪ್ಪಾಗಲಿಕ್ಕಿಲ್ಲ. ಕೆಲವೇ ವರ್ಷಗಳಲ್ಲಿ ಇಲ್ಲಿ ಕೃಷಿ ಕೂಲಿ ಕಾರ್ಮಿಕರ ದಿನಗೂಲಿ ೧೦೦೦ ಕ್ಕೆ ಮುಟ್ಟಿದರೂ ಅಚ್ಚರಿ ಇಲ್ಲ. ಆದರೆ ಇಲ್ಲಿನವರಿಗೆ ಈ ಉದ್ಯೋಗ ಬೇಡ. ಇನ್ನೇನು ನಾಲ್ಕೈದು  ವರ್ಷದಲ್ಲಿ ಇಲ್ಲಿ ಕೃಷಿ ಕೂಲಿ ಕೆಲಸಕ್ಕೆ ಜನರೇ ಇಲ್ಲದ ಸ್ಥಿತಿ ಬರಲಿದೆ. ಇಡೀ ದೇಶದಲ್ಲಿ ನಿಜವಾಗಿ ಬಡತನ ನಿರ್ಮೂಲನೆಯಾದ ಜಿಲ್ಲೆ ಇದೇ ಆಗಿದ್ದರೂ ಅಚ್ಚರಿ ಇಲ್ಲ. ಈ ಬಡತನ ನಿರ್ಮೂಲನೆಗೆ ಒಂದು ದೃಷ್ಟಿಯಲ್ಲಿ  ಕಾರಣವಾದ ಈ ಜಿಲ್ಲೆಯ ಪ್ರಮುಖ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಗಂಡಸು ಕೂಲಿ ಕಾರ್ಮಿಕನಿಗೆ  ೬೦೦ ರೂ. ಸರಾಸರಿ ಸಂಬಳ ಇದೆ. ಹೆಂಗಸರಿಗೆ ೪೦೦ ತನಕ ಇದೆ. ಒಬ್ಬ ಗಾರೆ ಕೆಲಸದವನಿಗೆ ೭೦೦ ರೂ. ಸಂಬಳ ಇದೆ. ಅವನ ಸಹಾಯಕನಿಗೆ ೪೦೦ ರೂ. ಸಂಬಳ ಇದೆ. ಒಬ್ಬ ಪೈಂಟರ್‌ನಿಗೆ ೭೦೦ ರೂ. ಸಂಬಳ ಇದೆ. ಇಲ್ಲಿ ಬೆಳಿಗ್ಗೆ ೯.೦೦ ಕ್ಕೆ ಕೆಲಸ ಪ್ರಾರಂಭ. ನಂತರ ೧೦ ರಿಂದ ೧೦.೧೫ ತನಕ  ಚಹಾ ವಿರಾಮ, ಆ ನಂತರ ಮಧ್ಯಾನ್ಹ ೧ ಗಂಟೆಯಿಂದ ೨.೩೦ ತನಕ ಊಟದ ವಿರಾಮ. ನಂತರ ೪ ರಿಂದ ೪.೧೫ ತನಕ ಚಹ ವಿರಾಮ. ಗಂಟೆ ೫.೦೦ ಕ್ಕೆ ಕೆಲಸ ಮುಕ್ತಾಯ. ಈ ಜಿಲ್ಲೆಯ ವಿಶೇಷವೆಂದರೆ ಇಲ್ಲಿ ಕೆಲಸದವರಿಗೆ ಮಾಲಿಕನು ಬೆಳಗ್ಗಿನ ಕಾಫಿ/ಚಹ ಹಾಗೂ ಉಪಾಹಾರದ ವ್ಯವಸ್ಥೆ, ಮಧ್ಯಾನ್ಹದ ಊಟದ (ಫುಲ್ ಮೀಲ್ಸ್) ವ್ಯವಸ್ಥೆ, ಸಂಜೆಯ ಚಹಾ ನೀಡುವುದು ವಾಡಿಕೆ. ಇನ್ನು ದೂರದ ಊರಿನಿಂದ ಬರುವವರಾದರೆ (ಸುಮಾರು ೨-೩ ಕಿಲೋ ಮೀಟರ್ ಅಂತರ) ಅವರಿಗೆ ಅಟೊ ರಿಕ್ಷಾ ಬಾಡಿಗೆ ಅಥವಾ ಬಸ್ ಚಾರ್ಜ್  ಕೊಡುತ್ತಾರೆ. ಒಂದು ವೇಳೆ ಊಟ ಕಾಫಿ ಇತ್ಯಾದಿ ಅವರೇ ಮಾಡಿಕೊಳ್ಳುವುದಿದ್ದರೆ ಸಂಬಳದಲ್ಲಿ ಪ್ರತೀ ತಲೆಗೆ ೫೦ ರೂ. ಹೆಚ್ಚುವರಿ ಕೊಟ್ಟರಾಯಿತು. 
ಒಂದೊಂದು ಮನೆಯಲ್ಲಿ ಗಂಡ ಹೆಂಡತಿ ದುಡಿಯುವುದಾದರೆ ಕನಿಷ್ಟ ೫೦೦ ರೂ. ವರಮಾನ ನಿಶ್ಚಿತ.  ಇದಲ್ಲದೆ ಇಲ್ಲಿ ಹೆಂಗಸರು ಬಿಡುವಿನ ವೇಳೆಯಲ್ಲಿ ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ಇಷ್ಟಿದ್ದರೂ ಇಲ್ಲಿನ ಸರಕಾರೀ ಅಂಕಿ ಅಂಶಗಳ ಪ್ರಕಾರ ೭೫ ಶೇ. ಮಂದಿಗೆ ಬಡತನ ರೇಖೆಯ ಕೆಳಗಿನವರೆಂಬ ಬಿ ಪಿ ಎಲ್ ಕಾರ್ಡ್ ಇದೆ. ಪ್ರತೀಯೊಬ್ಬರಿಗೂ ೭ ಕಿಲೋ ಅಕ್ಕಿ ಉಚಿತವಾಗಿಯೇ ದೊರೆಯುತ್ತದೆ. ಒಂದು ಕಾಲದಲ್ಲಿ ನಡೆದು ಬರುತ್ತಿದ್ದ ಕೆಲಸಗಾರರು ಈಗ ಬೈಕು, ಸ್ಕೂಟರ್ ಮೂಲಕ ಬರುವುದು ಮಾಮೂಲು. ಒಂದು ಮನೆ ಬಾಗಿಲಿನಲ್ಲಿ ನಾಲ್ಕೈದು ಬೈಕುಗಳಿದ್ದರೆ ಅಲ್ಲಿ ಕೆಲಸಕ್ಕೆ ಜನ ಇದ್ದಾರೆ ಎಂದರ್ಥ. ಬಹುತೇಕ ಎಲ್ಲಾ ಹಳ್ಳಿಗಳಿಗೂ  ವಿದ್ಯುತ್ ಸಂಪರ್ಕ ಆಗಿದೆ. ಹಳ್ಳಿ ಹಳ್ಳಿಗಳಲ್ಲಿ ಕಾಂಕ್ರೀಟು ಸ್ಲಾಬಿನ ಮನೆಗಳು, ಹಂಚಿನ ಮನೆಗಳೇ ವಿರಳ. ಕೆಲವೊಂದು ಮನೆಗಳು ಲಕ್ಷಾಂತರ ರೂಪಾಯಿಗಳ ಬಜೆಟ್‌ನವುಗಳು. ಪ್ರತಿಯೊಬ್ಬರೂ ವ್ಯವಹಾರಸ್ಥರು. ಪ್ರತಿಯೊಂದು ಅಭಿವೃದ್ಧಿಯ ತಳಪಾಯ ಉದ್ಯೋಗಾವಕಾಶ. ಇದು ಹೇರಳವಾಗಿದ್ದರೆ ಅಭಿವೃದ್ಧಿ ಆಗಿದೆ ಎಂದರ್ಥ. ನಮ್ಮಲ್ಲಿ ಉದ್ಯೋಗಾವಕಾಶ ಸಾಕಷ್ಟಿದೆ.
ಇಷ್ಟೆಲ್ಲಾ ಅಭಿವೃದ್ದಿ ಆಗಿರುವುದು ನಿಜಕ್ಕೂ ಸಂತೋಷ ಪಡಬೇಕಾದ ವಿಚಾರ. ಇದನ್ನು ಸರಕಾರ ಗಮನಿಸಬೇಕು. ಬಡತನ ನಿರ್ಮೂಲನೆಯಾಗುತ್ತಿರುವ ಜಿಲ್ಲೆಯೆಂಬ ಹೆಗ್ಗಳಿಕೆ ನಮಗೆ ದೊರೆಯಬೇಕು ಎನ್ನುತ್ತಾರೆ ಕೆಲವು ಹಿರಿಯರು.