ಕರುನಾಡ ದಸರಾ : ಸಂಪ್ರದಾಯದ ಹೂರಣ

ಕರುನಾಡ ದಸರಾ : ಸಂಪ್ರದಾಯದ ಹೂರಣ

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅದರದೇ ಆದ ವಿಶೇಷತೆಗಳಿವೆ. ಕರುನಾಡ ದಸರಾ ಎಂಬ ಪದವೇ ರೋಮಾಂಚನ. ಕರ್ನಾಟಕದ ಮೈಸೂರ ದಸರಾ ಜಗದ್ವಿಖ್ಯಾತ. ‘ನಾಡಹಬ್ಬ’ವೆಂದೂ ಕರೆಯಲ್ಪಡುತ್ತದೆ. ಒಡೆಯರ್ ಮನೆತನದ ರಾಜರಿಂದ ಆರಂಭಿಸಲ್ಪಟ್ಟ ದಸರಾ ಈಗ ಮೈಸೂರಿನಲ್ಲಿ ಚಾಮುಂಡೇಶ್ವರಿ ಮಾತೆಯ ಮೆರವಣಿಗೆ, ಜಂಬೂಸವಾರಿ ವೈಭವಗಳೊಂದಿಗೆ ನಡೆಯುತ್ತದೆ. ಬನ್ನೀ ಮಂಟಪಕ್ಕೆ ಗಜಪಡೆಗಳೊಂದಿಗೆ ಮೆರವಣಿಗೆ ಹೋಗಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬರುವ ಸಂಪ್ರದಾಯವಿದೆ. ಯದು ವಂಶಸ್ಥರಿಂದ ಮುಂದುವರಿದ ಈ ಸಂಪ್ರದಾಯ ಇಂದಿಗೂ ಒಂಬತ್ತು ದಿನಗಳ ಕಾಲ ಆಚರಣೆ ಮಹಾನವಮಿ, ಆಯುಧ ಪೂಜೆ, ಹತ್ತರಂದು ವಿಜಯದಶಮಿ ಎಲ್ಲವನ್ನೂ ಸಾಂಪ್ರದಾಯಿಕವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಶೃಂಗೇರಿಯಲ್ಲಿ ಶರನ್ನವರಾತ್ರಿ ಶಾರದೋತ್ಸವ ಎಂದು ಆಚರಿಸುವರು. ಮೈಸೂರು ಅರಸರ ದರ್ಬಾರಿನಂತೆ, ಶ್ರೀಗಳವರ ದರ್ಬಾರ್ ನಡೆಯುತ್ತದೆ. ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸುವರು. ಕರ್ನಾಟಕದ ಬೆಳಗಾವಿಯಲ್ಲಿ ದಸರಾ ಎಂದರೆ ದುರ್ಗೆಯ ಆರಾಧನೆ. ದಾಂಡಿಯಾ ನೃತ್ಯ ಪ್ರಸಿದ್ಧ. ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ ಎಂದು ದಸರಾವನ್ನು ವಿಶೇಷವಾಗಿ ಆಚರಿಸುವರು. ಉ.ಕರ್ನಾಟಕ, ಮಧ್ಯಕರ್ನಾಟಕ ಇಲ್ಲಿ ಧಾರ್ಮಿಕ ಮತ್ತು ವೈಚಾರಿಕ ಚಿಂತನೆಗಳೊಂದಿಗೆ ದಸರಾವನ್ನು ಆಚರಿಸುವರು. ದಕ್ಷಿಣ ಕನ್ನಡದಲ್ಲಿ ‘ಶಾರದೋತ್ಸವ’ ಎಂದು ಆಚರಿಸುವರು. ಸಭೆ, ಮೆರವಣಿಗೆ, ಅಕ್ಷರಾಭ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮವಿರುವುದು.

ಶ್ರೀ ದುರ್ಗೆ ದುಷ್ಟರ ನಾಶಕ್ಕಾಗಿ ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾದೇವಿ, ಕೂಷ್ಮಾಂಡ, ಮಹಾಕಾಳಿ ಮುಂತಾದ ಒಂಬತ್ತು ರೂಪಗಳನ್ನು ತಾಳಿ, ಮನುಜನಲ್ಲಿರುವ ದುಷ್ಟತನಗಳನ್ನು ದೂರಮಾಡಿ ಹರಸುತ್ತಾಳೆಂಬ ನಂಬಿಕೆ. ದುಷ್ಟ ಮಹಿಷಾಸುರನ ವಧೆಗಾಗಿ ಒಂಬತ್ತು ದಿನ ಹೋರಾಡಿದ ದೇವಿಯ ಈ ಆಚರಣೆಯೇ ನವರಾತ್ರಿ. ದೇವೀ ತತ್ವದ ಆಚರಣೆ. ತಮೋಗುಣಗಳ ನಾಶ. ದುಷ್ಟ ರಾವಣನ ಕೊಂದ ದಿನವೇ ವಿಜಯದ ದಿನ ವಿಜಯದಶಮಿ ಎಂಬ ಪುರಾಣ ಪ್ರತೀತಿ ಇದೆ. ಪಾಂಡವರು ದುರುಳ ಕೌರವರ ಕೊಂದು ವಿಜಯ ಸಾಧಿಸಿ, ಆಯುಧಗಳನ್ನು ಅಡಗಿಸಿಟ್ಟ ಶಮೀ ವೃಕ್ಷಕ್ಕೆ ಪೂಜೆ ಮಾಡಿ ಸಂಭ್ರಮಿಸಿದ ದಿನ ವಿಜಯದಶಮಿ. ಹಾಗೆಯೇ ಆಯುಧಪೂಜೆ ಸಹ. 

ಒಟ್ಟಿನಲ್ಲಿ ದುಷ್ಟರ ನಾಶ ಶಿಷ್ಟರ ಪಾಲನೆ ದಸರಾ ಹಬ್ಬದ ಕೊಂಡಿ. ಕರುನಾಡಿನ ಪರಂಪರೆ,ಸಂಪ್ರದಾಯಗಳ ಮೆರುಗು ಈ ಉತ್ಸವದಲ್ಲಿದೆ ಎಂದರೂ ತಪ್ಪಾಗಲಾರದು. ನಾಡು ನುಡಿ, ಸಂಸ್ಕೃತಿಯ ಪ್ರತೀಕವಿದು. ಶಕ್ತಿದೇವತೆಯ ನಾನಾ ಅವತಾರಗಳ ಪೂಜೆ, ಭಕ್ತಿ ಇದರಲ್ಲಿದೆ. ಶರದೃತುವಿನಲ್ಲಿ ದೇವಿಯ ಪೂಜೆ, ಆರಾಧನೆ ಯಾರು ಮಾಡುವರೋ ಅವರ ಸರ್ವ ಸಂಕಟಗಳೂ ಪರಿಹಾರವಾಗಿ ಸುಖ,ಶಾಂತಿ,ನೆಮ್ಮದಿ ಪ್ರಾಪ್ತವಾಗುತ್ತದೆಯೆಂಬ ನಂಬಿಕೆ ನಮ್ಮದು. ಒಂದು ರೂಪದಲ್ಲಿ ಹೇಳುವುದಾದರೆ ದೇವಿಯ ಪ್ರಕೃತಿ ರೂಪದ ಆರಾಧನೆಯಿದು. ಸ್ತ್ರೀ ದೇವತೆಗಳನ್ನು ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ, ದುರ್ಗಾ ವಿವಿಧ ಅವತಾರಗಳಲ್ಲಿ ಕಲ್ಪಿಸಿಕೊಂಡು ಆರಾಧಿಸುತ್ತೇವೆ. ಮಾನವೀಯ ಮೌಲ್ಯಗಳ ಸಾರ, ವೈಜ್ಞಾನಿಕ ತಳಹದಿ, ಐತಿಹಾಸಿಕ ಹಿನ್ನೆಲೆ, ಪರಿಸರ ಕಾಳಜಿ, ಭಕ್ತಿ, ಭಜನೆ ಹೀಗೆ ಹಲವಾರು ಮೌಲ್ಯಗಳ, ವಿಧಗಳ ಗುರುತಿಸುವಿಕೆ ಸಹ ಆಚರಣೆಯಲ್ಲಿ ಅಡಗಿದೆ. ವೇದಗಳ ಕಾಲದಿಂದಲೂ ದುರ್ಗೆಯ ಆರಾಧನೆ ಇದೆ. ಭಕುತರ ದುರ್ಗತಿಯನ್ನು ನಾಶಮಾಡುವವಳೇ ದುರ್ಗೆ.ಮಹಿಷಾಸುರ, ಚಂಡಮುಂಡರು, ಶುಂಭ ನಿಶುಂಭರು, ಧೂಮ್ರಾಕ್ಷ, ಕೆಟ್ಟ ರಕ್ಕಸ ಸಂತಾನಗಳ ಅಳಿವನ್ನು ಶ್ರೀದುರ್ಗೆ ಶಕ್ತಿದೇವತೆ ನಾನಾ ಅವತಾರವೆತ್ತಿ ನಿರ್ನಾಮ ಮಾಡಿ ಲೋಕಕ್ಷೇಮ ನೀಡಿದಳೆಂದು ಪೌರಾಣಿಕದಲ್ಲಿ ಉಲ್ಲೇಖವಿದೆ. ಒಟ್ಟಿನಲ್ಲಿ ಸಂಪ್ರದಾಯಗಳ ಹೂರಣವೇ ನವರಾತ್ರಿ ಹಬ್ಬ, ದಸರಾ ಆಚರಣೆ ಎನ್ನಬಹುದು. ಕೆಲವೆಡೆ ಮನೆಗಳಲ್ಲಿ ಒಂಬತ್ತು ದಿನವೂ ವಿವಿಧ ಗೊಂಬೆಗಳನ್ನು ಕೂರಿಸಿ, ಮಕ್ಕಳಿಗೆ ಆರತಿ, ಉಡುಗೊರೆ, ಮುತ್ತ್ಯೆದೆಯರಿಗೆ ತಾಂಬೂಲ ನೀಡುವುದೂ ಇದೆ. ಈ ಪರ್ವ ಕಾಲದಲ್ಲಿ ನಾವೆಲ್ಲರೂ ಶ್ರೀ ದುರ್ಗೆಯನ್ನು ಆರಾಧಿಸಿ ಪುನೀತರಾಗೋಣ. 

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ