ಕರಿಮೆಣಸಿನ ಪರಾಗಸ್ಪರ್ಶ ಮತ್ತು ವಾತಾವರಣ

ಕರಿಮೆಣಸಿನ ಪರಾಗಸ್ಪರ್ಶ ಮತ್ತು ವಾತಾವರಣ

ಮುಂಗಾರು ಮಳೆ ಪ್ರಾರಂಭದಲ್ಲಿ ಕರಿ ಮೆಣಸು ಹೂ ಕರೆ ಬಿಡುವ ಸಮಯ. ಮೊದಲ ಮಳೆ ಸಿಂಚನವಾದ ಕೂಡಲೇ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ. ಕೆಲವು ಸ್ವಲ್ಪ ತಡವಾಗುತ್ತದೆ. ಮತ್ತೆ ಕೆಲವು ಮೇ ತಿಂಗಳ ಕೊನೆಗೇ ಹೂ ಕರೆ  ಬಿಡಲು ಪ್ರಾರಂಭವಾಗುತ್ತದೆ. ಇದು ಬಳ್ಳಿಯ ಆರೋಗ್ಯ ಮತ್ತು ತಳಿಯ ಮೇಲೆ ಅವಲಂಭಿತವಾಗಿದೆ. 

ಕರಿಮೆಣಸಿನಲ್ಲಿ ಹೂ ಕರೆ ಬಿಡುವಾಗ ತಂಪು ವಾತಾವರಣ ಇರಬೇಕು. ಹಾಗಿದ್ದಾಗ ಅದು ಫಲಿತಗೊಂಡು  ಕಾಳುಗಳಾಗುತ್ತದೆ. ಒಂದು ವೇಳೆ ಬಿಸಿ ವಾತಾವರಣ ಇದ್ದರೆ ಕರೆಗಳು ಅರ್ಧಂಬರ್ಧ ಫಲಿತಗೊಳ್ಳುವುದು, ಉದುರಿ ಹೋಗುವುದು ಆಗುತ್ತದೆ. ಆದ ಕಾರಣ ಬೇಗೆ ಕರೆ ಬಿಡುವುದು ಉತ್ತಮವಲ್ಲ. ಕೆಲವು ಸ್ಥಳೀಯ ತಳಿಗಳು ಬೇಗ ಹೂ ಬಿಡುವುದು ಅದರ ಗುಣ ಧರ್ಮವಾದ ಕಾರಣ ಅದರಲ್ಲಿ ಅಧಿಕ ಪ್ರಮಾಣದಲ್ಲಿ ಕರೆಗಳಿರುತ್ತವೆ. ಆದರೆ ಕಾಳುಗಳು ವಿರಳವಾಗಿರುತ್ತವೆ. 

ಕರಿಮೆಣಸಿನ ತಳಿ ಆಯ್ಕೆ ಮಾಡುವಾಗ ತಡವಾಗಿ ಕರೆ ಬಿಡುವ ತಳಿಗಳಾದ ಪಣಿಯೂರು, ಕರಿಮುಂಡ ಆಯ್ಕೆ ತಳಿಗಳನ್ನು  ಬೆಳೆಸುವುದು ಸೂಕ್ತ. ಕರಾವಳಿ ಭಾಗದಲ್ಲಿ ಬೇಗ ಕೊಯಿಲು ಮುಗಿಯುತ್ತದೆ. ಮಾರ್ಚ್ ತಿಂಗಳಿಗೆ ಕೊಯಿಲು ಮುಗಿಯುವ ಕಡೆ ಬೇಗ ಹೂ ಕರೆ ಬಿಡುತ್ತದೆ. 

ಕಠಾವು ನಂತರ ಮೂರು  ವಾರ ತನಕ ನೀರಾವರಿ ಕಡಿಮೆ ಮಾಡಿದಾಗ ಬಳ್ಳಿಗೆ ಉತ್ತಮವಾಗಿ ಚಿಗುರಲು ಅನುಕೂಲವಾಗುತ್ತದೆ. ಹಾಗೆಂದು ಮಿಶ್ರ ಬೆಳೆಯಾಗಿ ಬೆಳೆಸುವಾಗ ನೀರಾವರಿ ತುಂಬಾ ಕಡಿಮೆ ಮಾಡಲಿಕ್ಕಾಗುವುದಿಲ್ಲ. 

ಒಮ್ಮೆ ಹೂ ಕರೆ ಮೂಡಿ ಅದು ಅರ್ಧಂಬರ್ಧ ಕಾಯಿ ಕಚ್ಚಿದರೂ ಸಹ, ಒಂದು ವೇಳೆ ಉದುರಿದರೂ ಸಹ ಮಳೆ ಪ್ರಾರಂಭವಾಗಿ ಕೆಲವು ದಿನಗಳ ನಂತರ ಮತ್ತೆ ಪೂರ್ತಿಯಾಗಿ ಚಿಗುರಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕರೆ ಬಿಡುತ್ತದೆ. ಅದರ ಕಟ್ಟುವಿಕೆ ಉತ್ತಮವಾಗಿರುತ್ತದೆ. ಇದನ್ನು ಉಳಿಸಿಕೊಂಡರೂ ಬೆಳೆ ಸಾಕಾಗುತ್ತದೆ.

ಮಳೆಗಾಲದಲ್ಲಿ ಉತ್ತಮ ರೀತಿಯಲ್ಲಿ ಹೂವು ಕರೆ ಬಿಡುವುದಕ್ಕೆ ಬೇಸಿಗೆಯ ದಿನಗಳಲ್ಲಿ ಮಾಡುವ ಬಳ್ಳಿ ಆರೈಕೆ ಪ್ರಾಮುಖ್ಯವಾದು. ಬಳ್ಳಿಯ ಆರೈಕೆ ಎಂದರೆ ಮುಖ್ಯವಾಗಿ ಒದಗಿಸಿಕೊಡುವ ಪೊಷಕಾಂಶಗಳು. ಬಳ್ಳಿಯಲ್ಲಿ ಸಂಗ್ರಹಿತ ಪೋಷಕಾಂಶಗಳಿದ್ದಾಗ ಅದು ಉತ್ತಮ ಚಿಗುರನ್ನು ಉತ್ತೇಜಿಸುತ್ತದೆ. ಕಡಿಮೆ ಇದ್ದಾಗ ಅದು ವ್ಯತಿರಿಕ್ತವಾಗುತ್ತದೆ. ಕೊಯಿಲು ಮುಗಿದ ೧ ತಿಂಗಳ ಒಳಗೆ ಒಮ್ಮೆ ಪತ್ರ ಸಿಂಚನದ ಮೂಲಕ ಗೊಬ್ಬರವನ್ನು ಕೊಡಬೇಕು. ಜೊತೆಗೆ  ತೇವಾಂಶ ಇರುವಾಗ ಬುಡಕ್ಕೂ ಕೊಡಬೇಕು. ಮಳೆಗಾಲ ಪ್ರಾರಂಭವಾಗುವ ಮೇ ತಿಂಗಳಲ್ಲಿ ಮತ್ತೊಮ್ಮೆ ಪೋಷಕಾಂಶ ಸಿಂಪರಣೆ  ಮಾಡಬೇಕು. ಮೊದಲ ಬಾರಿ ಸಿಂಪರಣೆ ಮಾಡುವಾಗ ೨೦೦ ಲೀ ನೀರಿಗೆ ಮುಕ್ಕಾಲು ಅಥವಾ ೧ ಕಿಲೋ ೧೯:೧೯:೧೯  ಎರಡನೇ ಬಾರಿ ಸಿಂಪಡಿಸುವಾಗ ೧೩:೪೦:೧೩  ಜೊತೆಗೆ ಪ್ರತೀ ೨೦೦ ಲೀ. ದ್ರಾವಣಕ್ಕೆ ೧೦೦ ಗ್ರಾಂ ನಷ್ಟು ಸತು, ಮ್ಯಾಂಗನೀಸ್ ಬೋರಾನ್ ಉಳ್ಳ ಸಿಂಪರಣಾ ದರ್ಜೆಯ ಸೂಕ್ಷ್ಮ ಪೊಷಕಾಂಶ, ೫೦ ಗ್ರಾಂ ನಷ್ಟು ಕಿಲ್ಲೇಟೆಡ್ ಮೆಗ್ನೀಯಂ ಸೇರಿಸಿ ಸಿಂಪರಣೆ ಮಾಡಬೇಕು. ಎಲೆಗಳಿಗೆಲ್ಲಾ ಬೀಳುವಂತೆ ಸಿಂಪರಣೆ ಮಾಡಬೇಕು. ಅಧಿಕ ಒತ್ತಡದಲ್ಲಿ ಎಲೆಗಳು ಅಲ್ಲಾಡುವಂತೆ ಸಿಂಪಡಿಸುವುದರಿಂದ ಎಲೆಯ ಎರಡೂ ಭಾಗಕ್ಕೂ ಪೋಷಕಾಂಶ ದೊರೆಯುತ್ತದೆ. ಎರಡನೇ ಸಿಂಪರಣೆಯನ್ನೂ ಇದೇರೀತಿ ಮಾಡಬೇಕು. ಜೂನ್ ಕೊನೇ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಮೂರನೇ ಪತ್ರ ಸಿಂಚನ ಸಿಂಪರಣೆ ಮಾಡಬೇಕು. ಈ ಸಮಯದಲ್ಲಿ ಬಹುತೇಕ ಹೂ ಕರೆಗಳು ಮೂಡಿರಬೇಕು. ಈ ಸಮಯದಲ್ಲಿ ಸಾರಜನಕ ಮತ್ತು ರಂಜಕ ಉಳ್ಳ ಗೊಬ್ಬರವನ್ನು ಸಿಂಪರಣೆ ಮಾಡುವುದು ಉತ್ತಮ. ಇದಕ್ಕಾಗಿ ೧೨:೬೧:೦ ೨೦೦ ಲೀ ನೀರಿಗೆ ಮುಕ್ಕಾಲು ಕಿಲೋ ಬೆರೆಸಿ ಸಿಂಪರಣೆ  ಮಾಡಿ. ಅಗತ್ಯವಿದ್ದರೆ ಮಾತ್ರ ಸೂಕ್ಷ್ಮಪೊಷಕಾಂಶಗಳನ್ನು ಸೇರಿಸಿರಿ. ೨೦೦ ಲೀ. ನೀರಿಗೆ  ೫೦ ಗ್ರಾಂ ನಷ್ಟು ನೀರಿನಲ್ಲಿ ಕರಗುವ ಬೋರಾನ್ ಸೇರಿಸುವುದು ಉತ್ತಮ. ಈ ಮೂರು ಸಿಂಪರಣೆಗಳಿಂದ ಕರೆಯ ಉದ್ದ ಜಾಸ್ತಿಯಾಗುತ್ತದೆ. ಕರೆ ಹೆಚ್ಚು ಬರುತ್ತದೆ. ಕರೆಯಲ್ಲಿ ಫಲಿತ ಗೊಳ್ಳುವ ಹೂವುಗಳು ಹೆಚ್ಚುತ್ತದೆ.

ಕರಿಮೆಣಸಿನಲ್ಲಿ ೮೬-೯೫ % ಸ್ವಕೀಯ ಪರಾಗ ಸ್ಪರ್ಷ ನಡೆಯುತ್ತದೆ. ಕರೆಯ ತುತ್ತ ತುದಿಯಲ್ಲಿರುವ ಹೂವಿನ ಪರಾಗರೇಣು ಕೆಳಗಿನ ಪುಷ್ಪದ ಶಲಾಕಾಗ್ರದ ಮೇಲೆ ಬೀಳುತ್ತಾ, ಕೆಳಕೆಳಗೆ ಇಳಿಯುತ್ತಾ ಬರುತ್ತದೆ. ಅ ಹೆಚ್ಚಾಗಿ ದ್ವಿಲಿಂಗೀಯ ಹೂವುಗಲೇ ಇರುತ್ತದೆ. ಹೂವಿನ ಗಂಡು ಭಾಗ ಇಬ್ಬದಿಯಲ್ಲೂ, ಹೆಣ್ಣು ಭಾಗ ಮಧ್ಯದಲ್ಲೂ ಇರುತ್ತದೆ. ಇದರ ಪರಾಗವು ೫ ದಿನಗಳ ಕಾಲ ಜೀವಂತ ಇರುತ್ತದೆ. ಕೀಟ- ಗಾಳಿ ಮೂಲಕ ಪರಾಗ ಸ್ಪರ್ಷ ತುಂಬಾ ಕಡಿಮೆ. ಆದ ಕಾರಣ ಹದವಾದ ಜುಂಪರು ಮಳೆ ಬಂದಾಗ ಕಾಯಿ ಕಚ್ಚುವಿಕೆ ಚೆನ್ನಾಗಿರುತ್ತದೆ.ಮಳೆ ಬಾರದಿದ್ದರೂ ವಾತಾವರಣ ತಂಪಾಗಿದ್ದರೂ ಕಾಯಿ ಕಚ್ಚುತ್ತದೆ. ಮೆಣಸಿನ ಪರಾಗ ಸ್ಪರ್ಷಕ್ಕೆ ಮಳೆ ನೀರಿನ ಅವಶ್ಯಕತೆ ಇರುವುದಿಲ್ಲ.

ಮಳೆಗಾಲ ಪ್ರಾರಾಂಭವಾಗುವಾಗ ಬುಡ ಭಾಗಕ್ಕೆ ಮೊದಲ ಕಂತಿನ ಗೊಬ್ಬರವನ್ನು ಕೊಡಬೇಕು. ಇದೂ ಸಹ ಉತ್ತಮ ಫಸಲಿಗೆ ಸಹಕರಿಸುತ್ತದೆ. ಹೂ ಬಿಡುವ ಸಮಯದಲ್ಲಿ ಪೊಟ್ಯಾಶೀಯಂ ಫೋಸ್ಪೋನೇಟ್ ದ್ರಾವಣವನ್ನು ಸಿಂಪರಣೆ, ಮಾಡುವುದಾದರೆ ಲೀ.ಗೆ ೪ ಮಿಲಿ ಗಿಂತ ಹೆಚ್ಚು ಬಳಕೆ ಮಾಡಬೇಡಿ. ಬೋರ್ಡೋ ದ್ರಾವಣಕ್ಕೂ ಅಧಿಕ ಸುಣ್ಣ ಸೇರಿಸಬೇಡಿ. ೧ ಕಿಲೋ ತುತ್ತೆಗೆ ೩\೪ ಕಿಲೋ ಸುಣ್ಣ ಅಥವ ೧ ಕಿಲೋ ಸುಣ್ಣ ಗರಿಷ್ಟ  ಪ್ರಮಾಣದ್ದಾಗುತ್ತದೆ. ಹೆಚ್ಚು ಸುಣ್ಣ ಸೇರಿಸಿದರೆ ಎಳೆ ಹೂ ಕರೆಗಳಿಗೆ ಘಾಸಿಯಾಗಬಹುದು.

ಮಾಹಿತಿ: ರಾಧಾಕೃಷ್ಣ ಹೊಳ್ಳ