ಕರಿಬೇವು ಬೇಸಾಯದ ತಾಂತ್ರಿಕತೆ

ಕರಿಬೇವು ಬೇಸಾಯದ ತಾಂತ್ರಿಕತೆ

ಕರಿಬೇವಿನ ಎಲೆಗಳನ್ನು ವಿಶೇಷವಾಗಿ ಭಾರತೀಯ ಅಡುಗೆಗಳಲ್ಲಿ ವಾಸನೆ ಮತ್ತು ರುಚಿಗಾಗಿ ಉಪಯೋಗಿಸುತ್ತಾರೆ. ಗಂಧಕಯುಕ್ತ ಎಣ್ಣೆಯ ಅಂಶವು ಇದರ ಸುವಾಸನೆಗೆ ಕಾರಣ. ಎಲೆಗಳಲ್ಲಿ ಹೇರಳವಾಗಿ ಪೋಷಕಾಂಶಗಳಾದ `ಎ’ ಅನ್ನಾಂಗ, ಕಬ್ಬಿಣ ಮತ್ತು ಸುಣ್ಣದ ಅಂಶಗಳಿವೆ. ಕರಿಬೇವನ್ನು ಆಯರ್ವೇದ ಮತ್ತು ಯುನಾನಿ ಔಷಧಿ ತಯಾರಿಕೆಯಲ್ಲಿ ಸಹ ಬಳಕೆ ಮಾಡುತ್ತಾರೆ.

ಇದು ಬಹುವಾರ್ಷಿಕ ಬೆಳೆಯಾಗಿದ್ದು ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಸಬಹುದಾಗಿದೆ. ಆಳವಾದ ಕಪ್ಪು ಮಣ್ಣು ಈ ಬೆಳೆಗೆ ಸೂಕ್ತವಲ್ಲ. ಸಡಿಲ ಮಣ್ಣು ಸೂಕ್ತ. ವರ್ಷದ ಯಾವುದೇ ಕಾಲದಲ್ಲಿ ಸಸಿಗಳನ್ನು ನಾಟಿ ಮಾಡಬಹುದು. ಆದರೆ ಜೂನ್ ಜುಲೈ ತಿಂಗಳುಗಳು ನಾಟಿ ಮಾಡಲು ಸೂಕ್ತ.

ತಳಿಗಳು : ಎಲೆಯ ವಾಸನೆ, ಗಾತ್ರ ಮತ್ತು ಬಣ್ಣದ ಆಧಾರದ ಮೇಲೆ ತಳಿಗಳನ್ನು ವಿಂಗಡಿಸಬಹುದು. ಹಲವಾರು ಸ್ಥಳೀಯ ತಳಗಳು ಲಭ್ಯವಿವೆ.

ಸುಹಾಸಿನಿ : ಇದನ್ನು ಗುಲಾಬಿ ಪೊದೆಯಂತೆ ಬೆಳೆಸಬಹುದಾಗಿದೆ. ಸುಮಾರು ೯೦-೧೨೦ ಸೆಂ.ಮೀ. ಎತ್ತರದ ವರೆಗೆ ದಟ್ಟವಾಗಿ ಬೆಳೆಯುವ ಈ ಗಿಡದ ಎಲೆಗಳಲ್ಲಿ ಎಣ್ಣೆ ಜಾಸ್ತಿ. ಇದು ಸಿಲೆಂಡ್ರೋಸ್ಪೋರಿಯಮ್ ಶಿಲೀಂಧ್ರದಿಂದ ಬರುವ ಎಲೆ ಚುಕ್ಕೆ ರೋಗವನ್ನು ತಡೆದುಕೊಳ್ಳುವ ಗುಣ ಪಡೆದಿದೆ. ಇದರ ಎಲೆಗಳು ಹೊಳೆಯುವ ಕಪ್ಪು ಹಸಿರು ಬಣ್ಣವನ್ನು ಹೊಂದಿದ್ದು ಹೆಚ್ಚು ವಾಸನೆಯುಕ್ತವಾಗಿದೆ.

ಬೇಸಾಯ ಸಾಮಗ್ರಿಗಳು :

ವಿವರ                              ಪ್ರತಿ ಹೆಕ್ಟೇರಿಗೆ

ಸಸಿಗಳು (೩ ಮೀ x ೧.೫ ಮೀ. ಅಂತರ)        ೨.೨೨೨

ಕೊಟ್ಟಿಗೆ ಗೊಬ್ಬರ                          ೨೫ ಟನ್

ರಸಾಯನಿಕ ಗೊಬ್ಬರ                      ೨೫ ಟನ್

(ಪ್ರತಿ ಗಿಡಕ್ಕೆ ಗ್ರಾಂ.ಗಳಲ್ಲಿ)          ೧ನೇ ವರ್ಷ      ೨ನೇ ವರ್ಷ       ೩ನೇ ವರ್ಷದ ನಂತರ

ಸಾರಜನಕ                        ೫೦           ೧೫೦              ೩೦೦

ರಂಜಕ                          ೫೦           ೧೫೦               ೫೦ 

ಪೊಟ್ಯಾಶ್                        ೫೦           ೧೫೦               ೫೦

ಗೊಬ್ಬರಗಳನ್ನು ವಿಭಜಿತ ಕಂತುಗಳಲ್ಲಿ ಕೊಡಬೇಕು.

ಸಸಿ ನೆಡುವುದು : ಭೂಮಿಯನ್ನು ತಯಾರು ಮಾಡಿ ಶಿಫಾರಿತ ಗೊಬ್ಬರವನ್ನು ಮಣ್ಣಿಗೆ ಸೇರಿಸಿದ ನಂತರ ೧ ಅಂತರದ ಸಾಲುಗಳಲ್ಲಿ ೧.೫ ಅಡಿ ಅಥವಾ ೨ ಅಡಿ ಅಂತರದಲ್ಲಿ ನೆಡಬೇಕು. ಸಸಿಗಳು ಬೇಗ ಚಿಗುರುವಂತೆ ನೀರನ್ನು ರಾಸಾಯನಿಕ ಗೊಬ್ಬರಗಳನ್ನು ಕೊಡುತ್ತಿರಬೇಕು. ಸಸಿಗಳು ಳಿ ಅಡಿ ಬೆಳೆದಾಗ ಚಿಗುರು ಚಿವುಟಿ ಅಡ್ಡ ಗೆಲ್ಲುಗಳು ಬರುವಂತೆ ಮಾಡಬೇಕು. ಗಿಡಕ್ಕೆ ಹೆಚ್ಚು ಚಿಗುರು ಬರುವಂತೆ ಮಾಡುವುದೇ ಬೇಸಾಯ ತಾಂತ್ರಿಕತೆ.

ಸಸಿಗಳು ೬೦ - ೭೦ ಸೆಂ.ಮೀ. ಎತ್ತರದವರೆಗೆ ಬೆಳೆದ ಮೇಲೆ ಬುಡ ಭಾಗ ಸ್ವಲ್ಪ ಬಿಟ್ಟು  ಕತ್ತರಿಸಿದರೆ ಆ ಭಾಗದಲ್ಲಿ ಹೆಚ್ಚು ಚಿಗುರು ಮೊಳಕೆಗಳು ಬರುತ್ತವೆ. ಒಂದು ಗಿಡದ ಬುಡದಲ್ಲಿ ೧೦ ಕ್ಕೂ  ಹೆಚ್ಚು ಚಿಗುರುಗಳು ದೊರೆಯುತ್ತದೆ. ಅದು ಪೊದೆಯಂತೆ ಬೆಳೆದಿರುತ್ತದೆ.  ನಂತರ ಬುಡ ಭಾಗಕ್ಕೆ ತೆಳುವಾಗಿ ಮಣ್ಣು ಏರಿಸಿ ಮತ್ತೆ ಗೊಬ್ಬರ, ನೀರು ಪೂರೈಸಿದಾಗ ಹಿಂದಿಗಿಂತ ಹೆಚ್ಚು ಚಿಗುರುಗಳು ಬಂದು ಮತ್ತೆ ಪುನಹ ೨-೩ ತಿಂಗಳಲ್ಲಿ ಕಟಾವಿಗೆ ದೊರೆಯುತ್ತದೆ.

ಗೊಬ್ಬರಗಳನ್ನು ವಾರಕ್ಕೊಮ್ಮೆ ವಿಭಜಿತ ಕಂತುಗಳಲ್ಲಿ ಕೊಡುತ್ತಿದ್ದರೆ ಸಸ್ಯ ಬೆಳವಣಿಗೆ ಉತ್ತಮವಾಗಿರುತ್ತದೆ. ಈ ವಿಧಾನದಲ್ಲಿ ತಮಿಳುನಾಡಿನ ರೈತರು ಕರಿ ಬೇವಿನ ಬೆಳೆಯನ್ನು ಬೆಳೆಸುತ್ತಿದ್ದು, ಕೊಯಂಬತ್ತೂರು ಮೆಟ್ಟುಪಾಳ್ಯಂ ರಸ್ತೆಯಲ್ಲಿ  ಇಂತಹ ನೂರಾರು ಬೆಳೆಗಾರರು ಇದ್ದಾರೆ. ಇವರು ಗದ್ದೆಯಲ್ಲಿ ಇದನ್ನು ಬೆಳೆಸುತ್ತಿದ್ದು, ತೆಂಗಿನ ತೋಟದಲ್ಲೂ ಮಿಶ್ರ ಬೆಳೆಯಾಗಿ ಬೆಳೆಸುತ್ತಾರೆ. ವರ್ಷಕ್ಕೆ ೪-೫ ಬಾರಿ ಕಟಾವು ಮಾಡುತ್ತಾರೆ.

ಕಳೆ ನಿಯಂತ್ರಣ : ಹುಲ್ಲು ಹಾಗೂ ಇತರ ಕಳೆಗಳನ್ನು ಪ್ಯಾರಾಕ್ವಾಟ್ (೩ ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ) ಸಿಂಪರಣೆಯಿಂದ ಹತೋಟಿ ಮಾಡಬಹುದು. ಸಿಂಪರಣೆ ಮಾಡುವಾಗ ಕಾಂಡಗಳಿಗೆ ಸಿಂಪರಣೆ ಔಷಧಿ ತಗಲದಂತೆ ಮುಂಜಾಗ್ರತೆ ವಹಿಸಬೇಕು.

ಸಸ್ಯ ಸಂರಕ್ಷಣೆ :

ಕೀಟಗಳು : ಹೇನು, ಎಲೆ ತಿನ್ನುವ ಹುಳು ಮತ್ತು ಹಿಟ್ಟು ತಿಗಣೆ. ಇದರ ನಿಯಂತ್ರಣಕ್ಕೆ ಕಟಾವಿಗೆ ಮುಂಚೆ ಉಳಿಕೆ ಅಂಶ ಕರಗುವ ಕೀಟನಾಶಕ ಬಳಕೆ ಮಾಡಬೇಕು.

ರೋಗಗಳು : ಎಲೆಚುಕ್ಕೆ ರೋಗ : ಕೀಟ ಬಾಧೆ ತಡೆಗಟಗಟ್ಟಲು ಕಟಾವಿಗಿಂತ ಕನಿಷ್ಟ ೩೫ ದಿನಗಳ ಮುಂಚೆ ೨ ಮಿ.ಲೀ. ಮೆಲಾಥಿಯನ್ ೧ ಲೀಟರ್ ನೀರಿನಲ್ಲಿ ಬಳಸಿ ಸಿಂಪಡಿಸಿ ರೋಗ ತಡೆಗಟ್ಟಲು ೨ ಗ್ರಾಂ. ಮ್ಯಾಂಕೊಜೆಬ್ ಅಥವಾ ೨ ಗ್ರಾಂ. ಕಾರ್ಬನ್‌ಢೈಜಿಮ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ : ಸಸಿ ನೆಟ್ಟ ಎರಡು ವರ್ಷಗಳ ನಂತರ ಗಿಡಗಳು ಉತ್ತಮ ಇಳುವರಿ ಕೊಡುತ್ತವೆ. ಪ್ರತಿ ಗಿಡದಿಂದ ಪ್ರತಿ ಕಟಾವಿಗೆ ೨-೫ ಕಿ.ಗ್ರಾಂ. ಎಲೆ ಪಡೆಯಲು ಸಾಧ್ಯ. ವರ್ಷದಲ್ಲಿ ನಾಲ್ಕು ಬಾರಿ ಕಟಾವು ಮಾಡಬಹುದು.

ಮಾಹಿತಿ: ರಾಧಾಕೃಷ್ಣ ಹೊಳ್ಳ