ಕರಿಮೆಣಸಿನ ಸಸ್ಯಾಭಿವೃದ್ಧಿ ಮಾಡಿ ನೋಡಿ

ಕರಿಮೆಣಸಿನ ಸಸ್ಯಾಭಿವೃದ್ಧಿ ಮಾಡಿ ನೋಡಿ

ಕರಿಮೆಣಸು ಅಂದರೆ 'ಕಪ್ಪು ಬಂಗಾರ' ಎಂದೇ ಹೆಸರುವಾಸಿ. ಕರಿಮೆಣಸಿಗೆ ಬಹುತೇಕ ಯಾವಾಗಲೂ ಉತ್ತಮ ಬೆಲೆ ಇದ್ದೇ ಇರುತ್ತದೆ. ಇಂದು ಬೆಲೆ ಕಡಿಮೆ ಇದ್ದರೂ ಬಹು ಕಾಲ ಕರಿಮೆಣಸನ್ನು ಸಂಗ್ರಹಿಸಿ ಇಡಲು ಸಾಧ್ಯವಿದೆ. ಕರಿಮೆಣಸಿನ ಕೃಷಿ ಒಂದು ಲಾಭದಾಯಕ ಉದ್ಯೋಗವೇ ಆಗಿದೆ. ಒಂದು ಮಿಶ್ರ ಬೆಳೆಯಾಗಿ ಕರಿಮೆಣಸು ಕರಾವಳಿ ಮತ್ತು ಮಲೆನಾಡಿಗೆ ಹೇಳಿ ಮಾಡಿಸಿದ ಬೆಳೆ. ಮುಂಗಾರು ಪ್ರಾರಂಭದ ಮೊದಲು ಇದರ ಸಸ್ಯಾಭಿವೃದ್ದಿ ಮಾಡಿಕೊಂಡರೆ ಭವಿಷ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗುವಾಗ ನಾಟಿ ಮಾಡಲು ಅನುಕೂಲವಾಗುತ್ತದೆ. 

ಮೆಣಸಿನ ಸಸ್ಯಾಭಿವೃದ್ದಿ ನೈಸರ್ಗಿಕವಾಗಿ ಕಾಡುಗಳಲ್ಲಿ ಹಕ್ಕಿ ಹಿಕ್ಕೆಗಳ ಮೂಲಕ ಬೀಜ ಬಿದ್ದು ಮೊಳೆತು ಆಗುತ್ತದೆ. ನಾವೂ ಬೀಜ ಬಿತ್ತನೆ ಮಾಡಿ ಸಸ್ಯಾಭಿವೃದ್ದಿ ಮಾಡಬಹುದು. ಮೂರು ದಿನಗಳ ಕಾಲ ನೆರಳಿನಲ್ಲಿ ಒಣಗಿಸಿದ ಬೀಜಗಳನ್ನು ಪಾಲಿಥೀನ್ ಚೀಲದ ಮಾದ್ಯಮದಲ್ಲಿ ಬಿತ್ತಿದರೆ ಮೂರು ತಿಂಗಳಲ್ಲಿ ಮೊಳಕೆಯೊಡೆದು ಸಸಿಯಾಗುತ್ತವೆ. ಹಕ್ಕಿಗಳು ಹಣ್ಣು ಮೆಣಸನ್ನು ತಿಂದು ಹಿಕ್ಕೆ ರೂಪದಲ್ಲಿ ಹೊರ ಹಾಕಿದ ಕಾಳುಗಳು ಸಾಮಾನ್ಯವಾಗಿ ಕೊಕ್ಕೋ ಅಥವಾ ಇನ್ನಿತರ ಸಸ್ಯಗಳ ಬುಡದಲ್ಲಿ ಇರುತ್ತದೆ. ಇದನ್ನು ಆರಿಸಿ ಬಿತ್ತಿದರೂ ಮೊಳೆಯುತ್ತದೆ. ಈ ರೀತಿ ಮಾಡಿದ ಸಸಿಯಲ್ಲಿ ಇಳುವರಿ ಬರಲು ಹೆಚ್ಚು ಸಮಯ ಹಿಡಿಸುತ್ತದೆ. ಆದರೆ ತಾಯಿ ಬೇರು ಇರುವ ಕಾರಣ ರೋಗ ತಾಳಿಕೆ ಶಕ್ತಿ ಹೆಚ್ಚು ಇರುತ್ತದೆ. ಮೆಣಸಿನ ಬಳ್ಳಿಯಲ್ಲಿ ಪರಕೀಯ ಪರಾಗ ಸ್ಪರ್ಶ ಉಂಟಾಗುವುದರಿಂದ ಬೀಜದ ಸಸಿಯಲ್ಲಿ ನೈಜ ತಾಯಿ ಬಳ್ಳಿಯ ಗುಣ ಬಾರದೇ ಇರಲೂಬಹುದು ಅಥವಾ ಅದು ಹೊಸ ಸಂಕರ ತಳಿಯಾಗಲೂಬಹುದು.

ಪ್ರಯೋಗ ಮಾಡುವುದಕ್ಕೆ ಬೇರೆಯೇ ವ್ಯವಸ್ಥೆಗಳಿರುವಾಗ, ರೈತರು ಸುಲಭ ಮತ್ತು ನಿಖರವಾದ ವಿಧಾನವನ್ನು ಅನುಸರಿಸುವುದು ಸೂಕ್ತ. ಅದುವೇ ಹಬ್ಬು ಬಳ್ಳಿಗಳ  ತುಂಡುಗಳಿಗೆ ಬೇರು ಬರಿಸಿ ಸಸಿ ಮಾಡುವಿಕೆ. ಉತ್ತಮ ಇಳುವರಿ ಕೊಡುವ ಕರಿಮೆಣಸಿನ ಮೂಲ ಬಳ್ಳಿಯ ಬುಡದಲ್ಲಿ ಹರಿದಾಡುವ ಬಳ್ಳಿಯನ್ನು ಪ್ರತ್ಯೇಕಿಸಿ ಅದನ್ನು ಸಸ್ಯಾಭಿವೃದ್ದಿ ಮಾಡುವುದು ಉತ್ತಮ. ಬಳ್ಳಿಯನ್ನು ಪ್ರತ್ಯೇಕಿಸಿ, ಸ್ಥಳದಲ್ಲೇ ಅದರ ಎಲೆಯನ್ನು ತೊಟ್ಟಿನ ಭಾಗ ಉಳಿಸಿಕೊಂಡು ಎರಡು ಗಂಟುಗಳಿರುವಂತೆ ತುಂಡು ಮಾಡಿ ತಕ್ಷಣ ಅದನ್ನು ಒದ್ದೆ ಮಾಡಿದ ಗೋಣಿ ಚೀಲದಲ್ಲಿ ಸುತ್ತಿ, ಸಾಧ್ಯವಾದಷ್ಟು ಬೇಗ (೧-೨ ಗಂಟೆ ಒಳಗೆ) ಪಾಲಿಥೀನ್ ಚೀಲದಲ್ಲಿ ಊರಿ ನೆಡಬೇಕು. ತುಂಡು ಮಾಡಿದ ಕಡ್ಡಿಗಳನ್ನು ಶೇ.೦.೧ ರ ಬಾವಿಸ್ಟಿನ್ ದ್ರಾವಣದಲ್ಲಿ ಅದ್ದಿದರೆ ಒಳ್ಳೆಯದು. ನೆಡುವ ಭಾಗವನ್ನು ಬೇಗ ಬೇರು ಬರಲು ಕೆರಡಿಕ್ಸ್ ಪುಡಿಗೆ ತಾಗಿಸಿ ನೆಡಬೇಕು, ಇಲ್ಲವೇ ಮಾದ್ಯಮಕ್ಕೆ ಹ್ಯೂಮಿಕ್ ಅಸಿಡ್ ಮಿಶ್ರಣ ಮಾಡಬೇಕು. ಪಾಲಿಥೀನ್ ಚೀಲದ ಮಾದ್ಯಮವನ್ನು ನೀರಿನಲ್ಲಿ ಪೂರ್ತಿ ಒದ್ದೆಯಾಗುವಂತೆ ನೆನೆಸಿ, ಅದರಲ್ಲಿ ಒಂದು ಕಡ್ಡಿಯ ಮೂಲಕ ತೂತುಮಾಡಿ, ಅದರೊಳಗೆ ಸಿದ್ದಪಡಿಸಿದ ಎರಡೆರಡು ತುಂಡುಗಳನ್ನು ಇಟ್ಟು ಹದವಾಗಿ ಬೆರಳಿನಿಂದ ಒತ್ತಬೇಕು. ನಂತರ ಅದನ್ನು ಪೂರ್ತಿ ನೆರಳಿರುವ ಚಪ್ಪರದ ಒಳಗೆ ಇಡಬೇಕು. ಇಲ್ಲವೇ ಅದರ ಮೇಲೆ ಕಮಾನಿನ ತರಹದ ಚಪ್ಪರ ಮಾಡಿ ಅದಕ್ಕೆ ಪಾಲಿಥೀನ್ ಹಾಳೆ ಹೊದಿಸಬೇಕು. ಹೀಗೆ ಮಾಡಿದಾಗ ಬಳ್ಳಿ ತುಂಡುಗಳು ೧ ತಿಂಗಳಲ್ಲಿ ಚಿಗುರು ಮತ್ತು ಬೇರು ಬಿಡುತ್ತವೆ. ನಂತರ ಅದನ್ನು ಪಾಲಿಥೀನ್ ಹೊದಿಕೆಯ ಗೂಡಿನಿಂದ ಪ್ರತ್ಯೇಕಿಸಿ ಹೊರಗೆ ಚಪ್ಪರದ ಅಡಿಯಲ್ಲಿ ಇಡಬಹುದು. ನಾಟಿ ಮಾಡಲು ಬಳಸುವ ಮಾದ್ಯಮಕ್ಕೆ ಮಣ್ಣು+ ಮರಳು+ ಕೊಟ್ಟಿಗೆ ಗೊಬ್ಬರ ಹಾಗೂ ೧ ಕ್ವಿಂಟಾಲು ಮಣ್ಣಿಗೆ ೧ ಕಿಲೋ ಶಿಲಾ ರಂಜಕವನ್ನು ಮಿಶ್ರಣ ಮಾಡಿರಬೇಕು. ಮರಳಿನ ಬದಲು ಅಕ್ಕಿ ಗಿರಣಿಯ ಸುಡು ಬೂದಿಯನ್ನು ಬಳಸಿದರೆ ಬೇರು ಬರಲು ಅನುಕೂಲವಾಗುತ್ತದೆ. ಕಡಿಮೆ ಸಸಿ ಮಾಡುವವರು ಬಳ್ಳಿ ತುಂಡು ಊರಿದ ಪಾಲಿಥೀನ್ ಚೀಲಗಳಿಗೆ ಅಡಿಕೆ ದಾಸ್ತಾನು ಇಡುವ ಪಾಲಿಥೀನ್ ಚೀಲವನ್ನು ಮುಚ್ಚುವಂತೆ ಹೊದಿಸಿಯೂ ಸಸಿ ಮಾಡಿಕೊಳ್ಳಬಹುದು. ಪಾಲಿಥೀನ್ ಹೊದಿಕೆ ಹಾಕಿ ಮಾಡುವ ಸಸ್ಯೋತ್ಪಾದನೆಯಲ್ಲಿ ಬೇರು ಬರುವಿಕೆ ಪ್ರಮಾಣ ಶೆ.೯೫ ರಷ್ಟು ಇರುತ್ತದೆ. ನೀರಿನ ಆವೀಕರಣ ಇಲ್ಲದ ಕಾರಣ ನೀರೂ ಹೆಚ್ಚು ಬೇಕಾಗುವುದಿಲ್ಲ. ಎಲೆ ಕಪ್ಪಾಗುವಿಕೆ ಕಂಡು ಬಂದರೆ ಒಮ್ಮೆ ಶೇ.೦.೧ರ ಬಾವಿಸ್ಟಿನ್ ಸಿಂಪರಣೆ ಮಾಡಬೇಕು.

ಈ ವಿಧಾನಕ್ಕೆ ಹೆಚ್ಚು ಬಳ್ಳಿಗಳು ಬೇಕು. ಎಲ್ಲರಲ್ಲೂ ಅಷ್ಟೊಂದು ಪ್ರಮಾಣದ  ಬಳ್ಳಿಗಳ ಲಭ್ಯತೆ ಇರದಿರಬಹುದು. ಆಗ  ಕೇವಲ ಮೂರು ನಾಲ್ಕು ಗಿಡವಿದ್ದರೂ ಹೆಚ್ಚಿನ ಸಸಿ ಮಾಡಿಕೊಳ್ಳಬಹುದಾದ ವಿಧಾನಗಳಿವೆ. ಒಂದು ಪಾಲಿಥೀನ್ ಚೀಲದ ಸಸಿಯನ್ನು  ಆಧಾರವಾಗಿಟ್ಟುಕೊಂಡು ಅದರ ಬಳ್ಳಿಯನ್ನು ಹರಿಯ ಬಿಟ್ಟು ಪ್ರತೀ ಗಣ್ಣಿನ ಕೆಳಗೆ ಪಾಲಿಥೀನ್ ಚೀಲ ಇಟ್ಟು ಅದಕ್ಕೆ  ಬಳ್ಳಿಯ ಗಣ್ಣನ್ನು ಕಡ್ಡಿ ಮುರಿದು ಒತ್ತಿ ತಾಗಿಸಿದರೆ ಆ ಗಣ್ಣಿನಲ್ಲಿ ಬೇರುಗಳು ಇಳಿಯುತ್ತದೆ. ಸುಮಾರು ಒಂದು ತಿಂಗಳ ನಂತರ ಅದನ್ನು ತಾಯಿ ಗಿಡದಿಂದ ಪ್ರತ್ಯೇಕಿಸಿದಾಗ ಕೆಲವೇ ದಿನಗಳಲ್ಲಿ  ಅದರಲ್ಲಿ ಹೊಸ ಮೊಗ್ಗು ಬಂದು ಸಸಿಯಾಗುತ್ತದೆ. ಇಂತಹ ವಿಧಾನದಲ್ಲಿ ನಿರಂತರ ಸಸ್ಯೋತ್ಪಾದನೆ ಮಾಡುತ್ತಿರಬಹುದು.

ಕರಿಮೆಣಸನ್ನು ಕಸಿ ಕಟ್ಟಿಯೂ ಸಸ್ಯಾಭಿವೃದ್ದಿ ಮಾಡಲಾಗುತ್ತದೆ. ದೊಡ್ದ ಹಿಪ್ಪಲಿ (Piper Colubrinum) ಬೇರು ಸಸ್ಯಕ್ಕೆ  ಕರಿಮೆಣಸಿನ ಬಳ್ಳಿಯನ್ನು ಮೃದು ಕಾಂಡ ಕಸಿಯಂತೆ ಕಸಿ ಕಟ್ಟಿಯೂ ಸಸ್ಯಾಭಿವೃದ್ದಿ ಮಾಡಲಾಗುತ್ತದೆ. ಇದಕ್ಕೆ ರೋಗ ನಿರೋಧಕ ಶಕ್ತಿ ಇದೆ ಎನ್ನುತ್ತಾರಾದರೂ ರೋಗ ಬಂದ ಉದಾಹರಣೆ ಇದೆ. ವಿದೇಶಗಳಲ್ಲಿ ಮರಕ್ಕೆ ಏರುವ ಬಳ್ಳಿಯನ್ನು (Orthotropic shots) ಸಸ್ಯಾಭಿವೃದ್ದಿಗೆ ಬಳಸುತ್ತಾರಂತೆ. ಇದರಲ್ಲಿ ಬೇಗ ಇಳುವರಿ ಬರುತ್ತದೆಯಂತೆ. ಇದಕ್ಕೆ ಬೇರು ಬರಿಸುವ ಹಾರ್ಮೋನಿನ ಉಪಚಾರ ಅವಶ್ಯಕ. ಆದರೆ ನೆಡು ಸಾಮಾಗ್ರಿಯ ಲಭ್ಯತೆ ವಿರಳ.

ಕೆಲವರು ಮಳೆಗಾಲದಲ್ಲಿ  ನೆಲದಲ್ಲಿ ಹರಿಯುವ ಬಳ್ಳಿಯನ್ನೇ ನೇರವಾಗಿ ನಾಟಿ ಮಾಡುತ್ತಾರೆ. ಆದರೆ ಅದರಲ್ಲಿ ಬದುಕಿಕೊಳ್ಳುವ ಪ್ರಮಾಣ ಕಡಿಮೆ. ಒಂದು ವೇಳೆ ಬದುಕಿಕೊಂಡರೂ ಬೇಸಿಗೆಯಲ್ಲಿ ಸಾಯುತ್ತದೆ. ಆ ಕಾರಣ  ಸ್ವಂತ ಬಳಕೆಗೆ ಇರಲಿ, ಮಾರಾಟಕ್ಕೆ ಇರಲಿ, ಪಾಲಿಥೀನ್ ಚೀಲದಲ್ಲಿ ಸಸಿ ಮಾಡಿ ನೆಡುವುದು ಸೂಕ್ತ. ಇಂಥ ಸಸಿಗಳು ನೆಟ್ಟು ಎರಡನೇ ವರ್ಷಕ್ಕೇ ಹೂ ಕರೆ ಬಿಡಬಲ್ಲವು. ಮಳೆಗಾಲ ಪೂರ್ವದಲ್ಲಿ ನಾಟಿ ಮಾಡಿದರೆ ಮಳೆಗಾಲ ಮುಗಿಯುವ ಸಮಯಕ್ಕೆ ಬಳ್ಳಿ ಬೆಳೆದು ಆಧಾರಕ್ಕೆ ಹಬ್ಬಿ ಆಗುತ್ತದೆ.

ನೆಡು ಸಾಮಾಗ್ರಿಯನ್ನು ಬಲ್ಲ ಮೂಲಗಳಿಂದಲೇ ತನ್ನಿ. ಕರಿಮೆಣಸಿಗೂ ವೈರಸ್ ರೋಗ ಇದೆ. ಆದ ಕಾರಣ ಹೊಸ ಪ್ರದೇಶಗಳಿಂದ ನೆಡು ಸಾಮಾಗ್ರಿ ತರುವಾಗ ಎಚ್ಚರ. ಮುಂದಿನ ವರ್ಷ ಮಳೆಗಾಲಕ್ಕೆ ಮುಂಚಿತವಾಗಿ ನಿಮ್ಮ ತೋಟದ ಸಸಿಯನ್ನು ನೀವೇ ತಯಾರು ಮಾಡಿಕೊಂಡಿರಿ. ನೀವೇ ಆರಿಸಿದ ಉತ್ತಮ ಬಳ್ಳಿಗಳಿಂದ ಸಸ್ಯಾಭಿವೃದ್ಧಿ ಮಾಡಿದರೆ ನಿಮಗೆ ಉತ್ತಮ ಪ್ರತಿಫಲವೂ ದೊರೆಯುವುದು ಖಂಡಿತ.

ಮಾಹಿತಿ ಹಾಗೂ ಚಿತ್ರಗಳು : ರಾಧಾಕೃಷ್ಣ ಹೊಳ್ಳ