ಕರುನಾಡಿನ ಶ್ರೇಷ್ಠ ಸಾಹಿತಿ ಗೊ ರು ಚನ್ನಬಸಪ್ಪ (ಭಾಗ 1)

ಕರುನಾಡಿನ ಶ್ರೇಷ್ಠ ಪ್ರಗತಿಪರ ಚಿಂತಕರು, ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಪರಿಷತ್ತಿನಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಅನೇಕ ನಿಸ್ವಾರ್ಥ ಸೇವೆಗಳ ಮಾಡಿ ಜನಮನ್ನಣೆ ಗಳಿಸಿ, ಪ್ರಸಿದ್ಧಿಪಡೆದವರು ಗೊ ರು ಚನ್ನಬಸಪ್ಪ ಶರಣರು. ಗೊ ರು ಚ ಕನ್ನಡ ಸಾಹಿತ್ಯಲೋಕಕ್ಕೆ ಅದರಲ್ಲೂ ವಿಶೇಷವಾಗಿ ಜಾನಪದ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದವರು. ನಾಡಿನ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ 18 ನೇ ಮೇ 1930 ರಲ್ಲಿ ಜನಿಸಿದರು.
ಇವರ ತಂದೆ ತಿಂಗಳಿಗೆ ಏಳು ರೂ. ಸಂಬಳದಲ್ಲಿ ಅನುದಾನಿತ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿದ್ದರು. ತಾಯಿಯವರು ಕಂಡವರ ಹೊಲಕ್ಕೆ ದಿನಕ್ಕೆ ಮೂರು ಆಣೆ ಕೂಲಿಗೆ ಹೋಗಿ ಕೆಲಸ ಮಾಡುತ್ತಿದ್ದರಂತೆ. ರಜ ದಿನಗಳಲ್ಲಿ ಬಾಲಕ ಚನ್ನಬಸಪ್ಪನವರೂ ಸಹ ಕೂಲಿಗೆ ಹೋಗುತ್ತಿದರಂತೆ. ಅವರಿಗೆ ದಿನಕ್ಕೆ ಒಂದೂವರೆ ಆಣೆ ಕೂಲಿ ಸಿಗುತಿತ್ತಂತೆ. "ಆ ಹಣಕ್ಕಿಂತ ಮುಖ್ಯವಾಗುತ್ತಿದ್ದುದು ನಾವು ಕೂಲಿ ಹೋಗುತ್ತಿದ್ದ ಹೊಲದವರು ಕೊಡುತ್ತಿದ್ದ ಒಂದು ಹೊತ್ತಿನ ಊಟ!" ಎಂದು ತಮ್ಮ ಬಾಲ್ಯವನ್ನು ಗೊ.ರು. ಚನ್ನಬಸಪ್ಪನವರು ಯಾವಾಗಲೂ ನೆನಪು ಮಾಡಿಕೊಳ್ಳುತ್ತಾರೆ. ಹುಟ್ಟಿದ ಹಳ್ಳಿ ಸೇವೆಯೇ ಅವರ ಕರ್ತವ್ಯಗಳಲ್ಲಿ ಒಂದಾಯಿತು. ಖಾದಿ ಧರಿಸುವುದು ಅವರ ರೂಢಿಯಾಯಿತು. ಈ ಎರಡನ್ನು ಇಂದಿಗೂ ಗೊ ರು ಚ ರವರು ಪರಿಪಾಲಿಸಿಕೊಂಡು ಬರುತ್ತಿದ್ದಾರೆ.
ಗೊ ರು ಚನ್ನಬಸಪ್ಪನವರ ಬದುಕು : ಕನ್ನಡ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿರುವ ಗೊ. ರು. ಚೆನ್ನಬಸಪ್ಪನವರು ರುದ್ರಪ್ಪಗೌಡರು ಮತ್ತು ಅಕ್ಕಮ್ಮ ದಂಪತಿಗಳ ಮಗನಾಗಿ ಜನಿಸಿದರು. ಮಾಧ್ಯಮಿಕ ಮತ್ತು ಪ್ರೌಢಶಾಲಾ ತರಗತಿಗಳಲ್ಲಿ ಅಭ್ಯಾಸ ಮಾಡಿದರು. ಇಂತಹ ಸಮಯದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಚಳವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದರು. (ಅಂದರೆ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಕೀರ್ತಿ ಇವರದು)
ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಟ ಮಾಡಿದವರಲ್ಲಿ ಚನ್ನಬಸವ ನವರು ಒಬ್ಬರು ಎನ್ನುವುದು ಇಲ್ಲಿ ಹೆಮ್ಮೆಯಿಂದ ಹೇಳಲು ಬಯಸುತ್ತೇವೆ. ಮುಂದೆ 1948 ರ ವರ್ಷದಲ್ಲಿ ಶಾಲಾ ಶಿಕ್ಷಕರಾಗಿ 18ನೇ ವಯಸ್ಸಿನಲ್ಲೇ ತಮ್ಮ ಕಾಯಕ ಜೀವನವನ್ನು ಆರಂಭಿಸಿದ ಚನ್ನಬಸಪ್ಪನವರು. ಭೂದಾನ ಚಳುವಳಿ, ವಯಸ್ಕರ ಶಿಕ್ಷಣ ಮತ್ತು ಸೇವಾದಳಗಳಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿ,ವಿವಿಧ ಸಂಘಸಂಸ್ಥೆಗಳಿಗಾಗಿ ದುಡಿದ್ದಾರೆ. ಗಾಂಧೀಜಿಯ ಪ್ರಭಾವದಿಂದ ಖಾದಿ ಧರಿಸುವುದು ಇವರ ರೂಢಿಯಾಯಿತು. ಈ ಎರಡನ್ನು ಇಂದಿಗೂ ಅವರು ಪರಿಪಾಲಿಸಿಕೊಂಡು ಬರುತ್ತಿರುವುದು ನಾವೆಲ್ಲರೂ ಕಾಣುತ್ತೇವೆ. ಗೊ ರು ಚನ್ನಬಸಪ್ಪನವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಕಮಿಷನರ್ ಆಗಿ ಮಹತ್ವದ ಸೇವೆ ಸಹ ಸಲ್ಲಿಸಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನೇಕ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.ಕರುನಾಡಿಗೆ ಮಾದರಿಯಾಗಿದ್ದಾರೆ.
ಅಲ್ಲದೆ ಕನ್ನಡ ಜಾನಪದ ಕ್ಷೇತ್ರಕ್ಕೆ ಮರೆಯಲಾರದ ಸೇವೆಯನ್ನು ಸಲ್ಲಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಇವರ ಪಾತ್ರ ಮಹತ್ವದಾಗಿತ್ತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ, ಪರಿಷತ್ತು ಬಲಿಷ್ಠವಾಗುವಲ್ಲಿ ತಮ್ಮದೇ ಆದ ಕಾಯಕಸೇವೆ ಸಲ್ಲಿಸಿದ್ದಾರೆ. ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಸಧ್ಯ ಇದೆ ಪರಿಷತ್ತಿನ ಗೌರವ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇನ್ನು ಸಾಂಸ್ಕೃತಿಕ ಕಾರ‍್ಯಕ್ರಮ ಗೀತ-ಸಂಗೀತ, ಕಾವ್ಯ-ಕಾವೇರಿ ಪ್ರಾರಂಭಿಸಿದ ಹೆಗ್ಗಳಿಕೆ ಇವರದು. ವಿದೇಶಿ ಕನ್ನಡಿಗರ ಆಹ್ವಾನದ ಮೇರೆಗೆ ಅಮೆರಿಕಾ ಭೇಟಿ, ಅಲ್ಲಿ ಕನ್ನಡದ ಕಂಪು ಹರಿಸಿದ ಹಿರಿಮೆಗೆ ಸಾಕ್ಷಿಯಾಗಿದ್ದಾರೆ. ಕನ್ನಡ ಮತ್ತು ಶರಣ ಸಾಹಿತ್ಯ ಪರಿಷತ್ತುಗಳ ಬೆಳವಣಿಗೆಗಾಗಿ ದತ್ತಿ ನಿಧಿ ಸಂಗ್ರಹಣೆ ಕಾರ್ಯ ಸಹ ಇವರ ನೇತೃತ್ವದಲ್ಲಿ ಮಾಡಿರುವುದು ಮರೆಯಲಾಗದ ಕಲಸವಾಗಿದೆ. ಇದಲ್ಲದೆ ಇವರ ಅವಧಿಯಲ್ಲಿ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಹಾಗೆ ಇವರ ನೂರೈವತ್ತಕ್ಕೂ ಹೆಚ್ಚು ಮಹತ್ವ ಪೂರ್ಣ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಧಾರೆಯೆರೆದಿದ್ದಾರೆ.
ಗೊ ರ ಚನ್ನಬಸಪ್ಪ ನವರ ದತ್ತಿ ನಿಧಿಯಿಂದ ಅಂದರೆ ಇವರು ನೀಡಿರುವ ಹಣದಿಂದ ಇವರ ಹೆಸರಿನಲ್ಲಿ ಪ್ರತಿ ವರ್ಷ ಶರಣ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಸಾಧಕರನ್ನು ಹಾಗೂ ಕೃತಿಗಳನ್ನು ರಚಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದ್ದಾರೆ. ಹೀಗೆ ಇವರ ನಿಸ್ವಾರ್ಥ ಕಾರ‍್ಯನಿರ್ವಹಣೆಗಾಗಿ ಅನೇಕ ಸಂಘ ಸಂಸ್ಥೆ, ಸರಕಾರಗಳಿಂದ ಪ್ರಶಸ್ತಿ ಬಂದಿವೆ. ಅದರಲ್ಲಿ ಪ್ರಮುಖವಾದ ಪ್ರಶಸ್ತಿಗಳೆಂದರೆ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ,ಬಸವ ಪ್ರಶಸ್ತಿ ಸೇರಿದಂತೆ ಮುಂತಾದುವು ಸೇರಿವೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗೊ ರು ಚನ್ನಬಸಪ್ಪ ಶರಣರು ಸಂಪೂರ್ಣವಾಗಿ ತೊಡಗಿಸಿಕೊಂಡು ಅತ್ಯಂತ ಭಕ್ತಿ ಭಾವದಿಂದ ಶ್ರಮಿಸಿದ್ದಾರೆ.
ಅಂದಹಾಗೆ ಗೊ ರು ಚನ್ನಬಸಪ್ಪ ನವರು ನಮ್ಮ ದೇಶ ಕಂಡ ಅತ್ಯುತ್ತಮ ಪ್ರಗತಿಪರ ಚಿಂತಕರು,ಸೌಹಾರ್ದತೆಯ ಪ್ರತಿಪಾದಕರು, ಸರ್ವ ಧರ್ಮಗಳ ಸಮನ್ವಕಾರರು, ವಿಶ್ವ ಭಾತೃತ್ವ ಪ್ರತಿರೂಪವೇ ಆಗಿ ನಿಸ್ವಾರ್ಥ ಜಾನಪದ,ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮತಾವಾದ ಹರಿಕಾರ,ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದ ವಿಶ್ವ ಬಂಧು ಅಣ್ಣ ಬಸವಣ್ಣನವರ ಹಾಗೂ ವಿಶ್ವ ದಾರ್ಶನಿಕರ ಆಶಯದಂತೆ ಸರ್ವರ ಹಾಗೂ ನಾಡಿನ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಅಲ್ಲದೆ ಮಾನವೀಯತೆ ಮೌಲ್ಯಗಳು, ಸಮಾನತೆಯ ತತ್ವಗಳನ್ನು ದೇಶದ ಉದ್ದಗಲಕ್ಕೂ ಉಪನ್ಯಾಸಗಳ ಮೂಲಕ ಜನರಲ್ಲಿ ಮೌಲ್ಯಾಧಾರಿತ ತತ್ವಗಳು ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ನಾವೆಲ್ಲರೂ ಕಾಣುತ್ತೀದೇವೆ. ಹೀಗೆ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ, ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಗೊ ರು ಚನ್ನಬಸಪ್ಪ ನವರು, ಈ ನಾಡಿನ ಹೆಮ್ಮೆಯ ಶ್ರೇಷ್ಠ ಶರಣರೆಂದೆ ಖ್ಯಾತಿ ಪಡೆದಿದ್ದಾರೆ.
(ಇನ್ನೂ ಇದೆ)
ಲೇಖಕರು - ಸಂಗಮೇಶ ಎನ್ ಜವಾದಿ, ಬೀದರ
ಚಿತ್ರ ಕೃಪೆ: ಇಂಟರ್ನೆಟ್ ತಾಣ