ಕರಿಮೆಣಸಿನ ನಿಧಾನ ಸೊರಗು ರೋಗದ ಬಗ್ಗೆ ಎಚ್ಚರವಿರಲಿ!

ಕರಿಮೆಣಸಿನ ನಿಧಾನ ಸೊರಗು ರೋಗದ ಬಗ್ಗೆ ಎಚ್ಚರವಿರಲಿ!

ಕರಿಮೆಣಸು ಉತ್ತಮ ಆದಾಯ ನೀಡುವ ಬೆಳೆ. ಆದರೆ ಕರಿ ಮೆಣಸಿನ ಬಳಿಯಲ್ಲಿ ಎಲೆಗಳು ಹಳದಿಯಾಗಲಾರಂಭಿಸಿವೆ. ಕರೆಗಳು ಉದುರುತ್ತಿವೆ. ಎಲೆಗಳು ಬಾಡುತ್ತಿವೆ. ಪ್ರತೀ ವರ್ಷ ಮಳೆ ಕಡಿಮೆಯಾದರೂ  ರೋಗ ಕಡಿಮೆ ಇಲ್ಲ ಎಂಬುದು ಈಗ ಗೊತ್ತಾಗಲಾರಂಭಿಸಿದೆ.

ಮಳೆಗಾಲದ ಅನುಕೂಲಕರ ವಾತಾವರಣದಲ್ಲಿ ಕರಿಮೆಣಸು ಬಳ್ಳಿಗೆ ಫೈಟೋಪ್ಥೆರಾ ಕ್ಯಾಪ್ಸಿಸಿ  ಶಿಲೀಂದ್ರ ಸೋಂಕು ತಗಲಿ  ಅದರ ಬೇರು ವಲಯ ಘಾಸಿಯಾಗಿರುತ್ತದೆ. ಅದು ಮಳೆಗಾಲ ಮದ್ಯದಲ್ಲಿ  ಗೋಚರವಾದರೆ ತಕ್ಷಣ ಬಳ್ಳಿ ಕೊಳೆತು ಎಲೆ  ಉದುರಿ ಸಂಪೂರ್ಣ ನಾಶವಾಗಿರುತ್ತದೆ. ಆದರೆ ಶಿಲೀಂದ್ರ ಸೋಂಕು ತಗಲಿ ಅದು ಅತಿಯಾಗಿ ಬಾಧಿಸದೇ ಇದ್ದಲ್ಲಿ  ಮಳೆಗಾಲದ ಮಳೆ ಮತ್ತು ತಂಪು ಹವೆಗೆ ಬೇರುಗಳು ಹೇಗಾದರೂ  ಬಳ್ಳಿಯನ್ನು  ಬದುಕಿ ಉಳಿಸುತ್ತವೆ. ಮಳೆ ಕಡಿಮೆಯಾಗಿ ಬಿಸಿಲು ಬಿದ್ದೊಡನೆ ಬುಡ ಭಾಗ ಒಣಗುತ್ತದೆ. ನೀರಿನ ಕೊರತೆ, ಬೇರಿನ ಕ್ಷೀಣತೆ  ಎಲೆಗಳ ಬಣ್ಣವನ್ನು  ಬದಲಿಸುತ್ತದೆ. ಬಳ್ಳಿ ಚುರುಟಿಕೊಳ್ಳುತ್ತದೆ. ಒಂದೆರಡು ದಿನದಲ್ಲಿ  ಎಲೆಗಳು ಉದುರುತ್ತವೆ. ಜೊತೆಗೆ  ಕರೆಗಳೂ ಉದುರುತ್ತವೆ. ಇದನ್ನು ನಿಧಾನ ಸೊರಗು ರೋಗ ಎಂದು  ಕರೆಯುತ್ತಾರೆ. ನಿಧಾನ ಸೊರಗು ರೋಗ ತೀವ್ರವಾದ ನಂತರ ಬಳ್ಳಿಯನ್ನು ಬದುಕಿಸುವುದು ಕಷ್ಟ. ಆದರೆ ಪ್ರಾರಂಭಿಕ ಹಂತದಲ್ಲಿದ್ದರೆ  ಬದುಕಿಸಲು ಸಾಧ್ಯ.

ಯಾವ ಬಳ್ಳಿಗೆ ರೋಗ ಇದೆ?: ಬಳ್ಳಿಯಲ್ಲಿ ಎಲೆಗಳೇ ರೋಗದ ಚಿನ್ಹೆ ಸೂಚಕಗಳು. ಎಡೆ ಎಡೆಯಲ್ಲಿ,ಅದರಲ್ಲೂ ತುದಿ ಭಾಗದಲ್ಲಿ ಎಲೆ ಹಳದಿಯಾಗಿದ್ದರೆ, ಬುಡದಲ್ಲಿ ಎಲೆ ಉದುರಿದ್ದು ಕಂಡು ಬಂದರೆ  ಅದಕ್ಕೆ ರೋಗ ಸೋಂಕು ತಗಲಿದೆ ಎಂದರ್ಥ. ಇದಕ್ಕೆ ಚಿಕಿತ್ಸೆ ಫಲಕಾರಿ. (ಚಿತ್ರ ೩)

ಯಾವುದನ್ನು  ಬದುಕಿಸಬಹುದು?: ಎಲೆ ತಿಳಿ ಹಳದಿಯಾಗಿ, ಬಾಡದೇ ಇದ್ದ ಬಳ್ಳಿಯಾದರೆ, ಕರೆಗಳು ಉದುರದೇ ಇದ್ದು ಬಳ್ಳಿಯ ಗಂಟುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚುರುಟಿ ಕೊಂಡಿರದಿದ್ದರೆ ಅಂತಹ ಬಳ್ಳಿಗಳನ್ನು ಹೆಚ್ಚುವರಿ ಆಹಾರ ಮತ್ತು ರೋಗ ಉಪಚಾರ ಮಾಡುವ ಮೂಲಕ ಬಳ್ಳಿ ಬದುಕಿಸಬಹುದು.  (ಚಿತ್ರ ೨)

ಯಾವುದಕ್ಕೆ ಉಪಚಾರ ವ್ಯರ್ಥ?: ಬಳ್ಳಿಯ ಎಲೆಗಳು ಪೂರ್ಣ ಹಳದಿಯಾಗಿ ಬಾಡಿದ್ದರೆ, ಕರೆಗಳು ಪೂರ್ತಿ ಉದುರಿದ್ದರೆ ಅಂಥಃ ಬಳ್ಳಿಗಳನ್ನು ಬದುಕಿಸುವುದು ಕಷ್ಟದ ಕೆಲಸ. ಬದುಕಿದರೂ ಬಳ್ಳಿಯ ಬುಡ ಮಾತ್ರ ಉಳಿದು ನಂತರ ಕ್ರಮೇಣ ಚಿಗುರಿಕೊಳ್ಳುತ್ತದೆ. (ಚಿತ್ರ ೪)

ಆರೋಗ್ಯವಂತ ಬಳ್ಳಿಗೆ ಉಪಚಾರ: ಬಳ್ಳಿಯಲ್ಲಿ ಎಲೆಗಳು ಹೇಗಿವೆ ಎಂಬುದನ್ನು ಮೊದಲಾಗಿ ಗಮನಿಸಿ. ಹಚ್ಚ ಹಸುರು ಬಣ್ಣದಲ್ಲಿದೆಯೇ, ಅಲ್ಲಲ್ಲಿ ಚಿಗುರುಗಳು ಬರುತ್ತಿವೆಯೇ, ಮೇಲೆ ಬೆಳವಣಿಗೆ ಇದೆಯೇ, ಇವೆಲ್ಲಾ ಇದ್ದರೆ  ಬಳ್ಳಿ ಆರೋಗ್ಯವಾಗಿದೆ ಎಂದರ್ಥ. ಅಂತಹ ಬಳ್ಳಿಗಳ ಬುಡಕ್ಕೆ ಮಣ್ಣು ಏರಿಸಿ ತಕ್ಷಣ ನೀರಾವರಿ ಮಾಡಿ. ಮಣ್ಣು ಏರಿಸುವಾಗ, ತಕ್ಷಣ ಬಳ್ಳಿಗೆ ಲಭ್ಯವಾಗುವಂತ ಗೊಬ್ಬರವನ್ನು ಕೊಡಬೇಕು. ೧೦೦ ಲೀ. ನೀರಿಗೆ ೧ ಕಿಲೋ ೧೯:೧೯:೧೯ ನೀರಿನಲ್ಲಿ ಕರಗುವ ಗೊಬ್ಬರ, ೧೦೦ ಗ್ರಾಂ ಹ್ಯೂಮಿಕ್ ಅಸಿಡ್ ಮಿಶ್ರಣ ಮಾಡಿ ಬುಡಕ್ಕೆ ೫ ಲೀ. ನಷ್ಟು  ಎರೆದು ಮಣ್ಣು ಏರಿಸುವುದರಿಂದ ಅದರ ಆರೋಗ್ಯ ಸುಧಾರಿಸುತ್ತದೆ. (ಚಿತ್ರ ೧ ಮತ್ತು ೫)

ಎಲೆ ಹಳದಿಯಾಗಿದ್ದರೆ: ಒಂದು ವೇಳೆ ಕೆಲವು ಎಲೆಗಳು ಹಸುರು ಬಣ್ಣದಲ್ಲಿದ್ದು ಕೆಲವು ಹಳದಿಯಾಗಿದ್ದರೆ ತಕ್ಷಣ ಎಲೆಗಳಿಗೆ ಪತ್ರ ಸಿಂಚನದ ಮೂಲಕ (೧೦೦ ಲೀ. ನೀರಿಗೆ ೧ ಕಿಲೋ ೧೯:೧೯:೧೯ ಮಿಶ್ರಣ ಮಾಡಿ ಅದಕ್ಕೆ ೨೫೦ ಮಿಲಿ ಸೂಕ್ಷ್ಮ ಪೊಷಕಾಂಶ ಮಿಶ್ರಣ ಮಾಡಿ ಸಿಂಪರಣೆ ಮಾಡಿ. ಬುಡಕ್ಕೆ ಮೇಲಿನಂತೆ ಮಣ್ಣು ಹಾಗೂ ಗೊಬ್ಬರವನ್ನು ಕೊಡಿ.

ಎಲೆಗಳು ಬಾಡಿ ಕರೆ ಉದುರಿದ್ದರೆ: ಇಂತಹ ಬಳ್ಳಿಗೆ ಸೊರಗು ರೋಗ ಹೆಚ್ಚು ಬಾಧಿಸಿರುತ್ತದೆ. ಈ ಬಳ್ಳಿಗೆ ಬುಡಕ್ಕೆ ಮೆಟಲಾಕ್ಸಿಲ್ ೨ ಗ್ರಾಂ ೧ ಲೀ. ನೀರಿಗೆ  ಮಿಶ್ರಣ ಮಾಡಿ ಬುಡಕ್ಕೆ ೫-೮ ಲೀ ನಷ್ಟು ಎರೆಯಿರಿ. ಇದರಲ್ಲಿ ಶಿಲೀಂದ್ರ ಸಾಯುತ್ತದೆ. ಸಾಧ್ಯತೆ ಇದೆ. ಇದಕ್ಕೆ ಈಗ ಜೈವಿಕ ಗೊಬ್ಬರ ಬೇಡ. ಬದುಕಿ ಉಳಿದರೆ ನಂತರ ಕೊಡಬಹುದು.

ಮೆಣಸಿನ ಬಳ್ಳಿಯ ಬೇರು ಮೇಲ್ಭಾಗದಲ್ಲೇ ಪಸರಿಸಿರುತ್ತದೆ. ಕೆಲವು ಬೇರು ಮಳೆಗಾಲದಲ್ಲಿ ಕೊಳೆತಿರುತ್ತದೆ  ನೆಲ ಒಣಗಿದಾಕ್ಷಣ ಬಳ್ಳಿಗೆ ಆಹಾರ ಸರಬರಾಜು ಕಡಿಮೆಯಾಗಿ ಬಳ್ಳಿ ಸೊರಗುತ್ತದೆ. ಮಳೆ ನಿಂತ ತಕ್ಷಣ ಬುಡಕ್ಕೆ ಫಲವತ್ತಾದ ಮಣ್ಣು ಹಾಕಿ, ಗೊಬ್ಬರ ಕೊಟ್ಟು, ನೀರಾವರಿ ಮಾಡುವುದರಿಂದ ಬೇರು ಬೆಳವಣಿಗೆಗೆ ಅನುಕೂಲವಾಗುತ್ತದೆ. ಈ ಸಮಯದಲ್ಲಿ ಬಳ್ಳಿ ಬುಡಕ್ಕೆ ಜೈವಿಕ ಶಿಲೀಂದ್ರ ನಾಶಕವಾದ ಟ್ರೈಕೋಡರ್ಮಾ, ಸುಡೋಮೋನಸ್, ಮೈಕೋರೈಝಾ, ಮತ್ತು ಪೆಸಿಲೋಮೈಸಿಸ್ ಜೀವಾಣುಗಳನ್ನು ಒದಗಿಸುವುದರಿಂದ ಬಳ್ಳಿಗೆ  ಹೆಚ್ಚು ಶಕ್ತಿ ಬರುತ್ತದೆ. ಆದರೆ ಇದನ್ನು  ಕೊಡುವಾಗ ರಾಸಾಯನಿಕ ಶಿಲೀಂದ್ರ ನಾಶಕಗಳನ್ನು ಕೊಡಬಾರದು.  

ಕರಿಮೆಣಸಿನ ಬಳ್ಳಿಯಲ್ಲಿ ಕಾಯಿ ಕರೆಗಳು ಇರುವಾಗ ಆಹಾರದ ಕೊರತೆ ಸಹಜವಾಗಿ ಉಂಟಾಗುತ್ತದೆ. ಅದರಿಂದಾಗಿಯೇ ರೋಗ ಹೆಚ್ಚುತ್ತದೆ. ಆದ ಕಾರಣ ೧೫ ದಿನಕ್ಕೊಮ್ಮೆ ಕಾಳು ಕೊಯ್ಯುವ ತನಕ ಪತ್ರ ಸಿಂಚನದ ಮೂಲಕ ಗೊಬ್ಬರ ಕೊಡಬೇಕು. (ಮೊದಲು ೧೯:೧೯:೧೯ ನಂತರ ೦:೫೨:೩೪ ನಂತರ ೧೩:೦:೪೫ ಗೊಬ್ಬರಗಳು). ಶಿಲೀಂದ್ರಗಳ ಸೋಂಕನ್ನು ಹತ್ತಿಕ್ಕಲು ಬುಡ ಭಾಗಕ್ಕೆ ೫ ಲೀ. ನಷ್ಟು (೧ ಲೀ. ನೀರಿಗೆ  ೫ ಮಿ.ಲೀ. ಪ್ರಮಾಣದಲ್ಲಿ ಮಿಶ್ರಣ ಮಾಡಿದ) ಪೊಟಾಶಿಯಂ ಫೋಸ್ಫೋನೇಟ್ ದ್ರಾವಣವನ್ನು ಬುಡ ಭಾಗದ ಸುತ್ತ ನೆನೆಯುವಂತೆ ಎರೆಯಬೇಕು.ಇದು ಜೀವಾಣುಗಳಿಗೆ ತೊಂದರೆ ಮಾಡಲಾರದು.

ಬುಡಕ್ಕೆ ಮಣ್ಣು  ಹಾಕುವುದು, ಜೈವಿಕ ಗೊಬ್ಬರಗಳನ್ನು, ಕಾಂಪೋಸ್ಟು ಗೊಬ್ಬರಗಳನ್ನು ಕೊಡುವುದು, ಬುಡಕ್ಕೆ ಪಾಲಿಥೀನ್ ಶೀಟು ಹೊದಿಸುವುದರಿಂದ ಮುಂದೆ ಬಳ್ಳಿಗೆ ರೋಗ ಸೋಂಕು ಕಡಿಮೆಯಾಗುತ್ತದೆ. ಈ ಎಲ್ಲಾ ಉಪಚಾರಗಳನ್ನು ಸರಿಯಾಗಿ ಮಾಡಿದರೆ ಬೆಳೆಯನ್ನೂ ಉಳಿಸಬಹುದು. ಆದಾಯವನ್ನೂ ಗಳಿಸಬಹುದು.

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ